ಇನ್ನೊಂದು ವಿಶೇಷವೆಂದರೆ, ಕ್ರಯಾನಿಕ್ ಸಂರಕ್ಷಣೆಗೆ ಇಡೀ ದೇಹ ಬೇಡವೆಂದರೆ ಕೇವಲ ತಲೆಯನ್ನು ಮಾತ್ರ ಸಂರಕ್ಷಿಸುವ ಆಯ್ಕೆ ರೋಗಿಗಳಿಗೆ ಇರುತ್ತದೆ. ಇದರ ಹಿಂದೆ ಇರುವ ತರ್ಕ ಏನಂದರೆ, ಬಹಳಷ್ಟು ದಶಕಗಳ ನಂತರ ದೇಹವನ್ನು ಪುನಶ್ಚೇತನಗೊಳಿಸುವಾಗ ದೇಹದ ಉಳಿದ ಭಾಗಗಳು ನಿಷ್ಕ್ರಿಯವಾಗುವ ಸಾಧ್ಯತೆಗಳಿವೆ. ಆದರೆ ತಲೆ ಮತ್ತು ಮೆದುಳು ಹೆಚ್ಚು ಕಾಲ ಉಳಿಯುವಂತಹ ಮತ್ತು ದೇಹದ ಇತರ ಭಾಗಗಳನ್ನು ನಿಯಂತ್ರಿಸುವ ಕೇಂದ್ರವಾಗಿದ್ದರಿಂದ ತಲೆಯ ಸಂರಕ್ಷಣೆ ಸೂಕ್ತ ಎನ್ನುವುದು ಕೆಲವರ ಅಭಿಪ್ರಾಯ. ಇಡೀ ದೇಹವನ್ನು ಸಂರಕ್ಷಿಸಿದರೆ ಹತ್ತು-ಇಪ್ಪತ್ತು ಅಥವಾ ಮೂವತ್ತು ವರ್ಷಗಳ ನಂತರ ಆ ದೇಹವನ್ನು ಜೀವಗೊಳಿಸಿದಾಗ, ಆ ದೇಹದ ಇತರ ಭಾಗಗಳು ಹಳೆಯದಾಗಿ, ಕೇವಲ ಮೆದುಳು ಮಾತ್ರ ಹೊಸದಾಗಿ ಉಳಿಯುವ ಸಾಧ್ಯತೆಗಳಿವೆ. ಆದುದರಿಂದ ಎಷ್ಟು ಭಾಗದ ಕ್ರಯಾನಿಕರಣ ಮಾಡಬೇಕು ಎನ್ನುವ ಆಯ್ಕೆ ರೋಗಿಗಳಿಗೆ ಇರುತ್ತದೆ.

ಕಳೆದ ಭಾಗದಲ್ಲಿ ಕ್ರಯೋಜನಿಕ್ಸ್ ಎಂದರೇನು, ಅದನ್ನು ಯಾವ ಕ್ಷೇತ್ರದಲ್ಲಿ ಬಳಸುತ್ತಾರೆ ಎಂಬುವುದನ್ನು ತಿಳಿದಿದ್ದೀರಿ. ಈ ಭಾಗದಲ್ಲಿ ಇದರ ಕೆಲವು ಬಳಕೆಗಳನ್ನು ಇನ್ನಷ್ಟು ವಿವರವಾಗಿ ತಿಳಿಯೋಣ ಬನ್ನಿ!

          ಇವತ್ತು ನೀವು ಮಾರ್ಕೆಟ್ ಗೆ ಹೋಗಿ ತಂದ ಟೊಮ್ಯಾಟೋ ಹಣ್ಣುಗಳನ್ನು ನೀವು ಫ್ರಿಜ್ ನಲ್ಲಿ ಇಟ್ಟಿಲ್ಲವೆಂದರೆ, ಅವುಗಳು ಮೂರು ಅಥವಾ ನಾಲ್ಕು ದಿನಗಳಲ್ಲಿ ಕೊಳೆತು ಹೋಗಬಹುದು. ಆದರೆ ಫ್ರಿಜ್ ನಲ್ಲಿಟ್ಟರೆ ಟೊಮ್ಯಾಟೋಗಳು ಒಂದು ವಾರ ಅಥವಾ ಹತ್ತು ದಿವಸಗಳ ವರೆಗೆ ತಾಜಾತನವನ್ನು ಕಾಪಾಡಿಕೊಂಡು ಇರುತ್ತವೆ (ಗಂಟೆಗಟ್ಟಲೆ ವಿದ್ಯುತ್ ಕಡಿತ ಇಲ್ಲದಿದ್ದರೆ!). ಅಂದರೆ ಟೊಮ್ಯಾಟೋಗಳನ್ನು ಕಡಿಮೆ ತಾಪಮಾನದಲ್ಲಿಟ್ಟರೆ ಅವುಗಳ ಆಯಸ್ಸು ಸ್ವಲ್ಪ ಹೆಚ್ಚಾಗುತ್ತದೆ. ಇನ್ನು ಕೆಲವು ಖಾದ್ಯ ಪುಡಿಗಳು, ಉಪ್ಪಿನ ಕಾಯಿ ಇತ್ಯಾದಿಗಳು ವರ್ಷಗಟ್ಟಲೆ ಕೆಡದೇ ಫ್ರಿಜ್ ನ ತಂಪಾದ ವಾತಾವರಣದಲ್ಲಿ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಅಂದರೆ ತಂಪು ಹವೆಯಲ್ಲಿ ಅವುಗಳ ಆಯಸ್ಸು ಸ್ಥಗಿತಗೊಳಿಸಿ ವಸ್ತುಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲಾಗುತ್ತದೆ.

          ಇದೇ ರೀತಿ, ನೀವು ಕ್ರಿಸ್ಟೋಫರ್ ನೋಲನ್ ರವರ “ಇಂಟರ್ ಸ್ಟೆಲ್ಲರ್” ಎಂಬ ಚಲನಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ನೋಡುತ್ತಿದ್ದೀರಿ ಅಂದು ಕೊಳ್ಳಿ. ಆ ಚಿತ್ರದಲ್ಲಿ ಅತಿಯಾಗಿ ಬಳಕೆಯಾಗುವ worm hole, ನಾಲ್ಕನೆಯ ಆಯಾಮಗಳ ಬಗ್ಗೆ ನಿಮಗೆ ಏನೂ ಅರ್ಥವಾಗುವುದಿಲ್ಲ ಅಂದು ಕೊಳ್ಳಿ. ಆಗ ನೀವು ಕೂಡಲೇ ಆ ಚಿತ್ರವನ್ನು ಸ್ತಬ್ದ(pause) ಗೊಳಿಸಿ, ಇಂಟರ್ನೆಟ್ ನಲ್ಲಿ worm hole ಬಗ್ಗೆ ಹುಡುಕಿ ತಿಳಿದುಕೊಂಡು, ನಂತರ ಮತ್ತೆ ಚಿತ್ರವನ್ನು ಮುಂದುವರೆಸಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತೀರಿ.

          ಹೀಗೆಯೇ ನಿಮ್ಮ ಆತ್ಮೀಯರೊಬ್ಬರಿಗೆ ಕ್ಯಾನ್ಸರ್ ರೋಗ ಬಂದು ಅವರು ಹೆಚ್ಚು ಕಾಲ ಬದುಕುವುದು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳಿದರು ಎಂದು ಊಹಿಸಿ. ಕ್ಯಾನ್ಸರ್ ರೋಗಕ್ಕೆ ಕೊನೆಯ ಹಂತಗಳಲ್ಲಿ ಗುಣಪಡಿಸುವ ಮದ್ದು ಈಗಂತೂ ಇಲ್ಲ. ಆದರೆ ಇನ್ನು ಹತ್ತು-ಇಪ್ಪತ್ತು ವರುಷಗಳ ನಂತರ ವಿಜ್ಞಾನಿಗಳು ಔಷಧ ಕಂಡು ಹಿಡಿಯುವ ಸಾಧ್ಯತೆಗಳಿವೆ. ಆಗ ನಿಮಗೆ ಹತ್ತು ವರುಷಗಳ ಹಿಂದೆಯೇ ಈ ಔಷಧ ಹುಡುಕಿದ್ದಲ್ಲಿ ನಿಮ್ಮ ಆತ್ಮೀಯರು ಬದುಕಿ ಇರುತ್ತಿದ್ದರು ಎಂಬ ಯೋಚನೆ ಬರುವುದು ಸಹಜವಲ್ಲವೇ?

          ಕ್ರಯಾನಿಕ್ಸ್ ಎಂಬ ವಿಧವು ಇದನ್ನೇ ಸಾಧ್ಯಗೊಳಿಸುವ ಪ್ರಯತ್ನ ಮಾಡುತ್ತದೆ. ಘಾತಕ ರೋಗಗಳಿಗೆ ಔಷಧ ಹುಡುಕುವ ವರೆಗೆ ಸಮಯವನ್ನು ಸ್ತಬ್ಧ ಗೊಳಿಸುವ ಒಂದು ಪರ್ಯಾಯ ವಿಧಾನ. ಕ್ಯಾನ್ಸರ್, ಏಡ್ಸ್ ಹಾಗೂ ಈಗಿನ ಪರಿಸ್ಥಿತಿಯಲ್ಲಿ ಕರೋನಾದಂತಹ ರೋಗಕ್ಕೆ ಈಗಷ್ಟೆ ಸಾವಿಗೀಡಾದವರನ್ನು ಅಥವಾ ಮರಣಶಯ್ಯೆಯಲ್ಲಿದ್ದವರನ್ನು  ಕ್ರಯಾನಿಕ್ಸ್ ಶೀತಾಗಾರದಲ್ಲಿ ಅತಿ ಕಡಿಮೆ ಉಷ್ಣಾಂಶದಲ್ಲಿ ವರ್ಷಗಟ್ಟಲೆ ಇರಿಸಿ, ಮುಂದೆ ಎಂದಾದರೂ ಇಂತಹ ರೋಗಗಳಿಗೆ ಔಷಧಿ ಕಂಡುಹಿಡಿದರೆ ಆಗ ಅಂಥವರನ್ನು ಜೀವ ಗೊಳಿಸುವುದು ಕ್ರಯಾನಿಕ್ಸ್ ನ ಮುಖ್ಯ ಉದ್ದೇಶವಾಗಿದೆ. ಇಂತಹ ಪ್ರಯೋಗವನ್ನು ಇಲಿ ಮತ್ತು ಮೊಲಗಳ ಮೇಲೆ ಮೊದಲು ನಡೆಸಿ, ಆ ಪ್ರಯೋಗಗಳು ಫಲಪ್ರದವಾದ ನಂತರ ಇದನ್ನು ಈಗ ಮನುಷ್ಯನ ಮೇಲೆ ಮಾಡಲಾಗುತ್ತಿದೆ.

          ಮನುಷ್ಯ ಸತ್ತ ಕೂಡಲೇ ಅವನ ಜೀವಕೋಶಗಳು ಆ ಕೂಡಲೇ ಸಾಯುವುದಿಲ್ಲ, ಆದುದರಿಂದ ಅವುಗಳನ್ನು ಸಾಯದಂತೆ ಸಂರಕ್ಷಿಸುವ ಅವಕಾಶವು ಕಲ್ಪಿಸಿ ಕೊಳ್ಳುತ್ತದೆ. ಕ್ರಯಾನಿಕರಣಕ್ಕೆ ಒಪ್ಪಿಕೊಂಡ ವ್ಯಕ್ತಿಯು ವೈದ್ಯಕೀಯವಾಗಿ ಸತ್ತ ಎಂದು ಗೊತ್ತಾದ ಕೂಡಲೇ, ಆ ವ್ಯಕ್ತಿಯನ್ನು ಕ್ರಯಾನಿಕರಣದಿಂದ ಸಂರಕ್ಷಿಸಲು ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಲಾಗುತ್ತದೆ:

  1. ವ್ಯಕ್ತಿ ಸತ್ತ ಕೂಡಲೇ ಶರೀರಕ್ಕೆ ಐಸ್ ಸ್ನಾನ ಕೊಡಲಾಗುತ್ತದೆ. ಹೆಪ್ಪುಗಟ್ಟುವಿಕೆಯನ್ನು ನಿಲ್ಲಿಸಲು ರಾಸಾಯನಿಕಗಳನ್ನು ನೀಡಲಾಗುತ್ತದೆ. ಹೊಟ್ಟೆಯ ಒಳಪದರಗಳು ಕರಗದಂತೆ ಅಂಟಾಸಿಡ್ ಗಳನ್ನೂ ಕೊಡಲಾಗುತ್ತದೆ.
  2. ನಂತರ ದೇಹದಿಂದ ರಕ್ತವನ್ನು ಹೀರಿ ತೆಗೆದು, ತಾತ್ಕಾಲಿಕವಾಗಿ ಅಂಗಾಂಗಗಳನ್ನು ಸಂರಕ್ಷಿಸುವ ದ್ರವವನ್ನು ಹಾಕಲಾಗುತ್ತದೆ.
  3. ಇವಿಷ್ಟು ಆಸ್ಪತ್ರೆಯಲ್ಲಿ ಮಾಡಿದ ನಂತರ ದೇಹವನ್ನು ಕ್ರಯಾನಿಕ್ ಸಂಸ್ಥೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಹೆಜ್ಜೆ 2. ರಲ್ಲಿ ಹಾಕಿದ ದ್ರವವನ್ನು ಹೊರತೆಗೆದು, ಅದರ ಜಾಗದಲ್ಲಿ ಹೆಪಾರಿನ್ ಎಂಬ ಘನೀಕರಣ ನಿರೋಧಕ (antifreeze) ವನ್ನು ಹಾಕಲಾಗುತ್ತದೆ. ವಿಪರೀತ ಶೀತಲ ವಾತಾವರಣಕ್ಕೆ ದೇಹದಲ್ಲಿ ಮಂಜು ಮೂಡದಂತೆ ಇದು ನಿರೋಧಿಸುತ್ತದೆ.
  4. ನಂತರ ದೇಹವನ್ನು ಕಂಪ್ಯೂಟರ್ ನಿಯಂತ್ರಿತ ಶೀಥಿಕರಣ ಘಟಕದಲ್ಲಿ ಇಟ್ಟು, ಇಡೀ ದೇಹವನ್ನು ಸ್ಲೀಪಿಂಗ್ ಬ್ಯಾಗ್ ನಲ್ಲಿ ಹಾಕಲಾಗುತ್ತದೆ.
  5. ಕೊನೆಯಲ್ಲಿ ಸ್ಲೀಪಿಂಗ್ ಬ್ಯಾಗ್ ಜೊತೆಗೆ ದೇಹವನ್ನು ಒಂದು ಸಿಲಿಂಡರ್ ಒಳಗೆ ತಲೆ ಕೆಳಗೆ ಮಾಡಿ ಇಡುತ್ತಾರೆ. ಈ ಸಿಲಿಂಡರ್ ಒಳಗೆ ದ್ರವೀಕರಿಸಿದ ಸಾರಜನಕ(liquid nitrogen) ವನ್ನು -197°C  (ಅಂದರೆ 77 K) ವರಗೆ ತಂಪುಗೊಳಿಸಿ ಹಾಕಲಾಗುತ್ತದೆ.

ಸತ್ತ ದೇಹದಲ್ಲಿರುವ ಸಾರಜನಕವನ್ನು ಕ್ರಯೋಜನಿಕ್ ಉಷ್ಣಾಂಶದಲ್ಲೇ ಇರಿಸಿದರೆ ಜೀವಕೋಶ ಹಾಗೂ ಸ್ನಾಯುಗಳು ವರ್ಷಾನುಗಟ್ಟಲೆ ಜೀವಂತವಿರುತ್ತವೆ. ಒಂದು ವೇಳೆ ಇಂತಹ ಮನುಷ್ಯರನ್ನು ಕಾಡಿದ ರೋಗದ ಔಷಧ ಕಂಡು ಹಿಡಿದರೆ, ಅವರಿಗೆ ಮತ್ತೆ ರಕ್ತ ಮತ್ತು ಆ ಔಷಧಗಳನ್ನು ನೀಡಿ ಪುನರ್ಜೀವ ಗೊಳಿಸುವ ಪ್ರಯತ್ನ ಮಾಡಬಹುದು.

Cheating death? Elderly writer is the first known Chinese to ...

          ಇನ್ನೊಂದು ವಿಶೇಷವೆಂದರೆ, ಕ್ರಯಾನಿಕ್ ಸಂರಕ್ಷಣೆಗೆ ಇಡೀ ದೇಹ ಬೇಡವೆಂದರೆ ಕೇವಲ ತಲೆಯನ್ನು ಮಾತ್ರ ಸಂರಕ್ಷಿಸುವ ಆಯ್ಕೆ ರೋಗಿಗಳಿಗೆ ಇರುತ್ತದೆ. ಇದರ ಹಿಂದೆ ಇರುವ ತರ್ಕ ಏನಂದರೆ, ಬಹಳಷ್ಟು ದಶಕಗಳ ನಂತರ ದೇಹವನ್ನು ಪುನಶ್ಚೇತನಗೊಳಿಸುವಾಗ ದೇಹದ ಉಳಿದ ಭಾಗಗಳು ನಿಷ್ಕ್ರಿಯವಾಗುವ ಸಾಧ್ಯತೆಗಳಿವೆ. ಆದರೆ ತಲೆ ಮತ್ತು ಮೆದುಳು ಹೆಚ್ಚು ಕಾಲ ಉಳಿಯುವಂತಹ ಮತ್ತು ದೇಹದ ಇತರ ಭಾಗಗಳನ್ನು ನಿಯಂತ್ರಿಸುವ ಕೇಂದ್ರವಾಗಿದ್ದರಿಂದ ತಲೆಯ ಸಂರಕ್ಷಣೆ ಸೂಕ್ತ ಎನ್ನುವುದು ಕೆಲವರ ಅಭಿಪ್ರಾಯ. ಇಡೀ ದೇಹವನ್ನು ಸಂರಕ್ಷಿಸಿದರೆ ಹತ್ತು-ಇಪ್ಪತ್ತು ಅಥವಾ ಮೂವತ್ತು ವರ್ಷಗಳ ನಂತರ ಆ ದೇಹವನ್ನು ಜೀವಗೊಳಿಸಿದಾಗ, ಆ ದೇಹದ ಇತರ ಭಾಗಗಳು ಹಳೆಯದಾಗಿ, ಕೇವಲ ಮೆದುಳು ಮಾತ್ರ ಹೊಸದಾಗಿ ಉಳಿಯುವ ಸಾಧ್ಯತೆಗಳಿವೆ. ಆದುದರಿಂದ ಎಷ್ಟು ಭಾಗದ ಕ್ರಯಾನಿಕರಣ ಮಾಡಬೇಕು ಎನ್ನುವ ಆಯ್ಕೆ ರೋಗಿಗಳಿಗೆ ಇರುತ್ತದೆ.

               1962ನೆಯ ಇಸವಿಯಲ್ಲಿ ಪ್ರೊಫೆಸರ್ ರಾಬರ್ಟ್ ಎತ್ತಿಂಜರ್ ಎಂಬುವವರು ಕ್ರಯಾನಿಕರಣದ ಬಗ್ಗೆ ವಿವರವಾದ ಮಾಹಿತಿಯಿದ್ದ ಶ್ವೇತ ಪತ್ರ(white paper)ವೊಂದನ್ನು ಪ್ರಕಟಿಸಿದರು. ಅದು ಬಹಳ ಪ್ರಸಿದ್ಧವಾಗಿ ಮುಂದೆ ಅದನ್ನು ಕಾರ್ಯರೂಪದಲ್ಲಿ ತರುವ ಪ್ರಯತ್ನಗಳು ನಡೆದವು. ಅದರ ಆಧಾರದ ಮೇಲೆ ಮುಂದೆ 1967 ನೆಯ ಇಸವಿಯಲ್ಲಿ ಡಾ. ಜೇಮ್ಸ್ ಬೆಡ್ಫೋರ್ಡ್ ಎಂಬುವವರು ಕ್ರಯಾನಿಕರಣ ಮಾಡಿಸಿಕೊಂಡ ಮೊದಲ ಮಾನವರಾದರು. ಈ ತರಹದ ಕ್ರಯಾನಿಕ್ಸ್ ಕ್ರಿಯೆಯನ್ನು ಎಲ್ಲಿ ಮಾಡುತ್ತಾರೆ? ಇದಕ್ಕೆ ತಗಲುವ ವೆಚ್ಚ ಎಷ್ಟು? ತಿಳಿದುಕೊಳ್ಳೋಣ ಬನ್ನಿ. ಅಮೇರಿಕಾದಲ್ಲಿ ಮೂರು ಮತ್ತು ರಷ್ಯಾದಲ್ಲಿ ಒಂದು ಕ್ರಯಾನಿಕರಣದ ಸಂಸ್ಥೆಗಳಿವೆ. ಅಮೇರಿಕಾದ ಅಲ್ಕೋರ್ ಮತ್ತು ಕ್ರಯಾನಿಕ್ಸ್ ಎಂಬ ಎರಡು ಸಂಸ್ಥೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಇಡೀ ದೇಹದ ಕ್ರಯಾನಿಕರಣದ ವೆಚ್ಚ 2 ಲಕ್ಷ ಡಾಲರ್ ಆಗಿರುತ್ತದೆ, ಕೇವಲ ತಲೆಯ ಕ್ರಯಾನಿಕರಣಕ್ಕೆ 85,000 ಡಾಲರ್ ವೆಚ್ಚವಾಗುತ್ತದೆ. ಇವೆರಡು ಏಕಕಾಲದ ವೆಚ್ಚ. ಇಷ್ಟು ಕೊಟ್ಟರೆ ಇಲ್ಲಿ ನಿಮ್ಮನ್ನು ಕ್ರಯಾನಿಕರಣ ಮಾಡಿ ಸಂರಕ್ಷಿಸಲಾಗುತ್ತದೆ. ಇದುವರಗೆ ಸುಮಾರು 215 ವ್ಯಕ್ತಿಗಳನ್ನು ಹೀಗೆ ಕ್ರಯಾನಿಕ್ಸ್ ಎಂಬ ಫ್ರಿಜ್ ನಲ್ಲಿ ಇಟ್ಟಿದ್ದಾರೆ. ವಿಚಿತ್ರವೆಂದರೆ, ಮನುಷ್ಯರ ಜೊತೆ ಎರಡು ನಾಯಿಗಳೂ ಇಲ್ಲಿವೆಯಂತೆ! ಇನ್ನೂ ಸುಮಾರು 1500 ವ್ಯಕ್ತಿಗಳು ತಾವು ಸತ್ತ ನಂತರ ಕ್ರಯಾನಿಕರಣವಾಗಿ ಸಂರಕ್ಷಿಸುವ ಒಪ್ಪಂದಕ್ಕೆ ಈಗಲೇ ಸಹಿ ಹಾಕಿದ್ದಾರಂತೆ!

          ಕ್ರಯಾನಿಕರಣ ವಿಧಾನದ ನಿಜವಾದ ಯಶಸ್ಸು ಸದ್ಯಕ್ಕಂತೂ ಮರೀಚಿಕೆ ಅಷ್ಟೇ. ಇದುವರೆಗೂ ಯಾವುದೇ ವ್ಯಕ್ತಿ ಯಶಸ್ವಿಯಾಗಿ ಇದರಿಂದ ಪುನರ್ಜೀವ ಗೊಂಡಿಲ್ಲ. ಈ ವಿಧಾನದ ಬಗ್ಗೆ ಬಹಳಷ್ಟು ವಾದ ವಿವಾದಗಳು ಇದ್ದೇ ಇದೆ. ಹಲವು ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಕ್ರಯಾನಿಕ್ಸ್ ಮೂಲಕ ಸತ್ತ ಮನುಷ್ಯರನ್ನು ಜೀವಗೊಳಿಸುವುದು, ಅವರ ಶವಗಳ ಅಂತ್ಯಕ್ರಿಯೆ ಮಾಡದೇ ಇರುವುದು, ಒಂದು ದೊಡ್ಡ ಅಪರಾಧ. ಇನ್ನೊಂದು ಸಮಸ್ಯೆ ಏನೆಂದರೆ ಕ್ರಯಾನಿಕರಣ ಮಾಡಿದ ಮನುಷ್ಯರನ್ನು ಇನ್ನೂ ಬದುಕಿದ್ದಾರೆ ಎಂದು ಘೋಷಿಸಬೇಕೋ ಅಥವಾ ಸತ್ತ ವ್ಯಕ್ತಿಗಳು ಎಂದು ಕರೆಯಬೇಕೋ ಎನ್ನುವ ಗೊಂದಲ. ಫ್ರಾನ್ಸ್ ದೇಶದಲ್ಲಿ ಕ್ರಯಾನಿಕರಣವನ್ನು ಅಮಾನ್ಯ ಎಂದು ಘೋಷಿಸಲಾಗಿದೆ. ಹಲವು ತಜ್ಞರ ಪ್ರಕಾರ ರಸಾಯನಿಕಗಳನ್ನು ಬಳಸಿ ಹೆಪ್ಪುಗಟ್ಟಿದ ಶರೀರವನ್ನು ಪುನಶ್ಚೇತನಗೊಳಿಸುವ ಭರವಸೆಯು, ಭೌತಶಾಸ್ತ್ರ, ನರಗಳ ಜೀವಶಾಸ್ತ್ರಗಳ ಸಿದ್ಧಾಂತವನ್ನೇ ಪ್ರಶ್ನಿಸುವ ವಿಷಯ ಎನ್ನಲಾಗಿದೆ. ಹಾಗೆಯೇ ಕ್ರಯಾನಿಕರಣದ ಪರ ಇರುವ ವಾದಗಳ ಪ್ರಕಾರ ಸತ್ತ ನಂತರ ಶವವನ್ನು ಹೂತು ಅಥವಾ ಸುಟ್ಟು ಬೂದಿ ಮಾಡುವ ಬದಲು, ಕ್ರಯಾನಿಕರಿಸಿ ಮುಂದೆ ಎಂದಾದರೂ ಜೀವಗೊಳಿಸುವ ಸಾಧ್ಯತೆಯನ್ನು ಸ್ವೀಕರಿಸಲಾಗುತ್ತದೆ.  

          ಅಂದ ಹಾಗೆ ಕ್ರಯಾನಿಕ್ಸ್ ಸಂಶೋಧಕ ರಾಬರ್ಟ್ ಎತ್ತಿಂಜರ್ ಅವರು 2011 ರಲ್ಲಿ ಸತ್ತಾಗ ಅವರ ದೇಹವನ್ನೂ ಕ್ರಯಾನಿಕರಣದಿಂದ ಸಂರಕ್ಷಿಸಲಾಗಿದೆ, ಜೊತೆಗೆ ಅವರ ತಾಯಿ ಮತ್ತು ಇಬ್ಬರೂ ಹೆಂಡತಿಯರೂ ಅವರ ಪಕ್ಕದ ಸಿಲಿಂಡರ್ ನಲ್ಲಿ ನಿದ್ರಿಸುತ್ತಿದ್ದಾರೆ! ಮುಂದೊಂದು ದಿನ ಎತ್ತಿಂಜರ್ ರವರು ಸ್ವತಃ ಜೀವಗೊಂಡು ತನ್ನ ಸಿದ್ಧಾಂತವನ್ನು ಸರಿ ಎಂದು ಸ್ವಯಂ ತೋರಿಸಬಹುದು.

ವೈದ್ಯಕೀಯವಾಗಿ ಸತ್ತ ಮನುಷ್ಯರ ಸಮಯವನ್ನು ಸ್ಥಗಿತಗೊಳಿಸಿ ಮುಂದೆ ಅವರನ್ನು ಪುನರ್ಜೀವಗೊಳಿಸುವ ಕ್ರಯಾನಿಕರಣ ಎಂಬ ವಿಧಾನವು ಎಷ್ಟರ ಮಟ್ಟಿಗೆ ನಿಜ? ಎಷ್ಟು ಸುಳ್ಳು? ಮುಂದೆ ಸಮಯವೇ ಹೇಳಬಹುದು!

ಕ್ರಯೋಜನಿಕ್ಸ್ ನ ಇನ್ನಷ್ಟು ಉಪಯೋಗಗಳೊಂದಿಗೆ ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ.

ವಿಠಲ ಶೆಣೈ
Leave a reply

Leave a Reply