ಧ್ವನಿಗನ್ನಡಿಯ ಮುಖ್ಯ ರಚನೆ ಕಾಂಕ್ರೀಟ್ ನಿಂದ ತಯಾರು ಮಾಡಿದ ಎರಡು ದೊಡ್ಡ ಡೋಮ್ ಗಳು ಹಾಗೂ 200 ಅಡಿಯಷ್ಟು ಉದ್ದದ ತಡೆಗೋಡೆ. ಈ ಮೂರು ಆಕೃತಿಗಳು ವಿಭಿನ್ನ ಕೋನಗಳಲ್ಲಿ ಶಬ್ದವನ್ನು ಸಂಗ್ರಹಿಸಿ, ನಂತರ ಪ್ರತಿಫಲಿಸುತ್ತವೆ. ಇದಲ್ಲದೇ ಈ ಆಕೃತಿಗಳು ಇರುವ ನೆಲದ ಮೇಲೆ ಬೇರೆ ಬೇರೆ ಜಾಗಗಳಲ್ಲಿ ಮೈಕ್ರೋಫೋನ್ ಗಳನ್ನು ಇಡುತ್ತಿದ್ದರು, ಈ ಮೈಕ್ರೋಫೋನ್ ಗಳು ವಿಮಾನದ ಒಂದು ನಿರ್ದಿಷ್ಟ ಕಂಪನಾಂಕಗಳನ್ನು ಮಾತ್ರ ಗ್ರಹಿಸಿ ಅಲ್ಲೇ ಪಕ್ಕದಲ್ಲಿರುವ ನಿಯಂತ್ರಣಾ ಕೊಠಡಿಗೆ ಶಬ್ದವನ್ನು ರವಾನಿಸುತ್ತಿದ್ದವು. ಇಂತಹ ಒಂದು ತಂತ್ರಜ್ನಾನದ ಮೂಲಕ ಸುಮಾರು ಇಪ್ಪತ್ತರಿಂದ ಮೂವತ್ತು ಮೈಲಿಗಳಷ್ಟು ದೂರದಿಂದ ಬರುತ್ತಿರುವ ಯುದ್ಧ ವಿಮಾನದ ಶಬ್ದವು ಕೇಳಿ ಬರುತ್ತಿತ್ತು. ಈ ಧ್ವನಿಗನ್ನಡಿ ಬಳಸಿ ಕೇಳುವುದರಿಂದ ಬ್ರಿಟನ್ ನ ಸೇನೆಗೆ ಹತ್ತರಿಂದ ಹದಿನೈದು ನಿಮಿಷಗಳಷ್ಟು ಮುಂಚಿತವಾಗಿ ಶತ್ರು ವಿಮಾನಗಳ ಸೂಚನೆ ಸಿಕ್ಕಿ, ಅದಕ್ಕೆ ಪ್ರತಿಯಾಗಿ ದಾಳಿ ಮಾಡಲು ಸಾಧ್ಯವಾಗುತ್ತಿತ್ತು.

ಭಾರತದ ಕೆಲವು ಸ್ಮಾರಕಗಳ ಶಬ್ದ ಸ್ವಾರಸ್ಯ ತಿಳಿದ ನಂತರ ಈಗ ವಿದೇಶದ ಕೆಲವು ಶಬ್ದ ಸಂಬಂಧಿತ ಸ್ಮಾರಕಗಳ ಬಗ್ಗೆ ತಿಳಿಯೋಣ ಬನ್ನಿ:

ಡೆಂಗ್  ಧ್ವನಿಗನ್ನಡಿ : 

ಬ್ರಿಟನ್ನಿನ ಕೆಂಟ್ ಕೌಂಟಿಯ ಹೊರ ವಲಯದಲ್ಲಿ ಡೆಂಗ್ ಎಂಬ ಪ್ರದೇಶದಲ್ಲಿ ಶಬ್ದಕ್ಕೆ ಸಂಬಂಧಿಸಿದ ಒಂದು ಆಸಕ್ತಿಕರ ವಿಷಯವಿದೆ. ಅದು 1920 ರಲ್ಲಿ ಇಲ್ಲಿ ಕಟ್ಟಿಸಿದ ‘ಧ್ವನಿಗನ್ನಡಿ (sound mirror)’ ಎಂಬ ಸ್ಮಾರಕ. ಇದು ವಿಶ್ವ ಯುದ್ಧಗಳ ವೇಳೆ ಶತ್ರು ವಿಮಾನಗಳ ಪತ್ತೆ ಹಚ್ಚಲು ನಿರ್ಮಿಸಲಾದ ಒಂದು ರಚನೆ. ರೇಡಾರ್ ತಂತ್ರಜ್ಞಾನ ಕಂಡು ಹಿಡಿಯುವ ಮೊದಲು, ಶತ್ರುಗಳ ವಿಮಾನಗಳನ್ನು ದೂರದಿಂದ, ಕಣ್ಣಿಗೆ ಕಾಣುವ ಮುಂಚೆ ಪತ್ತೆ ಹಚ್ಚುವಂತಹ ವಿಧಿಯೊಂದು ಅವಶ್ಯವಿತ್ತು. ಇದನ್ನು ಪೂರೈಸಲು ಧ್ವನಿಗನ್ನಡಿಯನ್ನು ರಚಿಸಲಾಯಿತು. ಇದನ್ನು ಡಾಕ್ಟರ್ ವಿಲಿಯಂ ಟಕರ್ ಎಂಬುವವರು ವಿನ್ಯಾಸ ಗೊಳಿಸಿದರು.ಧ್ವನಿಗನ್ನಡಿಯ ಮುಖ್ಯ ರಚನೆ ಕಾಂಕ್ರೀಟ್ ನಿಂದ ತಯಾರು ಮಾಡಿದ ಎರಡು ದೊಡ್ಡ ಡೋಮ್ ಗಳು ಹಾಗೂ 200 ಅಡಿಯಷ್ಟು ಉದ್ದದ ತಡೆಗೋಡೆ. ಈ ಮೂರು ಆಕೃತಿಗಳು ವಿಭಿನ್ನ ಕೋನಗಳಲ್ಲಿ ಶಬ್ದವನ್ನು ಸಂಗ್ರಹಿಸಿ, ನಂತರ ಪ್ರತಿಫಲಿಸುತ್ತವೆ. ಇದಲ್ಲದೇ ಈ ಆಕೃತಿಗಳು ಇರುವ ನೆಲದ ಮೇಲೆ ಬೇರೆ ಬೇರೆ ಜಾಗಗಳಲ್ಲಿ ಮೈಕ್ರೋಫೋನ್ ಗಳನ್ನು ಇಡುತ್ತಿದ್ದರು, ಈ ಮೈಕ್ರೋಫೋನ್ ಗಳು ವಿಮಾನದ ಒಂದು ನಿರ್ದಿಷ್ಟ ಕಂಪನಾಂಕಗಳನ್ನು ಮಾತ್ರ ಗ್ರಹಿಸಿ ಅಲ್ಲೇ ಪಕ್ಕದಲ್ಲಿರುವ ನಿಯಂತ್ರಣಾ ಕೊಠಡಿಗೆ ಶಬ್ದವನ್ನು ರವಾನಿಸುತ್ತಿದ್ದವು. ಇಂತಹ ಒಂದು ತಂತ್ರಜ್ನಾನದ ಮೂಲಕ ಸುಮಾರು ಇಪ್ಪತ್ತರಿಂದ ಮೂವತ್ತು ಮೈಲಿಗಳಷ್ಟು ದೂರದಿಂದ ಬರುತ್ತಿರುವ ಯುದ್ಧ ವಿಮಾನದ ಶಬ್ದವು ಕೇಳಿ ಬರುತ್ತಿತ್ತು. ಈ ಧ್ವನಿಗನ್ನಡಿ ಬಳಸಿ ಕೇಳುವುದರಿಂದ ಬ್ರಿಟನ್ ನ ಸೇನೆಗೆ ಹತ್ತರಿಂದ ಹದಿನೈದು ನಿಮಿಷಗಳಷ್ಟು ಮುಂಚಿತವಾಗಿ ಶತ್ರು ವಿಮಾನಗಳ ಸೂಚನೆ ಸಿಕ್ಕಿ, ಅದಕ್ಕೆ ಪ್ರತಿಯಾಗಿ ದಾಳಿ ಮಾಡಲು ಸಾಧ್ಯವಾಗುತ್ತಿತ್ತು. ನೆಲದ ಮೇಲೆ ಯಾವ ಮೈಕ್ರೋಫೋನ್ ಶಬ್ದ ಸಂಗ್ರಹಿಸುತ್ತದೆ ಎಂಬುವುದರ ಆಧಾರದ ಮೇಲೆ, ವಿಮಾನ ಯಾವ ದಿಕ್ಕಿನಿಂದ ಬರುತ್ತಿದೆ ಎಂಬ ಸುಳಿವೂ ಸಿಕ್ಕುತ್ತಿತ್ತು. ಆದರೆ ಈ ಧ್ವನಿಗನ್ನಡಿ ಸ್ಥಾಪಿಸಿದ ಕೆಲವೇ ವರ್ಷಗಳಲ್ಲಿ ಯುದ್ಧ ವಿಮಾನದ ವೇಗವು ಹೆಚ್ಚಾಯಿತು. ಆದುದರಿಂದ ಈ ಉಪಕರಣ ಕಂಡು ಹಿಡಿದ ಒಂದೆರಡು ನಿಮಿಷಗಳಲ್ಲಿ ವಿಮಾನವು ಕಣ್ಣಿಗೆ ಕಾಣಿಸುತ್ತಿತ್ತು. ಅದಲ್ಲದೇ ರೇಡಾರ್ ತಂತ್ರಜ್ಞಾನ ಅಭಿವೃದ್ಧಿಗೊಂಡು ಧ್ವನಿಗನ್ನಡಿಗಿಂತ ನಿಖರ ಮತ್ತು ಮುಂಗಡವಾಗಿ ವಿಮಾನ ಪತ್ತೆ ಮಾಡುವ ವಿಧಿ ಜಾರಿಗೆ ಬಂತು.

ಈಗಲೂ ಈ ಧ್ವನಿಗನ್ನಡಿ ಡೆಂಗ್ ಪ್ರದೇಶದಲ್ಲಿದ್ದು, ಬ್ರಿಟನ್ ಸೇನೆಯ ಅನುಮತಿ ಪಡೆದರೆ ಸಾರ್ವಜನಿಕರಿಗೆ ವೀಕ್ಷಿಸಲು ಹಾಗೂ ಶಬ್ದ ಪ್ರಯೋಗ ಮಾಡಿ ನೋಡಲು ಅವಕಾಶ ಸಿಗುತ್ತದೆ. 

ಟ್ವಿಸೊಂಗೂರ್:  

ಟ್ವಿಸೊಂಗೂರ್ ಜರ್ಮನ್ ಕಲಾವಿದ ಲುಕಾಸ್ ಕೊಹ್ನೆ ಅವರ ಧ್ವನಿ ಶಿಲ್ಪವಾಗಿದೆ ಮತ್ತು ಇದು ಸೆಡಿಸ್ಫ್ಜೋರ್ಡೂರ್ ಪಟ್ಟಣದ ಮೇಲಿರುವ ಪರ್ವತಶ್ರೇಣಿಯಲ್ಲಿದೆ. ಈ ರಚನೆಯನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದೆ ಮತ್ತು ಇದು ವಿಭಿನ್ನ ಗಾತ್ರದ ಐದು ಅಂತರ್ಸಂಪರ್ಕಿತ ಗುಮ್ಮಟಗಳನ್ನು ಒಳಗೊಂಡಿದೆ. ಗುಮ್ಮಟಗಳ ಎತ್ತರವು 2 ರಿಂದ 4 ಮೀಟರ್ ನಡುವೆ ಇರುತ್ತದೆ ಮತ್ತು ಅವು ಸುಮಾರು 30 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತವೆ. ಪ್ರತಿಯೊಂದು ಗುಮ್ಮಟವು ತನ್ನದೇ ಆದ ಅನುರಣನ(resonance)ವನ್ನು ಹೊಂದಿದ್ದು ಅದು ಐಸ್‌ಲ್ಯಾಂಡಿಕ್ ಸಂಗೀತ ಸಂಪ್ರದಾಯದ ಐದು-ಸ್ವರ ಸಾಮರಸ್ಯಕ್ಕೆ ಅನುಗುಣವಾಗಿರುತ್ತದೆ ಮತ್ತು ಆ ಸ್ವರಕ್ಕೆ ನೈಸರ್ಗಿಕ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

 ಟ್ವಿಸೊಂಗೂರ್ ಅನ್ನು ಸೆಪ್ಟೆಂಬರ್ 5, 2012 ರಂದು ಸಾರ್ವಜನಿಕರಿಗೆ ಉದ್ಘಾಟಿಸಲಾಯಿತು. ಇದು ಫ್ಜಾರ್ಡ್‌  ಎಂಬ ಪಟ್ಟಣದ ಮೇಲಿರುವ ಪರ್ವತಶ್ರೇಣಿಯಲ್ಲಿ, ಶಾಂತ ಪ್ರದೇಶದಲ್ಲಿದ್ದು ಉಸಿರು ಬಿಗಿದು ಹಿಡಿಯುವ ದೃಶ್ಯವನ್ನು ನೀಡುತ್ತದೆ. ಇದು ಸಂದರ್ಶಕರು ಅನುಭವಿಸಬಹುದಾದ ಮತ್ತು ಪ್ರಾಯೋಗಿಕವಾಗಿ ಕೇಳಬಹುದಾದ ಅಕೌಸ್ಟಿಕ್ ಸಂವೇದನೆಯನ್ನು ನೀಡುತ್ತದೆ. ಸೈಟ್‌ನ ಏಕಾಂತತೆ ಮತ್ತು ನೆಮ್ಮದಿ ಹಾಡಲು ಅಥವಾ ಸಂಗೀತ ನುಡಿಸಲು ಸೂಕ್ತವಾದ ಸೆಟ್ಟಿಂಗ್ ಅನ್ನು ನೀಡುತ್ತದೆ. ಅಣಬೆಯಂತೆ ಕಾಣುವ ಪ್ರತಿಯೊಂದು ಗುಮ್ಮಟಗಳಲ್ಲಿ ನೀವು ಅದೇ ಹಾಡನ್ನು ಹಾಡಿದಾಗ ಅದು ಹೇಗೆ ಬೇರೆ ಬೇರೆ ರೀತಿಯಲ್ಲಿ ಕೇಳುತ್ತದೆ ಎಂದು ಅನುಭವಿಸಬಹುದು. ಸೌಂಡ್ ಎಂಜಿನಿಯರ್ ಗಳಿಗೆ ಅನುರಣನದ ಬಗ್ಗೆ ಪ್ರಾಯೋಗಿಕವಾಗಿ ತಿಳಿದು ಕೊಳ್ಳಲು ಇದು ಯೋಗ್ಯ ಸ್ಥಳ ಎಂದು ಹೇಳಲಾಗಿದೆ. 

ಎಸ್ಟೋನಿಯದ ಮೇಗಾಫೋನ್ ಗಳು:

ಅರಣ್ಯದಲ್ಲಿ ಮಾತ್ರ ಕೇಳಿ ಬರುವ ವಿಭಿನ್ನ ಶಬ್ದಗಳು, ಪ್ರಾಣಿಗಳ ಕೂಗು, ಪಕ್ಷಿಗಳ ಹಾಡು, ಗಾಳಿಯ ಸದ್ದು ಇವುಗಳನ್ನು ಇನ್ನಷ್ಟು ವರ್ಧಿಸಿ ಕೇಳಿದರೆ ಹೇಗಾಗುತ್ತದೆ? ಇದು ಶಬ್ದವನ್ನು ರೆಕಾರ್ಡ್ ಮಾಡಿ ನಂತರ ಸ್ಟೀರಿಯೋ ದಲ್ಲಿ ಗಟ್ಟಿಯಾಗಿ ಇಟ್ಟು ಕೇಳುವುದಲ್ಲ, ಅಲ್ಲೇ ಅರಣ್ಯದಲ್ಲೇ ಸ್ವಾಭಾವಿಕವಾಗಿ ಕೇಳುವಂತೆ ಇದ್ದರೆ? ಇದಕ್ಕೆ ಉತ್ತರ  ಎಸ್ಟೋನಿಯದ ಮೇಗಾಫೋನ್ ಗಳು.  ಬಿರ್ಗಿಟ್ ಎಗಸ್ ಎಂಬ ವಿದ್ಯಾರ್ಥಿ ಇದನ್ನು ಎಸ್ಟೋನಿಯನ್ ಅಕಾಡೆಮಿ ಆಫ್ ಆರ್ಟ್ಸ್‌ನ ಭಾಗವಾಗಿ ವಿನ್ಯಾಸಗೊಳಿಸಿದ್ದಾರೆ. ಮೂರು ಮೀಟರ್ ವ್ಯಾಸದ ಮೆಗಾಫೋನ್‌ಗಳು ಸುತ್ತಲಿನ ಅರಣ್ಯಕ್ಕೆ ‘ಬ್ಯಾಂಡ್‌ಸ್ಟ್ಯಾಂಡ್’ ಆಗಿ ಕಾರ್ಯನಿರ್ವಹಿಸುತ್ತವೆ, ಇದು ಪ್ರಕೃತಿಯ ಶಬ್ದಗಳನ್ನು ವರ್ಧಿಸುತ್ತದೆ.

ಇಲ್ಲಿಗೆ ಬರುವ ಸಂದರ್ಶಕರು ಮೆಗಾಫೋನ್‌ಗಳ ಒಳಗೆ ಡೇರೆ ಹೂಡಿ, ಅತಿವಾಸ್ತವಿಕವಾದ ಅಕೌಸ್ಟಿಕ್ ಅನುಭವಗಳನ್ನು ಪಡೆಯುತ್ತಾರೆ. ಮರದ ತುಂಡುಗಳ ಮಧ್ಯದಲ್ಲಿ ನಿಂತು ಸಂಗೀತವಾದ್ಯಗಳನ್ನು ಬಾರಿಸಿ, ಅದನ್ನು ಕೇಳುವುದು ಬಹಳ ಕುತೂಹಲಕಾರಿಯಾಗಿ, ಈ ಕಾರಣದಿಂದಲೇ  ಎಸ್ಟೋನಿಯದ ಮೇಗಾಫೋನ್ ಗಳು ಸಂದರ್ಶಕರನ್ನು ಆಕರ್ಷಿಸುತ್ತದೆ.

ಡೆನ್ಮಾರ್ಕಿನ ಎಕ್ಕೋ:

ಜರ್ಮನ್ ಕಲಾವಿದ ಥಿಲೋ ಫ್ರಾಂಕ್ ಅವರು ಉತ್ತರ ಡೆನ್ಮಾರ್ಕ್‌ನಲ್ಲಿ ಎಕ್ಕೋ ಎಂಬ ವಿಶಿಷ್ಟ ರಚನೆಯನ್ನು ಸೃಷ್ಟಿಸಿದರು.  ಇಲ್ಲಿಗೆ ಭೇಟಿ ನೀಡುವವರು ಮರದ ದಿಮ್ಮಿಗಳ ಲೂಪ್ ಮೂಲಕ ನಡೆದಾಗ ತಮ್ಮ ಧ್ವನಿಗಳು ಮತ್ತು ಹೆಜ್ಜೆ ಗುರುತುಗಳ ಶಬ್ದಗಳನ್ನು ಕೇಳುವಾಗ ಒಂದು ಶಬ್ದ ವಿಶೇಷತೆಯನ್ನು ಅನುಭವಿಸುತ್ತಾರೆ. ಇಲ್ಲಿ ನಡೆಯಲು ಕಾಂಕ್ರಿಟ್ ಹಾಸು ಇರುತ್ತದೆ, ಆದರೆ ಅಕ್ಕ ಪಕ್ಕ ಮತ್ತು ಸೂರಿನ ಜಾಗದಲ್ಲಿ ಗೋಡೆಗಳ ಬದಲು ಬೇರೆ ಬೇರೆ ಗಾತ್ರ ವಿನ್ಯಾಸದ 200 ಮರದ ದಿಮ್ಮಿಗಳು ಇರುತ್ತವೆ. ಈ ಮರದ ದಿಮ್ಮಿಗಳಲ್ಲಿ ಅಡಿಗಿಸಿ ಮೈಕ್ರೋಫೋನ್ ಗಳನ್ನು ಇಟ್ಟು ನಿಮ್ಮ ನಡಿಗೆಯ ಸದ್ದು, ಒಳಗಡೆ ಇದ್ದ ಇತರರು ಮಾತನಾಡುವ ಸದ್ದುಗಳನ್ನು ಸಂಗ್ರಹಿಸಿ ಕಂಪ್ಯೂಟರ್ ಮೂಲಕ ಅದನ್ನು ಪರಿಷ್ಕರಿಸಿ, ದಾರಿಯುದ್ದಕ್ಕೂ ನೀವು ಚಲಿಸಿದಾಗ ನಿಮಗೆ ಅದು ವಿಚಿತ್ರ ಮತ್ತು ವಿಶೇಷ ಅನುಭವ ನೀಡುತ್ತದೆ.

ಎಕ್ಕೋ ಹಾವಿನಂತೆ ಕಾಣುವ ಒಂದು ಸುರಂಗ ಮಾರ್ಗದಂತೆ ಇದ್ದು, ಇದನ್ನು ಒಂದು ಆಧುನಿಕ ಶಬ್ದ ವಿಸ್ಮಯ ಎಂದು ಕರೆಯಲಾಗುತ್ತದೆ.

ವಿದೇಶಗಳಲ್ಲಿ ಕಾಣ ಸಿಗುವ ಈ ಶಬ್ದ ಸ್ಮಾರಕಗಳು ನಮ್ಮ ದೇಶದ ಸ್ಮಾರಕಗಳಷ್ಟು ಪ್ರಾಚೀನವಾಗಿಲ್ಲ. ಇವುಗಳನ್ನು ಆಧುನಿಕ ಸ್ಮಾರಕಗಳು ಎನ್ನಬಹುದು.

ಶಬ್ದ ಸರಣಿಯ ಮುಂದಿನ ಭಾಗಗಳಲ್ಲಿ ವೈದ್ಯಕೀಯ ಉಪಕರಣಗಳ ಬಗ್ಗೆ ಮಾಹಿತಿಗಳು ಬರಲಿವೆ.  

ವಿಠಲ ಶೆಣೈ
Leave a reply

Leave a Reply