ಈ ನೈಸರ್ಗಿಕ ಆಯ್ಕೆ, ಅಭಿವೃದ್ಧಿ ಹೊಂದದ, ಮಾರ್ಪಾಡುಗಳಿಗೆ ಒಳಪಡದ ಜೀವಿಗಳ ಅವಸಾನಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಉಳಿದುಕೊಂಡ ಜೀವಿಗಳ ಲಕ್ಷಣಗಳು ಮತ್ತು ಗುಣಗಳಲ್ಲಿ ಅತೀವವಾದ ಮಾರ್ಪಾಡಿಗೆ ದಾರಿಯಾಗುತ್ತದೆ. ಇದನ್ನು ನಾನು ಗುಣ ವೈವಿಧ್ಯತೆ ಎನ್ನುತ್ತೇನೆ. ಅದು ಹೇಗೆ ಎನ್ನುವ ವಿಷಯವನ್ನು ವಿಶದವಾಗಿ ಮುಂದೆ ನೋಡೋಣ. ಈ ಮಾರ್ಪಾಡಿಗೂ, ಜೀವ ಸಂಕುಲದ ಸಂಖ್ಯೆಯ ಬೆಳವಣಿಗೆ ಯಾ ಅಳಿವಿಗೂ ಸಂಬಂಧ ಕಲ್ಪಿಸುವ, ಸಂಕೀರ್ಣವಾದ ಮತ್ತು ಅಪರೂಪದ ನಿಯಮಗಳನ್ನೂ ನಾವು ಗಮನಿಸಬೇಕಿದೆ.

ಹೋದ ಸಂಚಿಕೆಯಲ್ಲಿ ಮಾನವನ ಜೊತೆ ಬೆಳೆದ ಸಾಕುಪ್ರಾಣಿಗಳಾಗಲೀ, ವ್ಯವಸಾಯಕ್ಕೆ ಉಪಯೋಗಿಸಿದ ಸಸ್ಯಗಳಾಗಲೀ,   ಮನುಜನ ಜೊತೆಯ ಬಾಳುವೆಗೆ ಒಗ್ಗಿಕೊಳ್ಳುವ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳನ್ನು ಅರಿತುಕೊಳ್ಳುವುದು  ಜೀವಿಯ ಉಗಮದ ರಹಸ್ಯವನ್ನು ಅರಿಯುವಲ್ಲಿ ಮೊದಲ ಕಾರ್ಯ ಎಂದು ಹೇಳಿದೆ. ಇದೇ  ನಮ್ಮ ಮೊದಲ ಅಧ್ಯಾಯ. ಸಣ್ಣ ಸಣ್ಣ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಾ ಹೋಗುವುದರಿಂದ ರೂಪಾಂತರ ಹೊಂದುವುದು ಸಾಧ್ಯವೂ ಹೌದು ಮತ್ತು ನಿಯೋಜಿತ ಕೆಲಸ ಕಾರ್ಯಗಳನ್ನು ಮಾಡಲು ಅನುರೂಪವಾದ ರೂಪಾಂತರದಿಂದ ದೊರೆಯುವ ಶಕ್ತಿ ಅತೀವವಾದದ್ದೂ ಹೌದು.  ಇದು ಕೇವಲ ಸಾಕು-ಜೀವಿಗಳಿಗಷ್ಟೇ ಅಲ್ಲದೆ ನೈಸರ್ಗಿಕ ಜೀವಿಗಳಿಗೂ ಅನ್ವಯಿಸಬಹುದು. ಆದರೆ  ಅದಕ್ಕೆ ಬೇಕಾದ ಅಗಾಧ ಸಾಕ್ಷ್ಯಗಳನ್ನು ನೀಡುವ ಗೋಜಿಗೆ ಇಲ್ಲಿ ಹೋಗದೆ, ಸಂಕ್ಷಿಪ್ತವಾಗಿ ಮುಗಿಸುತ್ತೇನೆ.  ಇರಲಿ, ಬದಲಾವಣೆಗಳಿಗೆ ಕಾರಣವಾಗಬಹುದಾದ ಪರಿಸ್ಥಿಗಳನ್ನು ಚರ್ಚಿಸುವ ಕಾರ್ಯವಂತೂ ಇದ್ದೇ ಇದೆ. ಇಲ್ಲಿಂದ ಮುಂದೆ,  ಜಗತ್ತಿನ ಎಲ್ಲ ಜೀವಿಗಳಿಗೂ, ಎಲ್ಲಾ ಕಾಲಕ್ಕೂ, ಎಲ್ಲಾ ಪ್ರದೇಶಗಳಲ್ಲೂ ಅನ್ವಯವಾಗುವ ಬದುಕಿನ ಹೋರಾಟದ ಬಗ್ಗೆ ಚರ್ಚಿಸೋಣ.

ಮೊದಲೇ ತಿಳಿಸದಂತೆ, ಸಣ್ಣ ಸಣ್ಣ ಬದಲಾವಣೆಗಳು, ಜೀವಿಯ ಕೌಶಲ್ಯವನ್ನು ಹೆಚ್ಚಿಸುತ್ತವೆ. ಹೀಗೆ ಕೌಶಲ್ಯ ವೃದ್ಧಿಯಾದ ಜೀವಿಗಳು ತಮ್ಮ ಹಿಂದಿನ ತಲೆಮಾರಿಗಿಂತ ಹೆಚ್ಚು ಕೌಶಲಯುತವಾಗಿ ಆಹಾರ ಸಂಪಾದನೆ ಮಾಡುತ್ತವೆ. ಹೀಗಾಗಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಮಾಲ್ಟಾಸ್ ಇದನ್ನು ತನ್ನದೊಂದು ಸಿದ್ಧಾಂತದಲ್ಲಿ   “ಯಾವುದೇ ಜೀವಿಯ ಕೌಶಲ್ಯ ಹೆಚ್ಚುವ ವೇಗದಿಂದಾಗಿ ಹೆಚ್ಚುವ ಅವುಗಳ  ಸಂಖ್ಯೆ, ಅದೇ ಜೀವಿಗಳಿಗೆ ಲಭ್ಯವಿರುವ ಆಹಾರ ಮತ್ತು ಇತರ ಸೌಕರ್ಯಗಳು ದೊರೆಯುವ ವೇಗಕ್ಕಿಂತ ಹತ್ತುಪಟ್ಟು ಹೆಚ್ಚಾಗಿರುತ್ತದೆ.” ಎಂದು ಹೇಳಿದ್ದಾನೆ.

ಪ್ರತಿ ಪ್ರಭೇದದ ಜೀವಿಗಳು ಹುಟ್ಟುತ್ತವೆ ಮತ್ತು ಬದುಕುತ್ತವೆ. ಹೀಗಾಗಿ ಅವುಗಳ ಸಂಖ್ಯೆ ಆಹಾರ ಸಿಗುವ ವೇಗಕ್ಕಿಂತ ಬೇಗನೇ ಹೆಚ್ಚುತ್ತದೆ. ಹಾಗಾಗಿ ಬದುಕಲು ಅವು ಹೋರಾಟ ನಡೆಸಲೇ ಬೇಕಾದ ಸ್ಥಿತಿ ಬರುತ್ತದೆ. ಇಂಥ ಪರಿಸ್ಥಿಯಲ್ಲಿ ಎಷ್ಟೇ ಸಣ್ಣ ಪ್ರಮಾಣದಲ್ಲಿ ಆದರೂ ಸರಿ, ಬದಲಾಗುತ್ತಿರುವ, ಸದಾ ಸಂಕೀರ್ಣವೂ ಆಗುತ್ತಿರುವ ಪರಿಸ್ಥಿಯಲ್ಲಿ ಅನುಕೂಲ ಸ್ಥಿತಿಯನ್ನು ಹೊಂದಿರುವ ಜೀವಿಗಳು ಬದುಕುವ ಸಾಧ್ಯತೆ ಹೆಚ್ಚುತ್ತದೆ.  ಹಾಗಾಗಿ ಅವು ನೈಸರ್ಗಿಕವಾಗಿ ಆಯ್ಕೆ ಯಾದ  ಜೀವಿಗಳಾಗುತ್ತವೆ. ವಂಶವಾಹೀ  ಸಿದ್ದಾಂತದ ಪ್ರಕಾರ ಬದುಕಲು ಆಯ್ಕೆಯಾದ ಜೀವಿಗಳು ಅವುಗಳ ಹೊಸ ರೂಪದಲ್ಲಿಯೇ  ಅಭಿವೃದ್ಧಿ ಹೊಂದುತ್ತವೆ.

  ಈ ನೈಸರ್ಗಿಕ ಆಯ್ಕೆ,   ಅಭಿವೃದ್ಧಿ ಹೊಂದದ, ಮಾರ್ಪಾಡುಗಳಿಗೆ ಒಳಪಡದ ಜೀವಿಗಳ ಅವಸಾನಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಉಳಿದುಕೊಂಡ ಜೀವಿಗಳ  ಲಕ್ಷಣಗಳು ಮತ್ತು ಗುಣಗಳಲ್ಲಿ ಅತೀವವಾದ ಮಾರ್ಪಾಡಿಗೆ ದಾರಿಯಾಗುತ್ತದೆ. ಇದನ್ನು ನಾನು ಗುಣ ವೈವಿಧ್ಯತೆ ಎನ್ನುತ್ತೇನೆ.  ಅದು ಹೇಗೆ ಎನ್ನುವ  ವಿಷಯವನ್ನು ವಿಶದವಾಗಿ ಮುಂದೆ ನೋಡೋಣ.  ಈ  ಮಾರ್ಪಾಡಿಗೂ, ಜೀವ ಸಂಕುಲದ ಸಂಖ್ಯೆಯ ಬೆಳವಣಿಗೆ ಯಾ ಅಳಿವಿಗೂ ಸಂಬಂಧ ಕಲ್ಪಿಸುವ, ಸಂಕೀರ್ಣವಾದ ಮತ್ತು ಅಪರೂಪದ ನಿಯಮಗಳನ್ನೂ ನಾವು ಗಮನಿಸಬೇಕಿದೆ.  

ನನ್ನ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳಲು ನಾಲ್ಕು ವಿಷಯಗಳನ್ನು ತಿಳಿಯಬೇಕಿದೆ.

ಮೊದಲನೆಯದಾಗಿ,

ಒಂದು ಸರಳ ಜೀವಿ ಅಥವಾ ಜೀವಿಯ ಒಂದು ಅಂಗ, ಕಾಲಾನುಕ್ರಮದಲ್ಲಿ ಹೇಗೆ ತನ್ನ ಕೆಲಸ ಕಾರ್ಯಗಳಿಗೆ ಅಗತ್ಯವಿರುವಂತೆ, ಹೇಗೆ ಸಂಪೂರ್ಣವಾಗಿ ಮಾರ್ಪಾಡು ಹೊಂದುವುದು.

ಎರಡನೆಯದಾಗಿ

ಒಂದು ಜೀವಿಯ ಪ್ರವೃತ್ತಿ , ಮತ್ತು  ಬುದ್ಧಿಶಕ್ತಿ ತನ್ನ ಅಗತ್ಯಗಳಿಗೆ ತಕ್ಕಹಾಗೆ ಅದೇ ದಿಕ್ಕಿನಲ್ಲಿ  ಹೇಗೆ ವಿಕಸಿತಗೊಳ್ಳುವುದು ?

ಮೂರನೆಯದಾಗಿ

ಕೆಲವು ಜೀವಪ್ರಕಾರಗಳು ತಮ್ಮದೇ ಜೀವಜಾತಿಯಲ್ಲಿ ಸಂತಾನ ಹೀನತೆಯ ಗುಣಗಳನ್ನು ತೋರಿಸುತ್ತಿದ್ದರೂ, ಇತರ ಜೀವಜಾತಿಗಳೊಂದಿಗೆ ಬೆರೆತಾಗ, ಸಂತಾನ ಸಾಫಲ್ಯ ಪಡೆಯುವುದು.  ಹಾಗೂ ಜೀವಜಾತಿಯ ಉಪಭೇದಗಳಿಗೆ ಕಾರಣವಾಗುವುದು ಹೇಗೆ?

ನಾಲ್ಕನೆಯದಾಗಿ,

ನಾವು ಕಾಣಬಹುದಾದ ಜೀವಿಗಳ ಪಳೆಯುಳಿಕೆಗಳ ಸಾಕ್ಷ್ಯ ಸರಿಯಿದೆಯೇ ? ಕಾಲಕ್ರಮದಲ್ಲಿ ನಶಿಸಿ ಹೋದ ಕೆಲವು ಜೀವ ಪ್ರಭೇದಗಳು ಇದ್ದವೆನ್ನುವುದಕ್ಕೆ ಯಾವುದೇ ಪುರಾವೆ ಇಲ್ಲದಂತೆ ಏಕೆ ಆಗಿರಬಾರದು?.

ಮುಂದಿನ ಭಾಗಗಳಲ್ಲಿ, ಈ ವಿಷಯಗಳನ್ನು ವಿಶದವಾಗಿ ಚರ್ಚಿಸೋಣ .  ಮುಂದೆ, ಕಾಲಾನುಕ್ರಮದಲ್ಲಿ ಈ ಜೀವಿಗಳ ಬೆಳವಣಿಗೆಯನ್ನೂ , ಭೌಗೋಳಿಕವಾಗಿ ಈ ಜೀವಿಗಳು ಹಂಚಿ ಹೋಗಿರಬಹುದಾದ ರೀತಿಯನ್ನೂ, ಅವುಗಳನ್ನು ವರ್ಗೀಕರಿಸಬಹುದಾದ ರೀತಿಗಳನ್ನೂ, ಈ  ಜೀವಿಗಳಲ್ಲಿ  ಒಂದಕ್ಕೊಂದು ಇರಬಹುದಾದ ಪರಸ್ಪರಾವಲಂಬನೆ, ಸೆಳೆತ ಮತ್ತು ವೈರತ್ವಗಳನ್ನೂ ,  ಹಾಗೂ  ಭ್ರೂಣಾವಸ್ಥೆ ಮತ್ತು ಪ್ರಬುದ್ಧಾವಸ್ಥೆಯಲ್ಲಿ ಅವು ಇರಬಹುದಾದ ಬದಲಾಗಬಹುದಾದ ರೀತಿಗಳನ್ನೂ ಕುರಿತು ಹೇಳುತ್ತೇನೆ.

ನಮ್ಮ ಸುತ್ತಲೂ ಇರುವ ಲಕ್ಷೋಪಲಕ್ಷ ಜೀವಿಗಳ ಹುಟ್ಟು ಬೆಳವಣಿಗೆ ಹೇಗಾಯಿತು. ಅವುಗಳ ಮೂಲ ರೂಪವೇನು, ಅವು ಇಂದಿರುವ ರೂಪಕ್ಕೆ ಕಾರಣವೇನು ಎನ್ನುವ ಎಲ್ಲವನ್ನೂ ಇನ್ನೂ ನಾವು ವಿವರಿಸಲಾಗಿಲ್ಲ.  ನಮ್ಮ ಸುತ್ತಲೂ ಇರುವ ಜೀವಜಾತಿಗಳ ಪರಸ್ಪರ ಅವಲಂಬನೆ ಏನು ಅವುಗಳ ನಡುವಿನ ಸಂಭಂದ ಏನು  ಎನ್ನುವ ಬಗ್ಗೆ  ನಮಗಿರುವುದು ಅಜ್ಞಾನ ಮಾತ್ರ.  ಕೆಲವು  ಜೀವಜಾತಿಗಳಲ್ಲಿ ಸಾಕಷ್ಟು ಪ್ರಭೇದಗಳಿದ್ದು, ಅದೇ ಜೀವಜಾತಿಗೆ ಸಂಬಂಧಿಸಿದ ಇನ್ನೊಂದು ಜೀವ ಜಾತಿಯಲ್ಲಿ ತುಂಬಾ ಕಡಿಮೆ ಪ್ರಭೇದಗಳಿರುವುದನ್ನು ನಾವು ನೋಡಬಹುರು. ಆದರೆ ಇದಕ್ಕೆ ಕಾರಣವನ್ನು ವಿವರಿಸಲು ಇದುವರೆಗೂ ಸಾಧ್ಯವಾಗಿಲ್ಲ.  ಆದರೆ  ಈ ಕಾರಣ ತಂತುವಿನ ಎಳೆ  ಹಿಡಿದರೆ ಮಾತ್ರ, ಈ ಜೀವಜಾತಿಗಳು ಇಂದಿನ ಸ್ಥಿತಿಯಲ್ಲಿ ಏಕಿವೆ? ಮುಂದಿನ ಸ್ಥಿತಿ ರೀತಿ ಏನಿರಬಹುದು ಎಂದು  ನಾವು ಊಹಿಸಲು ಸಾಧ್ಯ.   ಪ್ರಪಂಚದ ಇತಿಹಾಸಲ್ಲಿ ತಿಳಿಯದೆ ಇರುವ  ವಿಷಯ ಸಾಕಷ್ಟಿದೆ. ಅದರಲ್ಲೂ ವಿಪರೀತ ವಿಸ್ತಾರವಾದ ಜೀವಜಗತ್ತಿನ ಬಹಳಷ್ಟು ವಿಷಯಗಳು ನಮಗೆ ತಿಳಿದೇ ಇಲ್ಲ.  ಈ ರಹಸ್ಯಗಳು, ಮುಂದೆಯೂ ರಹಸ್ಯಗಳಾಗಿ ಉಳಿಯಬಹುದು.  ಇವೆಲ್ಲ ಮಿತಿಗಳ ನಡುವೆಯೂ, ನಾನು ಘಂಟಾಘೋಷವಾಗಿ ಹೇಳಬಹುದಾದ ವಿಷಯವೆಂದರೆ.

“ಜಗತ್ತಿನ ಜೀವಜಾತಿಗಳೆಲ್ಲ ಹೊಸದಾಗಿ ಒಂದಕ್ಕೊಂದು ಸಂಬಂಧವಿಲ್ಲದೆ ಹುಟ್ಟಿಕೊಂಡಿವೆ ಎನ್ನುವ ಮಾತು ತಪ್ಪು.  ಜೀವಜಾತಿಗಳು ಬದಲಾಗುವುದಿಲ್ಲ ಎನ್ನುವ ಮಾತನ್ನು ಒಪ್ಪಬಹುದಾದರೂ,  ಒಂದೇ ಜಾತಿಯ ಜೀವ ಸಂಕುಲದಲ್ಲಿ  ಅಲ್ಪ ಸ್ವಲ್ಪ ಬದಲಾವಣೆಗಳಿಂದ ಪ್ರಭೇದಗಳು ರೂಪುಗೊಂಡ ರೀತಿಯಲ್ಲಿಯೇ,  ಹಿಂದೊಮ್ಮೆ  ಇದ್ದ , ಈಗ ಇಲ್ಲದಿರುವ ಬೇರೆಯೇ ಜಾತಿಯ ಜೀವ ಪ್ರಭೇದವೊಂದರಿಂದಲೂ, ಇಂದು ಇರುವ ಅನೇಕ ಜೀವಸಂಕುಲಗಳು ಮತ್ತು ಅವುಗಳ ಪ್ರಭೇದಗಳು  ಹುಟ್ಟಿ ಬಂದಿರುವವು.

ಈ ಬದಲಾವಣೆಗಳಿಗೆ ಹಲವಾರು ಕಾರಣಗಳು ಇರಬಹುದಾದರೂ, ನಾನು ಹೇಳ ಹೊರಟಿರುವ ನೈಸರ್ಗಿಕ ಆಯ್ಕೆಯೇ ಬಹು ಪ್ರಮುಖವಾದ ಕಾರಣವಾಗಿದೆ. “

ಓದುಗರೇ,

ಇಲ್ಲೊಂದು ಸಣ್ಣ ಟಿಪ್ಪಣಿ, ಡಾರ್ವಿನ್ನನ ಜೀವಿಗಳ ಉಗಮವನ್ನು ಅರಿತುಕೊಳ್ಳುವುದೇ ಸಾಹಸ, ಅದನ್ನು ಕನ್ನಡಿಸಿ, ಸಂಕ್ಷಿಪ್ತಗೊಳಿಸಿ ನಿಮ್ಮ ಮುಂದೆ ಇಡುವ ಪ್ರಯತ್ನದಲ್ಲಿ,  ಇದುವರೆಗೂ ಹೇಳಿರುವುದು ಕೇವಲ ಡಾರ್ವಿನ್ನನ ಪೀಠಿಕೆ. ಇಲ್ಲಿಂದ ಮುಂದೆ ನಿಜವಾದ ಪಾಠ ಶುರುವಾಗಲಿದೆ.

ಮೊದ್ಮಣಿ
Leave a replyComments (1)
  1. Dr L Thimmesha July 30, 2020 at 1:23 pm

    Nice Article sir

    ReplyCancel

Leave a Reply