ಮೊದಲೊಮ್ಮೆ ಭೂಮಿಯೇ ಒಂದು ಚಪ್ಪಟೆಯಾದ ತಟ್ಟೆ. ಕ್ಷಿತಿಜದತ್ತ ದೂರ ನಡೆದರೆ ಅಂಚಿನಿಂದ ಕೆಳಗೆ ಬಿದ್ದುಹೋಗುತ್ತೀವೆಂದು ಮನುಷ್ಯ ನಂಬಿದ್ದ ಕಾಲವಿತ್ತು. ಭೂಮಿಯೇ ಎಲ್ಲಕ್ಕೂ ಕೇಂದ್ರವೆಂದೂ, ನಮ್ಮ ಸುತ್ತಲೂ ಸೂರ್ಯ ಚಂದ್ರರು ಸುತ್ತುತ್ತಾರೆಂದು ನಂಬಿದ್ದ ಕಾಲವೂ ಇತ್ತು. ಯಾರೂ ಅದನ್ನು ಶತಮಾನಗಳ ಕಾಲ ಪ್ರಶ್ನಿಸಲೂ ಇಲ್ಲ... ಅದಕ್ಕೆ ಯಾವ ನರಪಿಳ್ಳೆಯಾದರೂ ವ್ಯತಿರಿಕ್ತವಾಗಿ ಪಿಸುಗುಟ್ಟಿದರೂ ಅವರಿಗೆ ಅಪಹಾಸ್ಯ, ಸಾಮಾಜಿಕ ನಿಂದನೆ, ಬಹಿಷ್ಕಾರ...ಅಷ್ಟೇ ಏಕೆ, ದೈಹಿಕ ಶಿಕ್ಷೆ ಕೊಡುವುದಕ್ಕೂ ಬಹುಸಂಖ್ಯಾತರು ಹೇಸುತ್ತಿರಲಿಲ್ಲ...

ಇಂತಾ ದೊಡ್ಡ ವಿಶ್ವದಲ್ಲಿ, ಅಗಾಧವಾದ ಗ್ರಹಿಕೆಗೂ ಎಟುಗದ ಬ್ರಹ್ಮಾಂಡದಲ್ಲಿ ನಾವು ಮಾತ್ರ ಇದ್ದೇವೆಯೆ?ಇನ್ನೆಲ್ಲಿಯೂ ಸೃಷ್ಟಿಯ ಪ್ರಕ್ರಿಯೆ ನಡೆಯಲೇ ಇಲ್ಲವೆ?… ಈ ರೀತಿಯ ವಿಸ್ಮಯ ಹುಟ್ಟಿಸುವ ವೈವಿಧಯಮಯ ಜೀವರಾಶಿಗಳಿಂದ ಕೂಡಿದ ಜಗತ್ತೊಂದು ಅಲ್ಲೆಲ್ಲೂ ಎಂದೆಂದೂ ರೂಪುಗೊಳ್ಳಲೇ ಇಲ್ಲವೆ?ಆಗಸದತ್ತ ಮೋಡವಿಲ್ಲದ ರಾತ್ರಿಯಂದು ನಾವು ದಿಟ್ಟಿಸಿದಾಗ ಕಣ್ಣಿಗೆ ಕಾಣುವ ಮಿನುಗುವ ಲೋಕಗಳೆಲ್ಲಾ ಏನು? ಮಿಲಿಯಗಟ್ಟಲೆ ಚುಕ್ಕಿಗಳಂತೆ ನಿರಂತರ ಚಮಕಿಸುವ ಇವೆಲ್ಲಾ ಹಾಗಾದರೆ ಉಸಿರಾಟವಿಲ್ಲದೇ ಖಾಲಿ ಖಾಲಿ ಸತ್ತ ತಾರೆ ಮತ್ತು ಗ್ರಹಗಳೆ?ಇದೆಂತಾ ಬ್ರಹ್ಮಾಂಡವನ್ನು ಸೃಷ್ಟಿಸಿದನಾತ? ಎಂತಾ ಅನೂಹ್ಯ ವ್ಯರ್ಥ ಪ್ರಯೋಗವಲ್ಲವೆ ಹಾಗಾದರೆ ಇದು? 

ಹೀಗೆಲ್ಲಾ ನಮಗೆ ಒಂದಲ್ಲಾ ಒಂದು ಬಾರಿ ಅನಿಸಿರಲಿಕ್ಕೆ ಖಂಡಿತಾ ಸಾಧ್ಯ.

ಮೊದಲೊಮ್ಮೆ ಭೂಮಿಯೇ ಒಂದು ಚಪ್ಪಟೆಯಾದ ತಟ್ಟೆ. ಕ್ಷಿತಿಜದತ್ತ ದೂರ ನಡೆದರೆ ಅಂಚಿನಿಂದ ಕೆಳಗೆ ಬಿದ್ದುಹೋಗುತ್ತೀವೆಂದು ಮನುಷ್ಯ ನಂಬಿದ್ದ ಕಾಲವಿತ್ತು. ಭೂಮಿಯೇ ಎಲ್ಲಕ್ಕೂ ಕೇಂದ್ರವೆಂದೂ, ನಮ್ಮ ಸುತ್ತಲೂ ಸೂರ್ಯ ಚಂದ್ರರು ಸುತ್ತುತ್ತಾರೆಂದು ನಂಬಿದ್ದ ಕಾಲವೂ ಇತ್ತು. ಯಾರೂ ಅದನ್ನು ಶತಮಾನಗಳ ಕಾಲ ಪ್ರಶ್ನಿಸಲೂ ಇಲ್ಲ… ಅದಕ್ಕೆ ಯಾವ ನರಪಿಳ್ಳೆಯಾದರೂ ವ್ಯತಿರಿಕ್ತವಾಗಿ ಪಿಸುಗುಟ್ಟಿದರೂ ಅವರಿಗೆ ಅಪಹಾಸ್ಯ, ಸಾಮಾಜಿಕ ನಿಂದನೆ, ಬಹಿಷ್ಕಾರ…ಅಷ್ಟೇ ಏಕೆ, ದೈಹಿಕ ಶಿಕ್ಷೆ ಕೊಡುವುದಕ್ಕೂ ಬಹುಸಂಖ್ಯಾತರು ಹೇಸುತ್ತಿರಲಿಲ್ಲ…

ಕಾಲಕ್ರಮೇಣ ವಿಜ್ಞಾನ ವಿಕಸಿತವಾಗುತ್ತಾ ಹೋಯಿತು…ಓಹೋ, ಭೂಮಿ ಗೋಲಾಕೃತಿಯಲ್ಲಿದೆ, ಆಹಾ, ನಾವೇ ಈ ಸೌರಮಂಡಲದ ಒಂದು ಗ್ರಹ, ಇಲ್ಲಿ ಚಂದ್ರ ನಮ್ಮ ಸುತ್ತ ಗಿರಕಿ ಹೊಡೆಯುತ್ತಾನೆ, ಅದರ ವಿರುದ್ಧವಾಗಲ್ಲ, ಎಂಟು ಚಿಕ್ಕ-ದೊಡ್ಡ ಗ್ರಹಗಳೆಲ್ಲಾ ನಮ್ಮ ನೆರೆಮನೆಗಳಲ್ಲಿವೆ…ಎಂದೆಲ್ಲಾ ಅರಿವಾಗತೊಡಗಿತ್ತು…

ವಿಜ್ಞಾನ ಪ್ರಪಂಚದಲ್ಲಿ ಪ್ರಪಂಚದ ಬಗ್ಗೆಯೇ ಒಂದು ಹೊಸ ಬೆಳಕು ಮೂಡಲಾರಂಭಿಸಿತ್ತು.

ಸೂರ್ಯನೇ ನಮ್ಮ ಮಂಡಲದ ಬಾಸ್ ಎಂದು ಮುಂದುವರೆದ, ಪ್ರಗತಿ ಹೊಂದಿದ್ದ ವಿಜ್ಞಾನ, ಬೆಳೆದ ಖಗೋಳಶಾಸ್ತ್ರ ನಮಗೆ ಮರುಪಾಠ ಮಾಡಿತು. ಅವನ ಸುತ್ತಲೂ ನಾವೆಲ್ಲಾ…!

…ಆಹಾ, ಇದೆಂತಾ ದಿಗ್ಭ್ರಮೆಗೊಳಿಸುವ ವೈಶಾಲ್ಯದ ಮಿಲ್ಕೀ ವೇ (ಕ್ಷೀರಪಥ)!…2 ಲಕ್ಷ ಜ್ಯೋತಿವರ್ಷದಷ್ಟು ಅಗಲವಿದೆಯಂತೆ ( ಒಂದು ಬೆಳಕಿನ ಕಿರಣ ಒಂದು ವರ್ಷದಲ್ಲಿ ಚಲಿಸುವ ದೂರ= 1 ಜ್ಯೋತಿವರ್ಷ=9500 ಶತಕೋಟಿ ಕಿಮೀ ಅಂದಾಜು)

…ಇದರಲ್ಲಿ 400 ಬಿಲಿಯನ್ (ಶತಕೋಟಿ) ತಾರೆಗಳಿದ್ದಾವಂತೆ…

…ಇದರ ಒಂದು ನಗಣ್ಯ ಚಿಕ್ಕ ಭಾಗವೇ ನಮ್ಮ ಈ ಸೌರಮಂಡಲ…!.

ಅದರಾಚೆಯೂ ಊಹೆಗೂ ನಿಲುಕದಷ್ಟು ಅಗಾಧವಾದ ಬ್ರಹ್ಮಾಂಡ ಎಲ್ಲೆಲ್ಲೂ ವ್ಯಾಪಿಸಿದೆಯಂತೆ… ಲಕ್ಷಾಂತರ ಸೌರಮಂಡಲ, ತಾರಾ ಮಂಡಲಗಳಿದ್ದಾವೆ ಹಾಗಾದರೆ…ಎಣಿಸಲು ಹೋದರೆ ಸಂಖ್ಯಾಶಾಸ್ತ್ರವೇ ಸೋತುಹೋಗುತ್ತದೇನೋ, ಅಥವಾ ನಮ್ಮ ಅಳೆಯುವ ಶಕ್ತಿ!

2 ಟ್ರಿಲಿಯನ್ (2000 ಶತಕೋಟಿ) ಸೌರಮಂಡಲಗಳಿವೆಯಂತೆ ಈ ಕಾಣಬಲ್ಲ ವಿಶ್ವದಲ್ಲಿ (Observable Universe) ಎನ್ನುತ್ತದೆ ಈಗಿನ ಖಗೋಳ ಶಾಸ್ತ್ರ…ಅದರ ಲೆಕ್ಕ ನಮಗೆ ಕೈಗೆಟುಕೀತೆ? ಇನ್ನು ನಮಗೆ ಕಾಣದ ಅದರಾಚೆಯ ವಿಶ್ವದಲ್ಲಿ ಏನೇನುಂಟೋ , ಎಂತೋ?

ಹೀಗೆಲ್ಲಾ ಖಗೋಳ ಶಾಸ್ತ್ರ ತಜ್ಞರೇ ಬೆರಗಾಗುವಂತ ಹೊಸ ಮಾಹಿತಿಯನ್ನು ತಮ್ಮ ಪ್ರಬಲ ಟೆಲೆಸ್ಕೋಪ್ ಮತ್ತು ವೀಕ್ಷಣ ಸಾಧನಗಳಿಂದ ಹೋದ ಶತಮಾನದಲ್ಲಿ ಧಾರೆಯೆರೆಯತೊಡಗಿದರು…

ಇಂತಾ ಅಗಾಧ ಮಿಲ್ಕಿ ವೇ ಸಹಾ ಕಾಣಬಲ್ಲ ವಿಶ್ವದದಲ್ಲೆಲೋ ಒಂದು ಚಿಕ್ಕ ಭಾಗವಷ್ಟೇ!…ಇದರೊಳಗಿನ ಒಂದು ಗೆಲಾಕ್ಸಿಯಲ್ಲಿ ಯಾವುದೋ ಒಂದು ಅಣುವಿನಂತೆ ಇದೆ ಈ ನಮ್ಮ ಭೂಗ್ರಹ…

ಅದರಲ್ಲಿ ನಾವೆಲ್ಲಾ ಇದ್ದುಕೊಂಡು ಒಂದು ಪುಟಾಣಿ ಬಾಹ್ಯಾಕಾಶದ ತುಣುಕನ್ನು ದೂರದಿಂದ ನೋಡಿ, ಎಲ್ಲಿಯೂ ಬೇರೆ ಯಾರೂ ಇಲ್ಲ ಎಂದುಕೊಂಡಿದ್ದೇವಾ? ಎಂಬ ಅಚ್ಚರಿ ನಮಗೀಗ ಸ್ಪಷ್ಟವಾಗಿ ಮೂಡತೊಡಗಿದೆ.


ಆಕಾಶದಲ್ಲಿ ಹಕ್ಕಿಗಳು ಮಾತ್ರವೇ ಹಾರುವುದಿಲ್ಲ!

ಆದಿಕಾಲದಿಂದಲೂ ಗತಿಸಿಹೋದ, ನಶಿಸಿಹೋದ ಪುರಾತನ ನಾಗರೀಕತೆಯ ದಾಖಲೆಗಳಲ್ಲಿಯೂ ಅವರ ಜಾನಪದದಲ್ಲಿಯೂ ಈ ಹಾರುವ ದೇವಮಾನವರು, ಅಪ್ಸರೆಯರು, ಯಕ್ಷರ ಅಸಂಖ್ಯ ಕತೆಗಳೂ, ಅವರು ಈ ನಾಗರೀಕರಿಗೆ ಮಾಡಿದ ಅವಿಸ್ಮರಣೀಯ ಸೇವೆ, ಹೊಸ ಪ್ರಯೋಗಶೀಲತೆ, ಅವರ ನಂಬಲಸಾಧ್ಯ ಅತಿಮಾನವ ಶಕ್ತಿಗಳ ಸವಿವರ ಸಚಿತ್ರ ಕತೆಗಳಿವೆ… ಅವರ ಗುಹೆಗಳ ಕೆತ್ತನೆ, ಚಿತ್ರಗಳಲ್ಲಿ, ಈ ಅಪರಿಚಿತ ಅತೀಂದ್ರಿಯ ಶಕ್ತಿಯ ಜೀವಿಗಳು ಕಟ್ಟಿಕೊಟ್ಟ ಬೃಹತ್ ದೇಗುಲಗಳಲ್ಲಿ, ಪಿರಮಿಡ್ಡುಗಳಲ್ಲಿ ಈ ದೇವತೆಗಳ ಗುಣಗಾನವಿದೆ…ಅವರ ಚಿತ್ರಗಳು ಈಗಿನ ಕಾಲದ ಬಾಹ್ಯಾಕಾಶ ಅಂತರಿಕ್ಷ ಯಾತ್ರಿಗಳನ್ನೂ ನಾಚಿಸುವ ರೀತಿಯಲ್ಲಿ ಮುಂದುವರೆದ ವಿಜ್ಞಾನದ ಕುರುಹುಗಳಂತೆ ಕಾಣುತ್ತವೆ. ಅವರ ಗಗನೌಕೆಗಳ ಚಿತ್ರಗಳು ನಮ್ಮ ವೈಮಾನಿಕ ವಿಜ್ಞಾನಿಗಳು ಮೂಗಿನ ಮೇಲೆ ಬೆರೆಳಿಟ್ಟುಕೊಳ್ಳುವಂತಿವೆ… ಇವರೆಲ್ಲಾ ಶಿಲಾಯುಗದ ಆದಿಮಾನವರಾಗಿದ್ದಾಗಲೇ ಈ ವಿಚಿತ್ರ ವಾಹನಗಳು ಹಾರುವ, ಚಿತ್ರವಿಚಿತ್ರ ಗಗನದಿರುಸು ಪೋಷಾಕುಗಳ ಕಲ್ಪನೆ ಬಂದಿದ್ದಾದರೂ ಹೇಗೆ?…ತಾವು ನೋಡದೇ ಇದ್ದುದನ್ನೆಲ್ಲಾ ಹೇಗೆ ಚಿತ್ರಿಸಿದರು ಮತ್ತು ಏಕೆ? ಇಂತಾ ಅಪೂರ್ವ ಘಟನಾವಳಿ ನಮ್ಮ ಜತೆ ನಡೆಯಿತೆಂಬ ದಾಖಲೆ ಚಿರವಾಗಿರಲಿ ಎಂದು ತಾನೆ?…

ಯಾರೋ ಇಂತವರು ಆಗಸದಿಂದ ಅಪರಿಚಿತರು ಬಂದಿಳಿದಿರಬೇಕು…ಹಲವು ವೈಜ್ಞಾನಿಕ ಪ್ರಗತಿಪರ ವಿಷಯಗಳನ್ನು, ಹೊಸ ಆವಿಷ್ಕಾರದ ಪದ್ಧತಿಗಳನ್ನೂ ಹುಟ್ಟುಹಾಕಿ, ಇವರ ಜತೆ ಸ್ವಲ್ಪ ಕಾಲವಿದ್ದು, ಪ್ರಾಯಶಃ ಸಂಬಂಧ ಬೆಳೆಸಿ, ಸಂತಾನವನ್ನೂ ಕೊಟ್ಟು ಹೊರಟುಹೋಗಿರಬೇಕು!… ಇಂತಾ ಅಗಾಧ ಪ್ರಗತಿಪರವಾದ ಪೀಳಿಗೆಯ ಜನರನ್ನು ಅವರು “ದೇವತೆ”ಗಳೇ ಎಂದು ನಂಬಿ ಕರೆದಿರಬೇಕು…ಮಾನವನ ಕಲ್ಪನೆಯಲ್ಲಿ ಭಗವಂತನ ಕಲ್ಪನೆಯೇ ಆಸೆ, ಬಯಕೆಗಳನ್ನು ಈಡೇರಿಸಿ ಉದ್ಧಾರ ಮಾಡುವವನು ಎಂದು ತಾನೆ?

ಹಾಗೆ ಬಂದವರು ಸೃಷ್ಟಿಕರ್ತ ಭಗವಂತನಲ್ಲವೆಂದರೂ ’ಉಪಕಾರಿ’ ದೇವತೆಗಳೆನ್ನಲು ಅವರಿಗೆ ಏನಡ್ಡಿ?..’ಹಾರಬಲ್ಲ ಯಕ್ಷ, ಅಪ್ಸರೆ, ಕಿನ್ನರ- ಕಿಂಪುರುಷರನ್ನು ನಾವು ಕಂಡಿದ್ದೇವೆ, ಅವರ ಜತೆ ಇದ್ದೆವು’ ಎಂದಾಗ ಏನು ತಪ್ಪು? ಹೇಗೆ ಸುಳ್ಳು?

ಎರಿಕ್ ವಾನ್ ಡ್ಯಾನಿಕೆನ್ ಎಂಬ ಆರ್ಕಿಯೋಲಜಿಸ್ಟ್ ( ಪುರಾತನ ಶಾಸ್ತ್ರಜ್ಞ) ತನ್ನ ಅತ್ಯಂತ ಜನಪ್ರಿಯ ಪುಸ್ತಕ “Chariots of The Gods” ಎಂಬಲ್ಲಿ ಇಂತಾ ಹಲವಾರು ಪುರಾತನ ಆಗಂತುಕ ದೇವತೆಗಳ ಪವಾಡವನ್ನು ವಿಸ್ತ್ರುತವಾಗಿ ವಿವರಿಸಿದ್ದಾನೆ…

ರಾಮಾಯಣ ಕಾಲದಲ್ಲೇ ಭಾರತದಿಂದ ಲಂಕೆಗೆ ಆಗಸದಲ್ಲಿ ಹಾರಬಲ್ಲ ರಾವಣನ ಪುಷ್ಪಕ ವಿಮಾನದ ಕಲ್ಪನೆ ರಾಮಾಯಣವನ್ನು ರಚನೆ ಮಾಡಿದ ಕಾಡಿನಲ್ಲಿದ್ದ “ಏನೂ ಅರಿಯದ” ಋಷಿಗಳಿಗೆ ಬಂದಿದ್ದಾದರೂ ಹೇಗೆ?…ನಾವೇ ಹೇಳುತ್ತೇವಲ್ಲ, ಚರಿತ್ರೆ ಮರುಕಳಿಸುತ್ತದೆ ಎಂದು…ಈ “ಹಿಸ್ಟರಿ ರಿಪೀಟ್ಸ್” ಆಗಿರಬಾರದೇಕೆ?

ಇತಿಹಾಸವೆಂದರೆ ಇದೇ ತಾನೆ? ಆಗಾಗ ನಡೆದ ಸತ್ಯಸಂಗತಿಗಳ ವರದಿ! ಇದೆಲ್ಲಾ ಕಟ್ಟುಕತೆ, ಊಹಾಪೋಹ , ಭ್ರಮೆ ಹೇಗಾಗಲು ಸಾಧ್ಯ?…

ವಿಜ್ಞಾನಿಗಳು ನಿನ್ನೆ ಸುಳ್ಳೆಂದಿದ್ದನ್ನು ತಾವೇ ಇಂದು ನಿಜ, ಸಾಧ್ಯ ಎನ್ನುತ್ತಾರೆ… ಹಾಗಾದರೆ, ಭೂಮಿ ಚಪ್ಪಟೆ, ಮತ್ತು ಈ ಲೋಕದ ಕೇಂದ್ರ ಎಂದು ಪ್ರತಿಪಾದಿಸುತ್ತಿದ್ದ ಹಳೇಕಾಲದ ವಿಜ್ಞಾನಿ/ ಪಂಡಿತವರ್ಗವನ್ನೇಕೆ ಇನ್ನೂ ನಂಬಬಾರದು?

(ಮುಂದುವರಿಯುವುದು…)

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply