ಶಬ್ದಕ್ಕಿಂತ ವೇಗವಾಗಿ ಗಾಳಿಯಲ್ಲಿ ವಸ್ತುಗಳು ಚಲಿಸಲು ಸಾಧ್ಯವೇ? ಹೌದು ಖಂಡಿತ ಸಾಧ್ಯ. ಶಬ್ದದ ವೇಗಕ್ಕಿಂತ ಚಲಿಸುವ ವೇಗಕ್ಕೆ ಸೂಪರ್ಸಾನಿಕ್ ವೇಗ ಅನ್ನುತ್ತಾರೆ. ಅನೇಕ ಯುದ್ಧವಿಮಾನಗಳು ಈ ವೇಗದಲ್ಲಿ ಚಲಿಸುತ್ತವೆ. ನಮ್ಮ ಎಚ್.ಎ.ಎಲ್ ನ ತೇಜಸ್ ವಿಮಾನವು ಸೂಪರ್ಸಾನಿಕ್ ವೇಗದಲ್ಲಿ ಚಲಿಸುತ್ತದೆ. ಹಾಗೆಯೇ ಬಂದೂಕಿನಿಂದ ಬಿಟ್ಟ ಗುಂಡುಗಳೂ ಶಬ್ದಕ್ಕಿಂತ ವೇಗದಲ್ಲಿ ಅಂದರೆ ಸೂಪರ್ಸಾನಿಕ್ ವೇಗದಲ್ಲಿ ಚಲಿಸುತ್ತವೆ. ಒಂದು ಕಾಲದಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಕಾನ್ಕಾರ್ಡ್ (concord) ಎಂಬ ಪ್ಯಾಸೆಂಜರ್ ವಿಮಾನವು ನ್ಯೂಯಾರ್ಕ್ ಮತ್ತು ಲಂಡನ್ ಮಧ್ಯ ಓಡಾಡುತ್ತಿದ್ದವು.

ಶಬ್ದ ಎಂದರೇನು?

ನೀವು ಟಿ.ವಿ ಯಲ್ಲಿ ಒಂದು ಒಳ್ಳೆಯ ಸಿನೆಮಾ ನೋಡುತ್ತಿದ್ದೀರಾ, ಅದೇ ಸಮಯಕ್ಕೆ ನಿಮ್ಮ ಮೊಬೈಲ್ ನಲ್ಲಿ ಕರೆ ಬರುತ್ತದೆ. ಟಿ.ವಿ ಯನ್ನು ಮೌನ ಮಾಡಿ ಕರೆ ಎತ್ತುತ್ತೀರಿ. ಆಗ ಟಿ.ವಿ ಯ ಆ ಸಿನೆಮಾ, ಶಬ್ದಗಳ ಮಾಯೆ ಇಲ್ಲದೇ ಸಪ್ಪೆ ಅನಿಸುತ್ತದೆ ಅಲ್ಲವೇ? ಒಂದು ಭಯಾನಕ ಚಿತ್ರವನ್ನು ಶಬ್ದವಿಲ್ಲದೇ ವೀಕ್ಷಿಸಿ, ಬಹುಶಃ ಅದು ಏನೂ ಭಯವನ್ನು ನಿಮ್ಮಲ್ಲಿ ಮೂಡಿಸಲಾರದು! ನೀವು ಸಮುದ್ರ ತೀರದಲ್ಲಿ ಇದ್ದೀರಿ ಅಂದು ಕೊಳ್ಳಿ. ನೀರಿನ ಅಲೆಗಳು, ಅಲ್ಲಿ ಹಾರಿ ಹೋಗುತ್ತಿರುವ ಪಕ್ಷಿಗಳ ಕಲರವ ನಿಮ್ಮ ಮೆದುಳಿನಲ್ಲಿ ಮೂಡುತ್ತಿರುವ ಆ ಸಮುದ್ರ ತೀರದ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಬೇಕಿದ್ದಲ್ಲಿ ಒಂದು ಕ್ಷಣ ಅಲ್ಲಿ ಕಿವಿ ಮುಚ್ಚಿ ನೋಡಿ, ಅದೇ ದೃಶ್ಯ ಶಬ್ದಗಳಿಲ್ಲದೆ ಎಷ್ಟು ನೀರಸವಾಗಿರುತ್ತದೆ ಎಂದು. ಈ ಲೋಕದಲ್ಲಿ ಮನುಷ್ಯ ಹಾಗೂ ಎಲ್ಲಾ ಪ್ರಾಣಿಗಳ ಜೀವನದಲ್ಲಿ ಶಬ್ದ ಎನ್ನುವುದು ಒಂದು ಪ್ರಮುಖ ಭಾಗವಾಗಿದೆ, ಪಂಚೇಂದ್ರಿಯಗಳಲ್ಲಿ ಒಂದು ಇಂದ್ರಿಯವನ್ನು ದೇವರು ಶಬ್ದಕ್ಕಾಗಿಯೇ ಮೀಸಲಿಟ್ಟಿದ್ದಾನೆ. ಶಬ್ದವು ಜೀವನಕ್ಕೆ ಒಂದು ಹೊಸ ಅರ್ಥವನ್ನೇ ಕೊಡುತ್ತದೆ, ಶಬ್ದದ ಮೋಡಿ ಎಷ್ಟು ಮಟ್ಟಿಗೆ ಜೀವನದಲ್ಲಿ ಬೆರೆತು ಹೋಗಿದೆ ಎಂದರೆ, ಅದರ ಮಹತ್ವ ಅದರ ಅನುಪಸ್ಥಿತಿಯಲ್ಲೇ ತಿಳಿಯುತ್ತದೆ! ನಮ್ಮ ದೇಶದ ಲಾರಿಗಳಂತೂ “sound horn, ok please”, “ಶಬ್ದ ನಮಗೆ ದಾರಿ ನಿಮಗೆ” ಎಂದು ಮೋಜಿನ ಸಂದೇಶವನ್ನೇ ತನ್ನ ಹಿಂಭಾಗದಲ್ಲಿ ಹಾಕಿ, ನಮ್ಮ ಕಿವಿ ಕಿವುಡಾಗುವಷ್ಟು ಹಾರ್ನ್ ಹೊಡೆಯುತ್ತಾ ರಸ್ತೆಯಲ್ಲಿ ಓಡುತ್ತವೆ!

ಸರಳವಾಗಿ ಹೇಳುವುದಾದರೆ ಶಬ್ದ ಎನ್ನುವುದು ಕಂಪನ(vibration) ಗಳಿಂದ ಉತ್ಪಾದನೆಯಾಗುವ ಒಂದು ಶಕ್ತಿ. ಯಾವುದೇ ವಸ್ತು ಕಂಪಿಸಿದಾಗ, ಅದು ಗಾಳಿಯಲ್ಲಿರುವ ತನ್ನ ಸಮೀಪದ ಕಣಗಳನ್ನು ಚದುರಿಸುತ್ತದೆ. ಹಾಗೆಯೇ ಆ ಕಣಗಳು ತಮ್ಮ ಸಮೀಪದ ಕಣಗಳನ್ನು ಚದುರಿಸುತ್ತದೆ. ಹೀಗೆ ಅನೇಕ ಕಣಗಳ ಚದುರುವಿಕೆಯಿಂದ ಗಾಳಿಯಲ್ಲಿ ಶಬ್ದದ ಅಲೆಗಳು ಮೂಡುತ್ತವೆ. ಹಾಗೆಂದ ಮಾತ್ರಕ್ಕೆ ಅವು ನಮಗೆ ಕೇಳುತ್ತದೆ ಅನ್ನಲಾಗುವುದಿಲ್ಲ. ನಮ್ಮ ಕಿವಿಯು ಆ ಅಲೆಗಳ ಪಕ್ಕದಲ್ಲಿದ್ದು, ಆ ಅಲೆಗಳ ಗುಣಲಕ್ಷಣಗಳು ನಮ್ಮ ಕಿವಿ ಸ್ವೀಕರಿಸುವ ಮಟ್ಟದಲ್ಲಿ ಇದ್ದರೆ ಮಾತ್ರ ನಮಗೆ ಆ ಶಬ್ದಗಳು ಕೇಳಿಸುತ್ತವೆ. ಈ ಉದಾಹರಣೆಯಲ್ಲಿ ಗಾಳಿಯು ಶಬ್ದವನ್ನು ಸಾಗಿಸಬಲ್ಲ ಮಾಧ್ಯಮವಾಗುತ್ತದೆ. ಶಬ್ದ ಮೂಡಿ ಬರಲು ಯಾವುದಾದರೂ ಒಂದು ಮಾಧ್ಯಮ ಅಗತ್ಯವಾಗಿರುತ್ತದೆ. ಆ ಮಾಧ್ಯಮ ಗಾಳಿ ಇರಬಹುದು, ನೀರು ಇರಬಹುದು ಅಥವಾ ಲೋಹ, ಮರ ಇತ್ಯಾದಿ ಘನ ವಸ್ತುಗಳಿರಬಹುದು. ಶಬ್ದ ಎಷ್ಟು ಗಟ್ಟಿಯಾಗಿ ಮತ್ತು ಎಷ್ಟು ವೇಗವಾಗಿ ಹರಡಬಲ್ಲುದು ಎಂಬುವುದು, ಅದು ಮೂಡುವ ಮಾಧ್ಯಮದ ಕಣಗಳ ಮೇಲೆ ಅವಲಂಬಿತವಾಗಿರುತ್ತದೆ. ಗಾಳಿಯಲ್ಲಿರುವ ಕಣಗಳ ಚಲನ ಶಕ್ತಿ, ಮರದ ಡೆಸ್ಕಿನಲ್ಲಿರುವ ಕಣಗಳ ಚಲನ ಶಕ್ತಿಯಷ್ಟು ಹೆಚ್ಚಿರುವುದಿಲ್ಲ, ಹೆಚ್ಚು ದಟ್ಟನೆಯಿಂದ ಇರುವುದಿಲ್ಲ. ಹಾಗಾಗಿ ನೀವು ಡೆಸ್ಕಿನ ಮೇಲೆ ಕೈಯಿಂದ ಬಾರಿಸುವ ಹಾಡಿನ ಶಬ್ದವು ಡೆಸ್ಕಿಗೆ ಕಿವಿಯಿಟ್ಟಾಗ ಗಟ್ಟಿಯಾಗಿ ಕೇಳುತ್ತದೆ, ಗಾಳಿಯಲ್ಲಿ ಅದರಷ್ಟು ಗಟ್ಟಿಯಾಗಿ ಕೇಳುವುದಿಲ್ಲ. ಇದನ್ನು ನಾವೆಲ್ಲರೂ ಚಿಕ್ಕ ಮಕ್ಕಳಿರುವಾಗ ಮನೆ ಅಥವಾ ಶಾಲೆಯಲ್ಲೇ ಪ್ರಯತ್ನಿಸಿ ಆನಂದಿಸಿದ್ದೇವೆ ಅಲ್ಲವೇ?

ಶಬ್ದದ ಗುಣಲಕ್ಷಣಗಳು:

ಈಗ ಶಬ್ದದ ಕೆಲವು ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ. ಶಬ್ದದ ಅಧ್ಯಯನದಲ್ಲಿ ಮೂರು ಪ್ರಮುಖ ಮಾನದಂಡಗಳಿರುತ್ತವೆ. ಈಗಾಗಲೇ ನೋಡಿದಂತೆ ಶಬ್ದವು ಅಲೆಯ ರೂಪದಲ್ಲಿ ಚಲಿಸುತ್ತದೆ. ನೀವು ಸಮುದ್ರದ ಅಲೆಗಳನ್ನೇ ಉದಾಹರಣೆಯಾಗಿಟ್ಟು ಇವುಗಳನ್ನು ಅರ್ಥೈಸಬಹುದು. (ಚಿತ್ರಗಳನ್ನು ನೋಡಿ)

1. ತರಂಗಾಂತರ (wavelength): ಶಬ್ದದ ಅಲೆಗಳು ಸಮುದ್ರದ ಅಲೆಗಳಂತೆ ಮೇಲೆ ಕೆಳಗೆ, ಉಬ್ಬು ತಗ್ಗುಗಳಲ್ಲಿ ರೂಪುಗೊಳ್ಳುತ್ತದೆ. ಸಮುದ್ರದ ಒಂದು ಅಲೆಯ ಅತಿ ಎತ್ತರದ ಬಿಂದುವಿನಲ್ಲಿ skateboard ನಲ್ಲಿ ನೀವು ನಿಂತು, ನಿಮ್ಮ ಮುಂದೆ ಇರುವ ಇನ್ನೊಂದು ಅಲೆಯಲ್ಲಿ ನಿಮ್ಮ ಸ್ನೇಹಿತ ಅದೇ ಸಮಯಕ್ಕೆ ಆ ಅಲೆಯ ಅತಿ ಎತ್ತರದ ಬಿಂದುವಿನಲ್ಲಿ ಇನ್ನೊಂದು skateboard ನಲ್ಲಿ ನಿಂತರೆ, ಆಗ ನಿಮ್ಮಿಬ್ಬರ ನಡುವಿನ ಅಂತರವೇ ತರಂಗಾಂತರ. ಎರಡು ಉಬ್ಬುಗಳ ಅಥವಾ ತಗ್ಗುಗಳ ನಡುವಿನ ಅಂತರ. 

2. ಅಲೆಯೆತ್ತರ (amplitude / pitch): ಸಮುದ್ರದ ಅಲೆಗಳಲ್ಲಿ ನೀವು skateboard ನಲ್ಲಿ ನಿಂತು ವಿಹರಿಸುವಾಗ ಒಮ್ಮೆ ಅತಿ ಎತ್ತರಕ್ಕೆ ಹತ್ತುವಿರಿ, ಹಾಗೆಯೇ ಇಳಿದು ಅತಿ ಕೆಳಗೆ ಬರುವಿರಿ. ಅತಿ ಎತ್ತರ ಮತ್ತು ಅತಿ ತಗ್ಗಿನ ಬಿಂದುಗಳ ನಡುವೆ ಇರುವ ಅಂತರವೇ ಅಲೆಯೆತ್ತರ.

3. ಕಂಪನಾಂಕ (frequency): ಒಂದು ಸೆಕುಂಡಿನಲ್ಲಿ ಒಟ್ಟು ಎಷ್ಟು ಅಲೆಗಳು ಮೂಡುತ್ತವೆ, ಅಥವಾ ಒಂದು ನಿರ್ದಿಷ್ಟ ಬಿಂದುವನ್ನು ಒಂದು ಸೆಕುಂಡಿಗೆ ಎಷ್ಟು ಅಲೆಗಳು ಹಾದು ಹೋಗುತ್ತವೆ ಎಂಬ ಮಾಪನವೇ ಕಂಪನಾಂಕ.     

ಈಗ ನೀವು ಅರ್ಥಮಾಡಿದಂತೆ ಅತಿ ಕಂಪನಾಂಕ (high frequency) ಇರುವ ಶಬ್ದಗಳಿಗೆ ತರಂಗಾಂತರ ಕಡಿಮೆ ಇದ್ದು, ಅಲೆಯೆತ್ತರ ಹೆಚ್ಚು ಇರುತ್ತದೆ. (ಕೆಳಗಿನ ಚಿತ್ರದಂತೆ)

ಶಬ್ದದ ಈ ಮೂರು ಮಾಪಕಗಳು, ಆ ಶಬ್ದವು ಎಷ್ಟು ಗಟ್ಟಿಯಾಗಿದೆ, ಎಷ್ಟು ದೂರ ಕ್ರಮಿಸುತ್ತದೆ, ಯಾವ ಪ್ರಾಣಿಗಳು ಕೇಳಿಸಬಹುದು ಇವುಗಳನ್ನು ನಿರ್ಧಾರ ಮಾಡುತ್ತದೆ.

ಶಬ್ದದ ವೇಗ

ಶಬ್ದದ ವೇಗವು ಶಬ್ದ ಚಲಿಸುವ ಮಾಧ್ಯಮ ಮತ್ತು ಅದರ  ಉಷ್ಣಾಂಶದ ಮೇಲೆ ಅವಲಂಬಿಸಿದೆ. ಗಾಳಿಯು 20 ಡಿಗ್ರಿ ಸೆಲ್ಸಿಯಸ್ ಇದ್ದಾಗ ಶಬ್ದವು ಸೆಕುಂಡಿಗೆ 343 ಮೀಟರ್ ವೇಗದಲ್ಲಿ ಚಲಿಸುತ್ತದೆ. ನೀರಿನಲ್ಲಿ ಶಬ್ದದ ವೇಗವು ಸೆಕುಂಡಿಗೆ  1,484  ಮೀಟರ್ ಹಾಗೂ ಕಬ್ಬಿಣದ ಸಲಾಕೆಯಲ್ಲಿ ಸೆಕುಂಡಿಗೆ 5,120 ಮೀಟರ್ ವೇಗದಲ್ಲಿ ಚಲಿಸುತ್ತದೆ. ರೈಲಿನ ಹಳಿಯಲ್ಲಿ ಕಿವಿ ಇಟ್ಟಾಗ ಎಷ್ಟೋ ದೂರದಲ್ಲಿದ್ದ ರೈಲು ಬರುವುದು ಕೇಳಿಸುತ್ತದೆ, ಇದು ಹೇಗೆ ಸಾಧ್ಯ ಎಂದು ಬಹುಶಃ ಈಗ ತಿಳಿಯುತ್ತದೆ ಅಲ್ಲವೇ?

               ಶಬ್ದಕ್ಕಿಂತ ವೇಗವಾಗಿ ಗಾಳಿಯಲ್ಲಿ ವಸ್ತುಗಳು ಚಲಿಸಲು ಸಾಧ್ಯವೇ? ಹೌದು ಖಂಡಿತ ಸಾಧ್ಯ. ಶಬ್ದದ ವೇಗಕ್ಕಿಂತ ಚಲಿಸುವ ವೇಗಕ್ಕೆ ಸೂಪರ್ಸಾನಿಕ್ ವೇಗ ಅನ್ನುತ್ತಾರೆ. ಅನೇಕ ಯುದ್ಧವಿಮಾನಗಳು ಈ ವೇಗದಲ್ಲಿ ಚಲಿಸುತ್ತವೆ. ನಮ್ಮ ಎಚ್.ಎ.ಎಲ್ ನ ತೇಜಸ್ ವಿಮಾನವು ಸೂಪರ್ಸಾನಿಕ್ ವೇಗದಲ್ಲಿ ಚಲಿಸುತ್ತದೆ. ಹಾಗೆಯೇ ಬಂದೂಕಿನಿಂದ ಬಿಟ್ಟ ಗುಂಡುಗಳೂ ಶಬ್ದಕ್ಕಿಂತ ವೇಗದಲ್ಲಿ ಅಂದರೆ ಸೂಪರ್ಸಾನಿಕ್ ವೇಗದಲ್ಲಿ ಚಲಿಸುತ್ತವೆ. ಒಂದು ಕಾಲದಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಕಾನ್ಕಾರ್ಡ್ (concord) ಎಂಬ ಪ್ಯಾಸೆಂಜರ್ ವಿಮಾನವು ನ್ಯೂಯಾರ್ಕ್ ಮತ್ತು ಲಂಡನ್ ಮಧ್ಯ ಓಡಾಡುತ್ತಿದ್ದವು. ಏಳೂವರೆ ಗಂಟೆಗಳ ಪ್ರಯಾಣವನ್ನು ಈ ಸೂಪರ್ಸಾನಿಕ್ ವಿಮಾನಗಳು ಕೇವಲ ಮೂರುವರೆ ಗಂಟೆಗಳಲ್ಲಿ ಕ್ರಮಿಸುತ್ತಿದ್ದವು. ಆದರೆ ಒಂದು ಅಪಘಾತ ಮತ್ತು ದುಬಾರಿ ಟಿಕೆಟ್ ಹಾಗೂ ನಿರ್ವಹಣಾ ವೆಚ್ಚದ ಕಾರಣದಿಂದ 2003 ರಲ್ಲಿ ಕಾನ್ಕಾರ್ಡ್ ವಿಮಾನಗಳನ್ನು ಸೇವೆಯಿಂದ ರದ್ದುಗೊಳಿಸಲಾಯಿತು.

          ಪ್ರಾಣಿಕುಲದಲ್ಲಿ ಶಬ್ದದ ಮಹತ್ವವೇನು? ಅವುಗಳು ಶಬ್ದ ಹೇಗೆ ಮಾಡುತ್ತವೆ? ಹೇಗೆ ಕೇಳಿಸುತ್ತವೆ? ಹಾಗೂ ಇನ್ನಿತರ ಕುತೂಹಲ ಮಾಹಿತಿಗಳೊಂದಿಗೆ ಮುಂದಿನ ಭಾಗಗಳಲ್ಲಿ ಈ ಸರಣಿ ಮುಂದುವರೆಯಲಿದೆ.  

ವಿಠಲ ಶೆಣೈ
Leave a reply

Leave a Reply