ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಒಂದೇ ಪ್ರಭೇದದ ಜೀವಿಗಳಲ್ಲಿ, ಕೆಲವು ಗುಣಲಕ್ಷಣಗಳಲ್ಲಿ ಬದಲಾವಣೆ ಕಂಡು ಬಂದರೆ ಅವನ್ನು ಅದೇ ಪ್ರಭೇದದ ಬೇರೆ ತಳಿ  ಎಂದು ಹೇಳಬಹುದು. ನಮ್ಮ ಸಾಕುಪ್ರಾಣಿಗಳ ಅಥವಾ ಕೃಷಿ ಸಸ್ಯಗಳಲ್ಲಿ ಇರಬಹುದಾದ ವಿವಿಧ ತಳಿಗಳನ್ನು,  ಅವುಗಳದೇ ಪ್ರಭೇದದ ಅಥವಾ ಅವುಗಳ ಹತ್ತಿರದ ಪ್ರಭೇದದ ವನ್ಯ ಜೀವನದ ಪ್ರಾಣಿ ಅಥವಾ ಸಸ್ಯಗಳ ಜೊತೆ ಹೋಲಿಸಿದರೆ, ಸಾಕು ಪ್ರಾಣಿ ಅಥವಾ ಕೃಷಿ ಸಸ್ಯಗಳಲ್ಲಿ ಹೆಚ್ಚಿನ ತಳಿಗಳಿರುತ್ತವೆ.  ಕೃಷಿಗೊಳಪಟ್ಟ ಪ್ರಾಣಿ ಅಥವಾ ಸಸ್ಯಗಳ ಪ್ರಭೇದಗಳಲ್ಲಿ ಒಂದು ವಿಶೇಷವನ್ನು ಗಮನಿಸಬಹುದು. ಅದೆಂದರೆ, ಒಂದೇ ಸಂಕುಲದ ಜೀವಿಗಳಾದರೂ, ಅವುಗಳ ಗುಣಲಕ್ಷಣಗಳು ಒಂದೇ ರೀತಿಯವಾದರೂ, ಯಾವುದೊ ಒಂದು ವಿಶೇಷ ಗುಣವು ಅದೇ ಜಾತಿಯ ಇತರ ಜೀವಿಗಳಿಗಿಂತ ಒಂದು ತಳಿಯಲ್ಲಿ ವಿಪರೀತ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆ.  ಇದನ್ನು ಸ್ವಲ್ಪ ಪಕ್ಕಕ್ಕಿಟ್ಟು ನೋಡಿದರೆ,  ಒಂದೇ ಪ್ರಭೇದದ  ಸಾಕು ಜೀವಿಗಳ ತಳಿಗಳಲ್ಲಿನ ಬದಲಾವಣೆಯ ಪ್ರಮಾಣ ಮತ್ತು ರೀತಿಗಳು, ಅದೇ  ಪ್ರಭೇದದ ಅಥವಾ  ಅತ್ಯಂತ ಸನಿಹದ ಪ್ರಭೇದದ ವನ್ಯ ಜೀವಿಗಳಲ್ಲಿನ ಬದಲಾವಣೆಯ ಪ್ರಮಾಣಕ್ಕಿಂತ,  ಸ್ವಲ್ಪ ಕಡಿಮೆಯಾಗಿಯೇ ಇರುತ್ತದೆ. (ಇದಕ್ಕೆ ಮತ್ತೊಂದು ಅಪವಾದವೆಂದರೆ, ಸಂಪೂರ್ಣ  ಫಲವತ್ತತೆಯಿರುವ ಎರಡು ತಳಿಗಳ ಕಸಿ ನಡೆದಾಗ. ಈ ವಿಷಯವನ್ನೂ ಮುಂದೆ ಚರ್ಚಿಸಲಿದ್ದೇವೆ).   ಇಲ್ಲಿ ಇನ್ನೊಂದು ಸ್ವಾರಸ್ಯಕರ ವಿಷಯವನ್ನು ತಿಳಿಸಬೇಕಿದೆ.  ಸಾಕು ಜೀವಿಗಳಲ್ಲಿ, ಪ್ರಾಣಿ ಅಥವಾ ಸಸ್ಯಗಳಲ್ಲಿಯೇ ಆಗಲಿ ಯಾವುದೇ ತಳಿಯೊಂದನ್ನು, ಕೆಲವು ತಜ್ಞರು, ಕೇವಲ ತಳಿಯೆಂದರೆ, ಮತ್ತೂ ಕೆಲವು ತಜ್ಞರು, ಅದೇ  ತಳಿಯನ್ನು,ಬೇರೆಯದೇ ಆದ ಪ್ರಭೇದವೊಂದರಿಂದ ಹುಟ್ಟಿ ಬಂದ  ಹೊಸ ಪ್ರಭೇದವೆಂದು ಕರೆಯುತ್ತಾರೆ.  ಬಹುಶ ಯಾವುದೇ ಒಂದು ಗುಣವಿಶೇಷವನ್ನು, ತಳಿ  ಮತ್ತು ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಪ್ರಮಾಣವಾಗಿ ಇರಿಸಿಕೊಂಡದ್ದೇ ಆದರೆ,ಇಂತಹ ಅನುಮಾನಕ್ಕೆ ಆಸ್ಪದವಿರುತ್ತಿರಲಿಲ್ಲ. ಹಲವಾರು ಬಾರಿ ಒಂದು ಗುಣವಿಶೇಷಕ್ಕೆ ಕಾರಣವಾದ ವಂಶವಾಹಿ ಲಕ್ಷಣವು ಒಂದೇ  ಆಗಿದ್ದರೆ,ಆ ಜೀವಿಗಳನ್ನು ಒಂದೇ ಪ್ರಭೇದದ ಹಲವು ತಳಿಗಳು ಎಂದು ಗುರುತಿಸಬಹುದು   ಎನ್ನುವ ವಾದವೂ ಇದೆ.

ಈ ವಾದ ಸತ್ವಪೂರ್ಣವಾಗಿಲ್ಲ ಎಂದು ಸಾಧಿಸಲು ಹಲವು ಅಂಶಗಳಿವೆ.  ವಿಜ್ಞಾನಿಗಳೂ  ಈ ವಂಶವಾಹಿ ಲಕ್ಷಣಗಳನ್ನು ಗುರುತಿಸಲು  ಕಷ್ಟ  ಪಡುತ್ತಿದ್ದಾರೆ.  ಸದ್ಯಕ್ಕಂತೂ ಇದು ಕೇವಲ ಅನುಭವದ ಆಧಾರದ ಮೇಲೆಯೇ   ನಿರ್ಧರಿಸಲಾಗುತ್ತಿದೆ.  ಅಲ್ಲದೆ,  ನಾನು ಈಗ ಹೇಳಹೊರಟಿರುವ  ಪ್ರಭೇದದ ಮೂಲದ   ಕತೆಯಲ್ಲಿ,  ವಂಶವಾಹಿ ಗುಣಲಕ್ಷಣಗಳ ವ್ಯತ್ಯಾಸನ್ನು ಸಾಕು ಜೀವಿಗಳಲ್ಲಿ ಹೇಗೆ ಕಾಣುತ್ತೇವೆ ಎನ್ನುವುದು ಸ್ವಾರಸ್ಯಕರವಾಗಿದೆ.  ಏಕೆಂದರೆ,ಈ ಗುಣ ಲಕ್ಷಣಗಳ ವ್ಯತ್ಯಾಸಗಳನ್ನು ಹುಡುಕಲು ಹೊರಟರೆ,   ಮೊದಲ  ಪ್ರಶ್ನೆ ಎದುರಾಗುವುದು, ಅವು ಒಂದೇ ಪೋಷಕ ತಳಿಯಿಂದ ಬಂದುವೇ? , ಅಥವಾ ವಿಭಿನ್ನ ಪೋಷಕ ತಳಿಯಿಂದ ಬಂದುವೇ? ಎಂದು. ಈ  ಪ್ರಶ್ನೆಯ ಉತ್ತರ ಅನೇಕ ಕುತೂಹಲಕಾರಿ  ವಿಷಯಗಳನ್ನು ನಮ್ಮ ಮುಂದಿಡುತ್ತದೆ. ಉದಾಹರಣೆಗೆ,  ಗ್ರೇ ಹೌಂಡ್, ಬ್ಲಡ್ ಹೌಂಡ್ , ಟೆರಿಯರ್ , ಸ್ಪ್ಯಾನಿಯೆಲ್ ಮತ್ತು ಬುಲ್ ಡಾಗ್ ಜಾತಿಯ ನಾಯಿಗಳ ತಳಿಗಳು, ತಮ್ಮ ಗುಣಗಳನ್ನು ತಮ್ಮ ಮರಿಗಳಿಗೆ ಸಾಗಿಸುವಲ್ಲಿ ಅತ್ಯಂತ ಯಶಸ್ವಿಯಾಗಿವೆ. ಆದರೆ ಇವು ಒಂದೇ ಪ್ರಭೇಧದ ಮೂಲದಿಂದ ಬಂದಿದ್ದಾದರೆ,  ಅದು ನಮ್ಮೊಳಗೆ  ಇದೇ ಪ್ರಭೇದದ ಅಥವಾ ಇದಕ್ಕೆ ಅತ್ಯಂತ ಹತ್ತಿರದ ಪ್ರಭೇದದ ಜಾತಿಯ ಗುಣಲಕ್ಷಣಗಳ ಬದಲಾವಣೆಯ ಬಗ್ಗೆ ಅನುಮಾನವನ್ನು ಹುಟ್ಟು ಹಾಕುತ್ತದೆ. 

Dog, Animal, Corgi, Beagle, Bolonka, Spitz, Pitbull

ಉದಾಹರಣೆಗೆ, ಹಲವಾರು ಜಾತಿಯ ನರಿಗಳು, ಪ್ರಪಂಚದ ತುಂಬೆಲ್ಲಾ ಹರಡಿಕೊಂಡಿದ್ದರೂ, ಅವುಗಳ ಗುಣಲಕ್ಷಣಗಳಲ್ಲಿ ವಿಶೇಷ ಬದಲಾವಣೆಗಳಿಲ್ಲ.  ಆದ್ದರಿಂದ, ನನಗೆ ನಮ್ಮೆಲ್ಲಾ ನಾಯಿ ಪ್ರಭೇದಗಳೂ, ಯಾವುದೋ  ಒಂದು ಜಾತಿಯ ವನ್ಯ ಜೀವಿಯಿಂದ ಹುಟ್ಟಿಕೊಂಡಿತು ಎನ್ನುವುದನ್ನು ನಂಬಲು ಆಗುವುದಿಲ್ಲ.  ಆದರೆ ಬೇರೆ ಕೆಲವು ಸಾಕು ಜೀವಿ ಪ್ರಭೇದಗಳಲ್ಲಿ, ಇದನ್ನು ಸಾಧಿಸಿ ತೋರಿಸುವಂಥ ಅನೇಕ ಪುರಾವೆಗಳು ಸಿಗುತ್ತವೆ. ಮನುಷ್ಯ ತಾನು ಕೃಷಿ ಮಾಡಲು,  ಗುಣಲಕ್ಷಣಗಳಲ್ಲಿ ಬದಲಾಗುವ ಸಾಧ್ಯತೆ ಇರುವ ಮತ್ತು ವಾತಾವರಣದ ಒತ್ತಡಗಳನ್ನು ಮತ್ತು ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿ ಇರುವ  ಪ್ರಾಣಿ ಮತ್ತು ಸಸ್ಯಗಳನ್ನೇ ಆಯ್ದುಕೊಂಡಿದ್ದಾನೆ ಎನ್ನುವ ವಾದವೊಂದಿದೆ. 

ಇದನ್ನು ತಪ್ಪೆಂದು ಹೇಳಲು ಆಗುವುದಿಲ್ಲವಾದರೂ,  ಮೊದಲ ಬಾರಿ ಕುದುರೆಯನ್ನು ಪಳಗಿಸಿದ ಮಾನವನಿಗೆ, ಕುದುರೆಯಲ್ಲಿ ಹೀಗೆ ಕಸಿ ಮಾಡಿ ತಳಿ  ಮಾಡಬಹುದು ಎನ್ನುವುದು ತಿಳಿದಿತ್ತೇ..?  ಅಥವಾ ಕತ್ತೆ, ಗಿನಿವಾ ಗಿಳಿಯ ಬದಲಾಗದ ಲಕ್ಷಣ ಅವನ್ನು ಸಾಕುವುದರಿಂದ ತಡೆಯಲಿಲ್ಲವಲ್ಲಾ..? ಹಿಮಜಿಂಕೆ ಉಷ್ಣವನ್ನು ತಡೆದುಕೊಳ್ಳದಿದ್ದರೂ, ಒಂಟೆ ಶೀತವನ್ನು ತಡೆದುಕೊಳ್ಳದಿದ್ದರೂ, ಅವನ್ನು ಪಳಗಿಸಿ, ಬಳಸಿಕೊಂಡದ್ದೇಕೆ?  ಅಷ್ಟೇ ಅಲ್ಲ, ಬಹುಶ ನಾವು ಸಾಕುಪ್ರಾಣಿಗಳಾಗಿ ಆಯ್ಡಕೊಂಡ ಪ್ರಾಣಿಗಳಲ್ಲದೆ, ಬೇರೆ ಪ್ರಾಣಿಗಳನ್ನು ಸಾಕಲು ಆಯ್ದುಕೊಂಡು, ಇಷ್ಟೇ ಪ್ರಮಾಣದಲ್ಲಿ, ಬೇರೆ ಬೇರೆ ದೇಶ ಮತ್ತು ಕಾಲಗಳಲ್ಲಿ ಅವನ್ನು ಸಾಕಿ, ಇಷ್ಟೇ ತಲೆಮಾರುಗಳಷ್ಟು ಧೀರ್ಘವಾಗಿ ಸಾಕಿದ್ದಾದರೆ , ಈಗಾಗಲೇ ಸಾಕಿರುವ ಪ್ರಾಣಿಗಳ ತಳಿಗಳಷ್ಟೇ ತಳಿಗಳನ್ನು ಆ ಪ್ರಾಣಿಗಳೂ ಹೊಂದುತ್ತಿದ್ದವೇ? ಅತ್ಯಂತ ಪುರಾತನ ಕಾಲದಿಂದಲೂ ಸಾಕಲ್ಪಡುತ್ತಿರುವ  ಪ್ರಾಣಿ ಅಥವಾ ಕೃಷಿ ಮಾಡುತ್ತಿರುವ ಸಸ್ಯದ ವಿಷಯದಲ್ಲಿ,  ಅವು ಒಂದೇ ಪ್ರಭೇದದಿಂದ ಹುಟ್ಟಿಕೊಂಡು ಬಂದಿವೆಯೋ, ಅಥವಾ ಹಲವಾರು ಪ್ರಭೇದಗಳು ಜೊತೆಯಾಗಿ ಹುಟ್ಟಿಕೊಂಡು ಬಂದಿದೆಯೋ, ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. “ಈ ಸಾಕುಪ್ರಾಣಿ ಅಥವಾ ಸಸ್ಯಗಳು,  ಹಲವಾರು ಪ್ರಭೇದಗಳು ಜೊತೆಯಾಗಿ ಹುಟ್ಟಿಕೊಂಡಿವೆ” ಎನ್ನುವ ವಾದವನ್ನು ನಂಬಿಕೊಂಡಿರುವವರು ಕೈ ತೋರುವುದು  ಈಜಿಪ್ಟಿನಲ್ಲಿ ಕಾಣಬರುವ ದಾಖಲೆಗಳತ್ತ. ಅಲ್ಲಿನ ದಾಖಲೆಗಳಲ್ಲಿ ಕಂಡುಬರುವ ತಳಿಗಳಲ್ಲಿ ಹೆಚ್ಚಿನ ವೈವಿಧ್ಯತೆಗಳು  ಕಾಣುತ್ತವೆ.  ಅದರಲ್ಲಿನ ಕೆಲವು ತಳಿಗಳು ಇಂದಿಗೂ ಉಳಿದುಬಂದಿರುವ ಹಲವು ಜೀವಿಗಳನ್ನು ಹೋಲುತ್ತವೆ. ಈ ದಾಖಲೆಗಳು ಸುಮಾರು ನಾಲೈದು ಸಾವಿರ ವರ್ಷಗಳಷ್ಟು ಹಳೆಯವು.  ಅಲ್ಲಿಂದ ಮುಂದುವರೆದು. ಶ್ರೀ ಹಾರ್ನರ್ ಅವರ ಸಂಶೋಧನೆಯಂತೆ, ನೈಲ್ ನದಿಯ ಕಣಿವೆಗಳ ಮಾನವ ಹದಿನಾಲ್ಕು ಹದಿನೈದು ಸಾವಿರ ವರ್ಷಗಳಷ್ಟು ಹಿಂದೆಯೇ ಮಡಿಕೆ ತಯಾರಿಸುವಷ್ಟು ಪ್ರಬುದ್ಧನಾಗಿದ್ದ.  ಅದಕ್ಕಿಂತ ಬಹು ಬಹು ಹಿಂದಿನ ಟಿಯೆರ ಡೆಲ್ ಫ್ಯುಗೋ ಅಥವಾ ಆಸ್ಟ್ರೇಲಿಯಾ ದ  ಆದಿಮಾನವ ಜನಾಂಗಗಳ ಕಾಲ ಯಾವುದಿರಬಹುದು? ಮತ್ತು ಅವುಗಳ ಬಳಿ ಇದ್ದ ಸಾಕುನಾಯಿಗಳು ಈಜಿಪ್ಟ್ ನಲ್ಲಿ ಇರಲಿಲ್ಲವೇ?
 
ಈ ಎಲ್ಲ ವಿಷಯಗಳನ್ನೂ ಒತ್ತಟ್ಟಿಗಿತ್ತು, ಮುಂದಿನ ದಿನಗಳಲ್ಲಿ ಚರ್ಚಿಸೋಣ ಎನ್ನುತ್ತಾ.. ಈಗ “ನಮ್ಮ ಎಲ್ಲಾ ಸಾಕು ನಾಯಿಗಳೂ ಹಲವಾರು ಜಾತಿಯ ವನ್ಯ ಪ್ರಭೇದಗಳಿಂದ ಹುಟ್ಟಿಕೊಂಡಿವೆ” ಎನ್ನುತ್ತಾ ಈ ವಾರದ ವಾದವನ್ನು ಮುಗಿಸುತ್ತೇನೆ. ಮುಂದಿನ ವಾರ ಮತ್ತೆ ಸಿಗೋಣ…
ಮೊದ್ಮಣಿ
Leave a reply

Leave a Reply