ಫ್ಲ್ಯಾಶ್ ಕಾರ್ಡಗಳೆಂದರೇನು? ಶಬ್ದ , ನಂಬರ್, ಚಿತ್ರಗಳ ಮೂಲಕ ವಿವಿಧ ರೀತಿಯ ಮಾಹಿತಿಯನ್ನೊಳಗೊಂಡ ಒಂದು ಚಿಕ್ಕ ಬೋಧನಾ- ಕಲಿಕಾ ಕಾರ್ಡನ್ನು ಫ್ಲ್ಯಾಶ್ ಕಾರ್ಡಗಳೆಂದು ಕರೆಯುವರು.
ಫ್ಲ್ಯಾಶ್ ಕಾರ್ಡಗಳನ್ನು ಬಳಸಿಕೊಂಡು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಜ್ಞಾನವನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಬೋಧಿಸಬಹುದಾಗಿದೆ ಹಾಗೂ ಇವುಗಳನ್ನು ಬಳಸಿ ಈಗಾಗಲೇ ಬೋಧಿಸಿದ ಪಾಠವನ್ನು ಮತ್ತೆ ಪುನರಾವಲೋಕನ ಮಾಡಲು ಸಹ ಬಳಸಬಹುದು.

ಯಾವುದೇ ಒಂದು ನಿರ್ದಿಷ್ಟ ಪಾಠದಲ್ಲಿ ಕಲಿತಿರುವ ಕಲಿಕಾಂಶಗಳ ಸಾರಾಂಶವನ್ನು ಬರೆಯಲು ತಿಳಿಸಬಹುದು.
ಉದಾಹರಣೆಗೆ- ಜೀವಕೋಶಗಳ ಅಧ್ಯಯನ ಎಂಬ ಘಟಕದಲ್ಲಿ ಬರುವ ಕಲಿಕಾಂಶಗಳೆಂದರೆ, ಜೀವಕೋಶದ ಪ್ರಮುಖ ಭಾಗಗಳು, ಜೀವಕೋಶದ ಚಟುವಟಿಕೆಯಲ್ಲಿ ಕಣದಂಗ ಪಾತ್ರ, ಕ್ಲೋರೋಪ್ಲಾಸ್ಟ ಮತ್ತು ಮೈಟೋಕಾಂಡ್ರಿಯಾದ ರಚನೆ, ಸಸ್ಯಕೋಶ ಹಾಗೂ ಪ್ರಾಣಿಕೋಶಗಳಿಗಿರುವ ವ್ಯತ್ಯಾಸಗಳು, ವಿಸರಣೆ ಮತ್ತು ಅಭಿಸರಣೆ ಹೀಗೆ ಒಂದು ಪಾಠವನ್ನೇ ಸಂಪೂರ್ಣವಾಗಿ ಸಾರಾಂಶ ರೂಪದಲ್ಲಿ ವಿವರಿಸಬಹುದು.

ಪರೀಕ್ಷಾ ದೃಷ್ಟಿಯಿಂದ ಮಹತ್ವದ ಅಂಶಗಳನ್ನು ಬರೆದಿಟ್ಟುಕೊಳ್ಳುವುದು
ಉದಾ- ಜೀವಕೋಶ ಸಿದ್ಧಾಂತವನ್ನು ಮಂಡಿಸಿದವರು-ಶ್ಲೀಡನ್ ಮತ್ತು ಷ್ವಾನ್, ಒಂದು ಮಿಲಿಯನ್= 106 , ಒಂದು ಬಿಲಿಯನ್=109, ಹೀಗೆ ಮುಂತಾದ ಮಹತ್ವದ ಅಂಶಗಳನ್ನು ನಮೂದಿಸಬಹುದು.

ಸಂಕೇತಗಳನ್ನು ಬಳಸಿ ಸಂಕ್ಷಿಪ್ತ ರೂಪದಲ್ಲಿ ಬರೆದಿಟ್ಟುಕೊಳ್ಳಬಹುದು.
ರಾಸಾಯನಿಕ ಸಂಯೋಗ ಎಂಬ ರಾಸಾಯನಿಕ ಕ್ರಿಯೆಯ ಒಂದು ಚಟುವಟಿಕೆಯಲ್ಲಿ ಗಂಧಕದ ಪುಡಿಯನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಗಾಳಿಯಲ್ಲಿ ಉರಿಸಿದಾಗ ಅದು ತಿಳಿ ನೀಲಿ ಜ್ವಾಲೆಯಿಂದ ಉರಿದು ಗಂಧಕದ ಡೈ ಆಕ್ಸೈಡ್ ಉಂಟಾಗುತ್ತದೆ ಹಾಗೂ ಈ ಕ್ರಿಯೆಯಲ್ಲಿ ಎರಡು ಧಾತುಗಳು ಸಂಯೋಗ ಹೊಂದಿ ಒಂದೇ ಒಂದು ಸಂಯುಕ್ತ ಉಂಟಾಗುತ್ತದೆ. ಹೀಗೆ ಇಷ್ಟು ದೊಡ್ಡದಾಗಿ ಬರೆಯುವುದರ ಬದಲು ಸಂಕ್ಷಿಪ್ತವಾಗಿ ಸಂಕೇತಗಳನ್ನು ಬಳಸಿ ಬರೆಯುವುದರ ಜೊತೆಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು.
S+ಔ2 → Sಔ2 ಎಂದು ಬರೆಯಬಹುದಾಗಿದೆ. ಹೀಗೆ ಬರೆಯುವಾಗ ಕಾರ್ಡನ ಒಂದು ಬದಿಯಲ್ಲಿ ರಾಸಾಯನಿಕ ಸಂಯೋಗವೆಂದು ಬರೆದು, ಇನ್ನೊಂದು ಬದಿಯಲ್ಲಿ ರಾಸಾಯನಿಕ ಸಮೀಕರಣವನ್ನು ಬರೆಯಬಹುದಾಗಿದೆ.

ಚಿತ್ರ ಮತ್ತು ಶಬ್ದ ಎರಡನ್ನು ಬಳಸಿಯೂ ತಯಾರಿಸಬಹುದು.
ಉದಾ-ಮೈಟೋಕಾಂಡ್ರಿಯಾದ ಚಿತ್ರ ಬರೆದು ಅದರ ಕೆಳಗೆ ಜೀವಕೋಶದ ಶಕ್ತಿ ಉತ್ಪಾದಕ ಕೇಂದ್ರ ಎಂದು ಬರೆಯಬಹುದು. ಹೀಗೆ ಬರೆಯುವಾಗ ಬೇರೆ ಬೇರೆ ಬಣ್ಣದ ಸ್ಕೆಚ್ ಪೆನ್ ಅಥವಾ ಮಾರ್ಕರ್‍ಗಳನ್ನು ಬಳಸಿ ಹೆಚ್ಚು ಆಕರ್ಷಣೀಯವಾಗಿರುವಂತೆ ಮಾಡಬಹುದು.

ಚಿತ್ರ ತೆಗೆದು ಭಾಗಗಳನ್ನು ಗುರುತಿಸಲು ತಿಳಿಸುವುದು-
ಉದಾ- ಫ್ಲ್ಯಾಶ್ ಕಾರ್ಡನ ಒಂದು ಬದಿಯಲ್ಲಿ ಸಸ್ಯ ಜೀವಕೋಶದ ಚಿತ್ರ ಮಾತ್ರ ತೆಗೆದು ಅದಕ್ಕೆ 1,2,3,4,5,6,7,8,9,10,11,12—- ಹೀಗೆ ಅಂಕಿಗಳನ್ನು ಮಾತ್ರ ಬರೆದು, ಇನ್ನೊಂದು ಬದಿಯಲ್ಲಿ ಆ ಅಂಕಿಗಳು ಏನನ್ನು ಸೂಚಿಸುತ್ತವೆ? ಎಂದು ಹೇಳಲು ವಿದ್ಯಾರ್ಥಿಗಳಿಗೆ ಸೂಚಿಸಬಹುದು ಹಾಗೂ ಅವರ ಉತ್ತರಗಳು ಸರಿಯಾಗಿವೆಯೇ? ಎಂದು ತಿಳಿದುಕೊಳ್ಳಲು ಇನ್ನೊಂದು ಬದಿಯಲ್ಲಿ
1-ಕೋಶಭಿತ್ತಿ
2-ಕೋಶಪೊರೆ
3-ಗಾಲ್ಗಿ ಸಂಕೀರ್ಣ
4-ಕ್ಲೋರೋಪ್ಲಾಸ್ಟ
5-ರಸದಾನಿ
6-ಮೈಟೋಕಾಂಡ್ರಿಯಾ
7-ಕೋಶದ್ರವ್ಯ
8-ರಸದಾನಿ
9-ನ್ಯೂಕ್ಲಿಯಸ್
10-ಕಿರು ಕೋಶಕೇಂದ್ರ
11-ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್
12-ರೈಬೋಸೋಮ್ ಎಂದು ಬರೆದಿಡುವುದು.

ಫ್ಲ್ಯಾಶ್ ಕಾರ್ಡಗಳನ್ನು ಮಕ್ಕಳ ಕಲಿಕಾ ಸಾಮಥ್ರ್ಯಕ್ಕೆ ತಕ್ಕಂತೆ ರಚಿಸಿಕೊಂಡು, ತರಗತಿಯ ವಿದ್ಯಾರ್ಥಿಗಳನ್ನು ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ಮಾಡಿ, ಅವರ ಪಾಠಕ್ಕೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬಿರಿ, ರಸ ಪ್ರಶ್ನೆಗಳಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇಂತಹ ವಿಧಾನಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕೂಡ ಅವರ ಸಾಮಥ್ರ್ಯಕ್ಕೆ ತಕ್ಕಂತೆ ಕಲಿಯಲು ಅವಕಾಶ ಒದಗಿಸಿದಂತಾಗುತ್ತದೆ.
ಫ್ಲ್ಯಾಶ್ ಕಾರ್ಡ ಬಳಸುವುದರಿಂದ ಆಗುವ ಇತರೆ ಅನುಕೂಲಗಳೆಂದರೆ-
*ಇವುಗಳನ್ನು ಯಾವುದೇ ಖರ್ಚು ವೆಚ್ಚವಿಲ್ಲದೇ ಮನೆಯಲ್ಲಿಯೇ ತಯಾರಿಸಬಹುದು.
*ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ.
*ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.
*ಇವುಗಳನ್ನು ಬಳಸಿಕೊಂಡು ಆಟವಾಡುತ್ತಾ ಕಲಿಯಬಹುದಾಗಿದೆ.
*ಮಕ್ಕಳ ಏಕಾಗ್ರತೆಯನ್ನು ಸುಲಭವಾಗಿ ಪಾಠದತ್ತ ಸೆಳೆಯಬಹುದು.
*ಇವು ವಿಷಯದ ಪುನರಾವಲೋಕನ ಮಾಡಲು ತುಂಬಾ ಸಹಾಯಕ.
*ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ.
*ಮಕ್ಕಳಲ್ಲಿ ನೆನಪಿನ ಶಕ್ತಿ ಹಾಗೂ ಸೃಜನಾತ್ಮಕತೆ ಹೆಚ್ಚಿಸಲು ಸಹಾಯಕ.
*ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹಾಜರಿ ಸಂಖ್ಯೆಯನ್ನು ಆವರ್ತ ಕೊಷ್ಟಕದ ಪರಮಾಣು ಸಂಖ್ಯೆಯೊಂದಿಗೆ ಹೋಲಿಸಿಕೊಂಡು, ಅಲ್ಲಿ ಬರುವ ಧಾತುವಿನ ಸಂಕೇತ, ಅದರ ರಾಸಾಯನಿಕ ಹಾಗೂ ಭೌತಿಕ ಗುಣಗಳ ಮಾಹಿತಿಯನ್ನೊಳಗೊಂಡ ತನ್ನದೇ ಆದ ಹಾಜರಾತಿಯ ಫ್ಲ್ಯಾಶ್ ಕಾರ್ಡ ತಯಾರಿಸಿಕೊಳ್ಳಬಹುದು.
ಉದಾ-ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯ ಹಾಜರಿ ಸಂಖ್ಯೆ 11 ಎಂದು ಕೊಂಡರೆ ಅದು ಆವರ್ತ ಕೋಷ್ಟಕದ ಪರಮಾಣು ಸಂಖ್ಯೆ 11 ರ ಧಾತುವೆಂದು ತಿಳಿದುಕೊಳ್ಳುವುದು. ಅಂದರೆ ಆ ಧಾತು ಸೋಡಿಯಂ. ಅದರ ಫ್ಲ್ಯಾಶ್ ಕಾರ್ಡನ್ನು ಈ ರೀತಿಯಾಗಿ ರಚಿಸಬಹುದಾಗಿದೆ.

ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಹಾಜರಿ ಸಂಖ್ಯೆಗನುಗುಣವಾಗಿ ಆವರ್ತಕೊಷ್ಟಕದ ಎಲ್ಲ ಧಾತುಗಳನ್ನೊಳಗೊಂಡ ಫ್ಲ್ಯಾಶ್ ಕಾರ್ಡ ತಯಾರಿಸಿಕೊಂಡು, ವಾರಕ್ಕೊಮ್ಮೆ ಕೇವಲ 10 ಕಾರ್ಡಗಳ ಧಾತುಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಆವರ್ತಕೋಷ್ಟಕದ ಕುರಿತ ಅವರ ಆಸಕ್ತಿಯನ್ನು ಇಮ್ಮಡಿಗೊಳಿಸಬಹುದಾಗಿದೆ ಹಾಗೂ ಎಲ್ಲ ಕಾರ್ಡಗಳನ್ನು ವಿದ್ಯಾರ್ಥಿಗಳಿಂದ ಪಡೆದು ಒಂದು ಮೇಜಿನ ಮೇಲೆ ಹರಡಿ ಪ್ರದರ್ಶನಕ್ಕೂ ಇಡುವುದರ ಮೂಲಕ ಶಾಲೆಯ ಬೇರೆ ಬೇರೆ ತರಗತಿಯ ಮಕ್ಕಳಿಗೂ ಆವರ್ತ ಕೋಷ್ಟಕದ ಎಲ್ಲ ಧಾತುಗಳನ್ನು ಪರಿಚಯಿಸಬಹುದಾಗಿದೆ.

                    ರಾಜು. ಭೂಶೆಟ್ಟಿ
             ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ
               ಡಯಟ್ ಧಾರವಾಡ. ಫೋ-9739216558
ರಾಜು ಭೂಶೆಟ್ಟಿ

Summary

ಫ್ಲ್ಯಾಶ್ ಕಾರ್ಡಗಳನ್ನು ಬಳಸಿಕೊಂಡು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಜ್ಞಾನವನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಬೋಧಿಸಬಹುದಾಗಿದೆ ಹಾಗೂ ಇವುಗಳನ್ನು ಬಳಸಿ ಈಗಾಗಲೇ ಬೋಧಿಸಿದ ಪಾಠವನ್ನು ಮತ್ತೆ ಪುನರಾವಲೋಕನ ಮಾಡಲು ಸಹ ಬಳಸಬಹುದು.

Leave a reply

Leave a Reply