ತಿಮ್ಮ ತಿಮ್ಮಿಯನ್ನು ಅಡಿಮುಡಿಯವರೆಗೆ ನೋಡಿದ ಹೊತ್ತಗೆ ಮನೆಯ ಮೇಲಾಳು ಈರಣ್ಣ "ಇಲ್ಲಿ ಬರೇ ಮುದುಕರು ದೇವರ ಪುಸ್ತಕ ಓದಲು ಬರುತ್ತಾರೆ ಇಲ್ಲವೇ ಪಡ್ದೆ ಹುಡುಗರು ದಿನಪತ್ರಿಕೆಗಳಲ್ಲಿ ಲೈಂಗಿಕ ಸಮಾಲೋಚನೆ ಓದಲು ಬರುತ್ತಾರೆ. ನೀವು ವಿಜ್ಞಾನ ಓದಲು ಬಂದಿದ್ದು ಬಹಳ ಒಳ್ಳೆಯದಾಯಿತು " ಅಂತ ಮೆಚ್ಚುಗೆ ವ್ಯಕ್ತ ಪಡಿಸಿ ವಿಜ್ಞಾನ ಪುಸ್ತಕಗಳು ಇರುವ ಜಾಗೆಕ್ಕೆ ಕರೆದುಕೊಂಡು ಹೋದರು. ತಿಮ್ಮ ತಿಮ್ಮಿಗೆ ಕಂಪ್ಯೂಟರ್ ಬಗ್ಗೆ ಯಾವ ಪುಸ್ತಕ ಓದಬೇಕು ಅಂತ ತಿಳಿಯಲಿಲ್ಲ. ಅದಕ್ಕೆ ಈರಣ್ಣ "ಗಣಕ ಯಂತ್ರ" ಅಂತ ಬರೆದಿದ್ದ ಪುಸ್ತಕ ತೋರಿಸಿದರು. ಅದರ ಮೇಲೆ "ತಂತ್ರಜ್ಞಾನ ಸಂವಹನಕಾರ ಡಾ. ಶ್ರೀ .ವೆಂಕಟಪ್ಪ" ಅಂತ ಬರೆಯಲಾಗಿತ್ತು. ಮೊದಲ ಪದ ಓದುತ್ತಿದ್ದಂತೆ ತಿಮ್ಮಿ ದಿಗಿಲು ಬಿದ್ದಳು.
ತಿಮ್ಮ ತಿಮ್ಮಿಗೆ ಕಂಪ್ಯೂಟರ್ ಕಲಿಯಬೇಕೆಂದು ಆಸೆಯಾಯಿತು.ಊರಲ್ಲಿ ಹಿರಿಯರೆಂದು ಹೆಸರಾದ ಚಾಮಯ್ಯ ಮೇಷ್ಟ್ರ ಬಳಿ ಹೋದರು. ಚಾಮಯ್ಯ ಮೇಷ್ಟ್ರು ಅವರು ಬಂದ ಉದ್ದೇಶ ಕೇಳಿ ಸಂತೋಷ ಪಟ್ಟು ತಾನು ಈ ವಿಷಯದಲ್ಲಿ ಪರಿಣಿತಿ ಹೊಂದಿಲ್ಲವೆಂದೂ ಇದಕ್ಕೆ ಪರಿಣಿತರು ಸಾಕಷ್ಟು ಹೊತ್ತಗೆಗಳನ್ನು ಬರೆದಿಟ್ಟಿದ್ದಾರೆಂದೂ ಅದನ್ನು ಓದಿ ತಿಳಿದುಕೊಳ್ಳಿ ಅಂತ ಸಲಹೆ ನೀಡಿದರು. ಹತ್ತನೆಯ ಇಯತ್ತೆಯವರೆಗೆ ಓದಿದ್ದ ತಿಮ್ಮ ತಿಮ್ಮಿ ಊರಲ್ಲಿ ಹೊಸದಾಗಿ ಶುರುವಾಗಿದ್ದ “ಗ್ರಂಥಾಲಯ” ಎಂದು ಕರೆಯಲ್ಪಡುವ ಹೊತ್ತಗೆಮನೆಗೆ ಹೊರಟರು. ತಿಮ್ಮ ತಿಮ್ಮಿಯನ್ನು ಅಡಿಮುಡಿಯವರೆಗೆ ನೋಡಿದ ಹೊತ್ತಗೆ ಮನೆಯ ಮೇಲಾಳು ಈರಣ್ಣ “ಇಲ್ಲಿ ಬರೇ ಮುದುಕರು ದೇವರ ಪುಸ್ತಕ ಓದಲು ಬರುತ್ತಾರೆ ಇಲ್ಲವೇ ಪಡ್ದೆ ಹುಡುಗರು ದಿನಪತ್ರಿಕೆಗಳಲ್ಲಿ ಲೈಂಗಿಕ ಸಮಾಲೋಚನೆ ಓದಲು ಬರುತ್ತಾರೆ. ನೀವು ವಿಜ್ಞಾನ ಓದಲು ಬಂದಿದ್ದು ಬಹಳ ಒಳ್ಳೆಯದಾಯಿತು ” ಅಂತ ಮೆಚ್ಚುಗೆ ವ್ಯಕ್ತ ಪಡಿಸಿ ವಿಜ್ಞಾನ ಪುಸ್ತಕಗಳು ಇರುವ ಜಾಗೆಕ್ಕೆ ಕರೆದುಕೊಂಡು ಹೋದರು. ತಿಮ್ಮ ತಿಮ್ಮಿಗೆ ಕಂಪ್ಯೂಟರ್ ಬಗ್ಗೆ ಯಾವ ಪುಸ್ತಕ ಓದಬೇಕು ಅಂತ ತಿಳಿಯಲಿಲ್ಲ. ಅದಕ್ಕೆ ಈರಣ್ಣ “ಗಣಕ ಯಂತ್ರ” ಅಂತ ಬರೆದಿದ್ದ ಪುಸ್ತಕ ತೋರಿಸಿದರು. ಅದರ ಮೇಲೆ “ತಂತ್ರಜ್ಞಾನ ಸಂವಹನಕಾರ ಡಾ. ಶ್ರೀ .ವೆಂಕಟಪ್ಪ” ಅಂತ ಬರೆಯಲಾಗಿತ್ತು. ಪುಸ್ತಕದ ಮೊದಲ ಪದ ಓದುತ್ತಿದ್ದಂತೆ ತಿಮ್ಮಿ ದಿಗಿಲು ಬಿದ್ದಳು. ಪುಸ್ತಕ ತೆರೆಯುತ್ತಿದ್ದಂತೆ ಅದರ ತುಂಬಾ ಗಣಕ ಯಂತ್ರ, ಮಾತೃಕೆ, ಅಡಕ ಮುದ್ರಿಕೆ, ಸಂಸ್ಕರಣ, ತಂತ್ರಾಂಶ, ದ್ವಿಮಾನ ಪದ್ದತಿ ಇತ್ಯಾದಿ ಪದಗಳು ಮಾಡುತ್ತದೆ, ತೀಡಬೇಕು, ಇರುತ್ತದೆ, ಕೂತಿರುತ್ತದೆ ಎಂಬೆಲ್ಲ ಕನ್ನಡ ಪದಗಳ ನಡುವೆ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದಿದ್ದವು. ತಿಮ್ಮ ತಿಮ್ಮಿಗೆ ದಿಕ್ಕೆ ತೋಚದಂತಾಯಿತು. ಚೇತರಿಸಿಕೊಂಡು ಹೊತ್ತಗೆಯ ಸಮೇತ ಚಾಮಯ್ಯ ಮೇಷ್ಟ್ರ ಬಳಿ ಓಡಿದರು. ಚಾಮಯ್ಯ ಮೇಷ್ಟ್ರು ಹೊತ್ತಗೆಯನ್ನು ಹಿಂದೆ ಮುಂದೆ ನೋಡಿ ಮತ್ತೆ ದಿಕ್ಕು ಕಾಣದವರಂತಾಗಿ ಇದಕ್ಕೆ ಪರಿಹಾರವೇನು ಅಂತ ಯೋಚನೆ ಮಾಡತೊಡಗಿದರು. ಆಗ ಚಾಮಯ್ಯ ಮೇಷ್ಟ್ರ ನೆನಪಿಗೆ ಬಂದವನೇ ರಾಜಣ್ಣ! ರಾಜಣ್ಣ ತಮ್ಮ ಪಟ್ಟ ಶಿಷ್ಯ ರಾಮಾಚಾರಿಯ ಸೀನಿಯರ್. ರಾಜಣ್ಣನಿಗೆ ತಾವು ಚಿಕ್ಕವನಿದ್ದಾಗ ಮಹಾಪ್ರಾಣ ಉಲಿಯುವುದರ ಬಗ್ಗೆ ಬೈದಿದ್ದಾಗ ತಾನು ಮಾತನಾಡುವ ಕನ್ನಡವೇ ಸರಿಯಾದ ಕನ್ನಡ ತಾಯಿಯ ಹೊಟ್ಟೆಯಿಂದ ಕಲಿತುಬಂದ ನುಡಿಯನ್ನು ಮತ್ತೆ ನಿಮ್ಮಿಂದ ಹೊಸದಾಗಿ ಕಲಿಯಬೇಕಿಲ್ಲ ಅಂತ ತಗಾದೆ ತೆಗೆದದ್ದು, ಅದಕ್ಕಾಗಿ ಒದೆ ತಿಂದದ್ದು ನೆನಪಾಯಿತು. ಈಗ ಊರ ದೊಡ್ಡ ಮನುಷ್ಯರೆಲ್ಲ ಅವನೊಬ್ಬ “ಸಂಸ್ಕಾರ” ಇಲ್ಲದ ಕನ್ನಡ ಮಾತನಾಡುತ್ತಾನೆ ಅಂತ ಬೈಯುತ್ತಿದ್ದರು. ಆದರೆ ದೊಡ್ಡ ಮನುಷ್ಯರು ತಾವು ಮಾತನಾಡುವುದು ಜನಗಳಿಗೆ ಅರ್ಥವಾಗದಿದ್ದಾಗ ರಾಜಣ್ಣನ ಮೊರೆ ಹೋಗುತ್ತಿದ್ದರು. ಈಗ ಚಾಮಯ್ಯ ಮೇಷ್ಟ್ರೂ ಸಹ ರಾಜಣ್ಣನ ಮೊರೆ ಹೋಗಬೇಕು ಅಂತ ಗೊತ್ತು ಮಾಡಿಕೊಂಡು ಹೊರಟರು.

ರಾಜಣ್ಣ ವಾಟ್ಸಾಪಿನಲ್ಲಿ ಮೋದಿ ಸಾಧನೆಯ ಫೋಟೋಶಾಪ್ ಗಳನ್ನು ಅಳಿಸುತ್ತಾ, ರಾಹುಲ್ ಗಾಂಧಿಯ ಜೋಕುಗಳಿಗೆ ನಗುತ್ತಾ ತನ್ನ ಮನೆಯ ಜಗಲಿಯ ಮೇಲೆ ಕುಳಿತಿದ್ದ. ತಮ್ಮ ಮೇಷ್ಟ್ರನ್ನು ಕಾಣುತ್ತಿದ್ದಂತೆ ರಾಜಣ್ಣ ಸಂಭ್ರಮದಿಂದ ಎದ್ದು ನಿಂತು “ಓಹೋ ದ್ವಿ ಸ್ವಹಸ್ತ ಸ್ಪರ್ಷಿಸಿ ನಮಸ್ಕಾರ. ತಮ್ಮ ಶಿಷ್ಯನ ಗೃಹದ್ವಾರದ ವರೆಗೆ ಪ್ರಯಾಣ ಮಾಡಿ ಅನುಗ್ರಹಿಸಿದಿರಿ. ಶುದ್ಧ ಗೋಕ್ಷೀರದಿಂದ ಮಾಡಿದ ಚಹಾವನ್ನು ಸವಿದು ಆಶೀರ್ವದಿಸಿರಿ.” ಅಂತ ಗುರುವಿನ ಕಾಲನ್ನು ಮುಟ್ಟಿ ನಮಸ್ಕರಿಸಿದ. ತಿಮ್ಮ ತಿಮ್ಮಿ ಏನೂ ತಿಳಿಯದೆ ಮುಖ ಮುಖ ನೋಡಿಕೊಂಡರು. ಚಾಮಯ್ಯ ಮೇಷ್ಟ್ರು “ಅಯ್ಯಾ ರಾಜಣ್ಣ, ಸಾಕು ಮಾಡು ನಿನ್ನ ವ್ಯಂಗ್ಯ. ಪಾಪ ತಿಮ್ಮ ತಿಮ್ಮಿಗಳು ಏನೂ ತಿಳಿಯದೆ ಹೆಂಗೆ ಕಣ್ಣು ಕಣ್ಣು ಬಿಡುತ್ತಿದ್ದಾವೆ ನೋಡು.” ಅಂದರು. ರಾಜಣ್ಣ ನಸುನಕ್ಕು “ಎಲ್ಲಾ ಬನ್ನಿ. ಹಸು ಹಾಲಿನ ಚಾ ಕುಡೀರಿ. ನಮ್ಮನೆ ಚಾ ಎಲ್ಲರಿಗೂ ಒಂದೇ ರುಚಿ ಇರುತ್ತದೆ.” ಅಂದ. ಚಾ ಕುಡಿಯುತ್ತಾ ತಿಮ್ಮ ತಿಮ್ಮಿಯರು ರಾಜಣ್ಣನಿಗೆ ತಮ್ಮ ಕಂಪ್ಯೂಟರ್ ಕಲಿಯುವ ಆಸೆಯನ್ನೂ ಹಾಗೂ ತಾವು ಓದಲು ಹೋದಾಗ ಹೊತ್ತಗೆಯು ಪದಗಳೆಲ್ಲ ರುಂಡ ಚೆಂಡಾಡಿ ರಕ್ತ ಕಾರಿಕೊಂಡು ಬಿದ್ದಿದ್ದ ರಣರಂಗವಾಗಿ ಕಂಡುದದೂ ಅದರಿಂದ ದಾರಿ ತಪ್ಪಿದಂತಾಗಿ ತಾವು ಎಂದಿಗೂ ಮಾಡದ ಮತ್ತು ಕಾಣದ ಕ್ರೌರ್ಯಕ್ಕೆ ಬೆಚ್ಚಿ ತಮ್ಮಲ್ಲಿ ಶರಣು ಬಂದಿರುವುದಾಗಿಯೂ ಹೇಳಿಕೊಂಡರು. ರಾಜಣ್ಣ ನಸುನಕ್ಕು. ಚಾಮಯ್ಯ ಮೇಷ್ಟ್ರ ಕಡೆ ನೋಡಿದ. ಆತನ ನೋಟದ ಚುರುಕನ್ನು ಅರಿತ ಮೇಷ್ಟ್ರು “ಭಗವದ್ಗೀತೆ ಉಪನಿಷತ್ತು ಎಲ್ಲವನ್ನೂ ಸಂಸ್ಕೃತದಲ್ಲೇ ಓದಿದ್ದರೂ ನನಗೆ ಅದರಲ್ಲಿ ಬರೆದ ಪದಗಳು ಅರ್ಥವಾಗಲಿಲ್ಲಪ್ಪ..” ಅಂತ ಅಸಹಾಯಕತೆ ತೋಡಿಕೊಂಡರು. ರಾಜಣ್ಣ ಮತ್ತೆ ನಸುನಕ್ಕು “ತಿಮ್ಮ ತಿಮ್ಮಿಯರೇ ನೀವೇನೂ ಚಿಂತೆ ಮಾಡಬೇಡಿ. ನಿಮಗೆ ಕಂಪ್ಯೂಟರನ್ನು ನಾನು ಹೇಳಿಕೊಡುತ್ತೇನೆ. ನಿಮ್ಮ ಜೊತೆಗೆ ಕಲಿಯಲು ಹುರುಪಿರುವ ಎಲ್ಲಾ ಗೆಳಯರನ್ನೂ ಕಲೆಹಾಕಿಕೊಂಡು ಬನ್ನಿ. ವಿಜ್ಞಾನ ತಿಳಿಯುವುದು ಹೇಗೆ, ಚಿಂತಿಸುವುದು ಹೇಗೆ, ಕಲಿಯುವುದು ಹೇಗೆ ಎಂಬಲ್ಲಿಂದ ಶುರು ಮಾಡಿ ಕಂಪ್ಯೂಟರಿನ ಒಳ ಹೊರಗುಗಳನ್ನು ತಿಳಿಯೋಣ” ಅಂತ ಹೇಳಿದ. ಚಾಮಯ್ಯ ಮೇಷ್ಟ್ರು ತಕ್ಷಣವೇ “ರಾಜಣ್ಣ ನಿನಗೆ ಅಭ್ಯಂತರವಿಲ್ಲ ವೆಂದರೆ ನಾನೂ ಬರುತ್ತೇನೆ ಕಣಪ್ಪಾ ನನಗೂ ಹೇಳಿಕೊಡು. ಈಗಾಗಲೆ ನಾವು ಹಳೆಯ ಕಾಲದವರು ಅಂತ ಈಗಾಗಲೇ ಕಡೆಗಣೆನೆಗೆ ಒಳಗಾಗಿದ್ದೇವೆ. ಈಗ ಹೊಸತನ್ನು ಕಲಿಯದಿದ್ದರೆ ಏತಕ್ಕೂ ಬಾರದವರಾಗಿಬಿಡುತ್ತೇವೆ.” ಅಂತ ಅಂದರು. ಆಗ ರಾಜಣ್ಣನು “ಇದು ನನಗೆ ಒದಗಿ ಬಂದಿರುವ ಸೌಭಾಗ್ಯ ಮೇಷ್ಟ್ರೇ. ನಿಮ್ಮ ಜೊತೆಗೆ ಮತ್ತಾರು ಬಂದರೂ ಸರಿ” ಅಂತ ಹೇಳಿ ಸಂಭ್ರಮಿಸಿದನು.
ಮುಂದುವರಿಯುವುದು