ಸಿಲಿಂಡರ್ ನ ಮೇಲ್ಮೈ ಮತ್ತು ಎತ್ತರ ಹೆಚ್ಚಿದ್ದರೆ ಆಗ ಅದು ಶಬ್ದದ ದೊಡ್ಡ ಕಂಪನಾಂಕಗಳನ್ನು ಹೀರಿಕೊಂಡು, ಸಣ್ಣ ಕಂಪನಾಂಕಗಳನ್ನು ಮಾತ್ರ ಹರಡುತ್ತದೆ. ಈ ಅಲೆಗಳು ಸಿಲಿಂಡರ್ ನ ತಳಭಾಗದಿಂದ ಪ್ರತಿಧ್ವನಿಸಿ, ಮತ್ತೆ ಮೇಲ್ಭಾಗಕ್ಕೆ ಬಡಿದು ಹಾಗೆಯೇ ಬಹಳ ಸಲ ಮೇಲೆ-ಕೆಳಗೆ ಸಂಚರಿಸಿದಾಗ ಸಣ್ಣ ಕಂಪನಾಂಕಗಳು (low frequency) ಮಾತ್ರ ಉಳಿಯುತ್ತವೆ. ಹಾಗಾಗಿ ಇಂತಹ ಉಪಕರಣಗಳು ‘ಢಗ್, ಢಗ್, ಢಗ್’ ಎಂದು ಶಬ್ದಗಳನ್ನು ಉತ್ಪಾದಿಸುತ್ತದೆ. ಉದಾಹರಣೆಗೆ ಡ್ರಮ್ಸ್ ಯೂನಿಟ್ ನ ಅತಿ ದೊಡ್ಡ ಡ್ರಮ್.

ಶಬ್ದದ ಅಲೆಗಳು ಒಂದು ನಿರ್ದಿಷ್ಟ ಮತ್ತು ಸ್ಥಿರವಾದ ಕಂಪನಾಂಕವನ್ನು ಹೊಂದಿದರೆ ಅದು ನಮಗೆ ಕೇಳಲು ಇಂಪಾಗಿ ಅದೇ ಶಬ್ದದ ಅಲೆಗಳನ್ನು ಸಂಗೀತ ಎಂದು ನಾವು ಕರೆಯುತ್ತೇವೆ. ಈ ತರಹದ ಕಂಪನಾಂಕವನ್ನು ನಾವು ನಮ್ಮ ಬಾಯಿಯಿಂದ ಬರಿಸಬಹುದು, ಪ್ರಾಣಿ ಪಕ್ಷಿಗಳ ಕೂಗಲ್ಲೂ ಮೂಡಬಹುದು ಅಥವಾ ಸಂಗೀತ ಉಪಕರಣಗಳಿಂದ ಹೊರಬರಬಹುದು. ಈ ಅಧ್ಯಾಯದಲ್ಲಿ ಸಂಗೀತ ಉಪಕರಣಗಳ ವಿಧಗಳು, ಅವುಗಳು ಸಂಗೀತವನ್ನು ಹೇಗೆ ಉಂಟು ಮಾಡುತ್ತದೆ ತಿಳಿಯೋಣ ಬನ್ನಿ.

ಸಂಗೀತ ವಾದ್ಯಗಳನ್ನು ಈ ಕೆಳಗಿನಂತೆ ಪ್ರತ್ಯೇಕಿಸಬಹುದು:

  • ಚರ್ಮ ವಾದ್ಯ (ಡೋಲು, ಡ್ರಮ್ಸ್)
  • ತಂತಿ ವಾದ್ಯ (ಗಿಟಾರ್, ವೀಣೆ)
  • ಗಾಳಿ/ಊದುವಾದ್ಯ(ಕೊಳಲು, ಸ್ಯಾಕ್ಸೋಫೋನ್)
  • ಇಲೆಕ್ಟ್ರಾನಿಕ್ ವಾದ್ಯ (ಕೀ ಬೋರ್ಡ್)

ಚರ್ಮ ವಾದ್ಯದಲ್ಲಿ ಸಾಮಾನ್ಯವಾಗಿ ಪ್ರಾಣಿಯ ಚರ್ಮವನ್ನು ಒಂದು ವೃತ್ತಾಕಾರದ ಸಿಲಿಂಡರ್ ಮೇಲೆ ಬಿಗಿಯಾಗಿ ಕಟ್ಟಿರುತ್ತಾರೆ. ಆ ಚರ್ಮದ ಮೇಲೆ ಕಡ್ಡಿ ಅಥವಾ ಕೈಯಲ್ಲಿ ಬಡಿದಾಗ ಆ ಚರ್ಮವು ಕಂಪಿಸುತ್ತದೆ. ಹೀಗೆ ಕಂಪಿಸುತ್ತಿರುವ ಚರ್ಮವು ಸಿಲಿಂಡರ್ ಒಳಗಡೆಯ ಗಾಳಿಯನ್ನು ಪಲ್ಲಟಿಸಿ ಶಬ್ದದ ಅಲೆಗಳನ್ನು ಮೂಡಿಸುತ್ತದೆ. ಯಾವ ತರಹದ ಶಬ್ದ ಮೂಡಬೇಕು ಎಂಬುವುದನ್ನು, ಸಿಲಿಂಡರ್ ನ ಎತ್ತರ, ಗಾತ್ರ, ಅದರ ಆಕೃತಿ, ಚರ್ಮವನ್ನು ಎಷ್ಟು ಬಿಗಿಯಾಗಿ ಕಟ್ಟಿರಬೇಕು, ಚರ್ಮ ಎಷ್ಟು ದಪ್ಪವಾಗಿರಬೇಕು ಈ ಎಲ್ಲಾ ಅಂಶಗಳು ನಿರ್ಧರಿಸುತ್ತವೆ. ಎಲ್ಲಾ ಚರ್ಮವಾದ್ಯಗಳು ಸಿಲಿಂಡರ್ ಆಕೃತಿಯೇ ಇರುವುದಿಲ್ಲ. ಡ್ರಮ್ಸ್ ಸಿಲಿಂಡರ್ ಆಕೃತಿಯಲ್ಲಿ ಇದ್ದರೆ, ತಬ್ಲಾ ಮತ್ತು ಮೃದಂಗ ಬೇರೆಯೇ ರೂಪದಲ್ಲಿ ಇರುತ್ತವೆ.

ಸಿಲಿಂಡರ್ ನ ಮೇಲ್ಮೈ ಮತ್ತು ಎತ್ತರ ಹೆಚ್ಚಿದ್ದರೆ ಆಗ ಅದು ಶಬ್ದದ ದೊಡ್ಡ ಕಂಪನಾಂಕಗಳನ್ನು ಹೀರಿಕೊಂಡು, ಸಣ್ಣ ಕಂಪನಾಂಕಗಳನ್ನು ಮಾತ್ರ ಹರಡುತ್ತದೆ. ಈ ಅಲೆಗಳು ಸಿಲಿಂಡರ್ ನ ತಳಭಾಗದಿಂದ ಪ್ರತಿಧ್ವನಿಸಿ, ಮತ್ತೆ ಮೇಲ್ಭಾಗಕ್ಕೆ ಬಡಿದು ಹಾಗೆಯೇ ಬಹಳ ಸಲ ಮೇಲೆ-ಕೆಳಗೆ ಸಂಚರಿಸಿದಾಗ ಸಣ್ಣ ಕಂಪನಾಂಕಗಳು (low frequency) ಮಾತ್ರ ಉಳಿಯುತ್ತವೆ. ಹಾಗಾಗಿ ಇಂತಹ ಉಪಕರಣಗಳು ‘ಢಗ್, ಢಗ್, ಢಗ್’ ಎಂದು ಶಬ್ದಗಳನ್ನು ಉತ್ಪಾದಿಸುತ್ತದೆ. ಉದಾಹರಣೆಗೆ ಡ್ರಮ್ಸ್ ಯೂನಿಟ್ ನ ಅತಿ ದೊಡ್ಡ ಡ್ರಮ್.

ಇದೇ ರೀತಿ ಸಿಲಿಂಡರ್ ನ ಮೇಲ್ಮೈ ದೊಡ್ಡದಿದ್ದು ಎತ್ತರ ಚಿಕ್ಕದಿದ್ದರೆ, ಆಗ ಅಲೆಗಳು ಹೆಚ್ಚು ದೂರ ಕ್ರಮಿಸದೇ ಅಲ್ಲಲ್ಲೇ ಪ್ರತಿಧ್ವನಿಸುವುದರಿಂದ ದೊಡ್ಡ ಕಂಪನಾಂಕದ ಸದ್ದುಗಳು ಹೊರ ಹೊಮ್ಮುತ್ತವೆ. ಉದಾ: ಟಂ ಟಂ ಎಂದು ಶಬ್ದಗಳು.

ಹಾಗೆಯೇ ಮೇಲ್ಮೈ ಚಿಕ್ಕದಿದ್ದು ಎತ್ತರ ದೊಡ್ಡದಿದ್ದರೆ ಆಗ ಬರುವ ಶಬ್ದದ ಅಲೆಗಳೇ ಬೇರೆ. ಹೀಗೆ ವಿವಿಧ ಅಂಶಗಳು ಒಂದು ಚರ್ಮ ವಾದ್ಯದಿಂದ ಇನ್ನೊಂದನ್ನು ಪ್ರತ್ಯೇಕಿಸುತ್ತದೆ.

ಒಂದು ವೇಳೆ ಈ ಚರ್ಮ ವಾದ್ಯಗಳ ಒಳಗಿರುವ ಗಾಳಿಯನ್ನು ಹೀರಿ, ನಿರ್ವಾತ (vacuum) ಸೃಷ್ಟಿಸಿದರೆ ಅವುಗಳಿಂದ ಬರುವ ಶಬ್ದ ಸಪ್ಪೆ ಅನಿಸಬಹುದು.

ತಂತಿ ವಾದ್ಯಗಳು:

ಎಲ್ಲ ತಂತಿ ವಾದ್ಯಗಳಲ್ಲಿ ಇರುವ ಸಾಮಾನ್ಯ ಕೊಂಡಿಯೇ ತಂತಿ! ತಂತಿಯು ಕಂಪಿಸಿದಾಗ ಶಬ್ದದ ಅಲೆಗಳು ಮೂಡುತ್ತವೆ. ಆದರೆ ಕೇವಲ ತಂತಿಯನ್ನು ಹಿಡಿದು ಮೀಟಿದಾಗ ಹೊಮ್ಮುವ ಅಲೆಗಳಿಂದ ಸುಶ್ರಾವ್ಯ ಸಂಗೀತ ಮೂಡುವುದಿಲ್ಲ. ತಂತಿಯ ಕಂಪನಗಳನ್ನು ಇನ್ನಷ್ಟು ವೃದ್ಧಿಸಲು ಉಪಕರಣಗಳಲ್ಲಿ ಸೌಂಡ್ ಬಾಕ್ಸ್ ಎಂಬ ಭಾಗ ಇರುತ್ತದೆ. ಇದು ಈ ಉಪಕರಣದ ಅತಿ ದೊಡ್ಡ ಭಾಗವಾಗಿರುತ್ತದೆ. ಕಂಪನದ ಅಲೆಗಳು ಈ ಸೌಂಡ್ ಬಾಕ್ಸ್ ಎಂಬ ಪೆಟ್ಟಿಗೆ ಪ್ರವೇಶಿಸಿ ಅದರೊಳಗೆ ಪ್ರತಿಧ್ವನಿಸಿ, ವೃದ್ಧಿಯಾಗಿ ಸಂಗೀತದ ಅಲೆಗಳಾಗಿ ಪರಿವರ್ತನೆಯಾಗುತ್ತವೆ. ಬೇರೆ ಬೇರೆ ಕಂಪನಾಂಕಗಳಿರುವ ಶಬ್ದ ಮೂಡಲು, ತಂತಿಯ ಉದ್ದ, ಅದರ ದಪ್ಪ, ಅದನ್ನು ಎಷ್ಟು ಬಿಗಿಯಾಗಿ ಕಟ್ಟಲಾಗಿದೆ ಎಂಬ ಅಂಶಗಳ ಮೇಲೆ ಅವಲಂಬಿತವಾಗಿದೆ. ಹಾಗೆಯೇ ಬ್ರಿಜ್ ಎಂಬ ಭಾಗವು ಕಂಪನಗಳನ್ನು ಪ್ರತಿಧ್ವನಿಸಿ ಶಬ್ದ ವಾಹಕತೆಗೆ ಸಹಾಯ ಮಾಡುತ್ತದೆ.

ಗಾಳಿ ವಾದ್ಯಗಳು(ಊದುವ ವಾದ್ಯಗಳು):

          ಕೊಳಲು, ಸ್ಯಾಕ್ಸೋಫೋನ್, ಕ್ಲಾರಿನೆಟ್ ನಂತಹ ವಾದ್ಯಗಳು ನಾವು ಊದಿದ ಗಾಳಿಯನ್ನು ವಿಶಿಷ್ಟವಾದ ಕೊಳವೆ ಮತ್ತು ರಂಧ್ರಗಳ ಮೂಲಕ ಸಾಗಿಸಿ ಶಬ್ದವನ್ನು ಉತ್ಪಾದಿಸುತ್ತದೆ. ಊದಿದ ಗಾಳಿಯು ಉದ್ದನೆಯ ಕೊಳವೆಯನ್ನು ಪ್ರವೇಶಿಸಿದಾಗ, ಅದನ್ನು ಬೆರಳಿನ ಮೂಲಕ ತಡೆಹಿಡಿದು, ನಂತರ ಅಡ್ಡ ಇಟ್ಟ ಬೆರಳು ತೆಗೆದು ಬೇರೆ ಬೇರೆ ರಂಧ್ರಗಳ ಮೂಲಕ ಸಾಗಿಸಿದಾಗ ವಿಶಿಷ್ಟವಾದ ಶಬ್ದ ಉತ್ಪಾದನೆಯಾಗುತ್ತದೆ. 

ಇಲೆಕ್ಟ್ರಾನಿಕ್ ವಾದ್ಯಗಳು:

          ಇಲೆಕ್ಟ್ರಾನಿಕ್ ವಾದ್ಯಗಳು ವಿದ್ಯುತ್ ಸಂಕೇತಗಳನ್ನು ಬಳಸಿ ಶಬ್ದವನ್ನು ಉತ್ಪಾದಿಸುತ್ತವೆ. ಈ ಉಪಕರಣಗಳು ಆಂದೋಲಕಗಳನ್ನು (oscillator) ಬಳಸಿ ವಿದ್ಯುತ್ ಸಂಕೇತಗಳನ್ನು ಸಂಗೀತದ ಅಲೆಗಳಾಗಿ ಪರಿವರ್ತಿಸುತ್ತದೆ. ಆ ಸಂಕೇತಗಳು ಧ್ವನಿವರ್ಧಕ(loud speaker) ದಿಂದ ಹಾದು ಹೋಗಿ, ಧ್ವನಿವರ್ಧಕದ ಪೊರೆ ಕಂಪಿಸುವಂತೆ ಮಾಡಿ ಸಂಗೀತವನ್ನು ಹೊರ ಹೊಮ್ಮುತ್ತದೆ.           ಮೊಟ್ಟಮೊದಲ ಇಲೆಕ್ಟ್ರಾನಿಕ್ ಸಂಗೀತ ಉಪಕರಣವು 18ನೆಯ ಶತಮಾನದಲ್ಲೇ ಕಂಡುಹಿಡಿಯಲಾಗಿತ್ತು. ತದನಂತರ ಹತ್ತು ಹಲವು ಬಗೆಯ ಉಪಕರಣಗಳು ಆವಿಷ್ಕಾರ ಗೊಂಡಿವೆ. ಇತ್ತೀಚಿನ ಹಾಡುಗಳಲ್ಲಿ ಇಲೆಕ್ಟ್ರಾನಿಕ್ ಸಂಗೀತ ಉಪಕರಣಗಳ ಬಳಕೆಯೇ ಹೆಚ್ಚಾಗಿದೆ.

ವಿಠಲ ಶೆಣೈ
Leave a reply

Leave a Reply