ಯಾವಾಗ ಛಾಯಾಗ್ರಹಣ ತಂತ್ರಜ್ಞಾನ ಬೆಳೆಯಿತೋ, ಮುಂದುವರೆಯಿತೋ ಆಗ (1960 ರ ದಶಕದಲ್ಲಿ) ಹಲವು ಬಗೆಯ ಹಾರುವ ವಾಹನಗಳ ಚಿತ್ರ ವಿಚಿತ್ರ ದೃಶ್ಯಗಳು ವೀಕ್ಷಕರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗತೊಡಗಿದ್ದವು. ಪತ್ರಿಕೆ ಮತ್ತು ಟಿವಿ ಮಾಧ್ಯಮದಲ್ಲಿ ಬಿಸಿ ಬಿಸಿ ಸುದ್ದಿಗೆ ಗ್ರಾಸವಾಗತೊಡಗಿದವು. ಆಗ ಅಮೆರಿಕನ್ ಸಮಾಜದಲ್ಲಿ ಒಂದು ಸಂಚಲನ ಉಂಟಾಯಿತು. ಸರಕಾರ ನಿರಾಕರಸಿದ್ದಷ್ಟೂ, ಮೌನವಹಿಸಿದ್ದಷ್ಟೂ ಸುದ್ದಿಗಳ ಸಂಖ್ಯೆಯೂ ಗಣನೀಯವಾಗಿ ಏರಿತು.

UFO ಎಂದರೇನು?

Unidentified Flying Objects ಎಂಬ ಹೊಸ ಲೇಬಲ್ ಮೊದಲು 1953ರಲ್ಲಿ ಅಮೆರಿಕಾದ ವಾಯುಪಡೆಯು ನೀಡಿತು. ಅಂದರೆ ಇದು ನಮಗೆ

ತಿಳಿದ ವಿಮಾನ ಸಂಬಂಧಿತ ಏರೋಡೈನಮಿಕ್ ತಂತ್ರಜ್ಞಾನದಿಂದ ಹೊರತಾದ, ನಮ್ಮ ವಿಜ್ಞಾನದ ಪರಿಧಿಯಲ್ಲಿ ನಿರೂಪಿಸಲಾಗದ, ಅರ್ಥಮಾಡಿಕೊಳ್ಳಲಾರದ ಭೂಮಿಯೇತರ ತಂತ್ರಜ್ಞಾನದ ನಮೂನೆ ಎಂದರ್ಥ…

ಕ್ಯಾ. ಎಡ್ವರ್ಡ್ ರುಪೆಲ್ಟ್ ಎಂಬ ಸೇನಾಧಿಕಾರಿ ತಾನು ಜವಾಬ್ದಾರಿ ವಹಿಸಿದ್ದ ಅಮೆರಿಕನ್ ಸರಕಾರದ ಅಧಿಕೃತ ಅನ್ವೇಷಣಾ ಯೋಜನೆಯಾದ “ಪ್ರಾಜೆಕ್ಟ್ ಬ್ಲೂ ಬುಕ್” ನಲ್ಲಿ ಮೊದಲು ಸಂಕ್ಷಿಪ್ತವಾಗಿ UFO ಎಂಬ ನಾಮಕರಣ ಮಾಡಿದನು. ವಾಯಬಲವಿಜ್ಞಾನದ ಪದಗುಚ್ಚವನ್ನು ತಿಳಿಯದ ಜನಸಾಮಾನ್ಯರು ಅದನ್ನೇ ಫ್ಲಯಿಂಗ್ ಸಾಸರ್ ಅಥವಾ ಹಾರುವ ತಟ್ಟೆ ಎಂದು ಜನಪ್ರಿಯವಾಗಿ ಕರೆಯಲಾರಂಭಿಸಿದರು.

3.1 ಅಮೆರಿಕಾದಲ್ಲಿ ಕಾಣಿಸಿದ ಆಗಸದ ದೈತ್ಯರು

ಹೆಚ್ಚಿನ ಇಂತಾ ವರದಿಗಳು USA ದೇಶದಲ್ಲಿ ಹುಟ್ಟುತ್ತಿದ್ದರಿಂದ ನಮ್ಮ ಚರ್ಚೆಯನ್ನು ಅಲ್ಲಿಗೇ ಬಹುತೇಕ ಸೀಮಿತ ಮಾಡಿದ್ದೇನೆ. ಕೆಲವು ಯೂರೋಪಿನದೂ ಇವೆ…ಆಮೇಲೆ ಅಮೆರಿಕಾ ಅಲ್ಲದೇ ಇನ್ನೆಲ್ಲಿ, ಯಾಕೆ ಅಮೇರಿಕದಲ್ಲೇ ಹೆಚ್ಚು ಎಂಬ ಪ್ರಶ್ನೆಗೂ ಉತ್ತರ ಹುಡುಕೋಣ.

ಹಲವು ಬಗೆಯ ವಿಮಾನಗಳು, ಬೇರೆ ಬೇರೆ ರೀತಿಯ ಹವಾಮಾನ, ದೇಶ, ಆಗಸದಲ್ಲಿ , ಪ್ರಕಾಶದಲ್ಲಿ, ಕತ್ತಲಲ್ಲಿ, ಮಬ್ಬುಗತ್ತಲೆಯಲ್ಲಿ, ಹಿಮಪಾತದಲ್ಲಿ, ಮಳೆಯಲ್ಲಿ ಹೀಗೆಲ್ಲಾ ವ್ಯತ್ಯಾಸವುಳ್ಳ ಸ್ಥಿತಿಗಳಲ್ಲಿ ಚಲಿಸುವಾಗಲೂ ಜನರ ಕಣ್ಣಿಂದ ಕಣ್ಣಿಗೆ ದೋಷದಿಂದಲೂ ಅವರವರಿಗೆ ಯಾವುದೋ ಅನ್ಯ ಬಗೆಯ ವಸ್ತುವೊಂದು ಆಗಸದಲ್ಲಿ ಹಾರುತ್ತಿದೆ ಎನಿಸಿರಬಹುದು…

ಹಾಗೆಯೇ ನೋಡುಗರ ವಯಸ್ಸು, ಮಾದಕ ದ್ರವ್ಯ ಸೇವಿಸಿದ/ ಮದ್ಯದ ನಶೆಯ ಪ್ರಭಾವವೋ, ಮಾನಸಿಕ ಸ್ಥಿತಿಯೋ, ಸುಳ್ಳು ಸುದ್ದಿ ಹಬ್ಬಿಸುವ ಪ್ರವೃತ್ತಿಯೋ ಅಥವಾ ಸಂಪೂರ್ಣ ಅಜ್ಞಾನವೋ ಸಹಾ ಇದರೊಂದಿಗೆ ತಳುಕು ಹಾಕಿಕೊಂಡು ಹಲವು ಬಾರಿ ಸುಳ್ಳು ವರದಿಗಳಿಗೆ ಮನೆ ಮಾಡಿಕೊಟ್ಟಿದ್ದೂ ಉಂಟು. ಹಾಗಂತಲೇ ಸರಕಾರಿ ವಲಯಗಳು ಇಂತಾ ಅನ್ಯಗ್ರಹ ವಸ್ತು/ವಿಚಿತ್ರ ವಿಮಾನಗಳ ವೀಕ್ಷಣೆಯ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಾ , “ಇದೆಲ್ಲಾ ನಿಮ್ಮ ಭ್ರಮೆ , ಅಥವಾ ದೃಷ್ಟಿ ದೋಷ” ಎಂತಲೋ, ಅಥವಾ “ನಾವು ಹೊಸ ಬಗೆಯ ಪ್ರಾಯೋಗಿಕ ವೆದರ್ ಬಲೂನ್ ಹಾರಿಬಿಟ್ಟೆವು, ನಿಮಗರ್ಥವಾಗಲಿಲ್ಲ” ಎಂದೋ ಎಲ್ಲವನ್ನೂ ಮುಚ್ಚಿಡುತ್ತಲೇ ಬಂದರು…

ಮೊದಮೊದಲು “ಕಣ್ಣಾರೆ ಕಂಡೆವು” ಎಂಬ ವರದಿಗಳನ್ನು ನಿರಾಕರಿಸುವುದು ಸುಲಭವಾಗಿಯೂ ಇತ್ತು, ಯಾಕೆಂದರೆ ಸರಕಾರದ ಸಾಕ್ಷಿ ಅಥವಾ ವರದಿಗಾರರ್ಯಾರೂ ಅವರ ಜತೆಯಲ್ಲಿಲ್ಲದ್ದ ಸಂಧರ್ಭದಲ್ಲಿ.

ಯಾವಾಗ ಛಾಯಾಗ್ರಹಣ ತಂತ್ರಜ್ಞಾನ ಬೆಳೆಯಿತೋ, ಮುಂದುವರೆಯಿತೋ ಆಗ (1960 ರ ದಶಕದಲ್ಲಿ) ಹಲವು ಬಗೆಯ ಹಾರುವ ವಾಹನಗಳ ಚಿತ್ರ ವಿಚಿತ್ರ ದೃಶ್ಯಗಳು ವೀಕ್ಷಕರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗತೊಡಗಿದ್ದವು. ಪತ್ರಿಕೆ ಮತ್ತು ಟಿವಿ ಮಾಧ್ಯಮದಲ್ಲಿ ಬಿಸಿ ಬಿಸಿ ಸುದ್ದಿಗೆ ಗ್ರಾಸವಾಗತೊಡಗಿದವು. ಆಗ ಅಮೆರಿಕನ್ ಸಮಾಜದಲ್ಲಿ ಒಂದು ಸಂಚಲನ ಉಂಟಾಯಿತು. ಸರಕಾರ ನಿರಾಕರಸಿದ್ದಷ್ಟೂ, ಮೌನವಹಿಸಿದ್ದಷ್ಟೂ ಸುದ್ದಿಗಳ ಸಂಖ್ಯೆಯೂ ಗಣನೀಯವಾಗಿ ಏರಿತು.

ಒಬ್ಬಿಬ್ಬರಲ್ಲ, ಊರೆಲ್ಲಾ ಅದನ್ನು ನೋಡಿದಂತಾ ಘಟನೆಗಳು, ಸುದ್ದಿ ಮಾಧ್ಯಮದವರೂ ಪ್ರತ್ಯಕ್ಷ ಕಂಡು ವರದಿ ಮಾಡಿದಂತಾ ಸಂಧರ್ಭಗಳೂ ಹೆಚ್ಚಾಗುತ್ತಲೇ ಹೋದವು…ಸರಕಾರದ ಮೌನ ಜನರಿಗೆ ಅಸಹನೀಯವಾಯಿತು, ಅದರಲ್ಲಿ ಯಾವುದೋ ಷಡ್ಯಂತ್ರವಿದೆಯೆಂಬ ಶಂಕೆ ಬಲವಾಗಿ ಬೆಳೆಯತೊಡಗಿತು.

ಆಗ ಹೊಸ ಬೆಳವಣಿಗೆಗಳಾಗತೊಡಗಿದವು. ಅದೇಕೋ ಎರಡನೇ ಮಹಾಯುದ್ಧ ಸಮಯದಲ್ಲಿ ಭೂಮಿಯಲ್ಲಿ ತೀವ್ರ ಪ್ರಾನಹಾನಿ ವಸ್ತುಹಾನಿಯಾಗುತ್ತಿದ್ದಾಗ ಧುತ್ತೆಂದು ಕಾಣಿಸಿಕೊಳ್ಳುವ ಗಗನನೌಕೆಗಳು ವಾಯುಸೇನೆಯ ಶಸ್ತ್ರಾಸ್ತ್ರಗಾರದ ಬಳಿ ಆಗಾಗ ಚಕಿತರಾಗುವಂತೆ ಗಿರಕಿ ಹೊದೆದು ಹಾಜರಿ ಹಾಕಿದಂತೆ ಬಂದು ಮಾಯವಾಗತೊಡಗಿದ್ದವಿ ಸಾರ್ವಜನಿಕರಲ್ಲದೇ ತಾಂತ್ರಿಕವಾಗಿ ತರಬೇತು ಹೊಂದಿದ ಕೆಲವು ವಿಮಾನದ ಪೈಲೆಟ್ಟುಗಳು, ಏರ್ ಫೋರ್ಸ್ ಪೈಲೆಟ್ಟುಗಳು ಯಾವಾಗ ತಮ್ಮ ಪಯಣದಲ್ಲಿ ಇಂತಾ ಗುರುತು ಹಿಡಿಯಲಾಗದಂತಾ ಹಾರುವ ವಾಹನಗಳನ್ನು ನೋಡಿದರೋ ತಮ್ಮ ಏರ್ ಟ್ರಾಫಿಕ್ ಕಂಟ್ರೊಲರಿಗೂ, ತಮ್ಮ ಮೇಲಧಿಕಾರಿಗಳಿಗೂ ವರದಿ ಮಾಡುತ್ತಲೇ ಹೋದವು.

ಕೆಲವು ಅಂತಾ ಘಟನೆಗಳನ್ನು ನಿವೃತ್ತರಾಗುವವರೆಗೆ ಯಾರಿಗೂ ಹೇಳಬಾರದೆಂಬ ವಾಗ್ದಾನ ತೆಗೆದುಕೊಂಡಿದ್ದ ಸೇನೆಯವರಿಂದ ಹೊರಬಂದಂತೆಯೆ ಬಂಧಮುಕ್ತರಾದಂತೆ ಹಲವಾರು ನಂಬಿಕಾರ್ಹ ಅಧಿಕಾರಿಗಳು ತಮ್ಮ ಜತೆ ನಡೆದ ಅಲೌಕಿಕ ಅನ್ಯಗ್ರಹ ವಾಹನಾದಿಗಳ ಘಟನಾವಳಿಯ ವೃತ್ತಾಂತವನ್ನು ಸಮಾಜದ ಮುಂದೆ ಬಿಚ್ಚಿಟ್ಟರು. ಅವೆಲ್ಲಾ ಹಲವು ಕೌತುಕಮಯ ಪ್ರತಿಕ್ರಿಯೆಗೆ ನಾಂದಿಯಾಗಿ ಜನಾಸಕ್ತಿ ಹೆಚ್ಚತೊಡಗಿತು.

ಅದರಲ್ಲಿ ಕೆಲವರ ವರದಿಗಳನ್ನು ನಿಮ್ಮ ಆಸಕ್ತಿಗಾಗಿ ಸಂಕ್ಷಿಪ್ತವಾಗಿ ಬರೆದಿದ್ದೇನೆ:

  • (1970  ದಶಕದಲ್ಲಿ… ಅಮೆರಿಕನ್ ಫ್ರೈಟ್ ವಿಮಾನದ ಪೈಲೆಟ್ ಹೆಸರು ಮತ್ತು ಊರಿನ ಬಗ್ಗೆ ಮಾಹಿತಿ ಗುಪ್ತವಾಗಿಡಲಾಗಿದೆಆತನ ಕೋರಿಕೆಯ ಮೇಲೆ (ಜೀವಭಯದ ಕಾರಣ!)…ಅವನು ಪತ್ರಿಕೆಗಳಿಗೆ ನೀಡಿದ ಸಂದರ್ಶನ ಪ್ರಕಟವಾಗಿತ್ತು):

ನಾನು ಮೋಡರಹಿತ ಹವಾಮಾನದಲ್ಲಿ ಬೆಳಿಗಿನ 11ರ ಹೊತ್ತು ಇಂತಾ ( ಒಂದು ಅಮೆರಿಕಾ ನಗರ) ವಿಮಾನನಿಲ್ದಾಣಕ್ಕೆ ಹೊರಟಿದ್ದೆ. ಆಗ ಮಾರ್ಗ ಮಧ್ಯೆಯಲ್ಲಿ ಇದ್ದಕ್ಕಿದ್ದಂತೇ ನನ್ನೆದುರು ಯಾವುದೋ ದೈತ್ಯಾಕಾರವಾದ ಅತಿ ವೇಗದಲ್ಲಿ ಚಿತ್ರವಿಚಿತ್ರ ಜಿಗಿತಗಳನ್ನು ಮಾಡುತ್ತಿದ್ದ ನೌಕೆಯೊಂದು ಕಂಡಿತು. ಅದು ಸೆಮಿ-ಗೋಲಾಕಾರವಾದ ತಟ್ಟೆಯಂತಿದ್ದು ಬೆಳ್ಳಿಯಂತೆ ಹೊಳೆಯುತ್ತಿತ್ತು, ನನ್ನ ವಿಮಾನವನ್ನು ಮುಂದಿನಿಂದ ಸರಿಗಟ್ಟುತ್ತಾ ಜತೆಗೇ ಸಾಗಿತ್ತು. ಕೆಲವೊಮ್ಮೆ ಅಚ್ಚರಿಗೊಳಿಸುವಂತೆ ನನ್ನ ಬಲಕ್ಕೂ ಎಡಕ್ಕೂ ಸರ್ರನೆ ಸಾಗಿ ಬರುತ್ತಿತ್ತು. ಬಹಳ ಪ್ರಕಾಶಮಾನವಾದ ತಿರುಗುವ ಬಣ್ಣದ ದೀಪಗಳು ಆ ಹಗಲಿನ ಬಿಸಿಲಿನಲ್ಲೂ ಕಣ್ಣಿಗೆ ರಾಚುವಂತಿತ್ತು. ಅದು ನನ್ನ ವಿಮಾನದ ರೇಂಜಿನ ಬಳಿ ಬಂದಾಗ ನನ್ನ ಪ್ಯಾನೆಲ್ಲಿನ ವಿದ್ಯುತ್ ಉಪಕರಣಗಳು, ಸಂಪರ್ಕ ಸಾಧನಗಳೆಲ್ಲಾ ಇದ್ದಕ್ಕಿದ್ದಂತೇ ನಿಂತುಹೋಗುತ್ತಿದ್ದವು. ಸ್ವಲ್ಪ ದೂರ ಹೋದಾಗ ಮತ್ತೆ ಎಲ್ಲಾ ಚಾಲನಯಲ್ಲಿರುತ್ತಿದವು. ನಾನು ಇಂತಾ ಸನ್ನಿವೇಶವನ್ನು ಎಂದೂ ನಿರೀಕ್ಷಿಸಿರಲಿಲ್ಲ, ಯಾರೂ ನಮಗೆ ತರಬೇತಿ ಕೊಟ್ಟಿರಲೂ ಇಲ್ಲ. ನಾನು “ತಕ್ಷಣವೇ ಅಪಾಯವಿದೆ, ಇದ್ಯಾವ ವಿಮಾನವನ್ನು ನನ್ನ ಬಳಿ ಕಳಿಸಿದ್ದೀರಿ ಇಷ್ಟು ಸಮೀಪದ ರೇಂಜಿನಲ್ಲಿ, ಹೇಳಿ!” ಎಂದು ಹಲವು ಬಾರಿ ATC ಯನ್ನು ಕೇಳಿದೆ. ಅವರು “ಅಂತಾ ಯಾವ ವಿಮಾನವನ್ನು ಕಳಿಸಿಲ್ಲ, ಯಾವುದೂ ನಮ್ಮ ಇಲ್ಲಿನ ರೆಡಾರಿನಲ್ಲಿ ಕಾಣಿಸುತ್ತಲೂ ಇಲ್ಲ, ನಿನ್ನ ರೂಟ್ ಕ್ಲಿಯರ್ ಆಗಿದೆ” ಎಂದು ಹೇಳುತ್ತಲೆ ಬಂದರು. ಅಂದರೆ ಇದು ಯಾವುದೋ ಸಾಧಾರಣ ವಿಮಾನವಂತೂ ಅಲ್ಲ, ತಂತ್ರಜ್ಞಾನದಲ್ಲಿ ಬಹಳ ಮುಂದಿದೆ. ಯಾಕೆಂದರೆ ಅವರ ಕಣ್ಣಿಗೆ ಬೀಳುತ್ತಿಲ್ಲ, ನಾನು ಅದನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೆ ಸಂಪರ್ಕ ಕಟ್ ಆಗುತ್ತದೆ. ನಾನು ನನ್ನ ವಿಮಾನವನ್ನು ಇಳಿಸಿದರೆ ಅದೂ ಸರ್ರನೆ ನನ್ನ ಜತೆಯೇ ಸಮಾನಾಂತರದಲ್ಲಿ ಇಳಿಯಬಲ್ಲುದು, ಏರಿದರೆ, ತಿರುಗಿದರೂ ನನ್ನ ಜತೆಯಲ್ಲೇ ಇರಬಲ್ಲುದು… ಅದರ ಚಾಲಕ ನನ್ನ ಮನಸ್ಸನ್ನು ಓದುತ್ತಿರುವಂತೆ! ಇದೆಂತಾ ಸೋಜಿಗ, ನನಗೆ ಭಯವೇ ಆಯಿತು. ನಾನು ಅವನತ್ತ ಒಮ್ಮೆ ಚುರುಕಾಗಿ ತಿರುಗಿದಾಗ ಎಲ್ಲೊ ಅರೆ ಕ್ಷಣ ಮಾಯವಾಗಿಬಿಟ್ಟ, ನಾನು ಗಾಬರಿಯಿಂದ ಹುಡುಕಿದರೆ ಆ ದೊಡ್ಡ ನೌಕೆ ನನ್ನ ವಿಮಾನದ ಮೇಲೆ ಸರಿಯಾಗಿ ದೂರ ಕೊಟ್ಟು ಶಾಂತವಾಗಿ ಹಾರುತ್ತಿದೆ…ಹೇಗೆ ತಾನೆ ಈ ವಾಹನ ನಮಗೆ ಸಾಧ್ಯವೇ ಇಲ್ಲದ ಇಂತಾ ಸರ್ಕಸ್ಸುಗಳನ್ನು ಮ್ಯಾಜಿಕ್ಕಿನಂತೆ ಮಾಡಬಲ್ಲುದು?…ನನಗೆ ಅವನನ್ನು ಸೋಲಿಸುವ , ಜತೆ ಬಿಡಿಸುವ ಸಾಧ್ಯತೆ ಕಾಣಲೇ ಇಲ್ಲ. ಸುಮ್ಮನಾಗಿಬಿಟ್ಟೆ.. ಅದು ಗಾಳಿಯಲ್ಲಿ ಸ್ವಲ್ಪ ದೂರದಲ್ಲಿ ಸ್ಥಿರವಾಗಿ ನಿಂತು ಬಿಟ್ಟಿತು! ನನ್ನ ಕಂಗಳನ್ನೆ ನಾನು ನಂಬಲಿಲ್ಲ..ನಮ್ಮ ಏರೋ ಡೈನಮಿಕ್ಸ್ ಪ್ರಕಾರ ಹಾಗೆಲ್ಲ ಯಾರೂ ಗಾಳಿಯಲ್ಲಿ ಸ್ತಬ್ಧರಾಗಿ ಅಲುಗಾಡದೇ ನಿಲ್ಲಲು ಸಾಧ್ಯವಿಲ್ಲ. ಮತ್ತೆ ಅಷ್ಟೇ ಸಡನ್ನಾಗಿ ರೊಯ್ಯನೆ ತಿರುಗಿ ಮೇಲಕ್ಕೆ ಅನೂಹ್ಯವಾದ ವೇಗದಲ್ಲಿ ಹಾರಿ ಮಾಯವೇ ಆಗಿಬಿಟ್ಟಿತು. ಅಂದರೆ ಸೊನ್ನೆಯಿಂದ ಸಹಸ್ರಾರು ಕಿಮೀ ವೇಗಕ್ಕೆ ಒಮ್ಮೆಲೆ?!… ನನ್ನನ್ನು ಮಕ್ಕಳಾಟಿಕೆಯಂತೆ ಆಟವಾಡಿಸಿ ಪೀಡಿಸಿ ತಾನು ಅದೇನೂ ಗಮನಿಸಿತೋ, ಅದನ್ನು ಮುಗಿಸಿಕೊಂಡು ಅಸಾಧ್ಯ ವೇಗದಲ್ಲಿ, ನನಗಿಂತಾ 50-100 ಪಟ್ಟು ವೇಗದಲ್ಲಿ ಎಲ್ಲಿಗೋ ಹಾರಿ ಒಡನೆಯೇ ಕಾಣೆಯಾಯಿತು. ನಮ್ಮ ಭೂಮಿಯಲ್ಲಿ ಇಂತಾ ತಂತ್ರಜ್ಞಾನವಿರುವ ವಾಹನ ಇರಲು ಸಾಧ್ಯವೇ ಇಲ್ಲ…ಇದು ಎಲ್ಲಿಂದಲೋ ಬಂದು ಮತ್ತೆ ಮಾಯವಾಗಿದೆ…ಇಂದಿಗೂ ನೆನೆಸಿಕೊಂಡರೆ ನನಗೆ ಮೈ ರೋಮಾಂಚನವಾಗುತ್ತದೆ, ಇವೆಲ್ಲಾ ಹೇಗೆಂದು ವಿವರಿಸಲು ನಮಗೀಗೆಲೇ ಸಾಧ್ಯವಿಲ್ಲ ಎಂಬುದು ಖಚಿತ…

ನಾಗೇಶ್ ಕುಮಾರ್ ಸಿ ಎಸ್
Leave a replyComments (1)
  1. ವಿಜಯ ಎಸ್. ಪಿ July 20, 2020 at 12:22 am

    Very interesting … ಮೈ ಝುಮ್ಮೆನಿಸಿದ ಓದು… ಇಷ್ಟವಾಯಿತು… 👏👌

    ReplyCancel

Leave a Reply