2004 ನೆಯ ಇಸವಿಯಲ್ಲಿ ಸುನಾಮಿ ಬಂದು ಅಬ್ಬರಿಸುವ ಬಹಳ ಮುಂಚೆ, ಭಾರತದ ಪೂರ್ವ ತೀರದಲ್ಲಿ (ಮತ್ತು ಇತರ ದೇಶಗಳಲ್ಲೂ) ನಾಯಿಗಳು ಮತ್ತು ಇತರ ಪ್ರಾಣಿಗಳು ಸಮುದ್ರ ತೀರವನ್ನು ಪ್ರವೇಶಿಸಲು ನಿರಾಕರಿಸಿದ್ದವು. ಎಷ್ಟೋ ಕಿ.ಮಿ ದೂರದಿಂದ ಬರುತ್ತಿರುವ ಸುನಾಮಿಯ ಅಲೆಗಳು ವಾತಾವರಣದಲ್ಲಿ ಮೂಡಿಸುವ ಶಬ್ದದ ಅಲೆಗಳನ್ನು ಇಲ್ಲಿ ಚೆನ್ನೈ, ರಾಮೇಶ್ವರಂ ದಂತಹ ಪ್ರದೇಶಗಳಲ್ಲಿ ಕೇಳಿಸಿಕೊಂಡು ಅಪಾಯವನ್ನು ಮುಂಚಿತವಾಗಿ ಪ್ರಾಣಿಗಳು ಗ್ರಹಿಸಿಕೊಂಡವು. ಸುನಾಮಿಯಲ್ಲಿ 1,50,000 ಜನರು ಸಾವಿಗೀಡಾದರೆ, ಸತ್ತ ಪ್ರಾಣಿಗಳ ಸಂಖ್ಯೆಗಳ ಪ್ರಮಾಣ ಬಹಳ ಕಡಿಮೆ.

ಪ್ರಾಣಿ ಲೋಕದಲ್ಲಿ ಶಬ್ದದ ಮಹತ್ವ, ಇದರ ಬಗ್ಗೆ ಈಗ ನಮ್ಮೆಲ್ಲರ ನಡುವೆ ಇರುವ ಸಾಕುಪ್ರಾಣಿಗಳಲ್ಲಿ ಶಬ್ದ ಗ್ರಹಿಕೆಯ ಬಗ್ಗೆ ತಿಳಿಯೋಣ ಬನ್ನಿ. ಸಾಕುಪ್ರಾಣಿಗಳು ಎಂದರೆ ಮೊದಲು ನೆನಪಾಗುವುದು ನಾಯಿ.  ನಂತರ ಬೆಕ್ಕು,  ತದನಂತರ ದನ. ಈ ಮೂರು ಸಾಕುಪ್ರಾಣಿಗಳಲ್ಲಿ ಶಬ್ದ ಗ್ರಹಿಕೆ ಈ ಕೆಳಗಿನಂತಿವೆ.

ನಾಯಿ:

ನಿಮ್ಮ ಮನೆಯಲ್ಲಿ ನಾಯಿ ಇದ್ದರೆ, ಅದು ಒಮ್ಮೊಮ್ಮೆ ಕಿವಿ ನೆಟ್ಟಗೆ ಮಾಡಿ ಏನನ್ನೋ ಆಲಿಸುವುದನ್ನು ನೋಡಿದ್ದೀರಾ? ನಿಮಗೇನೂ ಕೇಳಿಸುತ್ತಿಲ್ಲ, ಆದರೂ ನಾಯಿ ಏನನ್ನೋ ಕೇಳುತ್ತಿರಬಹುದೇ? ಹೌದು. ನಾಯಿಯ ಕಿವಿಯಲ್ಲಿ ಹದಿನೆಂಟು ಸ್ನಾಯುಗಳಿವೆ, ಮನುಷ್ಯನ ಕಿವಿಯಲ್ಲಿರುವುದು ಕೇವಲ ಆರು. ಇದೇ ಕಾರಣದಿಂದ ನಾಯಿಗಳಿಗೆ ಕಿವಿಗಳನ್ನು ತಿರುಗಿಸುವುದು, ನೆಟ್ಟಗೆ ಮಾಡುವುದು ಸುಲಭ. ಮನುಷ್ಯನಿಗೆ ಇದು ಸಾಧ್ಯವಿಲ್ಲ. ಹಾಗೆಯೇ ನಾಯಿಗಳ ಒಳ ಕಿವಿಯ ಕೊಳವೆ ಸಾಕಷ್ಟು ಉದ್ದವಿದ್ದು, ಅದು ಶಬ್ದವನ್ನು 200 ಪಟ್ಟು ವೃದ್ಧಿಸಲು ಸಹಾಯ ಮಾಡುತ್ತದೆ. ಮನುಷ್ಯ ಕೇಳುವುದಕ್ಕಿಂತ ಎಷ್ಟೋ ಪಟ್ಟು ದೂರವಿರುವ ಶಬ್ದಗಳನ್ನು ನಾಯಿಗಳು ಕೇಳುತ್ತವೆ. ನಾಯಿಗಳು ಕೇಳುವ ಶಬ್ದ ಕಂಪನಾಂಕದ ಶ್ರೇಣಿಯು 67 Hz ದಿಂದ 45,000 Hz (ಮನುಷ್ಯ 20 ರಿಂದ 23,000). ಅಂದರೆ ಹೆಚ್ಚು ಕಂಪನಾಂಕ (high frequency) ಇರುವ ಶಬ್ದಗಳನ್ನು ಕೇಳುವ ನೈಪುಣ್ಯತೆ ನಾಯಿಗಳು ಹೊಂದಿರುತ್ತವೆ.

ಅಷ್ಟಲ್ಲದೇ ನಾಯಿಗಳು 3,000 ದಿಂದ 12,000 Hz ವರೆಗಿನ ಶಬ್ದ ಗ್ರಹಿಕೆಯ ಸೂಕ್ಷ್ಮತೆ (sound sensitivity) ಮನುಷ್ಯನಿಗಿಂತ ಹೆಚ್ಚು ಹೊಂದಿರುತ್ತವೆ. ಈ ಕಾರಣದಿಂದ ನಾಯಿಗಳಿಗೆ ಈ ಶ್ರೇಣಿಯಲ್ಲಿರುವ ಸದ್ದುಗಳು ಹಲವು ಪಟ್ಟು ವೃದ್ಧಿಸಿ ಕೇಳುತ್ತದೆ. ಹೇರ್ ಡ್ರೆಯರ್ ಶಬ್ದ, ಜನರೇಟರ್ ಶಬ್ದ, ಪಟಾಕಿಯ ಸ್ಪೋಟ ಮುಂತಾದವುಗಳು ನಾಯಿಗಳಿಗೆ ಅತ್ಯಂತ ಕರ್ಕಶವಾಗಿ ಕೇಳುತ್ತವೆ.

ಹಲವು ಸಲ ಬಾಗಿಲ ಬಳಿ ಬಂದು ನಾಯಿ ಬೊಗಳುತ್ತದೆ, ಆದರೆ ಹೊರಗೆ ನೋಡಿದರೆ ಯಾರೂ ಇಲ್ಲ! ಸ್ವಲ್ಪ ಕ್ಷಣಗಳ ನಂತರ ಹೊರಗಡೆ ಇನ್ನೊಂದು ಬೀದಿ ನಾಯಿ ಅಥವಾ ನಿಮ್ಮದೇ ಮನೆಯ ಇನ್ನೊಬ್ಬ ಸದಸ್ಯ ಬರುವುದನ್ನು ನೀವು ನೋಡುತ್ತೀರಿ. ಕೆಲವು ನಾಯಿಗಳು ತಮ್ಮ ಮಾಲೀಕನ ಕಾರಿನ ಶಬ್ದದ ಪರಿಚಯ ಇಟ್ಟುಕೊಂಡು, ಆ ಕಾರು ಎಲ್ಲೋ ದೂರದಿಂದ ಬರುವಷ್ಟರಲ್ಲೇ ನಿಮಗಿಂತ ಮೊದಲು ಕೇಳಿ, ಬೊಗಳಲು ಶುರು ಮಾಡುತ್ತವೆ.

2004 ನೆಯ ಇಸವಿಯಲ್ಲಿ ಸುನಾಮಿ ಬಂದು ಅಬ್ಬರಿಸುವ ಬಹಳ ಮುಂಚೆ, ಭಾರತದ ಪೂರ್ವ ತೀರದಲ್ಲಿ (ಮತ್ತು ಇತರ ದೇಶಗಳಲ್ಲೂ) ನಾಯಿಗಳು ಮತ್ತು ಇತರ ಪ್ರಾಣಿಗಳು ಸಮುದ್ರ ತೀರವನ್ನು ಪ್ರವೇಶಿಸಲು ನಿರಾಕರಿಸಿದ್ದವು. ಎಷ್ಟೋ ಕಿ.ಮಿ ದೂರದಿಂದ ಬರುತ್ತಿರುವ ಸುನಾಮಿಯ ಅಲೆಗಳು ವಾತಾವರಣದಲ್ಲಿ ಮೂಡಿಸುವ ಶಬ್ದದ ಅಲೆಗಳನ್ನು ಇಲ್ಲಿ ಚೆನ್ನೈ, ರಾಮೇಶ್ವರಂ ದಂತಹ ಪ್ರದೇಶಗಳಲ್ಲಿ ಕೇಳಿಸಿಕೊಂಡು ಅಪಾಯವನ್ನು ಮುಂಚಿತವಾಗಿ ಪ್ರಾಣಿಗಳು ಗ್ರಹಿಸಿಕೊಂಡವು. ಸುನಾಮಿಯಲ್ಲಿ 1,50,000 ಜನರು ಸಾವಿಗೀಡಾದರೆ, ಸತ್ತ ಪ್ರಾಣಿಗಳ ಸಂಖ್ಯೆಗಳ ಪ್ರಮಾಣ ಬಹಳ ಕಡಿಮೆ. ಈ ರೀತಿ ವಾತಾವರಣದಲ್ಲಾಗುವ ವೈಪರಿತ್ಯಗಳನ್ನು ಮುಂಚಿತವಾಗಿ ಗ್ರಹಿಸುವ ಶಕ್ತಿಯುಳ್ಳ ನಾಯಿಗಳು ಮತ್ತು ಇತರ ಪ್ರಾಣಿಗಳು, ಮನುಷ್ಯನಂತೆ ಮಾತಾಡಲು ಕಲಿತರೆ ಮತ್ತು ಮೆದುಳಿನ ಶಕ್ತಿ ಹೊಂದಿದ್ದರೆ ಬಹಳ ಅನುಕೂಲವಾಗುತ್ತಿತ್ತು. ಹವಾಮಾನ ಇಲಾಖೆಯ ಕೆಲಸ ಬಹಳ ಹಗುರಾಗುತ್ತಿತ್ತು!    

ನಾಯಿಗಳಲ್ಲಿ ಶಬ್ದ ಕೇಳುವಿಕೆಯ ಸಿದ್ಧಾಂತವನ್ನು ಸಾಬೀತುಪಡಿಸಲು Brainstem Auditory Evoked Response (BAER) ಎಂಬ ಒಂದು ಪರೀಕ್ಷೆಯನ್ನು ಮಾಡಬಹುದು.

ಇದರಲ್ಲಿ ನಾಯಿಗಳ ತಲೆಯಲ್ಲಿ ಒಂದು ಎಲೆಕ್ಟ್ರೋಡ್ ಕಟ್ಟಿ, ಅದರ ಕಿವಿಗಳಿಗೆ ಇಯರ್ ಫೋನ್ ಹಾಕಿ, ನಂತರ ಬೇರೆ ಬೇರೆ ಕಂಪನಾಂಕದ ಸದ್ದುಗಳನ್ನು ಹೊಮ್ಮಿಸಿ, ನಾಯಿಗಳ ಮೆದುಳಲ್ಲಾಗುವ ಸಂಚಾರವನ್ನು ಎಲೆಕ್ಟ್ರೋಡ್ ಗಳ ಮೂಲಕ ಆಗುವ ವಿದ್ಯುತ್ ಸಂಚಾರವನ್ನು ನೋಡಿ ಕಲಿಯಬಹುದು. ಅತಿ ಹೆಚ್ಚು ಕಂಪನಾಂಕದ ಶಬ್ದಗಳನ್ನು ನಾಯಿಗೆ ಇಯರ್ ಫೋನ್ ಮೂಲಕ ಮೂಡಿಸಿದರೆ ನಾಯಿಗಳು ಆ ಶಬ್ದ ಗ್ರಹಿಸುತ್ತವೆ ಎಂದು ಈ ಪರೀಕ್ಷೆಯಲ್ಲಿ ತಿಳಿದು ಬರುತ್ತದೆ. ಈ ಪರೀಕ್ಷೆಯಲ್ಲಿ ನಾಯಿಗೆ ಯಾವುದೇ ನೋವು ಅಥವಾ ಹಾನಿಯಾಗುವುದಿಲ್ಲ. ಮನುಷ್ಯನಂತೆ ನಾಯಿಗಳು ಕೂಡಾ ವಯಸ್ಸಾದಂತೆ ಕಿವುಡಾಗುತ್ತವೆ, ವಯಸ್ಸಾದ ನಾಯಿಗಳಲ್ಲಿ ಕಿವುಡುತನವನ್ನು ಪರೀಕ್ಷಿಸಲು BAER ಟೆಸ್ಟ್ ಉಪಯೋಗವಾಗುತ್ತದೆ.

ಇನ್ನೊಂದು ಸ್ವಾರಸ್ಯಕರ ಅಂಶವೇನೆಂದರೆ ನಾಯಿಗಳು ಸಂಗೀತದ ನೋಟ್ ಗಳಾದ c ಮತ್ತು c-sharp ಗಳ ನಡುವಿನ ಒಂದನೇ ಎಂಟರಷ್ಟು ಅಂತರವನ್ನೂ ಗಮನಿಸಬಲ್ಲವು. ಖ್ಯಾತ ಲೇಖಕರಾದ ಶ್ರೀ ವಸುಧೇಂದ್ರ ರವರ ‘ವಿಷಮ ಭಿನ್ನ ರಾಶಿ’ ಪುಸ್ತಕದ ‘ಡೆವಿಲ್ ಡಾಗ್’ ಎಂಬ ಕಥೆಯು ಇಂತಹದೇ ಒಂದು ವಿಶಿಷ್ಟ ಸಂಗೀತ ಗ್ರಹಿಕೆಯ ನಾಯಿಯನ್ನು ಉಲ್ಲೇಖಿಸುತ್ತದೆ. 

ನಾಯಿಗಳ ಬೊಗಳುವಿಕೆ ಮತ್ತು ರೋದನ ಹೆಚ್ಚು ಕಂಪನಾಂಕವನ್ನು ಹೊಂದಿದ್ದು, ಅದು ಬಹಳ ದೂರ ಕ್ರಮಿಸಿ ಇತರ ನಾಯಿಗಳು ಮತ್ತು ಪ್ರಾಣಿಗಳಿಗೆ ಕೇಳಿಸುತ್ತದೆ.

ಬೆಕ್ಕು:

ಹೆಚ್ಚು ಕಂಪನಾಂಕ ಇರುವ ಶಬ್ದಗಳನ್ನು ಕೇಳಿಸುವಲ್ಲಿ ಬೆಕ್ಕು, ನಾಯಿಗಿಂತ ಒಂದು ಹೆಜ್ಜೆ ಮುಂದಿದೆ. ಬೆಕ್ಕು ಸುಮಾರು 50 Hz ದಿಂದ 64,000 Hz ವರೆಗೆ ಶಬ್ದ ಕೇಳುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಕಾರಣ ಬಹುಶಃ ಬೆಕ್ಕು ಬೇಟೆಯಾಡುವ ಇಲಿ ಹೊರ ಹಾಕುವ ಸದ್ದು. ಇಲಿ ಮಾಡುವ ಸದ್ದು ಹೆಚ್ಚು ಕಂಪನಾಂಕ ಹೊಂದಿದ್ದು, ಅದನ್ನು ಕೇಳಿ ಬೆಕ್ಕು ಬೇಟೆಯಾಡಲು ಸಾಧ್ಯವಾಗುತ್ತದೆ. ಇಲಿಯ ಶಬ್ದ ಗ್ರಹಿಕೆ ಬೆಕ್ಕಿನಷ್ಟೇ ಸಮರ್ಥವಾದದ್ದು, ಹಾಗಾಗಿ ಬೆಕ್ಕು-ಇಲಿಯ ಆಟಗಳು ಬಹಳ ಆಸಕ್ತಿ ಕೆರಳಿಸುತ್ತವೆ.

ಬೆಕ್ಕಿನ ಕಿವಿಯಲ್ಲಿ 30 ಸ್ನಾಯುಗಳಿವೆ. ಹಾಗಾಗಿ ಬೆಕ್ಕಿನ ಕಿವಿಯು ನಾಯಿ ಮತ್ತು ಮನುಷ್ಯನಿಗಿಂತ ಹೆಚ್ಚು ಸುಲಭವಾಗಿ 180 ಡಿಗ್ರಿ ಕೋನದಲ್ಲಿ ಅಲುಗಾಡುತ್ತವೆ. ಬೆಕ್ಕಿನ ಕಿವಿಯೂ ಶಬ್ದ ಬಂದ ದಿಕ್ಕಲ್ಲಿ ತಿರುಗಿ ನಿಲ್ಲುವ ಸಾಮರ್ಥ್ಯ ಹೊಂದಿರುತ್ತದೆ. 

ದನ:

ದನವು ಕಡಿಮೆ ಕಂಪನಾಂಕಗಳನ್ನು ಕೇಳುವಿಕೆಯ ಸಾಮರ್ಥ್ಯ ಹೊಂದಿದೆ. ಇದು 16 Hz ದಿಂದ 40,000 Hz ತನಕ ಕೇಳಬಲ್ಲದು. ಅಂದರೆ ದನವು ಆನೆಯ ಹೆಜ್ಜೆಗಳ ಸದ್ದು(ಕಡಿಮೆ ಕಂಪನಾಂಕ) ಮತ್ತು ಬಾವಲಿಯ ಹೆಚ್ಚು ಕಂಪನಾಂಕ ಎರಡನ್ನೂ ಕೇಳಿಸುವ ಪ್ರಾಣಿ.

ಆನೆ ಹಾಗೂ ದನ ಗಾತ್ರದಲ್ಲಿ ದೊಡ್ಡ ಪ್ರಾಣಿಗಳಾದರೂ ಅವು ಕಡಿಮೆ ಕಂಪನಾಂಕದ ಶಬ್ದಗಳನ್ನು ಕೇಳುತ್ತವೆ, ಹಾಗೆಯೇ ಪುಟ್ಟ ಪ್ರಾಣಿಗಳಾದ ಇಲಿ, ಬಾವಲಿಗಳು ಹೆಚ್ಚು ಕಂಪನಾಂಕದ ಶಬ್ದಗಳನ್ನು ಕೇಳುತ್ತವೆ. ಹಾಗಾಗಿ ಪ್ರಾಣಿಯ ದೇಹದ ಗಾತ್ರ ಮತ್ತು ಅವು ಕೇಳುವ ಶಬ್ದ ಕಂಪನಾಂಕ ವಿಲೋಮ ಅನುಪಾತದಲ್ಲಿ ಇರುತ್ತದೆ ಎಂದು ನಾವು ತಿಳಿಯಬಹುದು.

ಇದುವರೆಗೆ ನಾವು ನೋಡಿದ ಎಲ್ಲಾ ಪ್ರಾಣಿಗಳ ಕೇಳುವಿಕೆಯ ಕಂಪನಾಂಕದ ಶ್ರೇಣಿ ಈ ಕೆಳಗಿದೆ:

ಜಲಜೀವಿಗಳ ಶಬ್ದ ಗ್ರಹಿಕೆಯ ವಿಷಯಗಳೊಂದಿಗೆ ಈ ಸಂಚಿಕೆಯು ಮುಂದುವರೆಯಲಿದೆ. 

ವಿಠಲ ಶೆಣೈ
Leave a reply

Leave a Reply