“...ಇಲ್ಲಿ ಈ ನೌಕೆಯಿಂದ ಬಂದ ಒಂದು ಕೆಂಪನೆ ಲೈಟ್ ಕೋಲು ನಮ್ಮ ಸುತ್ತಲಿನ ಪ್ರದೇಶವೆಲ್ಲಾ ಓಡಾಡಿತು. ಅಫೀಸರ್ ಕಾರ್ಸನ್ ನಮ್ಮ ಜೀಪಿನ ಬೀಕನ್ ಕೆಂಪು ದೀಪವನ್ನು ಅದರತ್ತ ಬಿಟ್ಟಾಗ ಅದು ಚಕ್ಕನೆ ಪಕ್ಕಕ್ಕೆ ನಿರಾಯಾಸವಾಗಿ ಸರಿಯಿತು. ಮತ್ತೆ ತನ್ನ ಕೆಂಪು ದೀಪವನ್ನು ಆರೇಳು ಸಲ ನೆಲಕ್ಕೆ ಬಿಟ್ಟು ಎಲ್ಲಾ ನೋಡಿಕೊಂಡಿತು. ಅದು ನಮ್ಮ ನೆಲ-ಸಸ್ಯಗಳು ಎಲ್ಲವನ್ನೂ ಗಮನಿಸಿಕೊಳ್ಳುತ್ತಿದೆ ಎಂದೆನಿಸಿತು. ನಂತರ ಆ ನೌಕೆಯು ಪೂರ್ವದಿಕ್ಕಿನ ಆಗಸಕ್ಕೆ ಹೋಗಿ ಅಲ್ಲಿ ನಿಂತಿತು.

  • ಮಿಲಿಟರಿ ಆರ್ಕೈವಿನಿಂದ ಲಭಿಸಿದ 17 ವರ್ಷಾನಂತರದ ದಾಖಲೆ:-

1957 ಮೇ 20 ರಲ್ಲಿ ಇಂಗ್ಲೆಂಡಿನ ಮ್ಯಾನ್‌ಸ್ಟನ್ ರಾಯಲ್ ಏರ್ ಫೋರ್ಸ್ ಸ್ಟೇಷನ್ನಿನಿಂದ ವಿಮಾನದಲ್ಲಿ ಹೊರಟ ಅಮೇರಿಕನ್ ಪೈಲೆಟ್ ಮತ್ತು ಸಹೋದ್ಯೋಗಿ ಬರೆದುಕೊಟ್ಟ ಮೇಲಿನ ಈ ಚಿತ್ರವನ್ನು ಬರೆದು ನ್ಯಾಶನಲ್ ಆರ್ಕೈವ್ಸ್ ನಲ್ಲಿಟ್ಟಿತ್ತು, ಈಗ ಸಾರ್ವಜನಿಕವಾಗಿದೆ.

“ ನನ್ನನ್ನೂ, ನನ್ನ ಸಹ ಪೈಲೆಟ್ಟನ್ನು ಕರೆದು ಲಂಡನ್ನಿನ 70 ಕಿಮೀ ದೂರದಲ್ಲಿ ಗಗನದಲ್ಲಿ ಹಾರುತ್ತಿರುವ ಭೂತಾಕಾರದ ಅನಾಮಧೇಯ ವಸ್ತುವನ್ನು ತಡೆದು ಅಲ್ಲೇ ಮುಗಿಸಿಬಿಡಲು ಮೇಲಧಿಕಾರಿಗಳು ಹೇಳಿದರು.

“ನಾವು ನೋಡಿದ ಈ ಹಾರುವ ವಾಹನ ಅತ್ಯಂತ ವಿಚಿತ್ರ ವರ್ತನೆಯನ್ನು ಆಗಸದಲ್ಲಿ ತೋರುತ್ತಿತ್ತು.”ಎನ್ನುತ್ತಾನೆ ಈ ಹೆಸರು ಗುಪ್ತವಾಗಿಟ್ಟ ಪೈಲೆಟ್, 1988 ರಲ್ಲಿ UFO ತಜ್ಞರಿಗೆ ಕೊಟ್ಟ ಟೈಪ್ ಮಾಡಿದ ಪೇಪರ್ ವರದಿಯಲ್ಲಿ.:- “ಈ ವಾಹನ ಗಾಳಿಯಲ್ಲಿ ಸುಮ್ಮನೆ ತಾನಾಗಿಯೇ ಬಹಳ ಕಾಲ ನಿಂತಿದೆಯಂದೂ , ಅದನ್ನು ಮೊದಲು ಕಂಡ ಅಧಿಕಾರಿಗಳು ಆಶ್ಚರ್ಯ ಮತ್ತು ಗಾಬರಿಯಿಂದ ಹೇಳಿದ್ದರು.

“ನಮ್ಮನ್ನು ಮೋಡವಿದ್ದ ಅಂದಿನ ಆಗಸದಲ್ಲಿ ಪೂರ್ತಿ ವೇಗದಲ್ಲಿ ಹಾರಿ ಅದರತ್ತ 24 ರಾಕೆಟ್ ಗಳನ್ನು ಹೊಡೆದು ಬೀಳಿಸಲು ಆಜ್ಞೆ ಕೊಟ್ಟಿದ್ದರು. ನನ್ನ ಕಿವಿಗಳನ್ನೇ ನಂಬದೇ ಏನಂದಿರಿ ಎಂದು ಅವರನ್ನು ಮತ್ತೆ ಕೇಳಿದ್ದೆ!”

(ಈ ವರದಿ ಬಂದ ನಂತರ ಅಮೆರಿಕಾದ ಮಿಲ್ಟನ್ ಟೊರೇಸ್ ಎಂಬಾತ ಫ್ಲೋರಿಡಾದಿಂದ ಬ್ರಿಟನ್ನಿನ ಸ್ಕೈ ನ್ಯೂಸಿಗೆ ‘ತಾನೇ ಆ ಪೈಲೆಟ್’ ಎಂದು ಫೋನ್ ಮಾಡಿ ದೃಢಪಡಿಸಿದ್ದಾನೆ)

“ಆ ಹಾರುವ ವಸ್ತು ಬರೇ ನಮ್ಮ ರೆಡಾರ್ ಅಂಚಿನಲ್ಲಿ ಕಾಣುತ್ತಿದ್ದಂತೆಯೇ ಮರುಕ್ಷಣ ಪಕ್ಕದಲ್ಲಿ ಜುಯ್ಯನೆ ರಭಸವಾಗಿ ಹಾರಿಹೋಗಿತ್ತು.. ಅಂತಾ ವೇಗವನ್ನು ನಾನು ಎಲ್ಲಿಯೂ ಕಂಡಿಲ್ಲ, ಕೇಳಿಲ್ಲ… ನಮಗೆ ಅದರತ್ತ ರಾಕೆಟ್ ಫೈರ್ ಮಾಡಲು ಚಿಕ್ಕವಕಾಶವನ್ನೂ ಕೊಡಲಿಲ್ಲ…ಅರೆ ಕ್ಷಣದಲ್ಲಿ ನನ್ನನ್ನು ಹಿಂದೆ ಬಿಟ್ಟು ಎಲ್ಲಿಗೂ ಹಾರಿ ಮಾಯವಾಗಿತ್ತು. ನನಗೆ ಸ್ವಲ್ಪವೂ ಅರ್ಥವಾಗಲಿಲ್ಲ, ಹೇಗೆ ತಾನೆ ಆ ವಸ್ತು ಹಾಗೆ ಮಾಯವಾಗಿಬಿಟ್ಟಿತೆಂದು. ನನಗೆ :”ತಕ್ಷಣ ಹಾಗಾದರೆ ಮಿಶನ್ ಮುಗಿಯಿತು , ಇಳಿದು ಬಾ” ಎಂದರು ಕಮಾಂಡ್.. ನಾನು ಕೆಳಗೆ ಬಂದು ನಮ್ಮ ಅಧಿಕಾರಿಗಳಿಗೆ ಈ ವರದಿ ಕೊಟ್ಟೆ, ಯಾರೂ ಏನೂ ನನಗೆ ವಿವರ ಹೇಳಲಿಲ್ಲ, ಪ್ರತಿಕ್ರಿಯೆ ಕೊಡಲಿಲ್ಲ, ಅವರಿಗೆ ಏನೋ ಹೆಚ್ಚು ಗೊತ್ತಿತ್ತೆಂದು ನಾನು ಊಹಿಸಬಲ್ಲೆನಾಗಿದ್ದೆ. ಇದಕ್ಕೆಲ್ಲಾ ಸುಮ್ಮನಿರಬೇಕೆಂಬುದು ಏರ್ ಫೋರ್ಸಿನಲ್ಲಿ ಅಲಿಖಿತ ಶಾಸನ..”

  • ಈ ಮಿಲಿಟರಿ ಆರ್ಕೈವಿನಲ್ಲಿ 10,000 ಕ್ಕೂ ಹೆಚ್ಚು ಇಂತಾ ವರದಿಗಳಿವೆ. ಅದರಲ್ಲಿ ಇನ್ನೊಂದು ಕೇಸಿನಲ್ಲಿ ಅಲ್ಮೊಗೋರ್ಡೋ ನ 1950 ರ ಹೋಲೋಮನ್ ಏರ್ ಫೋರ್ಸ್ ಬೇಸಿನಲ್ಲಿ ಸ್ಪೆಶಲ್ ಇನ್ವೆಸ್ಟಿಗೇಷನ್ಸ್ ರವರು ವರದಿಯಲ್ಲಿ “ಒಂದು ನಕ್ಷತ್ರಾಕಾರದ ವಸ್ತು ಕಾಣುತ್ತಿದೆ, ಬಿಳಿಯಿಂದ ಹಸಿರು ಮತ್ತು ಕೆಂಪು ದೀಪಕ್ಕೆ ತಿರುಗುತ್ತಾ ಚಿಟ್ಟೆ ಹಾರುವಂತೆ ಎತ್ತೆತ್ತಲೋ ಯದ್ವತದ್ವಾ ಹಾರುತ್ತಿದೆ. ಯಾವ ವಿಮಾನದಂತಾ ವಾಹನವೂ ಹೀಗೆಲ್ಲಾ ಹಾರಲಾಗದು” ಎಂದಿದ್ದಾರೆ.
  • ಒಂದು ನಿಜವಾದ ಘಟನೆಯ ಚಿತ್ರೀಕರಿಸಿದ ಯುಟ್ಯೂಬ್ ವಿಡಿಯೋ ನೋಡಿ: https://www.youtube.com/watch?v=3RlbqOl_4NA
  • 1965 ರಲ್ಲಿ ಏರ್ ಫೋರ್ಸ್ ಮೇಜರ್ ಜ್ಯಾಕ್ ಬಾಂಡ್ ರವರು ರೈಟ್ –ಪ್ಯಾಟರ್ಸನ್ ನಿಲ್ದಾಣದಿಂದ ಹೊರಟ ವಿಮಾನಯಾನದಲ್ಲಿ ಒಂದು ವಸ್ತುವು ಸೈನ್ ವೇವ್ ತರಹ ವಂಕಿಯಾಗಿ ( )ಹಾರುತ್ತ ಬರುತ್ತಿದೆ, ಏನು ಮಾಡಬೇಕು ಎಂದು ಕಮಾಂಡನ್ನು ಕೇಳಿದ ವರದಿಯಿದೆ. “ಅದು ಏರಿಳಿಯುವಾಗ ಬಿಳಿ ಮತು ಗ್ರೇ ಬಣ್ಣವನ್ನು ತಾನಾಗಿಯೇ ಬದಲಿಸಿಕೊಳ್ಳುತ್ತಾ ಕೊನೆಗೆ ದೂರದ ದಿಗಂತಕ್ಕೆ 600 ನಾಟಿಕಲ್ ಮೈಲಿ ವೇಗದಲ್ಲಿ ಹಾರಿ ಕಾಣೆಯಾಯಿತು, ಇದೇನು?” ಎಂದಿದ್ದಾರೆ.
  • ಫ್ರಾನ್ಸ್ ದೇಶದಲ್ಲಿ ಇಂತಾ ಸರಕಾರಿ ವರದಿಗಳನ್ನು ಸಾರ್ವಜನಿಕರಿಗೆ ಮುಕ್ತ ಮಾಡಿದಾಗ ಅಲ್ಲಿ 9% ಮಾತ್ರ ಹಾರುವ ತಟ್ಟೆಗಳ ಕೇಸುಗಳನ್ನು “ಕಷ್ಟಪಟ್ಟು” ಹೇಗಾದರೂ ವಿವರಿಸಲಾಗಿದೆ. ಮಿಕ್ಕವನ್ನು ಅವರು ಮುಚ್ಚಿಡಲಾಗಲೇ ಇಲ್ಲ. ಉದಾಹರಣೆಗೆ..1994 ರಲ್ಲಿ ಏರ್ ಫ್ರಾನ್ಸ್ ವಿಮಾನವೊಂದು ಗಗನದಲ್ಲಿದ್ದಾಗ ವಿಮಾನದಲ್ಲಿದ್ದವರೆಲ್ಲಾ ನೋಡಿದ್ದು- “ದೊಡ್ಡ ಬ್ರೌನ್ ಮತ್ತು ಕೆಂಪು ಶೇಡ್ ಇದ್ದ ತಟ್ಟೆಯಂತಾ ವಾಹನವೊಂದು ನಮ್ಮ ಮುಂದೆ ದಿಗಂತದಲ್ಲಿ ತೇಲುತ್ತಿತ್ತು. ಎಷ್ಟು ಪ್ರಯತ್ನ ಪಟ್ಟರೂ ಅದನ್ನು ಬಲೂನ್, ಪ್ರಯೋಗದ ವಸ್ತು ಎಂದೋ ಕರೆಯಲಾಗಲಿಲ್ಲ. ಏಕೆಂದರೆ ಅದು ತನ್ನ ಆಕಾರ ( ಶೇಪ್) ಅನ್ನೇ ಬದಲಿಸುತ್ತಾ ಇರುತ್ತಿತ್ತು. ಇದುವರೆಗೂ ಅದನ್ನು ಯಾರೂ ವಿವರಿಸಲಾಗಿಲ್ಲ”

ಮೇಲಿನದು ಬ್ರೆಜಿಲ್ ದೇಶದಲ್ಲಿ 1958 ಜನವರಿ 16 ರಂದು IGY reseach vessel , ಟ್ರಿನಿಡೇಡ್ ಐಲ್ ಎಂಬ ದ್ವೀಪದ ಬಳಿ ಆಗಸದಲ್ಲಿ ಹಲವಾರು ನೇವಿ ಮತ್ತು ಏರ್ ಫೋರ್ಸ್ ಅಧಿಕಾರಿಗಳು ಒಟ್ಟಿಗೇ ಕಂಡದ್ದನ್ನು ಈ ಮೇಲಿನಂತೆ ಫೋಟೋ ತೆಗೆದು ಮಾಧ್ಯಮಕ್ಕೆ ಕೊಟ್ಟು ಅದನ್ನು “ಫೋಹಾ ಡಾ ಮನೋ” ಎಂಬ ಪತ್ರಿಕೆಯಲ್ಲಿ 1958 ರಲ್ಲಿ ಪ್ರಕಟಿಸುವ ಮುನ್ನ ಅಲ್ಲಿನ ಸರಕಾರದ ಮಂತ್ರಿಗಳು ಮತ್ತು ಪ್ರೆಸಿಡೆಂಟ್ ಅಧಿಕೃತ ಒಪ್ಪಿಗೆ ಪಡೆದಿತ್ತು…ಇದು ಸರಕಾರಿ ದಾಖಲೆಯಲ್ಲಿ ’ವಿವರಿಸಲಾಗದ ಕೇಸ್’ ಎಂದಿದೆ.

  • THE NATIONAL INVESTIGATIONS COMMITTEE ON AERIAL PHENOMENA ( NICAP) ಎಂಬ ವರಿಷ್ಟ ಡಿಫೆನ್ಸ್ ಮತ್ತು ತಜ್ಞರ ಸಮಿತಿಯೊಂದು ಬಹು ದೊಡ್ಡ ಶೋಧನಾತ್ಮಕ ರಿಪೋರ್ಟನ್ನು ಅಮೇರಿಕಾದಲ್ಲಿ ತಯಾರಿಸಿತು. ಅದರಲ್ಲಿ 1960 ರಲ್ಲಿ CIA ದ ನಿವೃತ್ತ ಅಡ್ಮಿರಲ್ ಹಿಲ್ಲೆನ್ಕೊಟ್ಟರ್ ಯು ಎಸ್ ಎನ್ , ಎಂಬವರ ವರದಿಯಲ್ಲಿ “ ನಾವು ಈ UFO ಎಂಬುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕಂಡುಹಿಡಿಯಲೇಬೇಕು” ಎಂದಿದ್ದಾರೆ. ಆದರೆ ಎರಡನೇ ವಿಶ್ವಯುದ್ಧದ ಸಮಯದಲ್ಲೇ ಯುದ್ಧಭೂಮಿಯ ವಾಯು ಸೇನಾ ನೆಲೆಗಳ ಮೇಲೆ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಹಾರುವ ತಟ್ಟೆಗಳು ಆಗಸದಲ್ಲಿ ಕಾಣಿದ್ದರ ಬಗ್ಗೆ-

“ನನಗೆ ಖಚಿತವಾಗಿ ಗೊತ್ತಿರುವ ಹಾಗೆ, ಆಗ ರಷ್ಯಾ ಬಳಿಯಾಗಲಿ, ನಮ್ಮ ಬಳಿಯಾಗಲೀ ಆ ಹಾರುವ ತಟ್ಟೆಗಳ ವೇಗ ಮತ್ತು ಚಲನೆಯ ಹತ್ತಿರ-ಹತ್ತಿರವೂ ಬರುವ ತಂತ್ರಜ್ಞಾನವಾಗಲಿ, ಉದ್ದೇಶವಾಗಲೀ ಇರಲಿಲ್ಲ. ಅಷ್ಟೇ ಏಕೆ, ಈಗಲೂ ಇಲ್ಲ” ಎಂದು ಮುಕ್ತಾಯ ಮಾಡಿದ್ದಾರೆ.

ಅದರಲ್ಲೇ:

ಆಗಸ್ಟ್ 1960, 13-18ನೇ ತಾರೀಕಿನ ನಡುವೆ ಹಾರುವ ತಟ್ಟೆ ಅಥವಾ ಅನ್ಯಗ್ರಹ ವಾಹನಗಳ 18 ಘಟನೆಗಳು ಅಮೆರಿಕದ 30 ಶಹರುಗಳಲ್ಲಿ ವರದಿಯಾಯಿತು. ಅದರಲ್ಲಿ 14 ಜನ ಪೋಲಿಸ್ ಅಧಿಕಾರಿಗಳು ರಿಪೋರ್ಟ್ ಫೈಲ್ ಮಾಡಿದ್ದರು.

ಆಗಸ್ಟ್ 13 ರ “ಬಹುಮುಖ್ಯ” ಎಂದು ಫೈಲ್ ಮಾಡಿದ ವರದಿಯಲ್ಲಿ ರಾತ್ರಿ 11.50 ( ಪಸಿಫಿಕ್ ಟೈಮ್) ಸಮಯಕ್ಕೆ ಆಫೀಸರ್ ಚಾರ್ಲ್ಸ್ ಕಾರ್ಸನ್ ಮತ್ತು ಸ್ಟ್ಯಾನ್ಲಿ ಸ್ಕಾಟ್ ಇಬ್ಬರೂ ಬ್ಲಫ್ ಎಂಬ ಪ್ರದೇಶದಲ್ಲಿ ಅಕಸ್ಮಾತಾಗಿ ಕೆಲವೊಮ್ಮೆ ಓವರ್ ಸ್ಪೀಡ್ ಮಾಡುವ ಮೋಟರ್ ಸೈಕಲ್ ಸವಾರರನ್ನು ಹಿಡಿಯಲು ನಿಂತಿದ್ದಾಗ, ಆಕಾಶದಲ್ಲಿ ತೀರಾ ಕೆಳಗೆ ಹಾರುವ ವಾಹನ ಕಾಣಿಸಿತು. ಅವರು ಬರೆಯುತ್ತಾರೆ:

“ಅದು ನಮ್ಮ ಬಳಿ ಬರುತ್ತಿದ್ದ ವೇಗಕ್ಕೆ ಈ ಪ್ಲೇನ್ ಅಫಘಾತವಾಗಿ ಬೀಳುವುದು ಖಂಡಿತಾ ಎಂದು ನಾವು ಜೀಪಿನಿಂದ ಹೊರಗೆ ಹಾರಿ ಬಿದ್ದೆವು. ಆದರೆ ಅದು ಇದ್ದಕ್ಕಿದ್ದಂತೆ ಸುಮ್ಮನೆ ಗಾಳಿಯಲ್ಲಿ ನಿಂತೇ ಬಿಟ್ಟಿತು. ನಾವು ನಿಂತ ಜಾಗದಿಂದ ಅದು ಅಲುಗಾಡತ್ತಲೂ ಇರಲಿಲ್ಲ, ಎಂಜಿನ್ನಿನ ಚಿಕ್ಕ ಸದ್ದೂ ಇರಲಿಲ್ಲ…ಅರೆ, ಇದೆಂತಾ ವಿಮಾನ? ಅರೆರೆ,ಇದು ವಿಮಾನವೇ ಅಲ್ಲ ಎಂದೆಲ್ಲಾ ಗೊಂದಲವಾಯಿತು. ಅದು ಕೇವಲ ನೆಲದಿಂದ 100-200 ಅಡಿ ಎತ್ತರದಲ್ಲಿ ಖಾಲಿ ಆಗಸದಲ್ಲಿ ತೆಪ್ಪಗೆ ನಿಂತಿದೆ! ಆಗ ಮರುಕ್ಷಣವೆ ಅದು ವಿರುದ್ಧ ದಿಕ್ಕಿನಲ್ಲಿ 500’ ಎತ್ತರಕ್ಕೆ ಗಕ್ಕನೆ ಏರಿತು. ಅಲ್ಲಿಗೆ ಹೋಗಿ ಮತ್ತೆ ನಿಂತಿತು. ಈಗ ನಮಗೆ ಸ್ಪಷ್ಟವಾಗಿ ಈ ನೌಕೆ ಕಾಣಿಸಹತ್ತಿತ್ತು. ಅದರ ಹೊಟ್ಟೆಯ ಸುತ್ತಲೂ ಬೆಳಕು ಚಿಮ್ಮಿಸುವ ಒಂದು ಚೆಂಡು ಜೋರಾಗಿ ಸುತ್ತುತ್ತಿತ್ತು. ಹಾಗೆಯೇ ಅ ನೌಕೆ ಅಲ್ಲಿಂದ ಗಾಳಿಯಲ್ಲಿ ವಿಚಿತ್ರ ಬಗೆಯ ಸರ್ಕಸ್ ಚಲನೆಗಳನ್ನು ಮಾಡಿತು, ನಂಬಲೇ ಸಾಧ್ಯವಾಗಲಿಲ್ಲ. ನಮ್ಮ ಕಣ್ಣಿಗೆ ಎಲ್ಲಾದರೂ ದೋಷವಾಗಿದೆಯೋ ಎಂಬಂತೆ…”

“ ನಾವು ಆಗ ವೈರ್ಲೆಸ್ಸಿನಲ್ಲಿ ಹತ್ತಿರದ ಟೆಹೋಮಾ ಕೌಂಟಿ ಶೆರೀಫರ ಆಫೀಸಿನವರ ಜತೆ ಮಾತಾಡಿದೆವು. ಈ ತರಹದ ವಾಹನವನ್ನು ತಕ್ಷಣ ರೆಡಾರ್ ಅಧಿಕಾರಿಗಳಿಂದ ಪರೀಕ್ಷಿಸಿ ನಮಗೆ ವರದಿ ಮಾಡಿ ಎಂದು..ಆದರೆ ಆ ರೆಡಾರ್ ಅಧಿಕಾರಿಗಳು ಅಂತಾ ವಾಹನ ಯಾವುದನ್ನೂ ನಿಮ್ಮ ಹತ್ತಿರ ನಾವು ಗುರುತು ಹಿಡಿಯಲಾಗಿಲ್ಲ ಎಂದುಬಿಟ್ಟರು.

“…ಇಲ್ಲಿ ಈ ನೌಕೆಯಿಂದ ಬಂದ ಒಂದು ಕೆಂಪನೆ ಲೈಟ್ ಕೋಲು ನಮ್ಮ ಸುತ್ತಲಿನ ಪ್ರದೇಶವೆಲ್ಲಾ ಓಡಾಡಿತು. ಅಫೀಸರ್ ಕಾರ್ಸನ್ ನಮ್ಮ ಜೀಪಿನ ಬೀಕನ್ ಕೆಂಪು ದೀಪವನ್ನು ಅದರತ್ತ ಬಿಟ್ಟಾಗ ಅದು ಚಕ್ಕನೆ ಪಕ್ಕಕ್ಕೆ ನಿರಾಯಾಸವಾಗಿ ಸರಿಯಿತು. ಮತ್ತೆ ತನ್ನ ಕೆಂಪು ದೀಪವನ್ನು ಆರೇಳು ಸಲ ನೆಲಕ್ಕೆ ಬಿಟ್ಟು ಎಲ್ಲಾ ನೋಡಿಕೊಂಡಿತು. ಅದು ನಮ್ಮ ನೆಲ-ಸಸ್ಯಗಳು ಎಲ್ಲವನ್ನೂ ಗಮನಿಸಿಕೊಳ್ಳುತ್ತಿದೆ ಎಂದೆನಿಸಿತು. ನಂತರ ಆ ನೌಕೆಯು ಪೂರ್ವದಿಕ್ಕಿನ ಆಗಸಕ್ಕೆ ಹೋಗಿ ಅಲ್ಲಿ ನಿಂತಿತು. ಆಗ ಅಂತದೇ ಎರಡನೇ ನೌಕೆಯೂ ಬಂದು ಅದರ ಪಕ್ಕ ಗಾಳಿಯಲ್ಲಿ ನಿಂತಿತು. ಮತ್ತೆ ಎರಡೂ ಕೆಂಪು ದೀಪಗಳನ್ನು ಬಿಟ್ಟು ನೆಲವನ್ನೆಲ್ಲಾ ಪುನಃ ನೋಡಿಕೊಂಡವು. ನಂತರ ಎರಡೂ ವಾಹನಗಳು ಪೂರ್ವ ದಿಗಂತದಲ್ಲಿ ಬಹಳ ವೇಗವಾಗಿ ಸಾಗಿ ಕಣ್ಮರೆಯಾದವು”

ಪೋಲಿಸರಿಬ್ಬರು ವಾಪಸ್ ತಮ್ಮ ಕಚೇರಿಗೆ ತೆರಳಿದಾಗ ಅಲ್ಲಿ ಇನ್ನಿಬ್ಬರು ಅಧಿಕಾರಿಗಳು- ಡೆಪ್ಯುಟಿ ಪ್ರೈ ಮತ್ತು ಮಾಂಟೆಗೋಮೆರಿಯನ್ನು ಸಂಧಿಸಿದರು.

“ಅವರೂ ಅದನ್ನೆಲ್ಲಾ ಕಂಡಿದ್ದು ನಮ್ಮ ಎರಡೂ ತಂಡದ ಕತೆ ಒಂದೇ ಬಗೆಯದಾಗಿತ್ತು!”

ಒಟ್ಟಿನಲ್ಲಿ ಸ್ಕಾಟ್ ಮತ್ತು ಕಾರ್ಸನ್ ಈ ನೌಕೆಯನ್ನು ಎರಡು ಗಂಟೆ ಕಾಲ ನೋಡಿದರಂತೆ. ಆ ವಸ್ತು ನಮಗೆ ತೀರಾ ಹತ್ತಿರ ಬಂದಾಗಲೆಲ್ಲ ನಮ್ಮ ರೇಡಿಯೋ ತರಂಗಗಳ ಸಿಗ್ನಲ್ ಬಂದ್ ಆಗುತ್ತಿದ್ದವು. ..ನಾವು ಮೊದಮೊದಲು ಭಯಪಟ್ಟರೂ ಧೈರ್ಯ ತಂದುಕೊಂಡು ಇದನ್ನೆಲ್ಲಾ ನೋಡೇಬಿಡೋಣ ಎಂದು ಕಾದು ನಿಂತಿದ್ದೆವು.. ಆ ನೌಕೆಯಲ್ಲಿದ್ದವರೂ ನಮ್ಮನ್ನು ನೋಡಿ ಬೇಕಂತಲೇ ಆಟವಾಡಿಸಿದರೋ ಎಂದೆನಿಸಿತು. ಆದರೆ ಉತ್ತರ ಸಿಗಲೇ ಇಲ್ಲ…”

ಇವರು ನಾಲ್ವರನ್ನೂ ನಂತರ ಏರ್ ಫೋರ್ಸ್ ಇಂಟೆಲಿಜೆನ್ಸಿನವರು ವಿಚಾರಿಸಿ, “ಇವರೆಲ್ಲೋ ಮಾರ್ಸ್ ಗ್ರಹದ ಪ್ರತಿಬಿಂಬ ಮತ್ತೆರಡು ಹತ್ತಿರದ ತಾರೆಗಳ ರಿಫ್ರ್ಯಾಕ್ಶನ್ ಕಂಡಿದ್ದಾರೆ,. ನಮ್ಮ ರೆಡಾರಿನಲ್ಲಿ ಕಾಣದಿದ್ದರಿಂದ ಅಂತಾ ಹೊರಗಿನ ನೌಕೆಯೇ ಇರಲಿಲ್ಲ “ ಎಂದು ಕೇಸು ಮುಚ್ಚಿಬಿಟ್ಟರು.

ಆಗ NICAP ನವರು ಇದನ್ನು ಮರುವಿಚಾರಣೆ ಮಾಡಿ ತಜ್ಞ ಅಂತರಿಕ್ಷ ವೀಕ್ಷಕರಿಂದ ಪತ್ತೆ ಹಚ್ಚಿಸಿದಾಗ, ಆ ಸಮಯದಲ್ಲಿ ಮಾರ್ಸ್( ಮಂಗಳ) ಗ್ರಹ ಮತ್ತು ಅದರ 2 ನಕ್ಷತ್ರಗಳು ಎಲ್ಲಾ ನಮ್ಮ ದಿಗಂತದ ಕೆಳಗೆ ಇದ್ದವೆಂದೂ, ಹಾಗಾಗಿ ಈ ರೀತಿಯ ದೀಪದ ರಿಫ್ರ್ಯಾಕ್ಷನ್ ಮುಂತಾದವೆಲ್ಲಾ ಈ ಕೇಸಿನಲ್ಲಿ ಸಾಧ್ಯವಿಲ್ಲವೆಂದೂ, ಆ ಪೋಲಿಸ್ ಅಧಿಕಾರಿಗಳು ವರದಿ ಮಾಡಿದ್ದು ಸುಳ್ಳಲ್ಲ, ಸತ್ಯವಾದದ್ದು ಎಂದು ಇನ್ನೂ ಒಬ್ಬರು ಬಾಹ್ಯಾಕಾಶ ವಿಜ್ಞಾನಿ ಸೇರಿದಂತೆ ಇವರೆಲ್ಲಾ ಅಭಿಪ್ರಾಯಪಟ್ಟರು.

ಹೀಗಾಗಿ ಇಂತಾ ಘಟನೆಗಳ ನಂತರ NICAP ಇಂತಾ ಘಟನೆಗಳನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಎಲ್ಲಾ ಸರಕಾರಿ ದಾಖಲೆ ಮತ್ತು ಅಧಿಕಾರಿಗಳನ್ನು ವಿಚಾರಿಸುವ ಹಕ್ಕು ಪಡೆದು ಮುಂದುವರೆಯಿತಂತೆ.

ನಾಗೇಶ್ ಕುಮಾರ್ ಸಿ ಎಸ್
Leave a replyComments (-1)

Leave a Reply