ಬೆಳೆಗಳು, ಹುಲ್ಲುಗಾವಲು, ಮರದರೆಂಬೆ, ಕಾಂಡ, ಎಲೆ, ಹೂ, ಹಣ್ಣು, ಬೀಜ ಮತ್ತು ಹಸಿರೆಲೆಯನ್ನು ಸಂಪೂರ್ಣವಾಗಿ ತಿಂದು ನಾಶಮಾಡುತ್ತದೆ. ಮಿಡತೆಯು ಸೃಷ್ಟಿಮಾಡುವ ಹಾನಿ ಮತ್ತು ಆರ್ಥಿಕ ನಷ್ಟದ ಪ್ರಮಾಣವು ಕಲ್ಪನೆಗೂ ನಿಲುಕದಷ್ಟು ವಿಪರೀತವಾಗಿರುತ್ತದೆ ಮತ್ತು ಒಂದು ಸುಭದ್ರ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸುವಷ್ಟು ಪ್ರಬಲವಾಗಿರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳು ಎಲ್ಲಾ ತೆರನಾದ ಸಸ್ಯಗಳನ್ನು ತಿನ್ನುವವು. ಉದಾಹರಣೆಯೆಂದರೆ ಸುಮಾರು 80-100 ದಶಲಕ್ಷ ಮಿಡತೆಗಳ ಸಮೂಹ ಒಂದು ದಿನಕ್ಕೆ 25000-35000 ಜನಕ್ಕಾಗುವಷ್ಟು ಆಹಾರವನ್ನು ಭಕ್ಷಿಸಬಲ್ಲ ಪ್ರೇತವಾಗಿರುತ್ತವೆ.

               ಕರೋನ, ಚಂಡಮಾರುತ, ಕಾಳ್ಗಿಚ್ಚು ಮತ್ತು ಅನಿಲ ದುರಂತಗಳ ಬೆನ್ನಲ್ಲೇ, ರೈತಭಾಂದವರ ನಿದ್ದೆಗೆಡಿಸಿರುವ ಜೀವಿಯೆಂದರೆ–ಮಿಡತೆ!.

 ಮಿಡತೆಯು (Locust) ಕೀಟಗಳ ಗುಂಪಿಗೆ ಸೇರಿದ ಜೀವಿಯಾಗಿದ್ದು ಆರು ಕಾಲುಗಳನ್ನೊಳಗೊಂಡಿರುತ್ತದೆ. ಭಾರತದಲ್ಲಿ ಇವುಗಳ ನಾಲ್ಕು ತರಹದ ಪ್ರಬೇಧಗಳನ್ನು ವರದಿ ಮಾಡಲಾಗಿದೆ ಅವುಗಳೆಂದರೆ, ಮರುಭೂಮಿ ಮಿಡತೆ (ಸಿಸ್ಟೊಸೆರ್ಕ ಗ್ರಿಗೇರಿಯ) ವಲಸೆ ಮಿಡತೆ (ಲೋಕಷ್ಟ ಮೈಗ್ರಟೋರಿಯಾ), ಬಾಂಬೆ ಲೋಕಸ್ಟ್ (ನೋಮದಕ್ರಿಸ್ ಸುಕ್ಸಿನ್ಕ್ಟ) ಮತ್ತು ಮರದ ಮಿಡತೆ (ಅನಾಕ್ರಿಡಿಯಮ್ ಸ್ಪಿ.). ಈ ಎಲ್ಲಾ ಬಗೆಯ ಮಿಡತೆಗಳಲ್ಲಿ ಮರುಭೂಮಿ ಮಿಡತೆಯು ತುಂಬಾ ಹಾನಿಕಾರಕ ಮತ್ತು ಹೆಚ್ಚು ನಷ್ಟ ಉಂಟುಮಾಡುವ ಕೀಟವಾಗಿರುತ್ತದೆ. ಮರುಭೂಮಿ ಮಿಡತೆಯನ್ನು, ಸಣ್ಣ ಕೊಂಬಿನ ಮಿಡತೆಯೆಂದು ಕರೆಯುತ್ತಾರೆ. ಇವುಗಳನ್ನು ಸಂಸ್ಕೃತ ಸಾಹಿತ್ಯದಲ್ಲಿ ಪ್ರಮುಖವಾಗಿ ಮಹಾಭಾರತ ಕಾವ್ಯದಲ್ಲಿ, ಕರ್ಣನು ಯುದ್ಧಭೂಮಿಯಲ್ಲಿರುವಾಗ ತನ್ನ ಪ್ರತಿಸ್ಪರ್ಧಿ ಅರ್ಜುನನನ್ನು ಎದುರಿಸುವ ಸಂದರ್ಭದಲ್ಲಿ “ಕಾವ್ಯಾತ್ಮಕವಾಗಿ ಸುಂದರವಾದ” ಭಾಷಣದಲ್ಲಿ ಮಿಡತೆಗಳನ್ನು ಹೊಗಳಿದ್ದನೆಂದು ಉಲ್ಲೇಖಿಸಲಾಗಿದೆ. ಪ್ರಾಚೀನ ಸಂಸ್ಕೃತ ಪಠ್ಯವು ಸುಮಾರು ಕ್ರಿ.ಪೂ. 400 ರಷ್ಟು ಹಳೆಯದಿದೆ, ಆದರೆ ಈ ಕವಿತೆಯು ಕ್ರಿ.ಪೂ. 750ರ ಮೊದಲೇ ಅಸ್ತಿತ್ವದಲ್ಲಿತ್ತೆಂದು ಭಾವಿಸಲಾಗಿದೆ. ಇರಾನಿನ ಪ್ರಾಚೀನ ಉಲ್ಲೇಖಗಳ ಪ್ರಕಾರ ಝೋರೊಆಸ್ಟ್ರಿಯನ್ ವೆಂಡಿಡಾಡ್ನಲ್ಲಿ, ಮಿಡತೆಯನ್ನು ಅಂಗ್ರಾ ಮೈನ್ಯಾದ ಕ್ರ್ಯಾಫ್ಸ್ಟ್ರಾ ಅಥವಾ ದುಷ್ಟ ಸೃಷ್ಟಿಗಳಲ್ಲೊಂದು ಎಂದಿದ್ದಾರೆ. ಹಾಗು ಇಸ್ಲಾಮಿನ ಧರ್ಮಗ್ರಂಥವಾದ ಕುರಾನ್‌ನ ಅಲ್-ಅರಾಫ್ 7 ನೇ ಅಧ್ಯಾಯದಲ್ಲಿಯು ಸಹ ಮಿಡತೆಗಳನ್ನು ಉಲ್ಲೇಖಿಸಲಾಗಿದೆ. ಯುಗದ ಇತಿಹಾಸದಲ್ಲಿ ಮಿಡತೆಯು ಗಾತ್ರದಲ್ಲಿ 5 ರಿಂದ 11 ಸೆ.ಮೀ. ಇದ್ದರೂ, ಸಮೂಹವಾಗಿದ್ದರೆ ಭೀಮ, ಕುಂಭಕರ್ಣ, ಕರಿಪಡೆ ಮತ್ತು ಒಂಟೆಗಳಿಗೆ ಸವಾಲನ್ನೊಡ್ಡಬಲ್ಲ ಜೀವಿಯೆಯೆಂದರೆ ತಪ್ಪಾಗದು.
ಮರುಭೂಮಿ ಮಿಡತೆ

ಮಿಡತೆಗಳನ್ನು ಪ್ರಪಂಚದಲ್ಲಿನ ಅತೀ ವಿನಾಶಕಾರಿ ಕೀಟಗಳ ಗುಂಪಿಗೆ ಸೇರಿಸಲಾಗಿದೆ. ಇವು ಹೆಚ್ಚು ಸಕ್ರಿಯವಾಗಿರುವ ಕೀಟವಾಗಿದೆ.

 ಬೆಳೆಗಳು, ಹುಲ್ಲುಗಾವಲು, ಮರದರೆಂಬೆ, ಕಾಂಡ, ಎಲೆ, ಹೂ, ಹಣ್ಣು, ಬೀಜ ಮತ್ತು ಹಸಿರೆಲೆಯನ್ನು ಸಂಪೂರ್ಣವಾಗಿ ತಿಂದು ನಾಶಮಾಡುತ್ತದೆ. ಮಿಡತೆಯು  ಸೃಷ್ಟಿಮಾಡುವ ಹಾನಿ ಮತ್ತು ಆರ್ಥಿಕ ನಷ್ಟದ ಪ್ರಮಾಣವು ಕಲ್ಪನೆಗೂ ನಿಲುಕದಷ್ಟು ವಿಪರೀತವಾಗಿರುತ್ತದೆ ಮತ್ತು ಒಂದು ಸುಭದ್ರ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸುವಷ್ಟು ಪ್ರಬಲವಾಗಿರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳು ಎಲ್ಲಾ ತೆರನಾದ ಸಸ್ಯಗಳನ್ನು ತಿನ್ನುವವು. ಉದಾಹರಣೆಯೆಂದರೆ ಸುಮಾರು 80-100 ದಶಲಕ್ಷ ಮಿಡತೆಗಳ ಸಮೂಹ ಒಂದು ದಿನಕ್ಕೆ 25000-35000 ಜನಕ್ಕಾಗುವಷ್ಟು ಆಹಾರವನ್ನು ಭಕ್ಷಿಸಬಲ್ಲ ಪ್ರೇತವಾಗಿರುತ್ತವೆ. ಅಂತೆಯೇ ಒಂದು ಚಿಕ್ಕ ಮಿಡತೆ ಗುಂಪು  10 ಕರಿಗಳು, 25 ಒಂಟೆಗಳು ಅಥವಾ 2500 ಜನರಿಗೂ  ಹೆಚ್ಚು ಆಗುವಷ್ಟು ಆಹಾರವನ್ನು ತಿನ್ನುತ್ತವೆ. ಕಳೆದ ವರ್ಷದ ಡಿಸೆಂಬರ್ (2019) ತಿಂಗಳಲ್ಲಿ ಗುಜರಾತಿನಲ್ಲಿ ಕಾಣಿಸಿಕೊಂಡ ಸಮೂಹ ಸುಮಾರು 25000 ಹೇ. ಜಮೀನಲ್ಲಿರುವ ಬೆಳೆಯನ್ನು ಧ್ವಂಸ ಮಾಡಿದ್ದವು.

ಒಂದು ಪ್ರೌಢ  ಮಿಡತೆಗಳ ಪುಂಜ ಸರಿಸುಮಾರು 150 ಕಿ.ಮೀ. ದೂರ ಕ್ರಮಿಸಬಲ್ಲವು ಹಾಗೂ ಅವುಗಳ ಗುಂಪು ಅಲೆ ಅಲೆಯಾಗಿ ¸ ಸುಮಾರು 1500 ಮೀ. ನಷ್ಟು ಎತ್ತರದಲ್ಲಿ ಯಕ್ಷಿಣಿ ಸೇನೆಯಂತೆ ಹಾರುತ್ತ ಸಾಗಬಲ್ಲವು. ವಾಯು ದಿಕ್ಕಿಗೆ ಅನುಗುಣವಾಗಿ ವೇಗ ಬದಲಿಸುತ್ತಾ ಆಕಾಶಕಾಯಗಳಂತೆ ಸೀಮೆಗಳನ್ನು ಹಾಯುತ್ತಾ ಮುಂದೆ ಸಾಗುತ್ತವೆ. ಅಪ್ಸರಾ ಕೀಟಗಳು (ರೆಕ್ಕೆಯಿಲ್ಲದ ಯುವ ಕೀಟ) ಯುವ ಸೈನಿಕರಂತೆ, ತಮ್ಮ ಜೀವನದ ನಾಲ್ಕನೇ ಹಂತದಲ್ಲಿ ಎಲ್ಲಾಕಡೆಯಿಂದ ಒಂದುಗೂಡಿ ಗುಂಪು ನಡಿಗೆಯ ಮೂಲಕ ಒಂದು ದಿನಕ್ಕೆ ಸರಿಸುಮಾರು 200-1700 ಮೀ. ನಷ್ಟು ದೂರ ದಂಡಯಾತ್ರೆ ಮಾಡಬಲ್ಲವು. ಮಿಡತೆಗಳು ಮುನ್ನುಗುವ ಸಂದರ್ಭದಲ್ಲಿ ಹಾದಿಯಲ್ಲಿ ದೊರಕುವ ಎಲ್ಲಾ ತರಹದ ಆಹಾರವನ್ನು (ಗಿಡ ಮರಗಳು) ತಿನ್ನುತ್ತವೆ. ತುಂಬಲಾಗದ ಆರ್ಥಿಕ ನಷ್ಟವನ್ನುಂಟು ಮಾಡುತ್ತ ಸಾಗುತ್ತವೆ. 

ವಲಸೆ ಮಿಡತೆ

ಇತ್ತೀಚೆಗೆ ಭಾರತಕ್ಕೆ ಲಗ್ಗೆ ಇಟ್ಟಿರುವ ಮಿಡತೆಗಳು, ಆಫ್ರಿಕಾ ಖಂಡದಲ್ಲಿನ ಜಮಿನ್ ರಾಜ್ಯದ ಮೆಕುನು ಮತ್ತು ಬನ್ ಪ್ರಾಂತ್ಯದಲ್ಲಿ ಸಂತಾನೋತ್ಪತ್ತಿ ಮತ್ತು ವೃದ್ದಿಗೊಂಡಿರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ  ಮೆಕುನು ಮತ್ತು ಬನ್ ಪ್ರಾಂತ್ಯದಲ್ಲಿ ಸಂತಾನೋತ್ಪತ್ತಿ ಮತ್ತು ವಿಶಾಲವಾದ ಮರುಭೂಮಿಯು ಕೆರೆಯಂತೆ ಬದಲಾದಾಗ, ಮಿಡತೆಗಳು 2019ರವರೆಗೂ ವೃದ್ಧಿಯಾಗುತ್ತ ಸಾಗಿ, ನಂತರ ಇವು ಪೂರ್ವ ಆಫ್ರಿಕಾವನ್ನು ನವೆಂಬರ್ 2019ರಲ್ಲಿ ಪ್ರವೇಶಿಸಿದ್ದವು. ತದನಂತರದಲ್ಲಿ  ಇರಾನ್, ಇರಾಕ್, ಸೌದಿ ಅರೇಬಿಯಾ, ಬಲೂಚಿಸ್ತಾನ ಮತ್ತು ಪಾಕಿಸ್ತಾನವನ್ನು 2020ರ ವರ್ಷಾರಂಭದಲ್ಲಿ ಪ್ರವೇಶಿಸಿ ಅವುಗಳ ಸಂಖ್ಯೆಯನ್ನು ಮತ್ತಷ್ಟು ವೃದ್ದಿಸಿಕೊಂಡು ಏಪ್ರಿಲ್ ತಿಂಗಳಲ್ಲಿ ತಮ್ಮ ಅಪಾರ ಸೇನೆಯೊಂದಿಗೆ ಭಾರತಕ್ಕೆ ಲಗ್ಗೆ ಇಟ್ಟಿರುತ್ತವೆ. ಪ್ರತ್ಯಕ್ಷದರ್ಶಿಗಳ ಸಾಕ್ಷಿಯಂತೆ ಅವುಗಳ ಹಿಂಡು ಸರಿಸುಮಾರು 1.0 ರಿಂದ 1.5 ಚದರ ಕಿ.ಮೀ. ನಷ್ಟು ದೂರವಿರಬಹುದು. ಭಾರತ ಭೂಮಿಯ ರಾಜಸ್ತಾನದಲ್ಲಿ ಪ್ರಥಮವಾಗಿ (2020 ಇಸವಿ) ಕಾಣಿಸಿಕೊಂಡ ಮಿಡತೆ ಸಮೂಹವು ಪಶ್ಚಿಮ ಮತ್ತು ಉತ್ತರದ ರಾಜ್ಯಗಳನ್ನು ಆಕ್ರಮಿಸಿ ಮಧ್ಯೆ ಮತ್ತು ದಕ್ಷಿಣ ಭಾಗದೆಡೆಗೆ ಮುನ್ನುಗ್ಗುತ್ತವೆ. ಕರ್ನಾಟಕ ರಾಜ್ಯಕ್ಕೆ ಯಾವ ಸಮಯದಲ್ಲಾದರೂ ಲಗ್ಗೆ ಇಡುವ ಭಯ ಸೃಷ್ಟಿಸಿವೆ. ಆದರೆ, ಮುಂಗಾರೆನ್ನುವ ಮೋಹಕ-ಧಾರೆಯ ಮುನ್ನುಡಿಯಿಂದ, ಧರೆ ಶಾಂತವಾದಂತೆ ಮಿಡತೆಗಳೂ ಮಾಯವಾಗಿ ಎಲ್ಲರೂ ನಿಟ್ಟುಸಿರುಬಿಡುವಂತಾಯಿತು.

ಮುಂದುವರೆಯುವುದು…

ಡಾ. ಕರಿಯಣ್ಣ ದೇಸಾಯಿ
Leave a replyComments (3)
 1. Anand July 1, 2020 at 11:24 pm

  ತುಂಬ ಒಳ್ಳೆಯ ಸಂದೇಶ ಧನ್ಯವಾದಗಳು .🙏🏻

  ReplyCancel
 2. Dr. Nethravathi V July 2, 2020 at 12:56 am

  Very interesting and well narrated article with great scientific details. Historical details collected from Persian and Indian mythology is really interesting.

  ReplyCancel
 3. JK Pujara July 2, 2020 at 3:00 am

  ಮಿಡತೆಗಳು ಏನೋ ಒಂದು ಸಣ್ಣ ಕ್ರಿಮಿ ಕೀಟ ಎಂಬ ಅಸಡ್ಡೆ ಇತ್ತು..
  ಇತ್ತೀಚಿನ ಮಾಹಿತಿಗಳು ಮಿಡತೆಗಳ ಬಗ್ಗೆ ಭಯ ಮೂಡಿಸಿದ್ವು.
  ನಿಮ್ಮ ಲೇಖನದಿಂದ ಕೆಲವು ಕೇಳದೇ ಇರುವ, ಮಾಹಿತಿಯನ್ನು ಈ ಭಾಗದಲ್ಲಿ ತಿಳಿದುಕೊಂಡೆ.
  ಮಿಡತೆಗಳು ನಮ್ಮ ಕರ್ನಾಟಕ ಬರದೇ ಇರೋದಕ್ಕೆ ಮುಂಗಾಉ ಶ್ರೀರಕ್ಷೆ ಆಗಿದ್ದು ನಿಜಕ್ಕೂ ಸಮಾಧಾನಕರ.
  ಮಾಹಿತಿ , ನಿಮ್ಮ ಲೇಖನ ಅದ್ಭುತ…🙏🏻

  ReplyCancel

Leave a Reply