ಅದೊಂದು ಕುರುಂಬರ ನಾಡು. ಆ ನಾಡಿನ ಮಲಬಾರ ಸೀಮೆಯಲ್ಲಿ ಪುಲಾಲ ಪಟ್ಟಣ.ದೇವರ ನಾಡಿನಲ್ಲಿ ಕುರಿ ಹಿಕ್ಕೆಯನ್ನು ಲಿಂಗವಾಗಿಸಿಕೊಂಡ ರಟ್ಟಮತದವರು ಸ್ಥಾಪಿಸಿದ ಪುರಾತನ ನಗರವಾಗಿತ್ತು.ಕಪ್ಪುಮಣ್ಣಿನ ಬಯಲುಸೀಮೆಯ ತೋಟದ ಮನೆಯ ಪಕ್ಕದ ತಿಪ್ಪೆಯಲ್ಲಿ ಚೋಟುಕಾಲಿನ ಕುಕ್ಕುಟಗಳು. ಕೆಬರಿ ಕೆಬರಿ ಫ್ರೆಶ್ ನಾನ್‌ವೆಜ್‌ನ್ನು ಫೋರ್ಕ್ ಚುಂಚಿನಿಂದ ಕುಕ್ಕಿ ಕುಕ್ಕಿ ತಿನ್ನುತ್ತಿದ್ದವು. ನಿಧಾನವಾಗಿ ಸರಿಗತ್ತಲಾಯಿತು. ಕೊಕ್… ಕೊಕ್…ಕೊಕ್.. ಕೊಕ್..ಎನ್ನುತ್ತಾ ಗೂಡಿಗೆ ಹೆಜ್ಜೆ ಹಾಕಿದವು. ಎರಡು ಕಡ್ಡಿ ಮುರಿದು ಪಕ್ಕೆಗೆ ಜೋಡಿಸಿದಂಗಿತ್ತು!. ಕೋಳಿಕೊತ್ತಳಿ ಸಂದಣಿಯು ಕೋಶಕವನ್ನು ತುಂಬಿಕೊಂಡವು.

ರೇಣುಕಾಳು ಜೋರಾಗಿ “ಮಾಳಿಂಗ..ಓ.ಮಾಳಿಂಗ…ಎಲ್ಲವೂ ಕೋಳಿಮರಿ ಬಂದಾವ ಇಲ್ಲಾ ನೋಡು, ಹಾಂಗೆ ಕೋಳಿ ಗೂಡು ಮುಚ್ಚು”

“ಆಯ್ತವ್ವ”

ಕೋಳಿಗಳನ್ನು ಗೂಡಿನಲ್ಲಿ ಬಂಧಿಸಿದನು.ಇದ್ದ ಒಂದೇ ಹುಂಜವು ಅತ್ತಿತ್ತ ಭಾಳ ಹಾರಾಡ್ತಿತ್ತು.ಅದನ್ನು ಧೈರ್ಯಮಾಡಿ ಹಿಡಿದನು. ಒಡ್ಡುಹೆಡಿಗೆ ತಗೊಂಡು ಮುಚ್ಚಿಟ್ಟನು.ಹುಂಜ ಏನು ಮಾಡ್ತಾ ಇದೆ ಅಂತ ಕಿಂಡಿಯಲ್ಲಿ ನೋಡಿದನು. ೫ ವರ್ಷದ ಮಾಳಿಂಗರಾಯನಿಗೆ   ಉಡುದಾರದ ಆರೋಹಣದ ತಟಸ್ಥ ಪೀಕಲಾಟ! ಮತ್ತೆ ಸಿಂಬಳದ ನಿರಂತರದ ಅವರೋಹಣದ ಕೈಇಸ್ತ್ರಿ!.

ನಿಧಾನವಾಗಿ ರಾತ್ರಿಗೆ ನೀರವತೆಯ ಮದವೇರುತ್ತಿತ್ತು. ಚಿಕ್ ಚಿಕ್ ಚಿಕ್ ಚಿಕ್ ಅಂತ ಒಂದೇ ಸವನೆ ಅಗೋಚರ ಶಬ್ದ ಕೇಳುತ್ತಿತ್ತು.ಮಾಳಿಂಗರಾಯನು ಮಾಡಿನಲ್ಲಿದ್ದ ಲಾಟೀನನ್ನು ಎತ್ತಿಕೊಂಡನು. ಭಾರವಾಗಿ ಪಡಸಾಲೆಯಲ್ಲಿ ಟಕ್ ಅಂತ ಇಟ್ಟನು.ಹಸಿರು ಸೀಮೆ ಎಣ್ಣೆಯು ಟನ್ ಅಂತ ಹೊಯ್ದಾಡಿತು.ಮೈಗೆ ಒಂದೇ ಸವನೆ ಕಾಡಿಗೆ ತೀಡಿಕೊಂಡ ಗಾಜು. ಸ್ವಚ್ಛಗೊಳಿಸಲು ಮಸಿಅರಿವೆಯೇ ಅರೆಬರೆ ಬಟ್ಟೆ.ಎಲ್ಲವೂ ಥಳ ಥಳ! ಬತ್ತಿಯ ಮೂಗನ್ನು ಮೇಲಕ್ಕೆ ಹಿಂಡಿದನು. ಬೆಂಕಿಪೊಟ್ಟಣದ ಕಡ್ಡಿ ಗೀರಿದನು. ಕರ್ಪುರದಂತೆ ಬತ್ತಿಯು ಧಗ ಧಗ ಉರಿಯುತ್ತಿತ್ತು. ಮಾಳಿಂಗರಾಯನು ಲಾಟೀನಿನ ಕಿವಿ ಹಿಂಡಿದನು. ಗಾಜನ್ನು ಹಾಕಿದನು. ಸೂರ್ಯನನ್ನೇ ನಾಚುವಷ್ಟು ಬೆಳಕಾಯಿತು.ಹೊಗೆಯು ಕಣ್ಮರೆಯಾಯಿತು. ಪಾಟಿಚೀಲದಲ್ಲಿದ್ದ ಪುಸ್ತಕವನ್ನು ಮಾಳಿಂಗರಾಯನು ತೆರೆದನು.

ಅಷ್ಟರಲ್ಲಿ ರೋಮಂಥಕ ಒಡೆಯ ಬೀರನು ಕುರಿಗಳನ್ನು ದಡ್ಡಿಗೆ ಹಾಕುತ್ತಾ

“ಲೇ..ರೇಣುಕಾ..ಕಾಲಿಗೆ ಚಂಬು ನೀರು ಕೊಡು?”

“ಆಯ್ತು”

ಸೆರಗು ಹೊದ್ದುಕೊಂಡು ರೇಣುಕಾಳು ನೀರನ್ನು ನೀಡಿದಳು.ಬೀರನು ರೇವಣಸಿದ್ಧನಿಗೆ ನಮಸ್ಕರಿಸಿ,ತಾಳೆಗರಿಯಲ್ಲಿದ್ದ ರಟ್ಟಮತವನ್ನು ಮುಂದಿಟ್ಟುಕೊಂಡನು.ಎದುರಿಗೆ ಮಗ ಮಾಳಿಂಗರಾಯ. ಆವತ್ತು ಆಗಸದಲ್ಲಿ ಪೂರ್ಣ ಚಂದಿರ.ಉಡುಗಣ ವೇಷ್ಟಿತ ಹಾಲುಗಲ್ಲದ ಚಂದಪ್ಪ.

ಮಾಳಿಂಗರಾಯನಿಗೆ ಹಾಲುಗಲ್ಲದವನನ್ನು ನೋಡುವಾಸೆ.

“ಅವ್ವ….ಬಾರ ಬೇ…ಚಂದಪ್ಪ ಬಂದಾನ್.ದೌಡು ಬಾ.”

“ಬಂದೆ..”

ರೇಣುಕಾಳು ಕೊರವರ ಚಾಪೆ, ಮುಚಗಾರರ ಕೌದಿಯನ್ನು ಆವಾರದಲ್ಲಿ ಹಾಸಿದಳು.ಮಗ ಮಾಳಿಂಗನು ಅವ್ವನ ಕಂಕುಳಲ್ಲಿ ಆಸೀನನಾದನು.

“ಅವ್ವ…ಚಂದಪ್ಪ ಮ್ಯಾಲೆ ಕಥೆ ಹೇಳು..ಹಾಂಗೆ ತಲೆ ಸವರು”

“ಆಯ್ತು ನನ್ನ ರಾಜ,ಒಂದು ಒಡಗಟ್ಟು ಹೇಳ್ತೀನಿ..ಅಜ್ಜನ ರೊಕ್ಕ ಎಣಿಸಲಾರೆ,ಅಮ್ಮನ ಸೀರೆ ಮಡಿಚಲಾರೆ,ಹಿಂಗಂದ್ರೆ ಏನು ಮಾಳಿಂಗ?.”

ಹಾಲುಗಲ್ಲದ ನಗುವಿನಲ್ಲಿ, “ ಬೇ.. ಅವ್ವ..ಇನ್ನೊಮ್ಮೆ ಹೇಳು?”

“ನೀ ಚಂದಗೆ ಕೇಳಾ ಮತ್ತಾ,ಅಜ್ಜನ ರೊಕ್ಕ ಎಣಿಸಲಾರೆ,ಅಮ್ಮನ ಸೀರೆ ಮಡಚಲಾರೆ.”

ಮಾಳಿಂಗರಾಯನು ಏಕತಾನದಿಂದ, “ಅವ್ವ…ಅವ್ವ..ಆಕಾಶ ನೋಡು,ಅಜ್ಜನ ರೊಕ್ಕ ಎಣಿಸಲಾರೆ ಅಂದರೆ ಚುಕ್ಕೆಗಳು, ಅಮ್ಮನ ಸೀರೆ ಮಡಚಲಾರೆ ಅಂದರೆ ಮುಗಿಲು.”

“ಹೌದು” ನನ್ಮಗನೇ ಎನ್ನುತ್ತಲೇ ರೇಣುಕಾಳು ಚಂದಪ್ಪನ ತೋರಿಸುತ್ತಾ ಹಾಡುತ್ತಾಳೆ.

ಚಂದಪ್ಪ ಚಂದಪ್ಪ ಚೆಲುವ,

ಚುಂಗ್ ಬಿಟ್ಕೊಂಡು ಬರುವ,

ಎಂಟು ಎತ್ತಿನ ಬಂಡಿ,

ಬಂಡಿ ಮ್ಯಾಲ ನವಿಲು,

ನವಿಲು ಪುಚ್ಚ ತೆರೆದು,

ಚಿಗರಿ ಕೋಡಿಗೆ ಹಾಕಿ,

ಚಿಗರಿ..ಚಿಗರಿ..ಚಿಕ್ಕಪ್ಪ,

ಅಂಬರಿ ಗುಗ್ಗರಿ ಮುಕ್ಕಪ್ಪ,

ಲೊಟ್ಟನೆ ಮಗನ ಗಲ್ಲಕೆ ಉಪ್ಪಾ ಕೊಡ್ತಾಳ.

“ಮಗನೇ,ಲಕ್ಷಗೊಟ್ಟು ನೋಡು, ಚಂದಿರನ ಅಂಗಳದಲ್ಲಿ ಚಿಗರಿ ಕಾಣುತ್ತೆ.ನೋಡು…ನೋಡು…ದಿಟ್ಟಿಸಿ ನೋಡು.”

“ಹೌದ ಬೇ… ಅವ್ವ..ಚಿಗರಿ ಕಾಣುತ್ತಿದೆ ಆದರೆ ಚಂದಪ್ಪ ಬಂದಾಗ ಸೂರ್ಯ ಯಾಕೆ ಮೂಡುವುದಿಲ್ಲ?ಇಬ್ಬರಿಗೂ ಜಗಳ ಆಗಿದೆಯೇನು?.”

“ಎನು ಕೇಳತಿ,ಆ ಬಾಡ್ಯಾಗಳದು.ಈ ಚಂದಪ್ಪ ಮತ್ತು ಸೂರ್ಯ,ಇವರಿಬ್ಬರು ಭೂಮಿ ತಾಯಿಯ ಮಕ್ಕಳು.ಸೂರ್ಯನು ತಾಯಿ ಮಾತನ್ನು ಕೇಳುತ್ತಿರಲಿಲ್ಲ.ಗಣ..ಗಣ….ತಿರುಗುತ್ತಿದ್ದನು.ಒಂದು ದಿನ ಸೂರ್ಯನ ಮೇಲೆ ತಾಯಿಗೆ ಸಿಟ್ಟು ಬಂದಿತು.ಲೋ..ಭಾಡಕೂ.. ಬರೀ ಗಣ..ಗಣ..ತಿರುಗುತ್ತಿ.ಬಹಳ ಉರಿಯುತ್ತಿರುವೆ.ನೀನು ಉರಿದುಕೊಂಡು ಹೋಗು.ಉರಿದುಕೊಂಡು ಬಾ.ಆಯ್ತು..ಬೇ.. ಅವ್ವ…ಎನ್ನುತ್ತಲೇ,ಸೂರ್ಯನು ಉರಿದುಕೊಂಡೇ ಹೋದನು.ಚಂದಪ್ಪನು ತಣ್ಣಗೆ ತಾಯಿಗೆ ಕೇಳಿದನು.ಅವ್ವ… ನಾನು ಏನ್ ಮಾಡಲಿ.ತಾಯಿಯು ಹೇಳಿದಳು,ಚಂದಪ್ಪ…ನೀನು ಸಂಪನ್ನನಿರುವಿ,ನೀನು ತಂಪಾಗಿರು,ತಂಪು ಇದ್ದಾಗ ಬಾ.ಆಯ್ತು ಅವ್ವಾ..ಎನ್ನುತಲೇ ಹೋದವನು ತಂಪತ್ತಿನಲ್ಲೇ ಬಂದನು.”

 ಅಡ್ಡಬಾಯಿ ಹಾಕಿದ ಬೀರನು,“ರಟ್ಟಮತ ಪಂಚಾಂಗದಲ್ಲಿ ಚಂದ್ರನ ಬಗ್ಗೆ ಎಲ್ಲ ಇದೆ.ಪಂಚಾಂಗವು ಐದು ಅಂಗಗಳನ್ನು ಹೊಂದಿದ ಕಾಲಜ್ಞಾನ. ಅವು ಯಾವುವೆಂದರೆ ತಿಥಿ,ವಾರ,ನಕ್ಷತ್ರ,ಯೋಗ ಹಾಗೂ ಕರಣಗಳು.ಒಟ್ಟು ೩೦ತಿಥಿಗಳು.ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷಗಳಲ್ಲಿ ೩೦ತಿಥಿಗಳು ಸಮವಾಗಿ ಹಂಚಿಕೆಯಾಗಿವೆ.ಪಾಡ್ಯದಿಂದ(ಪ್ರತಿಪದೆ) ಹುಣ್ಣಿಮೆ ತನಕ ಮೊದಲ ೧೫ ದಿನ(ತಿಥಿ)ಗಳನ್ನು ಶುಕ್ಲ ಪಕ್ಷ ಎನ್ನುವರು.ಪಾಡ್ಯ ದಿಂದ ಅಮವಾಸ್ಯೆಯವರೆಗೆ ನಂತರದ ೧೫ದಿನ(ತಿಥಿ)ಗಳನ್ನು ಕೃಷ್ಣ ಪಕ್ಷವೆನ್ನುವರು.ಹುಣ್ಣಿಮೆ ತಿಥಿ ಆದಮೇಲೆ ಕೃಷ್ಣಪಕ್ಷದಲ್ಲಿ  ದ್ವಿತೀಯ ತಿಥಿಯಾದ ಬಿದಿಗೆ ದಿನದಂದು ಚಂದಿರನನ್ನು ನೋಡೋದೇ ಕಣ್ಣಿಗೆ ಹಬ್ಬ.ಇವತ್ತು ನೀವೆಲ್ಲ ನೋಡ್ತಾ ಇರೋದು ಬಿದಿಗೆ ಚಂದಿರ.”

ಮಾಳಿಂಗರಾಯನು ನಗುತ್ತಲೇ, “ ಅಪ್ಪಾ, ನೀ ಪಂಚಾಂಗ ಓದಿಕೊಂಡಿ.ಜನರಿಗೆ ಹೇಳಿದ್ದರೇ ಮನುಷೈ ಆಗುತ್ತಿದ್ದೆ.ಶಾಣ್ಯಾ ಇದ್ದಿದ್ರೆ ಕುರಿ ಕಾಯ್ತಿದ್ದಿಲ್ಲ.”

“ನಿನ್ನ ಪ್ರಕಾರ ಶಾಲೆ ಕಲಿತವರು ಮಾತ್ರ ಶಾಣ್ಯಾರು?, ನಿಮ್ಮ ಅಪ್ಪ ಯಾರಲೇ?”

“ಕೂಲ್ ಡೌನ್ ಅಪ್ಪ.ಸಿಟ್ಟಿಗೆ ಬರಬೇಡ.ನೀನೇ ನನ್ನಪ್ಪ.ದೊಡ್ಡವ ಆಗ್ತೀನಿ,ಅವಾಗ ಮಾತಾಡ್ತೀನಿ.”

“ಆಯ್ತು,ವಾದವು ಮುಗಿಯದ ಸಂತೆ.ಬರ್ರಿ..ಬರ್ರಿ..ಎಲ್ಲರೂ ಊಟ ಮಾಡೋಣ”.ಬೆಳದಿಂಗಳಿನಲ್ಲಿ ಎಲ್ಲರೂ ಊಟವನ್ನು ಮಾಡಿದರು.

  1. https://en.wikipedia.org/wiki/Panchangam
  2. http://kannada.panchangam.org/
  3. https://panchang.astrosage.com/?language=ka
  4. http://astrology.aryabhatt.com/astrology_panchang.asp
ಭಾರ್ಗವ ಹೆಚ್ ಕೆ
Leave a replyComments (1)
  1. Usha July 9, 2020 at 6:10 pm

    Sogasada niroopane

    ReplyCancel

Leave a Reply