ನಾವು ಮಾನವರು ಎಷ್ಟೇ ಮುಂದುವರಿದರು, ಕೆಲ ವಿದ್ಯಮಾನಗಳು ನಮಗಿಂತಲೂ ಹೆಚ್ಚು ಕೌತುಕತೆಯನ್ನು ಹೊಂದಿರುತ್ತವೆ. ಸಾಗರವ ದಾಟಬಲ್ಲ, ಆಕಾಶಕ್ಕೆ ಹಾರಬಲ್ಲ, ಭುವಿಯ ಅಂತರಾಳವ ಅರಿಯಬಲ್ಲ ಮನುಜಗೆ, ಅವುಗಳ ಅಧ್ಯಯನ ಮಾಡಲು ವಿಶೇಷವಾದ ವಸ್ತು-ಮಾದರಿಗಳ ಅವಶ್ಯಕವಿರುತ್ತದೆ, ಇಲ್ಲವಾದರೆ ವಿಜ್ಞಾನ ಬಲು ಕಠಿಣ. ಅವುಗಳಲ್ಲಿ ಪ್ರಮುಖವಾದುವೆಂದರೆ, ಹದ್ದು ಮತ್ತು ಡ್ರಾಗನ್ ಚಿಟ್ಟೆಯ ಹಾರಾಟದ ಆಧಾರದ ಮೇಲೆ ವಿಮಾನದ ನಿರ್ಮಾಣ, ಮೃದು-ಕೀಟಗಳಿಂದ ಪ್ರಾಕೃತಿಕ ಬಣ್ಣ ತಯಾರಿಕೆ, ಚಿಟ್ಟೆಗಳ ಸೌಂದರ್ಯದಿಂದ ವಸ್ತ್ರವಿನ್ಯಾಸ ಹಾಗೂ ಕೆಲ ದಶಕಗಳಿಂದ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆಗೆ ಕೀಟ ಮತ್ತು ಹಲವು ಪ್ರಾಣಿಗಳ ಚಟುವಟಿಕೆ ಆಧಾರಿತ ಸಂಶೋಧನೆ.

ಶಾಂತಳಾಗಿರುವ ಭೂ-ತಾಯಿ ಸದಾ ತನ್ನ ಮಕ್ಕಳ ಸಂತೋಷವನ್ನು ಬಯಸುವಳು, ಆದರೆ ತನ್ನ ಗರ್ಭದಲ್ಲಿ ಮತ್ತು ಮೇಲ್ಮೈಯಲ್ಲಿ ನಡೆಯುವ ವಿದ್ಯಮಾನಗಳು ಮಾತೆಯ ಮಕ್ಕಳಿಗೆ ಸದಾ ಕಂಟಕಪ್ರಾಯವಾಗಿರುತ್ತವೆ. ಇಳೆಗೆ ಅಪ್ಪಳಿಸುವ ಭೂಕಂಪ, ಸುನಾಮಿ, ಚಂಡಮಾರುತ, ಕಾಳ್ಗಿಚ್ಚು ಮತ್ತು ಜ್ವಾಲಾಮುಖಿ ಸ್ಫೋಟದಂತಹ ನೈಸರ್ಗಿಕ ವಿದ್ಯಮಾನಗಳು ಭೂಮಾತೆಯ ಮನೆಯಂತಿರುವ ಪರಿಸರ ವ್ಯವಸ್ಥೆ ಮತ್ತು ಆರ್ಥಿಕತೆಯನ್ನು ಏರುಪೇರು ಮಾಡುವ ಪ್ರಮುಖ ವಿಪತ್ತುಗಳಾಗಿವೆ. ಈ ಎಲ್ಲಾ ತೆರನ ವಿಪತ್ತುಗಳನ್ನು ಭೂಮ್ತಾಯಿಯ ಪ್ರೀತಿಯ ಮಕ್ಕಳಾದ ಮನುಷ್ಯರಿಗೆ ಭೂ ಮೇಲ್ಮೈಗೆ ಅಪ್ಪಳಿಸುವವರೆಗೂ ಗುರುತಿಸಲಾಗದು. ಆದರೆ ಆಕೆಯ ಇತರೆ ಕಂದಮ್ಮಗಳಾದ ಕೀಟಗಳು ಮತ್ತು ಪ್ರಾಣಿಗಳು ಸ್ವಾಭಾವಿಕ ಆಪತ್ತುತರುವ ವಿದ್ಯಮಾನಗಳನ್ನು, ಸಂಭವಿಸುವ ಮೊದಲೇ ಗುರುತಿಸಬಲ್ಲವೆಂದು ಅನೇಕ ಅಧ್ಯಯನಗಳು ಪ್ರತಿಪಾದಿಸಿವೆ. ಇದಕ್ಕೆ ಪುಷ್ಠಿಕೊಡುವಂತೆಯೇ, ಪ್ರಪಂಚದಾದ್ಯಂತದ ಭೂಕಂಪ ಮತ್ತು ಇತರ ವಿಪತ್ತುಗಳನ್ನು ಅಧ್ಯಯನ ಮಾಡಲು ಕೀಟಗಳ ಜೊತೆಗೆ ಕಾಡು ಮತ್ತು ದೇಶೀಯ ಪ್ರಾಣಿಗಳ ನಡವಳಿಕೆಯನ್ನು ಉಪಯೋಗಿಸುವ ಅನೇಕ ಪ್ರಯತ್ನಗಳನ್ನುತಾಯಿಯ ಅಕ್ಕರೆಯ ಮಗ ಬಳಸುತ್ತಲೇ ಇದ್ದಾನೆ. ಅವುಗಳಲ್ಲಿನ, ಪ್ರಮುಖ ಅವಲೋಕನಗಳನ್ನು ಕರಿಗಳು, ಸಾಕು ಪ್ರಾಣಿಗಳು ಮತ್ತು ಕೀಟಗಳಾದ ಇರುವೆಗಳ ಮೇಲೆ ದಾಖಲಿಸುತ್ತಿದ್ದಾನೆ.

ಅನೇಕ ಅಧ್ಯಯನಗಳ ಪ್ರಕಾರ, ಕಾಂತಕ್ಷೇತ್ರದಲ್ಲಿನ ಬದಲಾವಣೆ ಮತ್ತು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಸಾಂದ್ರತೆಯ ಏರಿಳಿತದಿಂದ ಕೀಟಗಳು ಭೂಕಂಪವನ್ನು ಹಾಗೂ ಇನ್ನಿತರ ವಿಪತ್ತುಗಳನ್ನು ಗ್ರಹಿಸಬಲ್ಲವು. ಉದಾಹರಣೆಗೆ, ಕೆಂಪು ಇರುವೆಗಳು ಮತ್ತು ಇತರ ಕೀಟಗಳು ಇಂಗಾಲದ ಡೈಆಕ್ಸೈಡ್ ಪ್ರವಣತೆ/ಗ್ರೇಡಿಯಂಟ್‌ಗಳಿಗೆ ರಾಸಾಯನಿಕ ಗ್ರಹಿಕೆಗಳನ್ನುಮತ್ತು ಆಯಸ್ಕಾಂತೀಯ ಕ್ಷೇತ್ರದಲ್ಲಿ ಬದಲಾವಣೆಗಾಗಿ ಯಾಂತ್ರಿಕ ಗ್ರಹಿಕೆಗಳನ್ನು ತಮ್ಮ ದೇಹದ ಬಾಹ್ಯದಲ್ಲಿ ಹೊಂದಿವೆ. ಅಂತೆಯೇ, ಪ್ರಾಣಿಗಳು ವಿಪತ್ತುಗಳನ್ನು ಅದರಲ್ಲೂ ಭೂಕಂಪವನ್ನು ಗ್ರಹಿಸಲು ಧ್ವನಿ ಸಂಕೇತಗಳನ್ನು ಬಳಸುತ್ತವೆ. ಸಾಮಾನ್ಯವಾಗಿ, ಕರಿಗಳು, ಶ್ವಾನಗಳು, ಅಶ್ವಗಳು, ಖಡ್ಗಮೃಗಗಳು, ಬೆಕ್ಕುಗಳು, ತಿಮಿಂಗಿಲಗಳು ಮತ್ತು ಅನೇಕ ಪಕ್ಷಿಗಳು ತಮ್ಮಲ್ಲಿನ ಸಂವಹನ ಮತ್ತು ಸಂಚರಣೆಗಾಗಿ ಇನ್ಫ್ರಾಸಾನಿಕ್ ಶಬ್ದಗಳನ್ನು ಅವಲಂಬಿಸಿವೆ, ಏಕೆಂದರೆ ಈ ಅಲೆಗಳು 20ಹರ್ಟ್ಜ್ ಅಥವಾ ಅದಕ್ಕಿಂತ ಕಡಿಮೆ (ಉದಾ., ರೇಲೀ ಅಲೆಗಳು) ಆವರ್ತನವನ್ನು ಹೊಂದಿವೆ. ಉದಾಹರಣೆಗೆ, ಕರಿಪಡೆಗಳಂತಹ  ದೈತ್ಯ ಪ್ರಾಣಿಗಳು ದೂರದವರೆಗೆ ಸಂವಹನಕ್ಕಾಗಿ ಇನ್ಫ್ರಾಸೌಂಡ್ (<20 Hz) ಅನ್ನು ಬಳಸುತ್ತವೆ, ಇದು ಸಂತಾನೋತ್ಪತ್ತಿಗೆ ಪ್ರೇರೇಪಿಸುವುದಲ್ಲದೆ, ಪರಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಕುತೂಹಲಕಾರಿಯಾದ ವಿಷಯವೆಂದರೆ, ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಸ್ಫೋಟಗಳು, ಮಿಂಚು, ಉಲ್ಕೆಗಳು, ಹಿಮಪಾತಗಳು ಮತ್ತು ಮಂಜುಗಡ್ಡೆಯ ಬೀಳುವಿಕೆ  ವಿದ್ಯಮಾನಗಳು ಸಹ ಇನ್ಫ್ರಾಸೌಂಡ್ ಶಬ್ದವನ್ನು ಉತ್ಪತ್ತಿಮಾಡಬಲ್ಲವು. ಆದರೆ, ಕೀಟಗಳು ಮತ್ತು ಬಾವಲಿಗಳು ಸಂಚರಣೆಗೆ ಮತ್ತು ಪರಭಕ್ಷಕಕ್ಕಾಗಿ ಅಲ್ಟ್ರಾ-ಸೌಂಡ್ (20-200 ಕಿ.ಹರ್ಟ್ಜ್.) ಅನ್ನು ಬಳಸುತ್ತವೆ. ಅದೇರೀತಿ, ಮಾನವರ ಚರ್ಮದಲ್ಲಿ ಇರುವ ಯಾಂತ್ರಿಕ ಗ್ರಹಿಕೆಗಳ ಸಹಾಯದಿಂದ 20ಹರ್ಟ್ಜ್ ಗಿಂತ ಹೆಚ್ಚಿನ ಶಬ್ದ ಆವರ್ತನಗಳನ್ನು ಕೇಳುವ ಶಕ್ತಿ ಹೊಂದಿದ್ದಾರೆ (ಉದಾಹರಣೆಗೆ, ಪಿಯಾನೋ ಧ್ವನಿ ~ 27.5ಹರ್ಟ್ಜ್). ಆದ್ದರಿಂದ ಪ್ರಾಣಿಗಳು ಕೀಟಗಳು ತಮ್ಮ ವಿಶೇಷ ಗ್ರಹಿಕಾ ಬಲದಿಂದ ವಿಪತ್ತುಗಳನ್ನು ಮುನ್ಸೂಚಿಸಬಲ್ಲವು ಆದರೆ ಇದು ಮನುಜರಿಂದಾಗಲಾರದು.   

ಅನೇಕ ಸಂಶೋಧನಾ ಸಾಕ್ಷಿಗಳ ಪ್ರಕಾರ, ವನ್ಯ ಮತ್ತು ಸಾಕು ಪ್ರಾಣಿಗಳು ಮಾನವನಿಗೆ ಗೋಚರಿಸುವ ಮೊದಲೇ ಗುಡುಗು ಸಹಿತ ಮಳೆಯಾಗುವುವುದನ್ನು ಪತ್ತೆ ಮಾಡಬಲ್ಲವು ಎಂದು ವಿವರಿಸಿಲಾಗಿದೆ. ಅಂತೆಯೇ, ಕಾಂತಕ್ಷೇತ್ರ, ವಾಯುಮಂಡಲದ ಅನಿಲಗಳು, ಆರ್ದ್ರತೆ ಮತ್ತು ಉಷ್ಣತೆಯ ಬದಲಾವಣೆಯ ಆಧಾರದ ಮೇಲೆ ಮಳೆ ಹಾಗೂ ಚಂಡಮಾರುತಗಳು ಸಂಭವಿಸುವುದನ್ನು, ಕೀಟಗಳು ತಮ್ಮ ವಿಶೇಷ ಸಂವೇದನಾ ಮಾರ್ಪಾಡುಗಳ ಮೂಲಕ ಗ್ರಹಿಸಲು ಶಕ್ಯವಾಗಿವೆ ಎಂದು ಅನೇಕರು ಉಲೇಖಿಸಲಾಗಿದೆ.

ಪ್ರಾಣಿಗಳು, ಹೇಗೆ ನೈಸರ್ಗಿಕ ವಿಪತ್ತನ್ನು ಮುನ್ಸೂಚಿಸಬಲ್ಲವೆಂಬುದರ ಸಿದ್ಧಾಂತಗಳು

ಪ್ರಮುಖ ಸಿಧ್ದಾಂತಗಳ ಪ್ರಕಾರ ಪ್ರಾಣಿ ಮತ್ತು ಕೀಟಗಳು ಭೂಕಂಪದ ಮುನ್ಸೂಚನೆಯನ್ನು ಎರಡು ತೆರನಲ್ಲಿ ಗ್ರಹಿಸಬಲ್ಲವು, ಮೊದಲನೆಯದು, ಭೂಮಿಯ ಕಂಪನವನ್ನು ಗ್ರಹಿಸುವ ಮೂಲಕ ಮತ್ತು ಇನ್ನೊಂದನ್ನು ಭೂಮಿಯಿಂದ ಉತ್ಪತ್ತಿಯಾಗುವ ವಾತಾವರಣದಲ್ಲಿನ ಗಾಳಿ ಅಥವಾ ಅನಿಲಗಳಲ್ಲಿನ (ನ್ಯೂಮಾ ಅನಿಲ) ವ್ಯತ್ಯಾಸಗಳನ್ನು ಗುರುತಿಸುವ ಮೂಲಕ. ಕ್ವಾಂಟಮ್ ಭೂ-ಭೌತವಿಜ್ಞಾನಿ, ಮೊಟೊಜಿ ಇಕಿಯಾ ಪ್ರತಿಪಾದಿಸಿದ ಪ್ರಕಾರ ವಿದ್ಯುತ್ಕಾಂತೀಯ ಬದಲಾವಣೆಯು ಅನೇಕ ಪ್ರಾಣಿಗಳಲ್ಲಿ ವಿಪತ್ತುಗಳನ್ನು ಪತ್ತೆಹಚ್ಚಲು ಪ್ರಭಾವ ಬೀರುತ್ತದೆ, ವಿಶೇಷವಾಗಿ ಹೆಚ್ಚು ಸೂಕ್ಷ್ಮ ಜೀವಿಯಾದ- ಬೆಕ್ಕುಮೀನು (cat fish).

ನೈಸರ್ಗಿಕ  ವಿಪತ್ತುಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಮತ್ತೊಂದು ಪ್ರಮುಖ ಕಾರ್ಯವಿಧಾನವೆಂದರೆ ಪಿ-ತರಂಗ ಅಥವಾ ಸಂಕೋಚಕ ತರಂಗ, ಇವು ಭೂಕಂಪನವಾಗುವ ಸ್ಥಳದಲ್ಲಿನ ಗರ್ಭದಿಂದ ಉತ್ಪತ್ತಿಯಾಗುವ, ಶ್ರವ್ಯಕ್ಕೆ ಯೋಗ್ಯವಲ್ಲದ ತರಂಗವಾಗಿದ್ದು, ಸಾಮಾನ್ಯ ಧ್ವನಿ ತರಂಗಗಳಿಗಿಂತ ಹತ್ತು ಪಟ್ಟು ವೇಗವಾಗಿ ಚಲಿಸುವುದರಿಂದ ಮಾನವರಿಗಿಂತ ಮೊದಲು ಪ್ರಾಣಿಗಳು ಸುಲಭವಾಗಿ ಗ್ರಹಿಸಬಲ್ಲವು. ಇನ್ನೊಂದು ಎಸ್-ತರಂಗಗಳು ಅಥವಾ ಬರಿಯ ಅಲೆಗಳು, ಇವು ಭೂಮಿಯ ಹೊರಪದರದಿಂದ ಉತ್ಪತ್ತಿಯಾಗಬಲ್ಲವಾದ್ದರಿಂದ  ಮನುಷ್ಯರಿಂದ ಸುಲಭವಾಗಿ ಗ್ರಹಿಸಲ್ಪಡುತ್ತವೆ.

ಭೂಮಿಯ ಕಂಪನದ (ಭೂಕಂಪನ) ಆಗುವುದರಿಂದ ಭೂ-ಗರ್ಭದಲ್ಲಿ ಉತ್ಪತ್ತಿ ಆಗುವು ಶಕ್ತಿಯು (ಶಾಖವನ್ನು ಉತ್ಪಾದಿಸುವ ಸೂಕ್ಷ್ಮ-ಧೂಳುಕಣ), ಭೂಮಿಯ ಮೇಲ್ಮೈಯಿಂದ ವಾತಾವರಣಕ್ಕೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆ ಕ್ರಿಯೆಯು ಪ್ರಾಣಿಗಳಲ್ಲಿ ಸಿರೊಟೋನಿನ್ ಉತ್ಪಾದನೆಯನ್ನು ಪ್ರಚೋದಿಸುವ ಅಯಾನುಗಳಾಗಿ ರೂಪುಗೊಳ್ಳುತ್ತವೆ, ಇದರಿಂದ ಪ್ರಾಣಿಗಳು ಸುಲಭವಾಗಿ ಕಂಪನವನ್ನು ಮುನ್ಸೂಚಿಸುತ್ತವೆ. ಅಂತೆಯೇ ಕೆಂಪು ಇರುವೆಗಳು, ದಂಶಕಗಳು ಮತ್ತು ಇತರ ಸಾಕು ಪ್ರಾಣಿಗಳು ಭೂಕಂಪನದಿಂದಾಗುವ ಇಂಗಾಲದ ಡೈಆಕ್ಸೈಡ್ ಮತ್ತು ಕಾಂತಕ್ಷೇತ್ರದ ಮಟ್ಟದಲ್ಲಿನ ಬದಲಾವಣೆಗಳನ್ನು ಸಹ ಗ್ರಹಿಸಬಲ್ಲವು.

ಇಲ್ಲಿ ಪ್ರಸ್ತಾಪಿಸಲಾದ ಎಲ್ಲಾ ಸಿದ್ಧಾಂತಗಳು ಒಂದಲ್ಲಾ ಒಂದು ರೀತಿಯಿಂದ ವಿಕೋಪಗಳಿಗೂ ಹಾಗೂ ಪ್ರಾಣಿಗಳಿಗೆ ಇರುವ ನೇರಸಂಬಂಧವನ್ನು ಪ್ರಸ್ತುತಪಡಿಸುತ್ತದೆ. ಆದ್ದರಿಂದ ಪ್ರಾಣಿಗಳು ವಿಪತ್ತುಗಳನ್ನು ಪರಿವೀಕ್ಷಣೆಗೆ ಬರುವ ಮೊದಲೇ ಪತ್ತೆ ಹಚ್ಚುತ್ತವೆ ಮತ್ತು ಈ ಸಿದ್ಧಾಂತಗಳನ್ನು  ವಿಪತ್ತುಗಳ ಮುನ್ಸೂಚನೆಯಲ್ಲಿ ಬಳಸಿಕೊಳ್ಳಲು ಸಹಾಯ ಮಾಡುತ್ತವೆ.

ಡಾ. ಕರಿಯಣ್ಣ ದೇಸಾಯಿ
Leave a reply

Leave a Reply