ಹಾಗೆಯೇ ಇಲ್ಲಿರುವ ‘ಪಿಸುಗುಟ್ಟುವ ಗ್ಯಾಲರಿ’ ಎಂಬ ಕಡೆ ನೀವು ಅತ್ಯಂತ ಮೆಲುದನಿಯಲ್ಲಿ ಮಾತಾಡಿದರೂ ಅದು 40 ಮೀಟರ್ ವರೆಗೂ ಇನ್ನೊಂದು ಕೊನೆಯಲ್ಲಿ ಕೇಳಿಸುತ್ತದೆ. ಇದಕ್ಕೆ ಕಾರಣ ಇಲ್ಲಿಯ ಗೋಳಾಕೃತಿಯ ಗುಂಬಜ್ ಅಥವಾ ಡೋಮ್ ನ ವಿನ್ಯಾಸ. ಇದು ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಗುಮ್ಮಟ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ .ಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಅತಿ ಸಣ್ಣ ಕಂಪನಾಂಕದ ಶಬ್ದದ ಅಲೆಗಳೂ ಇಲ್ಲಿನ ಡೋಮ್ ನ ರಚನೆಯ ಕಾರಣ ವಿವಿಧ ಕೋನಗಳಲ್ಲಿ ಪ್ರತಿಫಲಿಸಿ ದೂರದ ವರೆಗೂ ಚಲಿಸುತ್ತದೆ ಮತ್ತು ಪ್ರತಿಫಲಿಸುತ್ತದೆ.

ಕಳೆದ ಸಂಚಿಕೆಗಳಲ್ಲಿ ಶಬ್ದದ ಬಗ್ಗೆ, ಮನುಷ್ಯರಲ್ಲಿ ಶಬ್ದ, ಪ್ರಾಣಿ-ಜಲಜೀವಿಗಳಲ್ಲಿ ಶಬ್ದದ ಮಹತ್ವ, ಸಂಗೀತ ಉಪಕರಣಗಳು ಶಬ್ದ ವಿಜ್ಞಾನವನ್ನು ಹೇಗೆ ಬಳಸುತ್ತವೆ ಎಂಬ ವಿಷಯಗಳನ್ನು ಓದಿದ್ದೀರಿ. ಈಗ ಶಬ್ದ ಮತ್ತು ಸ್ಮಾರಕಗಳ ಬಗ್ಗೆ ತಿಳಿಯೋಣ ಬನ್ನಿ.

ಪ್ರಾಚೀನ ಸ್ಮಾರಕಗಳ ಬಗ್ಗೆ ತಿಳಿಯುವ ಮೊದಲು ಆಧುನಿಕ ಥಿಯೆಟರ್ ಗಳ ಬಗ್ಗೆ ಚರ್ಚಿಸೋಣ. ಮಲ್ಟಿಪ್ಲೆಕ್ಸ್ ನ ಪರದೆಯಲ್ಲಿ ಚಲನಚಿತ್ರ ನೋಡುವಾಗ ಶಬ್ದಗಳು, ಸಂಭಾಷಣೆಗಳು, ಹಾಡುಗಳು ಎಷ್ಟು ಸ್ಪಷ್ಟವಾಗಿ ಕೇಳುತ್ತದೆ ಅಲ್ಲವೇ? ಇದಕ್ಕೆ ಪ್ರೊಜೆಕ್ಷನ್ ಸಿಸ್ಟಮ್ ನ ಆಂಪ್ಲಿಫೈಯರ್ ಗಳು ಒಂದು ಕಾರಣವಾದರೆ, ಚಿತ್ರಮಂದಿರದ ವಿನ್ಯಾಸ ಮತ್ತು ಅದರೊಳಗಿರುವ ವಸ್ತುಗಳು ಇನ್ನೊಂದು ಕಾರಣ. ಚಿತ್ರಮಂದಿರ ಕಟ್ಟುವಾಗಲೇ, ಅದು ಎಷ್ಟು ಉದ್ದವಿರಬೇಕು? ಅದರೊಳಗೆ ಪ್ರತಿ ಮೂಲೆಗೂ ಶಬ್ದವು ಒಂದೇ ತರಹ ಹೇಗೆ ಸಾಗಬೇಕು ಎಂದು ಸೌಂಡ್ ಇಂಜಿನಿಯರ್ ಗಳು ವಿನ್ಯಾಸ ತಯಾರಿಸುತ್ತಾರೆ. ಥಿಯೇಟರ್ ಒಳಗಡೆ ಬಳಸಿದ ಗೋಡೆಗಳು, ಪರದೆಗಳು, ಕುರ್ಚಿಗಳು ಮುಂತಾದ ವಸ್ತುಗಳು ಬಹುತೇಕ ನಯವಾದ ವಸ್ತುಗಳಾಗಿದ್ದು, ಅವುಗಳು ಶಬ್ದಗಳನ್ನು ಹೀರಲು ಸಹಾಯ ಮಾಡುತ್ತವೆ. ಒಂದು ವೇಳೆ ಅವು ಕಾಂಕ್ರೀಟ್ ಗೋಡೆ ಹಾಗೂ ಶಬ್ದಗಳನ್ನು ಪ್ರತಿಫಲಿಸುವ ವಸ್ತುಗಳಾಗಿದ್ದರೆ, ಶಬ್ದದ ಅಲೆಗಳು ಎಲ್ಲೆಂದರಲ್ಲಿ ಪ್ರತಿಫಲಿಸಿ ಕರ್ಕಶವಾದ ಅನುಭವಗಳನ್ನು ಕೊಡುತ್ತಿತ್ತು. ಹಾಗೆಯೇ ಥಿಯೇಟರ್ ಒಳಗೆ ಬರುವ ಗಟ್ಟಿ ಶಬ್ದಗಳು ಅಲ್ಲೇ ಒಳಗೆ ಹೀರುವುದರಿಂದ, ಹೊರಗೆ ಶಬ್ದಗಳು ಕೇಳಿಸುವುದಿಲ್ಲ. ಕಟ್ಟಡಗಳನ್ನು ಹೀಗೆ ಶಬ್ದ ನಿಯಂತ್ರಣ ಮಾಡಲು ತಯಾರುಗೊಳಿಸುವ ವಿಧಾನಕ್ಕೆ ಅಕೌಸ್ಟಿಕ್ (accoustics) ಎಂದು ಕರೆಯುತ್ತಾರೆ. ಅಕೌಸ್ಟಿಕ್ ಎಂಬ ಶಬ್ದ ವಿಜ್ಞಾನದ ಮೂಲಕ ಶಬ್ದವು ಹೇಗೆ, ಎಲ್ಲಿ ಮತ್ತು ಎಷ್ಟು ದೂರದ ವರೆಗೆ ಚಲಿಸಬೇಕು, ಎಲ್ಲಿ ಪ್ರತಿಫಲಿಸಬೇಕು ಎಂಬುವುದನ್ನು ಇಂಜಿನಿಯರ್ ಗಳು ನಿರ್ಧರಿಸುತ್ತಾರೆ. ಇದು ಆಧುನಿಕ ಜಗತ್ತಿನ ವೈಜ್ಞಾನಿಕ ಅಧ್ಯಯನ ವಿಷಯವಾದರೆ, ಪುರಾತನ ಕಾಲದಲ್ಲೂ ಜನರಿಗೆ ಶಬ್ದ ವಿಜ್ಞಾನದ ಪರಿಣತಿ ಇತ್ತು ಎನ್ನಲಾಗಿದೆ. ಇದಕ್ಕೆ ಪುರಾತನ ಸ್ಮಾರಕಗಳೇ ಸಾಕ್ಷಿ.

ಶಬ್ದದ ಮಹತ್ವ ಹೊಂದಿದ ಬೇರೆ ದೇಶಗಳ ಸ್ಮಾರಕಗಳ ಬಗ್ಗೆ ವಿವರಿಸುವ ಮೊದಲು, ನಮ್ಮ ಕರ್ನಾಟಕದಲ್ಲೇ ಇರುವ ಗೋಲ್ ಗುಂಬಜ್ ಅಥವಾ ಗೋಲ ಗುಮ್ಮಟದ ಬಗ್ಗೆ ತಿಳಿಯೋಣ.

ಬಿಜಾಪುರದ ಗೋಲ್ ಗುಂಬಜ್ ಕ್ರಿ.ಶ 1659 ನೆಯ ಇಸವಿಯಲ್ಲಿ ಮೊಹಮ್ಮದ್ ಆದಿಲ್ ಷಾ ರವರ ಗೋರಿಯಾಗಿ ಕಟ್ಟಲ್ಪಟ್ಟಿತು. ಇದರ ಪ್ರಮುಖ ಶಿಲ್ಪಿ ದಾಬೂಲ್ ಪ್ರದೇಶದ ಯಾಕುತ್ ಎಂಬುವವರು. ಗೋಲ್ ಗುಂಬಜ್ ನ ವಿಶೇಷ ಆಕರ್ಷಣೆ ಎಂದರೆ ಇದರೊಳಗಿನ ಮುಖ್ಯ ಕೊಠಡಿಯಲ್ಲಿ ಪ್ರತಿ ಶಬ್ದ, ಚಪ್ಪಾಳೆಗಳು ಏಳರಿಂದ ಹತ್ತು ಸಲ ಪ್ರತಿಧ್ವನಿಸುವುದು. ಹಾಗೆಯೇ ಇಲ್ಲಿರುವ ‘ಪಿಸುಗುಟ್ಟುವ ಗ್ಯಾಲರಿ’ ಎಂಬ ಕಡೆ ನೀವು ಅತ್ಯಂತ ಮೆಲುದನಿಯಲ್ಲಿ ಮಾತಾಡಿದರೂ ಅದು 40 ಮೀಟರ್ ವರೆಗೂ ಇನ್ನೊಂದು ಕೊನೆಯಲ್ಲಿ ಕೇಳಿಸುತ್ತದೆ. ಇದಕ್ಕೆ ಕಾರಣ ಇಲ್ಲಿಯ ಗೋಳಾಕೃತಿಯ ಗುಂಬಜ್ ಅಥವಾ ಡೋಮ್ ನ ವಿನ್ಯಾಸ. ಇದು ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಗುಮ್ಮಟ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ  .ಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಅತಿ ಸಣ್ಣ ಕಂಪನಾಂಕದ ಶಬ್ದದ ಅಲೆಗಳೂ ಇಲ್ಲಿನ ಡೋಮ್ ನ ರಚನೆಯ ಕಾರಣ ವಿವಿಧ ಕೋನಗಳಲ್ಲಿ ಪ್ರತಿಫಲಿಸಿ ದೂರದ ವರೆಗೂ ಚಲಿಸುತ್ತದೆ ಮತ್ತು ಪ್ರತಿಫಲಿಸುತ್ತದೆ. ಪಿಸುಗುಟ್ಟುವ ಗ್ಯಾಲರಿಯ ಒಂದು ಭಾಗದ ಗೋಡೆಯ ಬಳಿ ಕೈ ಗಡಿಯಾರ ಇಟ್ಟರೆ, ಅದರ ‘ಕ್ಲಿಕ್ ಕ್ಲಿಕ್’ ಶಬ್ದವು ಇನ್ನೊಂದು ಕೊನೆಯ ವರೆಗೆ ಅಷ್ಟೇ ಸ್ಪಷ್ಟವಾಗಿ ಕೇಳಿಸುತ್ತದೆ!   

ಹಾಗೆಯೇ ನಮ್ಮ ಕರ್ನಾಟಕದ ಹಂಪಿಯ ವಿಠಲ ದೇವಸ್ಥಾನದಲ್ಲೂ ಸಂಗೀತ ಮತ್ತು ಶಬ್ದಕ್ಕೆ ಸಂಬಂಧಪಟ್ಟ ಕುತೂಹಲಕಾರಿ ವಿಷಯವಿದೆ. ಈ ದೇವಸ್ಥಾನದ ರಂಗಮಂಟಪದಲ್ಲಿ 56 ಸಂಗೀತ ಕಂಬಗಳು ಇವೆ. ಇವುಗಳನ್ನು ಸರಿಗಮಪ ಕಂಬಗಳು ಎಂದೂ ಕರೆಯುತ್ತಾರೆ.

ಈ ಕಂಬಗಳ ಮೇಲೆ ನಿಧಾನವಾಗಿ ಬೆರಳುಗಳಿಂದ ತಟ್ಟಿದಾಗ ಸುಶ್ರಾವ್ಯ ಸಂಗೀತ ಹೊರಬರುತ್ತದೆ. ಪ್ರತಿಯೊಂದು ಮುಖ್ಯ ಕಂಬಗಳ ಸುತ್ತ ಏಳು ಉಪ ಕಂಬಗಳು ಇವೆ, ಇವು ಒಂದೊಂದು ಸಂಗೀತ ಸ್ವರಗಳನ್ನು ಹೊಮ್ಮುತ್ತವೆ. ಗಂಧದ ಕೊರಡಿನಿಂದ ಈ ಕಂಬಗಳನ್ನು ಮಿಡಿದರೆ ಸರಿಗಮಪ ಶಬ್ದಗಳು ಹೊರಬರುತ್ತವೆ. ವಿವಿಧ ಕಂಬಗಳಿಂದ ಘಂಟೆ, ಮೃದಂಗ, ವೀಣೆ ಹೀಗೆ ಅನೇಕ ಸಂಗೀತ ವಾದ್ಯಗಳಿಂದ ಬರುವಂತೆ ಶಬ್ದಗಳು ಹೊರ ಬರುತ್ತವೆ. ಪ್ರತಿಯೊಂದು ಕಂಬಗಳನ್ನೂ ಒಂದೇ ಕಲ್ಲಿನಿಂದ ಕಟ್ಟಲಾಗಿದೆ.

ಇವೆರಡು ಸ್ಮಾರಕಗಳನ್ನು ನೋಡಿದಾಗ ನಮ್ಮ ಪೂರ್ವಜರಿಗೆ ಅಕೌಸ್ಟಿಕ್ ಮತ್ತು ಶಬ್ದ ಜ್ಞಾನ ಎರಡೂ ಇತ್ತು ಎಂದು ತಿಳಿಯುತ್ತದೆ ಅಲ್ಲವೇ? ಹಂಪಿಯ ಈ ಸಂಗೀತ ಕಂಬಗಳ ಹಿಂದಿರುವ ವೈಜ್ಞಾನಿಕ ಕಾರಣ ಹುಡುಕಲು ಅಧ್ಯಯನವನ್ನೂ ನಡೆಸಲಾಗಿತ್ತು. ಹಂಪಿಯ ಸುತ್ತಮುತ್ತ ಸಿಕ್ಕಿದ ಬಂಡೆಗಳನ್ನು ತೆಗೆದು ಅವುಗಳ ರಚನೆಯನ್ನು ಕಲಿಯಲಾಯಿತು. ಧ್ರುವೀಕರಿಸಿದ ಬೆಳಕಿನ ಅಡಿಯಲ್ಲಿ ವರ್ಧಿಸಲ್ಪಟ್ಟ ಕಲ್ಲಿನ ಅಡ್ಡ ಭಾಗಗಳು(cross-section) ಹೆಚ್ಚಿನ ಪ್ರಮಾಣದ ಆರ್ಥೋಕ್ಲೇಸ್ (ಪಿಂಕ್ ಫೆಲ್ಡ್ಸ್ಪಾರ್) ಅನ್ನು ತೋರಿಸಿದವು, ಇದು ಮೊನೊಕ್ಲಿನಿಕ್ ರಚನೆಯೊಂದಿಗೆ ಲಂಬ ಕೋನಗಳಲ್ಲಿ ಸೀಳನ್ನು ಹೊಂದಿರುತ್ತದೆ. ಈ ಬಂಡೆಗಳಲ್ಲಿನ ಕೆಲವು ಖನಿಜಗಳ ಸ್ಫಟಿಕದ ರಚನೆಗಳು ಸ್ವಾಭಾವಿಕವಾಗಿ ಪ್ರತಿಧ್ವನಿಸುವ ಗುಣಲಕ್ಷಣಗಳನ್ನು ಹೊಂದಿವೆ ಎಂದು ತಿಳಿಯಿತು. ಇಂತಹ ಗುಣಲಕ್ಷಣಗಳನ್ನು ಹೊಂದಿದ ಕಲ್ಲುಗಳನ್ನು ಹುಡುಕುವ ನೈಪುಣ್ಯತೆಯನ್ನು ಆಗಿನ ಕಾಲದ ಶಿಲ್ಪಿಗಳು ಹೊಂದಿದ್ದರು. ಆ ಕಲ್ಲನ್ನು ಕಲಾತ್ಮಕವಾಗಿ ಕೆತ್ತಿ, ಅವುಗಳ ಸಂಗೀತ ಉತ್ಪಾದನೆಯ ಗುಣವನ್ನು ಇನ್ನಷ್ಟು ಉತ್ತೇಜಿಸುವಂತೆ ಮಾಡಿದರು ಎಂದು ತಿಳಿಯಲಾಗಿದೆ.

ಹಲವು ವರುಷಗಳಿಂದ ಬರುವ ಲಕ್ಷಾಂತರ ಪ್ರವಾಸಿಗಳು, ನೂರಾರು ಗೈಡ್ ಗಳು ಹಂಪಿಯ ಈ ಸಂಗೀತ ಕಂಬಗಳನ್ನು ಬಡಿದು ಬಡಿದು, ಇವುಗಳು ಕೆಡಬಹುದು ಎಂಬ ಕಾರಣಕ್ಕಾಗಿ ಇತ್ತೀಚೆಗೆ ಈ ಕಂಬಗಳನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ.

ಹೀಗೆಯೇ ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಸ್ಥಾನ,  ತಿರುನಲ್ವೇಲಿಯ ಪ್ರಖ್ಯಾತ ನೆಲ್ಲೈಪ್ಪರ್ ದೇಗುಲ, ಅಲ್ವರ್ತಿರುನಗರ ದೇವಸ್ಥಾನಗಳಲ್ಲೂ ಸಂಗೀತ ಕಂಬಗಳನ್ನು ಕಾಣಬಹುದು.

ನಮ್ಮ ದೇಶದ ಸ್ಮಾರಕಗಳು ಅಲ್ಲದೆ, ವಿದೇಶಗಳಲ್ಲೂ ಇಂತಹ ಹಲವು ವಿಸ್ಮಯಕಾರಿ ಸಂಗೀತ ಮತ್ತು ಶಬ್ದ ಸ್ಮಾರಕಗಳು ಇವೆ. ಅವುಗಳ ಬಗ್ಗೆ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ಬರಲಿವೆ. ತಪ್ಪದೇ ಓದಿ.

ವಿಠಲ ಶೆಣೈ
Leave a reply

Leave a Reply