ಜೀವಿಗಳ ಉಗಮದ ವಿಷಯಕ್ಕೆ ಬಂದರೆ, ನಿಸರ್ಗ ವಿಜ್ಞಾನಿಯೊಬ್ಬ ಸಾವಯವ ಜೀವಿಗಳ ಪರಸ್ಪರ ಸಂಬಂಧ, ಸಹವಾಸ, ಸಾಮ್ಯತೆ, ವಾಸದ ಪ್ರದೇಶ, ವಾಸಸ್ಥಳದ ಅನುಗುಣವಾಗಿ ಆಗಿರಬಹುದಾದ ಬದಲಾವಣೆ ಹೀಗೆ ಇನ್ನೂ ಹಲವಾರು ಅಂಶಗಳ ಆಧಾರದ ಮೇಲೆ, ಎಲ್ಲಾ ಜೀವಿಗಳೂ ಒಮ್ಮೆಗೇ ಸ್ವತಂತ್ರವಾಗಿ ರೂಪುಗೊಂಡಿಲ್ಲ. ಬದಲಿಗೆ ಬೇರೊಂದು ಜೀವಿಯಿಂದ ರೂಪಾಂತರಗೊಂಡು ಬಂದಿದೆ ಎನ್ನುವ ನಿರ್ಧಾರಕ್ಕೆ ಬರಲು ಸಾಕಷ್ಟು ಆಧಾರಗಳಿವೆ. ಆದರೂ ಅಂತಹುದೊಂದು ನಿರ್ಧಾರ, ಸರಿಯಾದ ಸಾಕ್ಷಿಯಿದ್ದರೂ, ನಿಸರ್ಗದ ಲಕ್ಷಾಂತರ ಜೀವಿಗಳು ತಮ್ಮ ಇಂದಿನ ರೂಪಕ್ಕೆ ಬರಲು, ತಮ ತಮಗೇ ವಿಶಿಷ್ಟ ಎನಿಸುವ ಗುಣ ವಿಶೇಷಣಗಳನ್ನು ಹೊಂದಿರುವುದಕ್ಕೆ, ಬೇಕಾದ ಬದಲಾವಣೆಗಳಿಗೆ ಕಾರಣ ಏನು ಎನ್ನುವ ವಿವರಣೆಯನ್ನು ನೀಡದೆ ಹೋದ ಪಕ್ಷದಲ್ಲಿ ಬಿದ್ದು ಹೋಗುತ್ತದೆ.

ನಾನೊಬ್ಬ ನೈಸರ್ಗಿಕವಾದಿ .  ಒಮ್ಮೆ ಹೆಚ್. ಎಂ. ಎಸ. ಬೀಗಲ್ ನಲ್ಲಿ ಪಯಣಿಸುತ್ತಿದ್ದಾಗ, ದಕ್ಷಿಣ ಅಮೆರಿಕಾದ ನಿವಾಸಿಗಳ ಬಗ್ಗೆ ಒಂದಷ್ಟು  ಯೋಚನೆ ಬಂತು . ಅಲ್ಲಿಯ ನಿವಾಸಿಗಳು ಅಲ್ಲಿ ಹರಡಿ ಹಂಚಿಕೊಂಡಿರುವ ಬಗೆ ಹೇಗಿರಬಹುದು. ಇಂದಿನ ನಿವಾಸಿಗಳಿಗೂ ಹಿಂದಿನ ನಿವಾಸಿಗಳಿಗೂ ಇರಬಹುದಾದ ಭೌಗೋಳಿಕ ಸಂಬಂಧಗಳೇನು? ಎನ್ನುವ ಪ್ರಶ್ನೆ  ನನ್ನನು ಕಾಡಿತು.  ಈ ಪ್ರಶ್ನೆಯ ಉತ್ತರವನ್ನು ಹುಡುಕುತ್ತಾ  ಹೊರಟ ನನಗೆ, ಇದರ ಉತ್ತರದಲ್ಲಿ, ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯಿತು ಎನ್ನುವ ಮಹಾ ರಹಸ್ಯವನ್ನು ಬಿಡಿಸುವ ಉತ್ತರವೂ ಆಗಿ ಕಂಡಿತು.  ೧೮೩೭ ರಲ್ಲಿ ಹಿಂದಿರುಗಿ ಬರುವಾಗ, ನನ್ನ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ, ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ಸಂಗ್ರಹಿಸಿ, ಕೂಲಂಕುಷವಾಗಿ ಪರಿಶೀಲಿಸಿ ನೋಡಬೇಕು. ಹೀಗೆ ಮಾಡಿದರೆ ಉತ್ತರ ಸಿಕ್ಕರೂ ಸಿಗಬಹುದು ಎನ್ನುವ ಭಾವನೆ ಮನದಲ್ಲಿ ಮೂಡಿತು.  ಐದು ವರುಷಗಳ ಕಾಲ ಈ ರೀತಿ ಸಾಕ್ಷ್ಯ ಸಂಗ್ರಹಣೆ ಮಾಡಿದ ನನಗೆ, ಕೆಲವೊಂದು ಊಹೆಗಳನ್ನು ಮಾಡುವುದಕ್ಕೂ, ಆ ಊಹೆಗಳ ಆಧಾರದ ಮೇಲೆ ನಿರ್ಧರಿತವಾಗಬಹುದಾದ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳುವುದಕ್ಕೂ ಸಾಧ್ಯವಾಯಿತು.  ೧೮೪೪ರಲ್ಲಿ ಇವುಗಳ ಆಧಾರದ ಮೇಲೆ, ಒಂದು  ಜೀವಿಗಳ ಉಗಮದ ಕುರಿತು ಒಂದು ಊಹೆಯನ್ನು ರಚಿಸಲು ಸಾಧ್ಯವಾಯಿತು. .  ಮೊದಲ ದಿನದಿಂದ ಈ ದಿನದವರೆಗೂ ಇದೇ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಕೆಲಸ ಮಾಡುತ್ತಾ ಬಂದಿದ್ದೆನಾದ್ದರಿಂದ,  ಈ ನನ್ನ ಪ್ರಾಸ್ತಾವಿಕ ಊಹೆಯು ಸರಿಯಾಗಿರುವ ಸಂಭವವೇ ಹೆಚ್ಚೆಂದು ಭಾವಿಸಿದ್ದೇನೆ. ಈ ವೈಯುಕ್ತಿಕ ವಿವರಗಳನ್ನು ಇಲ್ಲಿ ಹೇಳಿರುವ ಉದ್ದೇಶವೇ ಅದು. ನಾನೂ ಯಾವುದೊ ಗಡಿಬಿಡಿಯಿಂದಾಗಲೀ ತಾರಾತುರಿಯಿಂದಾಗಲೀ ನನ್ನ ಊಹೆಗಳನ್ನು ಮಂಡಿಸಿಲ್ಲ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಈ ಊಹೆಯನ್ನು ಮಂಡಿಸಿದ್ದೇನೆ.

ಈ ಹೊತ್ತಿಗೆ  ನನ್ನ ಕೆಲಸ ಬಹುಪಾಲು ಮುಗಿಯುತ್ತಾ ಬಂದಿದ್ದರೂ, ಪೂರ್ಣವಾಗಿ ಮುಗಿಸಲು ಇನ್ನೂ ಎರಡು ಮೂರು ವರುಷಗಳು ಬೇಕಾಗಿತ್ತು. ಈ ಸಮಯದಲ್ಲಿ ನನ್ನ ಆರೋಗ್ಯದ ಸಮಸ್ಯೆಯೂ ಕಾಡಿದ್ದರಿಂದ, ಇದುವರೆಗಿನ ನನ್ನ ಸಂಶೋಧನೆಯನ್ನು ಹಾಗೆಯೇ ಸಾರಾಂಶ ರೂಪದಲ್ಲಿ  ಪ್ರಕಟಿಸಿದೆ. ನಿಜ ಹೇಳಬೇಕೆಂದರೆ, ಇದೇ  ಸಮಯದಲ್ಲಿ ವ್ಯಾಲೇಸ್ ಎನ್ನುವ ಇನ್ನೋರ್ವ ನಿಸರ್ಗ ವಿಜ್ಞಾನಿ ಮಲಯಾ  ದ್ವೀಪ ಸಮೂಹದ ನೈಸರ್ಗಿಕ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದರು. ಅವರ ಅಧ್ಯಯನದ ಸಮಯದಲ್ಲಿ, ಜೀವಿಗಳ ಉಗಮದ ಬಗ್ಗೆ, ಹೆಚ್ಚೂ ಕಮ್ಮಿ ನಾನು ಕಂಡುಕೊಂಡ ಸತ್ಯವನ್ನೇ ಅವರೂ ಪ್ರತಿಪಾದಿಸುತ್ತಿದ್ದರು. ತಮ್ಮ ಈ ಅಧ್ಯಯನದ ಟಿಪ್ಪಣಿಯನ್ನು ಅವರು ನನಗೆ ಕಳಿಸಿ, ಅದನ್ನು ಸರ್ ಚಾರ್ಲ್ಸ್ ಲೈಲ್ ಅವರಿಗೆ ಕಳಿಸುವಂತೆ ಕೇಳಿಕೊಂಡಿದ್ದರು. ಸರ್ ಚಾರ್ಲ್ಸ್ ಲೈಲ್ ಅದನ್ನು ಲಿನಿಯನ್ ಸೊಸೈಟಿಗೆ ಕಳಿಸಿಕೊಟ್ಟರು.  ಅದು ಸೊಸೈಟಿಯ ಜರ್ನಲ್ ನ ಮೂರನೇ ಸಂಪುಟದಲ್ಲಿ ಪ್ರಕಟವಾಯಿತು. ನನ್ನ ಕೆಲಸದ ಬಗ್ಗೆ ತಿಳಿದಿದ್ದ ಸರ್ ಲೈಲ್ ಮತ್ತು ನನ್ನ ಪ್ರಬಂಧವನ್ನು ಓದಿದ್ದ ಡಾ.ಹೂಕರ್, ಇಬ್ಬರೂ, ನನ್ನ ಇದುವರೆಗಿನ ಕೆಲಸ ಪ್ರಕಟಿಸಲು ಅರ್ಹವೆಂದು ಅಭಿಪ್ರಾಯ ಪಟ್ಟರು. ಹಾಗಾಗಿ, ನಾನು ನನ್ನ ಈ ಪ್ರಬಂಧವನ್ನು  ವಾಲೇಸ್ ಅವರ ಟಿಪ್ಪಣಿ ಮತ್ತು ನನ್ನ  ಮೊದಲ ಪ್ರತಿಯ ಕೆಲವು ವಿಷಯಗಳೊಂದಿಗೆ ಪ್ರಕಟಿಸಿದೆ.

ನನ್ನ ಈ ಪ್ರಭಂದದಲ್ಲಿನ  ಊಹೆಗಳು, ನಿರ್ಧಾರಗಳು ಸಂಪೂರ್ಣ ಸರಿ ಇಲ್ಲದಿರಬಹುದು.  ಆದರೆ ನಾನು ಈ ನಿರ್ಧಾರಕ್ಕೆ ಬರಲು ಅತ್ಯಂತ ವಿಶ್ವಾಸಾರ್ಹ ಮಾಹಿತಿಗಳನ್ನೇ ಆಧರಿಸಿದ್ದೇನೆ. ಈ ಬಗ್ಗೆ ಓದುಗರು ನನ್ನಲ್ಲಿ ನಂಬಿಕೆ ಇಡಬೇಕು. ಆದರೆ ನಾನು ನಿರ್ಧಾರಕ್ಕೆ ಬರಲು ಕಾರಣವಾದ ಸಂಗತಿಗಳು ಮತ್ತು ಅದನ್ನು ನಾನು ವಿಶ್ಲೇಷಿಸಿದ ರೀತಿಯ ಸಂಪೂರ್ಣ ವಿವರಗಳನ್ನು ಓದುಗರಿಗೆ ನೀಡಬೇಕಿತ್ತು.  ಈ ಪ್ರಕಟಣೆಯಲ್ಲಿನ ಕೆಲವು ಅಂಶಗಳು ನನ್ನ ವಾದಕ್ಕೆ ಪೂರಕ ಸಾಕ್ಷ್ಯವನ್ನು ನಿಸ್ಸಂಶಯವಾಗಿ ಒದಗಿಸುವಲ್ಲಿ ಸೋತಿದ್ದವು. ಅಥವಾ ಕೆಲವೊಮ್ಮೆ ನನ್ನ ನಿರ್ಧಾರದ ವಿರುದ್ಧ ನಿರ್ಧಾರದತ್ತ ಕೊಂಡೊಯ್ಯುತ್ತಿದ್ದವು. ಅದಕ್ಕಾಗಿ ಸಂಪೂರ್ಣ ವಿವರಗಳನ್ನೊಳಗೊಂಡ ಪುಸ್ತಕವನ್ನು ಪ್ರಕಟಿಸಲೇಬೇಕಿತ್ತು.  ಈ ಸಂಧರ್ಭದಲ್ಲಿ ನನಗೆ ಸಹಾಯ ಮಾಡಿದ ಹಲವಾರು ನಿಸರ್ಗ ವಿಜ್ಞಾನಿಗಳಿಗೆ (ಕೆಲವರನ್ನು ನನಗೆ ವೈಯುಕ್ತಿಕವಾಗಿ ಪರಿಚಯವಿಲ್ಲದೇ ಇದ್ದವರೂ ಇದ್ದಾರೆ) ನಾನು ಧನ್ಯವಾದಗಳನ್ನು ತಿಳಿಸಲೇಬೇಕಿದೆ.  ಅದರಲ್ಲೂ ಡಾ. ಹೂಕರ್ ನನ್ನೊಡನೆ ಹದಿನೈದು ವರುಷಗಳಿಂದ ತಮ್ಮ ಅಪರಿಮಿತ ಜ್ಞಾನ ಮತ್ತು ತಮ್ಮ ತರ್ಕಬದ್ಧ ನಿರ್ಣಯ ಸಾಮರ್ಥ್ಯದಿಂದ ನನ್ನ ಕೆಲಸದಲ್ಲಿ ಸಹಾಯ ಮಾಡಿದ್ದಾರೆ.

ಜೀವಿಗಳ ಉಗಮದ ವಿಷಯಕ್ಕೆ ಬಂದರೆ, ನಿಸರ್ಗ ವಿಜ್ಞಾನಿಯೊಬ್ಬ ಸಾವಯವ ಜೀವಿಗಳ ಪರಸ್ಪರ ಸಂಬಂಧ,  ಸಹವಾಸ, ಸಾಮ್ಯತೆ, ವಾಸದ ಪ್ರದೇಶ, ವಾಸಸ್ಥಳದ ಅನುಗುಣವಾಗಿ ಆಗಿರಬಹುದಾದ ಬದಲಾವಣೆ ಹೀಗೆ ಇನ್ನೂ ಹಲವಾರು ಅಂಶಗಳ ಆಧಾರದ ಮೇಲೆ,  ಎಲ್ಲಾ ಜೀವಿಗಳೂ ಒಮ್ಮೆಗೇ ಸ್ವತಂತ್ರವಾಗಿ ರೂಪುಗೊಂಡಿಲ್ಲ. ಬದಲಿಗೆ ಬೇರೊಂದು ಜೀವಿಯಿಂದ ರೂಪಾಂತರಗೊಂಡು ಬಂದಿದೆ ಎನ್ನುವ ನಿರ್ಧಾರಕ್ಕೆ ಬರಲು ಸಾಕಷ್ಟು ಆಧಾರಗಳಿವೆ.  ಆದರೂ ಅಂತಹುದೊಂದು ನಿರ್ಧಾರ, ಸರಿಯಾದ ಸಾಕ್ಷಿಯಿದ್ದರೂ, ನಿಸರ್ಗದ ಲಕ್ಷಾಂತರ ಜೀವಿಗಳು  ತಮ್ಮ ಇಂದಿನ ರೂಪಕ್ಕೆ ಬರಲು, ತಮ ತಮಗೇ  ವಿಶಿಷ್ಟ ಎನಿಸುವ ಗುಣ ವಿಶೇಷಣಗಳನ್ನು ಹೊಂದಿರುವುದಕ್ಕೆ, ಬೇಕಾದ ಬದಲಾವಣೆಗಳಿಗೆ ಕಾರಣ ಏನು ಎನ್ನುವ ವಿವರಣೆಯನ್ನು ನೀಡದೆ ಹೋದ ಪಕ್ಷದಲ್ಲಿ  ಬಿದ್ದು ಹೋಗುತ್ತದೆ.  ವಿಜ್ಞಾನಿಗಳು ಇಂಥ ಬದಲಾವಣೆಗೆ, ಹೊರಗಣ ಕಾರಣಗಳಾದ ವಾತಾವರಣ ಬದಲಾವಣೆ, ಆಹಾರ ಕ್ರಮ ದಂಥ ಕಾರಣಗಳನ್ನು ಮಾತ್ರ ನೀಡಬಲ್ಲರು.  ಕೆಲವು ಉದಾಹರಣೆಗಳಲ್ಲಿ ಇದು ಸತ್ಯವಾದರೂ, ಬಹಳಷ್ಟು ಬಾರಿ ಬಾಹ್ಯ ಕಾರಣಗಳಿಂದ ಬದಲಾವಣೆಯಾಗುತ್ತದೆ ಎನ್ನುವ ಮಾತನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಉದಾಹರಣೆಗೆ, ಮರಕುಟಿಗ ಹಕ್ಕಿಗೆ, ಪಾದ ಕೊಕ್ಕು, ಬಾಲ ನಾಲಿಗೆಯಂತ ಅಂಗಗಳು, ಮರದ ತೊಗಟೆಯ ಕೆಳಗಿರುವ ಕೀಟಗಳನ್ನು ಹಿಡಿಯುವ ಸಲುವಾಗಿಯೇ ಬದಲಾವಣೆಯಾಗಿರುವುದು. ಅಥವಾ  ಮರದ ಮೇಲಿನ ಹಾವಸೆ, ಕೆಲವು ಜಾತಿಯ ಮರಗಳಿಂದ ತನಗೆ ಬೇಕಾದ ಆಹಾರ ಪಡೆಯುವುದು, ಕೆಲವೇ ಪ್ರಭೇದದ ಹಕ್ಕಿಗಳಿಂದ ಅವುಗಳ ಬೀಜ ಪ್ರಸರಣೆಯಾಗುವುದು, ಬೇರೆ ಬೇರೆ ಲಿಂಗಗಳ ಹೂವುಗಳೇ ಬೇರೆ ಬೇರೆಯಾಗಿರುವುದು, ಮತ್ತು ಅವುಗಳ ಪರಾಗ ಸ್ಪರ್ಶಕ್ಕೆ ವಿಶಿಷ್ಟ ಪ್ರಭೇದದ ಕೀಟಗಳಿಗೆ ಮಾತ್ರ ಸಾಧ್ಯವಾಗುವುದು, ಇಂತಹ ವಿಷಯಗಳಿಗೆ ಕೇವಲ ಬಾಹ್ಯ ಪರಿಣಾಮಗಳು ಕಾರಣ ಎಂದು ಒಪ್ಪಲಾಗುವುದಿಲ್ಲ. ಇಂಥಹುದೇ ಪರಿಸ್ಥಿತಿಯಲ್ಲಿ ಈ ಹಾವಸೆಯೊಂದಿಗೆ ಸಂಬಂಧವಿರುವ ಹಾವಸೆಯ ವರ್ಗದ ಇನ್ನೊಂದು ಪಾಚಿ ಬೇರೆ ರೀತಿಯಾಗಿ ಬೆಳವಣಿಗೆ ಹೊಂದಿರುವುದೂ  ಕಂಡುಬರುತ್ತದೆ. ಹಾಗಾಗಿ ಇಲ್ಲಿ ಊಹೆಗಳನ್ನು ಮಾಡಲು ಎಚ್ಚರಿಕೆ ಬೇಕು.  

ಸೃಷ್ಟಿಯ ರಹಸ್ಯ (ವೇಸ್ಟಿಜೆಸ್ ಆಫ್ ಕ್ರಿಯೇಷನ್) ಪುಸ್ತಕದ ಲೇಖಕ ಹೇಳುವಂತೆ, ಹಲವಾರು ತಲೆಮಾರುಗಳ ನಂತರ, ಹಕ್ಕಿಯೊಂದು ಈಗಿನ ಮರಕುಟಿಗ ಹಕ್ಕಿಗೆ ಜನ್ಮ ನೀಡಿತು ಅಥವಾ ಪಾಚಿಯೊಂದು ಈಗಿನ ಥರದ ಹಾವಸೆಯಾಗಿ ರೂಪಾಂತರಗೊಂಡಿತು ಎಂದು ಹೇಳುವುದಕ್ಕೆ, ಅವುಗಳ ರಚನೆ ಅವುಗಳ ಈಗಿನ ವಿಶಿಷ್ಟ ಶಕ್ತಿಗಳಿಗೆ ಕಾರಣವಾಗಿರುವುದಕ್ಕೆ ಸಾಧ್ಯವಾಯಿತು. ಎಂದರೆ ಅದನ್ನು ಒಪ್ಪಲಾಗುವುದಿಲ್ಲ. ಸಾವಯವ ಜೀವಿಗಳ ಪರಸ್ಪರಾವಲಂಬನೆ, ಜೈವಿಕ ಪರಿಸ್ಥಿತಿಗೆ ಕಾರಣವಾದ ಭೌತಿಕ ಪರಿಸ್ಥಿತಿಗಳ ಬಗ್ಗೆ ಇಲ್ಲಿ ನಮಗೆ ಯಾವುದೇ ಸುಳಿವು ತಿಳಿಯುವುದಿಲ್ಲ.

ಹಾಗಾಗಿ,  ಜೀವಿಗಳ ಈ ಬದಲಾವಣೆ ಮತ್ತು ಪರಸ್ಪರಾವಲಂಬನೆಯ ಬಗ್ಗೆ ನಾವು ಆಳವಾಗಿ ತಿಳಿಯಬೇಕಿದೆ. ಮೊದಲಿಗೆ ಸಾಕು ಪ್ರಾಣಿಗಳು ಮತ್ತು ನಾವು ವ್ಯವಸಾಯ ಮಾಡುವ ಸಸ್ಯಗಳ ಕೂಲಂಕಷ ಅಧ್ಯಯನ  ಈ ಸಮಸ್ಯೆಗೆ ಉತ್ತರ ನೀಡಬಹುದೆನ್ನುವ ದೃಷ್ಟಿಯಿಂದ ಕೆಲಸ ಶುರುಮಾಡಿದೆ. ನನ್ನ ಈ ಊಹೆ ಸುಳ್ಳಾಗಲಿಲ್ಲ. ಈ ಒಗಟನ್ನು ಬಿಡಿಸುವಲ್ಲಿ, ಸಾಕುಪ್ರಾಣಿಗಳು ಮತ್ತು  ಮನುಷ್ಯ ಬೆಳೆಯುವ ಸಸ್ಯಗಳು ಒಗ್ಗಿಕೊಳ್ಳುವ ರೀತಿ, ಮತ್ತು ಈ ಒಗ್ಗಿಕೊಳ್ಳುವಿಕೆಯ ಪ್ರಕ್ರಿಯಿಯೆಯಲ್ಲಿ ಅವುಗಳಲ್ಲಿ ಆಗಬಹುದಾದ ಬದಲಾವಣೆ, ಸತ್ಯದ ಬಳಿ ಸಾಗುವ  ಬಲವಾದ ಸುಳಿವನ್ನು ನೀಡಿತು.

ಮೊದ್ಮಣಿ
Leave a replyComments (1)
  1. ರವೀಂದ್ರ ಹೆಗಡಾಳ July 6, 2020 at 1:42 pm

    ಕನ್ನಡದಲ್ಲಿ ವಿಜ್ಞಾನದ ಬಗ್ಗೆ ಲೇಖನಗಳು ಬಹಳ ಕಡಿಮೆ ಆಗಿವೆ.. ಒಳ್ಳೆಯ ಬರವಣಿಗೆ ಗುರುಗಳೇ ಹೀಗೆ ಬರೀತಾ ಇರಿ. ಬೆರಗು ಹೊಸ ಪ್ರಯತ್ನಕ್ಕೆ ಅಭಿನಂದನೆಗಳು.

    ReplyCancel

Leave a Reply