ಥಾಮಸ್ ಎಡಿಸನ್ 1877 ನೆಯ ಇಸವಿಯಲ್ಲಿ ಫೋನೋಗ್ರಾಫ್ ಅನ್ನು ಕಂಡುಹಿಡಿದರು. ಇದು ಧ್ವನಿಯನ್ನು ಮುದ್ರಿಸಿ, ನಂತರ ಅದನ್ನು ವರ್ಧಿಸುವ ಮೊಟ್ಟಮೊದಲ ಉಪಕರಣವಾಗಿತ್ತು.  

ಫೋನೋಗ್ರಾಫ್ ದಲ್ಲಿ ಒಂದು ಸಿಲಿಂಡರ್ ನಲ್ಲಿ ಶಬ್ದವನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಇದು 1870ರ ವೇಳೆಯಲ್ಲಿ ಬಹಳ ಯಶಸ್ವಿಯಾಗಿ ಸಂಗೀತ ಕ್ಷೇತ್ರದಲ್ಲಿ ವ್ಯಾವಹಾರಿಕವಾಗಿ ಇದನ್ನು ಬಳಸಲಾಯಿತು.

ಇದಾದ ನಂತರ ಮುಖ್ಯವಾಗಿ ಅನ್ವೇಷಣೆಯಾದದ್ದು ಗ್ರಾಮೋಫೋನ್.

               ಇದು ಫೋನೋಗ್ರಫ್ ತರಹವೇ ಇದ್ದು, ಇದರಲ್ಲಿ ಶಬ್ದ ಶೇಖರಿಸಲು ಸಿಲಿಂಡರ್ ಬದಲು ವೃತ್ತಾಕಾರದ ವಿನೈಲ್ ಡಿಸ್ಕ್ ಅನ್ನು ಬಳಸುತ್ತಾರೆ. ಇದು ಸಿಲಿಂಡರ್ ಗಿಂತ ಹೆಚ್ಚು ಬಾಳಿಕೆ ಬರುವ ಕಾರಣ ಬಹಳ ಯಶಸ್ವಿಯಾಯಿತು. ತದನಂತರ ಕ್ಯಾಸೆಟ್ ಗಳು, ಕಾಂಪ್ಯಾಕ್ಟ್ ಡಿಸ್ಕ್, ಡಿ.ವಿ.ಡಿ ಹೀಗೆ ತಂತ್ರಜ್ಞಾನವು ಮುಂದುವರೆಯುತ್ತಾ ಹೋಯಿತು.

ಎಲ್ಲಾ ಪ್ರಕಾರದ ಧ್ವನಿಮುದ್ರಣದಲ್ಲಿ ಬಳಕೆಯಾಗುವ ಅತಿಮುಖ್ಯವಾದ ಉಪಕರಣವೆಂದರೆ ಮೈಕ್ರೋಫೋನ್. ಮೈಕ್ರೋಫೋನ್ ಅಥವಾ ಮೈಕ್ ನಮ್ಮ ದೈನಂದಿನ ಬದುಕಿನ ಅನೇಕ ಉಪಕರಣಗಳಾದ ಮೊಬೈಲ್ ಫೋನ್, ಕಂಪ್ಯೂಟರ್, ಟೇಪ್ ರೆಕಾರ್ಡರ್ (ಹಳೆಯ ಕಾಲದಲ್ಲಿ), ಟೆಲಿವಿಷನ್ ಇತ್ಯಾದಿಗಳಲ್ಲಿ ಬಳಸಲ್ಪಡುತ್ತದೆ. ಮೈಕ್ ಎನ್ನುವುದು ಶಬ್ದದ ಅಲೆಗಳನ್ನು ವಿದ್ಯುತ್ ಅಲೆಗಳಾಗಿ ಪರಿವರ್ತಿಸುವ ಉಪಕರಣ.

ನಾವು ಮಾತನಾಡುವಾಗ ಶಬ್ದದ ಅಲೆಗಳು ಮೂಡುತ್ತವೆ. ಈ ಅಲೆಗಳು ಮೈಕ್ ಒಳಗಡೆ ಇರುವ ಕಂಪನಫಲಕ(diaphragm) ಎಂಬ ಭಾಗದ ಮೇಲೆ ಬೀಳುತ್ತದೆ. ಆಗ ಡಯಾಫ್ರಂ ಹಿಂದೆ ಮುಂದೆ ಚಲಿಸುತ್ತದೆ. ಡಯಾಫ್ರಂ ಗೆ ಕಟ್ಟಲಾದ ತಂತಿಯೂ ಇದರಿಂದ ಚಲಿಸಿದಾಗ ವಿದ್ಯುತ್ ಅಲೆಗಳು ಮೂಡುತ್ತವೆ. ಹೀಗೆ ಪರಿವರ್ತಿತವಾದ ವಿದ್ಯುತ್ ಅಲೆಗಳು ಧ್ವನಿವರ್ಧಕದ ಮೂಲಕ ಮತ್ತೆ ವರ್ಧಿಸಲ್ಪಟ್ಟ ಶಬ್ದದ ಅಲೆಗಳಾಗಿ ನಮಗೆ ಕೇಳುತ್ತದೆ.

ಮೈಕ್ ಗಳಲ್ಲಿ ಮೂರು ಪ್ರಮುಖ ಪ್ರಕಾರಗಳಿವೆ.

ಡೈನಾಮಿಕ್ ಮೈಕ್:

          ಡೈನಾಮಿಕ್ ಮೈಕ್ರೊಫೋನ್ಗಳು ವಿಶೇಷವಾಗಿ ಸೂಕ್ಷ್ಮವಾಗಿರುವುದಿಲ್ಲ, ಹಾಗಾಗಿ ಇದನ್ನು ಜೋರಾಗಿ ಕೇಳುವ ಶಬ್ದಗಳನ್ನು ಮುದ್ರಿಸಲು ಬಳಸುತ್ತಾರೆ. ಸಾಮಾನ್ಯವಾಗಿ ಇವುಗಳು ಡ್ರಮ್‌ಗಳು ಮತ್ತು ಗಿಟಾರ್ ಆಂಪ್ಸ್‌ಗಳಲ್ಲಿ ಬಳಸಲ್ಪಡುತ್ತದೆ.

ಇಂತಹ ಮೈಕ್ ಗಳು ಸೂಕ್ಷ್ಮ(sensitive) ಅಲ್ಲದ ಕಾರಣ ಇವುಗಳು ಸಾಮಾನ್ಯವಾಗಿ ಉಪಯೋಗವಾಗುತ್ತದೆ. ಡೈನಾಮಿಕ್ ಮೈಕ್ ಗಳು ಏಕದಿಕ್ಕಿನ ಶಬ್ದದ ಅಲೆಗಳನ್ನು ಮಾತ್ರ ಪರಿವರ್ತಿಸಬಲ್ಲವು, ಆದುದರಿಂದ ಇಂತಹ ಮೈಕ್ ಗಳನ್ನು ಬಾಯಿಯ ಹತ್ತಿರ ಅಥವಾ ಮುದ್ರಿಸಬೇಕಾದ ಶಬ್ದದ ಹತ್ತಿರ ಹಿಡಿಯಬೇಕಾಗುತ್ತದೆ. ಇಂತಹ ಮೈಕ್ ತನ್ನ ಅಕ್ಕಪಕ್ಕದ ವಾತಾವರಣದ ಶಬ್ದಗಳನ್ನು ಸೆರೆ ಹಿಡಿಯುವುದಿಲ್ಲ. ಇಂತಹ ಮೈಕ್ ಗಳು ಬಹಳ ಗಟ್ಟಿಯಾದ ರಚನೆ ಹೊಂದಿದ್ದು, ಮೈಕ್ ಗಳು ಒಂದು ವೇಳೆ ಬಿದ್ದರೂ ಅದಕ್ಕೆ ಏನೂ ಹಾನಿಯಾಗುವುದಿಲ್ಲ.

ಕಂಡೆನ್ಸರ್ ಮೈಕ್:

ಕಂಡೆನ್ಸರ್ ಮೈಕ್ ನಲ್ಲಿ ಕಂಪನಫಲಕವು(diaphragm)  ಧಾರಕ(capacitor)ದ ಒಂದು ಪ್ಲೇಟ್‌ನಂತೆ ಕೆಲಸಮಾಡುತ್ತದೆ. ಇಲ್ಲಿ ಉಂಟಾಗುವ ಕಂಪನಗಳು ಪ್ಲೇಟ್‌ಗಳ ನಡುವಿನ ಅಂತರದಲ್ಲಿ ಬದಲಾವಣೆಗಳನ್ನುಂಟು ಮಾಡುತ್ತವೆ. ಹೀಗೆ ರಚನೆಯಾದ ಸಂಜ್ಞಾಪರಿವರ್ತಕ‌ದಿಂದ ವಿದ್ಯುತ್ ಅಲೆಗಳು ಮೂಡುತ್ತವೆ. ಇಂತಹ ಮೈಕ್ ಗಳು ಬಹಳ ಸೂಕ್ಷ್ಮ ರಚನೆಯನ್ನು ಹೊಂದಿರುತ್ತವೆ, ಆದುದರಿಂದ ಇದು ಒಂದು ವೇಳೆ ಬಿದ್ದರೆ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.  ಕಂಡೆನ್ಸರ್ ಮೈಕ್ ನಲ್ಲಿ ಮುದ್ರಿಸಿದ ಧ್ವನಿಯು ಉತ್ಕೃಷ್ಟ ಗುಣಮಟ್ಟದಾಗಿರುತ್ತದೆ, ಆದುದರಿಂದ ಇವುಗಳನ್ನು ಸ್ಟುಡಿಯೋ ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ರಿಬ್ಬನ್ ಮೈಕ್:

          ರಿಬ್ಬನ್ ಮೈಕ್ ಗಳು ಮೇಲಿನ ಎರಡು ಮೈಕ್ ಗಳು ಬಳಕೆಯಲ್ಲಿರುವ ಮುಂಚೆಯೇ ಇದ್ದವು. ಐವತ್ತರ ದಶಕದಲ್ಲಿ ಇವು ಜನಪ್ರಿಯವಾಗಿದ್ದವು. ರಿಬನ್ ಮೈಕ್ರೊಫೋನ್‌ಗಳು ಆಯಸ್ಕಾಂತ ಕ್ಷೇತ್ರದಲ್ಲಿ ಬಂಧಿತವಾಗಿರುವ ಒಂದು ತೆಳುವಾದ, ಸುಕ್ಕುಗಳಾಗಿರುವ ಲೋಹದ ರಿಬನ್ ನ್ನು ಬಳಸುತ್ತವೆ. ಆಯಸ್ಕಾಂತ ಕ್ಷೇತ್ರದ(Magnetic field) ಒಳಗಡೆ ಆಗುವ ಅದರ ಕಂಪನವು ವಿದ್ಯುತ್ ಸಂಕೇತಗಳನ್ನು ಹುಟ್ಟಿಸುತ್ತದೆ.

               ರಿಬ್ಬನ್ ಮೈಕ್ ಗಳು ಎಲ್ಲಾ ದಿಕ್ಕಿನ ಶಬ್ದಗಳನ್ನು ಗ್ರಹಿಸಿ ವರ್ಧಿಸುವ ಸಾಮರ್ಥ್ಯ ಹೊಂದಿರುತ್ತವೆ. ಆದುದರಿಂದ ಇದನ್ನು ಬಳಸುವಾಗ ಬಹಳ ಅಕ್ಕ ಪಕ್ಕದ ಶಬ್ದಗಳು ಕಡಿಮೆ ಇರುವಂತೆ ಜಾಗ್ರತೆ ವಹಿಸಬೇಕಾಗುತ್ತದೆ.

          ಹೀಗೆ ವಿದ್ಯುತ್ ಅಲೆಗಳಾಗಿ ಮುದ್ರಿಸಿದ ಧ್ವನಿಗಳನ್ನು ಮತ್ತೆ ಶಬ್ದದ ಅಲೆಗಳನ್ನಾಗಿ ಪರಿವರ್ತಿಸುವುದಕ್ಕೆ ಧ್ವನಿವರ್ಧಕ (speakers) ಗಳ ಅವಶ್ಯಕತೆ ಇರುತ್ತದೆ. ಧ್ವನಿವರ್ಧಕವು ಮೈಕ್ ನ ತದ್ವಿರುದ್ಧವಾದ ವಿನ್ಯಾಸದಲ್ಲಿ ಕೆಲಸ ಮಾಡುತ್ತವೆ. ಸ್ಪೀಕರ್ ಗಳಲ್ಲಿ ಡ್ರೈವರ್ ಎಂಬ ಭಾಗವು ಇರುತ್ತದೆ. ಡ್ರೈವರ್ ಗಳಲ್ಲಿ ಇರುವ ಸಂಜ್ಞಾಪರಿವರ್ತಕಗಳು(transducers) ವಿದ್ಯುತ್ ಅಲೆಗಳನ್ನು ಶಬ್ದದ ಅಲೆಗಳಲ್ಲಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸುತ್ತದೆ.  ಧ್ವನಿವರ್ಧಕಗಳಲ್ಲಿ ಮೂರು ವಿಧಗಳು ಇರುತ್ತವೆ.

ಸಬ್ ವೂಫರ್: ಇದು ಕಡಿಮೆ ಕಂಪನಾಂಕ ಅಂದರೆ ಸುಮಾರು 40Hz ಗಳಿಗಿಂತ ಕಡಿಮೆ ಕಂಪನಾಂಕದ ಶಬ್ದಗಳನ್ನು ಹೊಮ್ಮುತ್ತದೆ. ಇದು ಸಂಗೀತ ಅಥವಾ ಸಿನೆಮಾಗಳಿಗೆ ಮೆರುಗು ನೀಡುತ್ತವೆ.

ಮಿಡ್ ರೇಂಜ್: ಇದು ಸುಮಾರು 40 Hz ದಿಂದ 5KHz ವರೆಗೆ ಶಬ್ದಗಳನ್ನು ಹೊರ ಹೊಮ್ಮುತ್ತದೆ.

ಟ್ವೀಟರ್: ಇದು ಹೆಚ್ಚಿನ ಕಂಪನಾಂಕ ಅಂದರೆ 5khz ಕ್ಕಿಂತ ಮೇಲೆ ಇರುವ ಶಬ್ದಗಳನ್ನು ಹೊಮ್ಮಿಸುತ್ತದೆ.

          ಈ ಮೂರು ಪ್ರಕಾರದ ಸ್ಪೀಕರ್ ಗಳಿಂದ ವಿವಿಧ ಕಂಪನಾಂಕಗಳ ಶಬ್ದಗಳು ಹೊರ ಹೊಮ್ಮಿದಾಗ ಕೇಳುವ ಸಂಗೀತ ಅಥವಾ ಚಲನಚಿತ್ರದ ಸೌಂಡ್ ಟ್ರ್ಯಾಕ್ ಗಳು ಬಹಳ ಸ್ವಾಭಾವಿಕವಾಗಿ ಕೇಳುತ್ತವೆ.

          ಹೀಗೆ ಶಬ್ದವು ಅಲೆಗಳಿಂದ ಪ್ರಾರಂಭವಾಗಿ ಬೇರೆ ಬೇರೆ ರೂಪಾಂತರಗೊಂಡು ಮತ್ತೆ ಶಬ್ದದ ಅಲೆಗಳಾಗುವುದು ಒಂದು ದೊಡ್ಡ ವೈಜ್ಞಾನಿಕ ಸಾಧನೆಯೇ ಸರಿ.

          ಶಬ್ದ ವಿಜ್ಞಾನದ ಬಗ್ಗೆ ಲೇಖನಗಳ ಸರಣಿಯು ಇಲ್ಲಿಗೆ ಕೊನೆಗೊಳ್ಳುತ್ತದೆ. ಧನ್ಯವಾದಗಳು!

ವಿಠಲ ಶೆಣೈ
Leave a reply

Leave a Reply