ಮುಂದಿನ ಸಲ “ಕಿವಿ ಕೇಳಿಸಲ್ವಾ?”, “ಕಿವಿ ತಮಟೆ ಹೊಡೆದೊಯ್ತು”, “ನಾಲಿಗೆ ಕತ್ತರಿಸ್ತೀನಿ” ಎಂದೆಲ್ಲಾ ತಮಾಷೆಗಾಗಿ ಹೇಳುವಾಗ ಅದರ ಅರ್ಥ ಏನಾಗಬಹುದು ಎಂದು ತಿಳಿಯಿತಲ್ಲವೇ?

ಶಬ್ದ ಎಂದರೇನು? ಅದರ ಗುಣಲಕ್ಷಣಗಳು ಏನು? ಎಂದು ತಿಳಿದ ನಂತರ ಈಗ ಶಬ್ದ ಮತ್ತು ಮನುಷ್ಯನ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿಯೋಣ ಬನ್ನಿ.

“ಎಷ್ಟು ಸಲ ಹೇಳಬೇಕು? ಕಿವಿ ಕೇಳಿಸಲ್ವಾ?” ಎಂದು ನಾವು ಲಘುವಾಗಿ ನಿತ್ಯಜೀವನದಲ್ಲಿ ಹೇಳುವುದು ಸಾಮಾನ್ಯ. ಆದರೆ ಕಿವಿ ಕೇಳಿಸಲ್ವಾ? ಎಂಬುವುದರ ವೈಜ್ಞಾನಿಕ ಅರ್ಥವು ಬೇರೆಯೇ ಇದೆ. ಮನುಷ್ಯ ವಿವಿಧ ವಯಸ್ಸಿನಲ್ಲಿ ವಿವಿಧ ಕಂಪನಾಂಕಗಳ ಶಬ್ದಗಳನ್ನು ಕೇಳುವ ಸಾಮರ್ಥ್ಯ ಹೊಂದುತ್ತಾನೆ. ಬಾಲ್ಯಾವಸ್ಥೆಯಿಂದ ಹದಿಹರೆಯ ಮುಗಿಯುವ ವರೆಗೆ ನಮಗೆ ಅತ್ಯಂತ ಹೆಚ್ಚಿನ ಕಂಪಾನಾಂಕ(frequency)ದ ಶಬ್ದಗಳು ಕೇಳಿಸುತ್ತವೆ. ನಂತರ ನಡು ವಯಸ್ಸಿನಲ್ಲಿ ಕೆಲವು ಕಂಪಾನಾಂಕದ ಶಬ್ದಗಳು ಕೇಳಿಸುವುದಿಲ್ಲ. ಇಳಿ ವಯಸ್ಸಿನಲ್ಲಿ ಇನ್ನೂ ಹೆಚ್ಚು ಕೇಳುವಿಕೆಯ ತೊಂದರೆ ಉಂಟಾಗಿ, ನಾವು ಇನ್ನೂ ಕಿವುಡರಾಗುತ್ತೇವೆ. ಸಾಮಾನ್ಯವಾಗಿ ಮನುಷ್ಯ 20 Hz ನಿಂದ 20 khz ಕಂಪನಾಂಕವಿರುವ ಶಬ್ದಗಳನ್ನು ಕೇಳುತ್ತಾನೆ. ಹಾಗಂದ ಮಾತ್ರಕ್ಕೆ ಅದರ ಆಚೆ-ಈಚೆ ಶಬ್ದಗಳು ಇಲ್ಲವೆಂದಲ್ಲ, ನಮಗೆ ಕೇಳಿಸುವುದಿಲ್ಲ ಅಷ್ಟೇ!

ಈ youtube video ದಲ್ಲಿ https://www.youtube.com/watch?v=X5XCjBH8t84 ಮಕ್ಕಳು ಮಾತ್ರ ಕೇಳಬಲ್ಲ ಕಂಪನಾಂಕದ ಶಬ್ದಗಳಿವೆ. ಇದು ವಯಸ್ಕರಿಗೆ ಕೇಳುವುದಿಲ್ಲ. ಬೇಕಿದ್ದರೆ ನಿಮ್ಮ ಮನೆಯಲ್ಲಿ 5 ರಿಂದ 18 ವರ್ಷದ ಮಕ್ಕಳಿದ್ದರೆ ಪರೀಕ್ಷಿಸಿ ನೋಡಿ! ಅವರಿಗೆ ಕೇಳುವ ಈ ವೀಡಿಯೊದ ಸದ್ದು ನಿಮಗೆ ಕೇಳುವುದಿಲ್ಲ.

ಒಟ್ಟಿನಲ್ಲಿ ಶಬ್ದ ಉತ್ಪಾದನೆಯಾಗಿ, ಅದು ನಮ್ಮ ಕಿವಿಗೆ ಹೋಗಿ, ಅದರ ಅರ್ಥ ಮಾಡಿಕೊಳ್ಳುವುದರ ಹಿಂದೆ ಒಂದು ವಿಜ್ಞಾನವೇ ಅಡಗಿದೆ. ಅದನ್ನು ತಿಳಿಯೋಣ ಬನ್ನಿ.

ಮನುಷ್ಯನ ಕಿವಿ ಮತ್ತು ಶಬ್ದ ಗ್ರಹಿಸುವಿಕೆ:

ಮನುಷ್ಯನ ಕಿವಿಯ ಒಳಭಾಗಗಳು ಈ ಕೆಳಗಿನ ಚಿತ್ರದಂತೆ ಇದೆ.

ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು.

ಹೊರ ಕಿವಿ: ನಮ್ಮ ಕಣ್ಣಿಗೆ ಕಾಣುವ ಕಿವಿಯ ಭಾಗ, ಇದಕ್ಕೆ ಪಿನ್ನೆ ಅನ್ನುತ್ತಾರೆ. ಇದು ನಿಮಗೆ ಗೊತ್ತಿರುವಂತೆ ವಿವಿಧ ಸುರುಳಿ ಮತ್ತು ಪದರಗಳಲ್ಲಿದ್ದು, ಹೀಗಿರುವುದರಿಂದ ಬೇರೆ ಬೇರೆ ತರಹದ ಕಂಪನಗಳನ್ನು ಸೋಸಿ ಕಿವಿಯ ಒಳಗೆ ಕಳುಹಿಸಲು ಸಹಕಾರಿಯಾಗುತ್ತದೆ. ಪಿನ್ನೆಯ ನಂತರ ಇರುವುದು ಕಿವಿಯ ಕೊಳವೆ. ಕಿವಿಯ ಕೊಳವೆ ಶಬ್ದದ ಅಲೆಗಳನ್ನು ಸರಿಯಾಗಿ ಮುಂದೆ ಸಾಗಿಸಲು ಮತ್ತು ಕಿವಿಯ ಸೂಕ್ಷ್ಮವಾದ ಒಳಭಾಗಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ.

ಮಧ್ಯ ಕಿವಿ: ಮಧ್ಯ ಕಿವಿಯು ಗಾಳಿಯಿಂದ ತುಂಬಿದ ಪುಟ್ಟ ಕೋಣೆಯಂತೆ ಇರುತ್ತದೆ. ಇಲ್ಲಿ ಕಿವಿಯ ತಮಟೆ ಎನ್ನುವ ಭಾಗವು ಈ ಗಾಳಿ ಹೊರಗೆ ತೂರದಂತೆ ಕಾಪಾಡುತ್ತದೆ. ಮಧ್ಯ ಕಿವಿಯಲ್ಲಿ ಇನ್ಕಸ್, ಮೆಲಿಯಸ್ ಮತ್ತು ಸ್ಟೇಪ್ಸ್ ಎನ್ನುವ ಮೂರು ಮೃದು ಎಲುಬುಗಳು ಇರುತ್ತವೆ. ಈ ಮೂರು ಎಲುಬುಗಳನ್ನು ಒಟ್ಟಾಗಿ ಆಸ್ಸಿಕಲ್ಸ್ ಎಂದೂ ಕರೆಯುತ್ತಾರೆ. ಈ ಮೂರು ಎಲುಬುಗಳು ನಮ್ಮ ದೇಹದ ಅತ್ಯಂತ ಚಿಕ್ಕ ಎಲುಬುಗಳಾಗಿರುತ್ತವೆ. ಹೊರಕಿವಿಯಿಂದ ಬಂದ ಶಬ್ದದ ಅಲೆಗಳು, ಕಿವಿಯ ತಮಟೆಯ ಮೇಲೆ ಹೊಡೆದು, ಸಾಲಾಗಿ ಇರುವ ಮೂರು ಎಲುಬುಗಳ ಮೂಲಕ ಒಳಕಿವಿಗೆ ಸಾಗುತ್ತವೆ.

ಒಳ ಕಿವಿ: ಒಳಕಿವಿಯಲ್ಲಿ ಕಾಕ್ಲಿಯ ಎಂಬ ಬಸವನ ಹುಳುವಿನಂತೆ ಕಾಣುವ ಭಾಗ ಇರುತ್ತದೆ. ಇದು ಒಂದು ಬಟಾಣಿ ಕಾಳಿನಷ್ಟು ಸಣ್ಣದಾಗಿರುತ್ತದೆ. ಇದರ ಒಳಗೆ ಒಂದು ವಿಶಿಷ್ಟ ದ್ರವ ಇರುತ್ತದೆ. ಕೂದಲ ಕೋಶ(hair cell) ಎಂಬ ಸಹಸ್ರಾರು ಕೋಶಗಳು ಈ ದ್ರವದಲ್ಲಿ ತೇಲುತ್ತಿರುತ್ತವೆ. ಮಧ್ಯ ಕಿವಿಯ ಸ್ಟೇಪ್ಸ್ ಎಲುಬಿನ ಮೂಲಕ ಬಂದ ಶಬ್ದದ ಅಲೆಗಳು ಕಾಕ್ಲಿಯದ ಮೇಲೆ ಬಿದ್ದಾಗ ಅದರೊಳಗಿನ ದ್ರವ ಮತ್ತು ಕೂದಲುಕೋಶಗಳು ವ್ಯಘ್ರವಾಗಿ ಚಲಿಸಿ, ನರಗಳ ವಿದ್ಯುತ್ ಪ್ರಚೋದನೆಯನ್ನು ಉಂಟು ಮಾಡುತ್ತದೆ. ಆ ಪ್ರಚೋದನೆಯು ನಂತರ ಶ್ರವಣೇಂದ್ರಿಯ ನರಗಳ(auditory nerves) ಮೂಲಕ ಮೆದುಳನ್ನು ತಲುಪುತ್ತದೆ. ಮೆದುಳು ಆ ಪ್ರಚೋದನೆಯನ್ನು ನಮಗೆ ಅರ್ಥ ಮಾಡಿಸಿ, ಇದು ನಾಯಿಯ ಬೊಗಳುವಿಕೆ, ಇದು ಪಟಾಕಿ ಸಿಡಿತ, ಇದು ಲತಾ ಮಂಗೇಶ್ಕರ್ ಧ್ವನಿ ಎಂದು ನೆನಪಿಸಿ ಕೊಡುತ್ತದೆ.  

ಮನುಷ್ಯನ ಕಿವಿಯ ಬಗ್ಗೆ ಆಸಕ್ತಿಕರ ವಿಷಯಗಳು:

 • ನಮ್ಮ ಕಿವಿಗಳು ತಾನಾಗಿಯೇ ಶುದ್ಧವಾಗುತ್ತವೆ, ಅಂದರೆ ಅವುಗಳ ಒಳಗೆ ಹತ್ತಿಯ ಕಡ್ಡಿ(ear buds) ಮತ್ತಿತರ ವಸ್ತುಗಳನ್ನು ತುರುಕಿ ಶುದ್ಧ ಮಾಡಬೇಕಿಲ್ಲ. ಕಿವಿಯೊಳಗಿನ ಮೇಣವು ಆಗಾಗ ಹೊರಗೆ ದೂಡಲ್ಪಡುತ್ತದೆ. ವಿಪರೀತ ಪರಿಸ್ಥಿತಿಗಳಲ್ಲಿ ಮಾತ್ರ ಕಿವಿ ಶುಧ್ಧಗೊಳಿಸಬೇಕಾಗುತ್ತದೆ
 • ನಮ್ಮ ಕಿವಿಗಳ ಕೇಳುವಿಕೆ ಎಂದೂ ನಿಲ್ಲುವುದಿಲ್ಲ. ನಿದ್ದೆಯಲ್ಲೂ ಕಿವಿಗಳು ಶಬ್ದಗಳನ್ನು ಗ್ರಹಿಸುತ್ತಿರುತ್ತವೆ. ನಮ್ಮ ಮೆದುಳು ಅದರ ಸಂಸ್ಕರಣೆ ಮಾಡದೇ ಇರುವುದರಿಂದ ನಮಗೆ ನಿದ್ದೆಯಲ್ಲಿ ಕೇಳಿಸುವುದಿಲ್ಲ.
 • ಕಿವಿಯಲ್ಲಿರುವ ದ್ರವಗಳು ಶರೀರದ ಸಮತೋಲನವನ್ನು ಕಾಪಾಡುತ್ತವೆ.
 • ಕಿವಿಗಳಿಗೆ ಪೆಟ್ಟಾದರೆ, ನಾಲಿಗೆಯ ರುಚಿಯು ಕೆಡುವ ಸಾಧ್ಯತೆಗಳಿವೆ. ಕಿವಿಯ ಕೆಲವು ನರಗಳು ನಾಲಿಗೆಯ ರುಚಿ ಗ್ರಂಥಿಯ ವರೆಗೆ ಹಮ್ಮಿರುತ್ತವೆ.   

ಶಬ್ದ ಕೇಳುವ ಬಗ್ಗೆ ತಿಳಿದ ನಂತರ, ಈಗ ಶಬ್ದ ಉತ್ಪಾದನೆಯತ್ತ ಗಮನ ಹರಿಸೋಣ ಬನ್ನಿ.

ಮನುಷ್ಯನಲ್ಲಿ ಶಬ್ದ ಉತ್ಪಾದನೆ:

ನವಜಾತ ಶಿಶುವಿನಿಂದ ಹಿಡಿದು ಸಾಯುವ ವರೆಗೆ ನಾವು ಅನೇಕ ರೀತಿಯಲ್ಲಿ ಶಬ್ದ ಉತ್ಪಾದಿಸುತ್ತೇವೆ. ಅಳುವುದು, ನಗುವುದು, ಮಾತನಾಡುವುದು, ಹಾಡುವುದು ಇತ್ಯಾದಿ. ಮನುಷ್ಯನಲ್ಲಿ ಬಾಯಿಯಿಂದ ಬರುವ ಶಬ್ದ ಉತ್ಪಾದನೆಯ ಪ್ರಮುಖ ಅಂಗ ಧ್ವನಿ ಪೆಟ್ಟಿಗೆ(larynx). ಆ ಧ್ವನಿ ಪೆಟ್ಟಿಗೆಯ ಕೆಳಗೆ ಎರಡು ಧ್ವನಿ ನರಗಳು(vocal cords) ಇರುತ್ತವೆ. ಶ್ವಾಸಕೋಶದಿಂದ ಹೊರಬರುವ ಗಾಳಿಯು, ಧ್ವನಿ ನರಗಳನ್ನು ಕಂಪಿಸಿದಾಗ ಶಬ್ದದ ಅಲೆಗಳು ಉತ್ಪಾದನೆಯಾಗುತ್ತದೆ. ನಂತರ ಅದು ಮೂಗು, ಗಂಟಲು, ನಾಲಿಗೆ ಮತ್ತು ತುಟಿಗಳ ಮೂಲಕ ಹೊರ ಬಂದಾಗ ಆ ಶಬ್ದಗಳು ನಿರ್ದಿಷ್ಟ ರೂಪವನ್ನು ಪಡೆಯುತ್ತವೆ. ಒಮ್ಮೆ ನೀವು ಮೂಗು ಮುಚ್ಚಿ ಅಥವಾ ತುಟಿ ಮುಚ್ಚಿ ಅಥವಾ ನಾಲಿಗೆ ಅಲುಗಾಡಿಸದೆ ಮಾತಾಡಲು ಪ್ರಯತ್ನಿಸಿ ನೋಡೋಣ? ವಿಚಿತ್ರವಾದ ವಿಕೃತ ಶಬ್ದಗಳು ಬರುತ್ತವೆ ಅಲ್ಲವೇ? ಶೀತವಾಗಿ ಮೂಗು ಕಟ್ಟಿ ಕೊಂಡರೆ ನಿಮ್ಮ ಧ್ವನಿಯೇ ಏಕೆ ಬದಲಾಗುತ್ತದೆ ಎಂದು ತಿಳಿಯುತ್ತಿದೆ ಅಲ್ಲವೇ?  

ಮುಂದಿನ ಸಲ “ಕಿವಿ ಕೇಳಿಸಲ್ವಾ?”, “ಕಿವಿ ತಮಟೆ ಹೊಡೆದೊಯ್ತು”, “ನಾಲಿಗೆ ಕತ್ತರಿಸ್ತೀನಿ” ಎಂದೆಲ್ಲಾ ತಮಾಷೆಗಾಗಿ ಹೇಳುವಾಗ ಅದರ ಅರ್ಥ ಏನಾಗಬಹುದು ಎಂದು ತಿಳಿಯಿತಲ್ಲವೇ?

ವಿವಿಧ ಪ್ರಾಣಿಗಳಲ್ಲಿ ಶಬ್ದ, ಅದರ ಮಹತ್ವಗಳು ಮುಂದಿನ ಸಂಚಿಕೆಗಳಲ್ಲಿ ಬರಲಿದೆ. ತಪ್ಪದೇ ಓದಿ! 

ವಿಠಲ ಶೆಣೈ
Leave a replyComments (2)
 1. Nageshkumar c s July 28, 2020 at 2:48 pm

  ನಾನು ಓದಬೇಕಿತ್ತು… ಸೂಕ್ತ ಸಮಯಕ್ಕೆ ಈ ಲೇಖನ ‌ಸಿಕ್ಕಿತು…ಧನ್ಯವಾದಗಳು

  ReplyCancel
 2. ವಿಠಲ್ July 30, 2020 at 5:00 pm

  ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಪ್ರತಿ ಮಂಗಳವಾರ ಮುಂದಿನ ಭಾಗಗಳು ಬರಲಿವೆ.

  ReplyCancel

Leave a Reply