ಕೆಲವೊಂದು ಮೆದುಳಿನ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಸ್ಪಿರೇಟರ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದರಲ್ಲಿ ಪ್ರೋಬ್ ನ ಮೂಲಕ 23 KHz ಕಂಪನಾಂಕದ ಅಲ್ಟ್ರಾ ಸೋನಿಕ್ ಅಲೆಗಳನ್ನು ಕಳುಹಿಸಿ, ಆ ಅಲೆಗಳ ಮೂಲಕ ಮೆದುಳಿನ ಗೆಡ್ಡೆಗಳನ್ನು ಕತ್ತರಿಸಿ ನಂತರ ಅವುಗಳನ್ನು ಗುಳ್ಳೆಗಳಾಗಿ ಪರಿವರ್ತಿಸಿ, ತದನಂತರ ಲವಣಯುಕ್ತ ದ್ರಾವಣದಿಂದ ಅದನ್ನು ತೆಗೆದು ಹಾಕಲಾಗುತ್ತದೆ.

ಈ ಮುಂಚೆ ವಿವರಿಸಿದಂತೆ, ಮನುಷ್ಯನು ಆಲಿಸಬಲ್ಲ ಶಬ್ದದ ಕಂಪನಾಂಕದ ಶ್ರೇಣಿಯು 20Hz ದಿಂದ 20,000 Hz ಆಗಿರುತ್ತದೆ. 20,000 ಕ್ಕಿಂತ ಹೆಚ್ಚು ಕಂಪನಾಂಕ ವಿರುವ ಶಬ್ದವನ್ನು ಅಲ್ಟ್ರಾ ಸೋನಿಕ್ ಎಂದೂ, 20 Hz ಕ್ಕಿಂತ ಕಡಿಮೆ  ಕಂಪನಾಂಕ ವಿರುವ ಶಬ್ದವನ್ನು ಇನ್ಫ್ರಾ ಸೋನಿಕ್ ಎಂದು ಕರೆಯುತ್ತಾರೆ. ಅಲ್ಟ್ರಾ ಸೋನಿಕ್ ಶಬ್ದಗಳ ಬಳಕೆ ವೈದ್ಯಕೀಯ ಉಪಕರಣಗಳಲ್ಲಿ ಆಗುತ್ತದೆ.

ಅಲ್ಟ್ರಾ ಸೌಂಡ್ ಅಥವಾ ಅಲ್ಟ್ರಾ ಸೊನೊಗ್ರಫಿ ಎನ್ನುವುದು ವೈದ್ಯಕೀಯ ಚಿತ್ರಣ ತಂತ್ರವಾಗಿದ್ದು ಅದು ಹೆಚ್ಚಿನ ಕಂಪನಾಂಕವುಳ್ಳ ಧ್ವನಿ ತರಂಗಗಳನ್ನು ಮತ್ತು ಅವುಗಳ ಪ್ರತಿಧ್ವನಿಗಳನ್ನು ಬಳಸುತ್ತದೆ. ಈ ತಂತ್ರವು ಬಾವಲಿಗಳು, ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು ಬಳಸುವ ಎಕೋಲೊಕೇಶನ್‌ಗೆ ಹೋಲುತ್ತದೆ, ಜೊತೆಗೆ ಜಲಾಂತರ್ಗಾಮಿ submarine ಗಳು ಬಳಸುವ ಸೋನಾರ್ ತಂತ್ರಜ್ನಾನದ ತರಹ ಇರುತ್ತದೆ.

ಅಲ್ಟ್ರಾ ಸೌಂಡ್ ಈ ಕೆಳಗಿನಂತೆ ಕೆಲಸ ಮಾಡುತ್ತದೆ:

  • ಅಲ್ಟ್ರಾಸೌಂಡ್ ಯಂತ್ರವು ಹೆಚ್ಚಿನ ಕಂಪನಾಂಕವುಳ್ಳ (1 ರಿಂದ 5 ಮೆಗಾಹೆರ್ಟ್ಜ್) ಧ್ವನಿ ತರಂಗಗಳನ್ನು ನಿಮ್ಮ ದೇಹಕ್ಕೆ ಪ್ರೋಬ್ ಮೂಲಕ ರವಾನಿಸುತ್ತದೆ
  • ಧ್ವನಿ ತರಂಗಗಳು ನಿಮ್ಮ ದೇಹದೊಳಗೆ ಪ್ರಯಾಣಿಸುತ್ತವೆ ಮತ್ತು ಅಂಗಾಂಶಗಳ ನಡುವಿನ ಗಡಿಯನ್ನು ಹೊಡೆಯುತ್ತವೆ (ಉದಾ. ದ್ರವ ಮತ್ತು ಮೃದು ಅಂಗಾಂಶಗಳ ನಡುವೆ, ಮೃದು ಅಂಗಾಂಶ ಮತ್ತು ಮೂಳೆ)
  • ಕೆಲವು ಧ್ವನಿ ತರಂಗಗಳು ಪ್ರೋಬ್ ಗೆ ಮತ್ತೆ ಪ್ರತಿಫಲಿಸುತ್ತದೆ, ಆದರೆ ಕೆಲವು ತರಂಗಗಳು ಮತ್ತೊಂದು ಗಡಿಯನ್ನು ತಲುಪುವವರೆಗೆ ಮತ್ತು ಪ್ರತಿಫಲಿಸುವವರೆಗೆ ಮತ್ತಷ್ಟು ಪ್ರಯಾಣಿಸುತ್ತವೆ.
  • ಪ್ರತಿಫಲಿತ ಅಲೆಗಳನ್ನು ಪ್ರೋಬ್ ನಿಂದ ಎತ್ತಿಕೊಂಡು ಯಂತ್ರಕ್ಕೆ ಪ್ರಸಾರ ಮಾಡಲಾಗುತ್ತದೆ.
  • ಅಂಗಾಂಶದಲ್ಲಿನ ಶಬ್ದದ ವೇಗವನ್ನು ಮತ್ತು ಪ್ರತಿ ಪ್ರತಿಧ್ವನಿಯ ಮರಳುವಿಕೆಯ ಸಮಯವನ್ನು (ಸಾಮಾನ್ಯವಾಗಿ ಮಿಲಿಸೆಕಂಡ್ ಗಳಲ್ಲಿ) ಬಳಸಿಕೊಂಡು ಯಂತ್ರವು ಪ್ರೋಬ್ ನಿಂದ ಅಂಗಾಂಶ ಅಥವಾ ಅಂಗಕ್ಕೆ (ಗಡಿಗಳು) ದೂರವನ್ನು ಲೆಕ್ಕಾಚಾರ ಮಾಡುತ್ತದೆ.
  • ಯಂತ್ರವು ಪರದೆಯ ಮೇಲೆ ಪ್ರತಿಧ್ವನಿಗಳ ದೂರ ಮತ್ತು ತೀವ್ರತೆಯನ್ನು ಪ್ರದರ್ಶಿಸುತ್ತದೆ, ಕೆಳಗೆ ತೋರಿಸಿರುವಂತೆ ಎರಡು ಆಯಾಮದ ಚಿತ್ರವನ್ನು ರೂಪಿಸುತ್ತದೆ.

ಅಲ್ಟ್ರಾಸೌಂಡ್‌ನಲ್ಲಿ, ಪ್ರತಿ ಸೆಕೆಂಡಿಗೆ ಲಕ್ಷಾಂತರ ತರಂಗಗಳನ್ನು ಹಾಗೂ ಪ್ರತಿಧ್ವನಿಗಳನ್ನು ಕಳುಹಿಸಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ. ಪ್ರೋಬ್ ಅನ್ನು ದೇಹದ ಮೇಲೆ  ಚಲಿಸುತ್ತಾ, ದೇಹದ ವಿವಿಧ ಭಾಗಗಳನ್ನು ಮತ್ತು ಅದರ ಒಳ ರಚನೆಗಳನ್ನು ನೋಡಬಹುದು.

ವಿವಿಧ ಅಲ್ಟ್ರಾ ಸೌಂಡ್ ಉಪಕರಣಗಳು:

3D Ultrasound Imaging:

ಕಳೆದ ಕೆಲವು ವರ್ಷಗಳಲ್ಲಿ, ಮೂರು ಆಯಾಮದ(3D) ಚಿತ್ರಣಕ್ಕೆ ಸಮರ್ಥವಾದ ಅಲ್ಟ್ರಾಸೌಂಡ್ ಯಂತ್ರಗಳನ್ನು ಕಂಡು ಹಿಡಿಯಲಾಗಿದೆ. ಈ ಯಂತ್ರಗಳಲ್ಲಿ, ಪ್ರೋಬ್ ಗಳನ್ನು ದೇಹದ ಮೇಲ್ಮೈಗೆ ಚಲಿಸುವ ಮೂಲಕ ಅಥವಾ ಸೇರಿಸಿದ ಪ್ರೋಬ್ ಗಳನ್ನು ತಿರುಗಿಸುವ ಮೂಲಕ ಹಲವಾರು ಎರಡು ಆಯಾಮದ ಚಿತ್ರಗಳನ್ನು ಪಡೆಯಲಾಗುತ್ತದೆ. ಇಂತಹ ಎರಡು ಆಯಾಮದ ಸ್ಕ್ಯಾನ್‌ಗಳನ್ನು ನಂತರ ವಿಶೇಷ ಕಂಪ್ಯೂಟರ್ ಸಾಫ್ಟ್‌ವೇರ್ ಸಂಯೋಜಿಸಿ 3D ಚಿತ್ರಗಳನ್ನು ರೂಪಿಸುತ್ತದೆ. ಈ 3D ಚಿತ್ರಗಳು ಅಂಗಗಳ ಚಿತ್ರಣವನ್ನು ಬಹಳ ನಿಖರವಾಗಿ ಮಾಡುತ್ತವೆ. ಇದನ್ನು ಈ ಕೆಳಗಿನ ಕ್ಷೇತ್ರದಲ್ಲಿ ಬಳಸುತ್ತಾರೆ:

  • ಕಾನ್ಸರ್ ಅಥವಾ ಇತರ ಅಹಿತಕರ ಗಡ್ಡೆಗಳ ಆರಂಭಿಕ ಪತ್ತೆ
  • ಪ್ರಾಸ್ಟೇಟ್ ಗ್ರಂಥಿಗಳ ಪರೀಕ್ಷೆ
  • ಕೊಲೊನ್ ಮತ್ತು ಗುದನಾಳದಲ್ಲಿ ದ್ರವ್ಯರಾಶಿಗಳ ಪರೀಕ್ಷೆ
  • ಭ್ರೂಣವನ್ನು ಅದರ ಬೆಳವಣಿಗೆಯನ್ನು ನಿರ್ಣಯಿಸಲು ದೃಶ್ಯೀಕರಿಸುವುದು, ವಿಶೇಷವಾಗಿ ಮುಖ ಮತ್ತು ಕೈಕಾಲುಗಳ ಅಸಹಜ ಬೆಳವಣಿಗೆಯನ್ನು ಗಮನಿಸುವುದಕ್ಕಾಗಿ ಬಳಸುವುದು

Doppler Ultrasound:

ಡಾಪ್ಲರ್ ಅಲ್ಟ್ರಾಸೌಂಡ್ ಡಾಪ್ಲರ್ ಪರಿಣಾಮವನ್ನು ಆಧರಿಸಿದೆ. ಅಲ್ಟ್ರಾಸೌಂಡ್ ತರಂಗಗಳನ್ನು ಪ್ರತಿಬಿಂಬಿಸುವ ವಸ್ತುವು ಚಲಿಸುತ್ತಿರುವಾಗ, ಅದು ಪ್ರತಿಧ್ವನಿಗಳ ಆವರ್ತನವನ್ನು ಬದಲಾಯಿಸುತ್ತದೆ, ಅದು ಪ್ರೋಬ್ ಕಡೆಗೆ ಚಲಿಸುತ್ತಿದ್ದರೆ ಹೆಚ್ಚಿನ ಆವರ್ತನವನ್ನು ಮತ್ತು ಪ್ರೋಬ್ ನಿಂದ ದೂರ ಹೋಗುತ್ತಿದ್ದರೆ ಕಡಿಮೆ ಆವರ್ತನವನ್ನು ಸೃಷ್ಟಿಸುತ್ತದೆ. ಆವರ್ತನ ಎಷ್ಟು ಬದಲಾಗಿದೆ ಎಂಬುದು ವಸ್ತು ಎಷ್ಟು ವೇಗವಾಗಿ ಚಲಿಸುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಸ್ತುವು ಎಷ್ಟು ವೇಗವಾಗಿ ಚಲಿಸುತ್ತಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ಡಾಪ್ಲರ್ ಅಲ್ಟ್ರಾಸೌಂಡ್ ಮೆಷಿನ್ ಪ್ರತಿಧ್ವನಿಗಳ ಆವರ್ತನದಲ್ಲಿನ ಬದಲಾವಣೆಯನ್ನು ಅಳೆಯುತ್ತದೆ.

ಡಾಪ್ಲರ್ ಅಲ್ಟ್ರಾಸೌಂಡ್ ಅನ್ನು ಹೃದಯ ಮತ್ತು ಪ್ರಮುಖ ಅಪಧಮನಿಗಳ ಮೂಲಕ ರಕ್ತದ ಹರಿವಿನ ಪ್ರಮಾಣವನ್ನು ಅಳೆಯಲು ಬಳಸಲಾಗುತ್ತದೆ.

Cavitron ultrasonic surgical aspirator (CUSA):

               ಕೆಲವೊಂದು ಮೆದುಳಿನ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಸ್ಪಿರೇಟರ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದರಲ್ಲಿ ಪ್ರೋಬ್ ನ ಮೂಲಕ 23 KHz ಕಂಪನಾಂಕದ ಅಲ್ಟ್ರಾ ಸೋನಿಕ್ ಅಲೆಗಳನ್ನು ಕಳುಹಿಸಿ, ಆ ಅಲೆಗಳ ಮೂಲಕ ಮೆದುಳಿನ ಗೆಡ್ಡೆಗಳನ್ನು ಕತ್ತರಿಸಿ ನಂತರ ಅವುಗಳನ್ನು ಗುಳ್ಳೆಗಳಾಗಿ ಪರಿವರ್ತಿಸಿ, ತದನಂತರ ಲವಣಯುಕ್ತ ದ್ರಾವಣದಿಂದ ಅದನ್ನು ತೆಗೆದು ಹಾಕಲಾಗುತ್ತದೆ.

ಹೀಗೆಂದ ಮಾತ್ರಕ್ಕೆ ಅಲ್ಟ್ರಾ ಸೌಂಡ್ ಪರೀಕ್ಷೆಯಲ್ಲಿ ತೊಂದರೆಗಳು ಇಲ್ಲವೆಂದಿಲ್ಲ. ಅಲ್ಟ್ರಾ ಸೌಂಡ್ ಪರೀಕ್ಷೆಯಲ್ಲಿ ದೇಹದ ಒಳಗೆ ಧ್ವನಿ ಶಕ್ತಿಯನ್ನು ಕಳುಹಿಸುವುದರಿಂದ ಆ ಶಕ್ತಿ ದೇಹದ ಒಳಗೆ ಹೊಕ್ಕಾಗ ಏನಾಗಬಹುದು ಎಂಬ ಪ್ರಶ್ನೆ ಮೂಡುತ್ತದೆ. ಗರ್ಭಿಣಿಯರಲ್ಲಿ ಪದೇ ಪದೇ ಇಂತಹ ಪರೀಕ್ಷೆ ಮಾಡುವುದರಿಂದ ಭ್ರೂಣಕ್ಕೆ ಇದು ಕೆಟ್ಟ ಪರಿಣಾಮ ಬೀರಿ ಮುಂದೆ ಹುಟ್ಟುವ ನವಜಾತ ಶಿಶು ಜನಿಸಿದಾಗ ಅದರ ತೂಕ ಕಡಿಮೆಯಾಗುವ ಸಾಧ್ಯತೆಗಳು ಇವೆ. ಹಾಗೆಯೇ ಈ ಶಬ್ದದ ಅಲೆಗಳನ್ನು ದೇಹದ ಕೋಶಗಳು ಹೀರಿಕೊಂಡು ದೇಹದ ಉಷ್ಣಾಂಶದಲ್ಲಿ ಏರುಪೆರು ಮಾಡುವ ಸಂಭವ ಇರುತ್ತದೆ. ಈ ಉಷ್ಣಾಂಶ ಒಮ್ಮೊಮ್ಮೆ ಕೋಶಗಳಲ್ಲಿ ಗುಳ್ಳೆ ಉಂಟು ಮಾಡುತ್ತವೆ. ಆದುದರಿಂದ ಅಲ್ಟ್ರಾ ಸೌಂಡ್ ಪರೀಕ್ಷೆಗಳನ್ನು ಅನಗತ್ಯವಾಗಿ ಮಾಡದೆ, ಹಿತಮಿತವಾಗಿ ಬೇಕಾದ ಸಂದರ್ಭಗಳಲ್ಲೇ ಮಾಡಬೇಕು.  

ಶಬ್ದ ವಿಜ್ನಾನವು ಧ್ವನಿಮುದ್ರಣ ಮತ್ತು ಧ್ವನಿವರ್ಧಕ ಉಪಕರಣಗಳಲ್ಲಿ ಹೇಗೆ ಬಳಸಲ್ಪಡುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.  

ವಿಠಲ ಶೆಣೈ
Leave a reply

Leave a Reply