ಆನೆಯು ವಿಶಿಷ್ಟ ಶ್ರವಣ ಶಕ್ತಿಯುಳ್ಳ ಪ್ರಾಣಿಗಳಲ್ಲಿ ಒಂದು. ಆನೆಯ ಕಿವಿಗಳು ಎಷ್ಟು ದೊಡ್ಡದಿವೆ ಎಂದು ನಿಮಗೆ ಗೊತ್ತಿದೆ. ದೊಡ್ಡ ಕಿವಿಗಳು ಏಕೆ? ಆನೆಯ ದೇಹದ ಗಾತ್ರಕ್ಕೆ ಅನುಗುಣವಾಗಿರಲಿ ಎಂದೇ? ಅಲ್ಲ... ದೊಡ್ಡ ಕಿವಿಗಳಿರಲು ಒಂದು ಕಾರಣ ಆನೆಯ ದೇಹವನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಇಡಲು. ದೇಹದ ಉಳಿದ ಭಾಗಗಳಿಗಿಂತ ತೆಳ್ಳಗೆ ಇರುವ ಕಿವಿಯ ಚರ್ಮ ಮತ್ತು ಕಿವಿಯ ವಿಸ್ತಾರವಾದ ಮೇಲ್ಮೈ, ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಅಧ್ಯಾಯ 3. ಪ್ರಾಣಿಲೋಕದಲ್ಲಿ ಶಬ್ದ

ಮನುಷ್ಯ ಮತ್ತು ಶಬ್ದದ ಬಗ್ಗೆ ಕಳೆದ ಸಂಚಿಕೆಯಲ್ಲಿ ತಿಳಿದಿದ್ದೀರಿ. ಈಗ ಪ್ರಾಣಿಲೋಕದಲ್ಲಿ ಶಬ್ದದ ಬಗ್ಗೆ ತಿಳಿಯೋಣ.

ಪ್ರಾಣಿ ಸಂಕುಲದಲ್ಲಿ ಶಬ್ದಗಳ ಕೇಳುವಿಕೆಯು ಮಹತ್ತರ ಪಾತ್ರವನ್ನು ಹೊಂದಿವೆ. ಬಹುತೇಕ ಎಲ್ಲಾ ಪ್ರಾಣಿ-ಪಕ್ಷಿಗಳು ಮನುಷ್ಯನಿಗಿಂತ ಉತ್ಕೃಷ್ಟ ಮಟ್ಟದ ಶ್ರವಣ ಶಕ್ತಿಯನ್ನು ಪಡೆದಿರುತ್ತವೆ. ಪ್ರಾಣಿಗಳ ಈ ಸಾಮರ್ಥ್ಯ ಅವುಗಳ ಸಂರಕ್ಷಣೆಗೆ, ಬೇಟೆಗೆ, ಮಿಥುನ ಕ್ರಿಯೆ ಹಾಗೂ ಇತರ ದೈನಂದಿನ ಚಟುವಟಿಕೆಗಳಿಗೆ ಸಹಾಯವಾಗುತ್ತದೆ. ಮನುಷ್ಯನಲ್ಲಿ ಮೆದುಳಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆ ಹೆಚ್ಚಿದ್ದರೆ, ಪ್ರಾಣಿಗಳಲ್ಲಿ ಉಳಿದ ಹಲವು ಸಾಮರ್ಥ್ಯಗಳು ಮನುಷ್ಯನಿಗಿಂತ ಎಷ್ಟೋ ಪಟ್ಟು ಹೆಚ್ಚಿದೆ. ಇವುಗಳಲ್ಲಿ ಶ್ರವಣಶಕ್ತಿಯೂ ಒಂದು. ಬನ್ನಿ, ಕೆಲವು ಪ್ರಾಣಿಗಳ ಶಬ್ದ ಗ್ರಹಿಕೆಯ ಬಗ್ಗೆ ಈಗ ತಿಳಿಯೋಣ.

ಆನೆ:

ಆನೆಯು ವಿಶಿಷ್ಟ ಶ್ರವಣ ಶಕ್ತಿಯುಳ್ಳ ಪ್ರಾಣಿಗಳಲ್ಲಿ ಒಂದು. ಆನೆಯ ಕಿವಿಗಳು ಎಷ್ಟು ದೊಡ್ಡದಿವೆ ಎಂದು ನಿಮಗೆ ಗೊತ್ತಿದೆ. ದೊಡ್ಡ ಕಿವಿಗಳು ಏಕೆ? ಆನೆಯ ದೇಹದ ಗಾತ್ರಕ್ಕೆ ಅನುಗುಣವಾಗಿರಲಿ ಎಂದೇ? ಅಲ್ಲ… ದೊಡ್ಡ ಕಿವಿಗಳಿರಲು ಒಂದು ಕಾರಣ ಆನೆಯ ದೇಹವನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಇಡಲು. ದೇಹದ ಉಳಿದ ಭಾಗಗಳಿಗಿಂತ ತೆಳ್ಳಗೆ ಇರುವ ಕಿವಿಯ ಚರ್ಮ ಮತ್ತು ಕಿವಿಯ ವಿಸ್ತಾರವಾದ ಮೇಲ್ಮೈ, ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಆದರೆ ದೊಡ್ಡ ಕಿವಿಯ ಇನ್ನೊಂದು ಕಾರಣವೇನೆಂದರೆ ಆನೆಗೆ ಅತಿ ಸಣ್ಣದಾದ ಕಂಪನಾಂಕ (low frequency) ಇರುವ ಶಬ್ದವನ್ನು ಕೇಳಲು. ಹೌದು… ದೊಡ್ಡ ಕಿವಿ, ಸಣ್ಣ ಕಂಪನಾಂಕ ಕೇಳಲು! ಆನೆಯು ಅತ್ಯಂತ ಕಡಿಮೆಯಾದ 12 Hz ಕಂಪನಾಂಕದಿಂದ 12,000 Hz ವರೆಗಿನ ಶಬ್ದ ಕೇಳಬಲ್ಲದು. ಇದರ ಅರ್ಥ ಮನುಷ್ಯನಿಗಿಂತ ಇಪ್ಪತ್ತು ಪಟ್ಟು ಕಡಿಮೆ ಕಂಪನಾಂಕ ಇರುವ ಶಬ್ದಗಳನ್ನು ಆನೆಯು ಕೇಳುತ್ತದೆ. ಆನೆಗಳ ಕಿವಿಯ ರಚನೆ ಮತ್ತು ಕೊಳವೆಗಳ ರಚನೆಯು ಅದಕ್ಕೆ ನಿಮ್ನಧ್ವನಿ  (infrasound) ಕೇಳಲು ಸಹಾಯ ಮಾಡುತ್ತದೆ.

ಆನೆಗಳ ಈ ಶಬ್ದ ಗ್ರಹಿಕೆ ಅದನ್ನು ದೂರ ದೂರದ ಆನೆಗಳ ಹಿಂಡು, ಅರಣ್ಯ ವಾತಾವರಣಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಇದೊಂದು ಹೋಲಿಕೆ ನೋಡಿ, ಮನುಷ್ಯನಿಗೆ ಸುಮಾರು 20 ಕಿ.ಮೀ ದೂರದ ಗುಡುಗಿನ ಶಬ್ದ ಕೇಳಿಸಿದರೆ, ಆನೆಗಳಿಗೆ 500 ಕಿ.ಮೀ ತನಕ ಗುಡುಗಿನ ಶಬ್ದ ಕೇಳುತ್ತದೆ. ಅಂದರೆ ಬಿಜಾಪುರದಲ್ಲಿ ಹೊಡೆಯುವ ಗುಡುಗಿನ ಸದ್ದು, ಬೆಂಗಳೂರಿನಲ್ಲಿ ಇರುವ ಆನೆಗೆ ಕೇಳುತ್ತದೆ! ಅದ್ಭುತ ಅಲ್ಲವೇ?

ಇಷ್ಟಲ್ಲದೇ ಆನೆಗಳು ತಮ್ಮ ಕಾಲನ್ನೂ ಬಳಸಿ, ಕೆಲವು ಕಡಿಮೆ ಕಂಪನಾಂಕದ ಅಲೆಗಳನ್ನು ತಮ್ಮ ಕಾಲಿನ ನರಗಳ ಮುಖಾಂತರ ಕಿವಿಗೆ  ಕೇಳಿಸುಕೊಳ್ಳುತ್ತವೆ. ನಡೆಯುವಾಗಲೂ ಅದು ಮಾಡುವ ಸದ್ದು, ದೂರ ದೂರದ ಇತರ ಆನೆಗಳಿಗೆ ಕೇಳುತ್ತದೆ. ಇದು ಅವುಗಳ ಮಧ್ಯೆ ಪರಸ್ಪರ ಸಂಪರ್ಕಕ್ಕೆ ಕಾರಣವಾಗುತ್ತದೆ.

ಬಾವಲಿ:

ಬಾವಲಿಗಳ ಕಣ್ಣುಗಳು ರಾತ್ರಿಯ ಹೊತ್ತು ಬಹುತೇಕ ಕುರುಡಾಗಿರುತ್ತವೆ. ದುರ್ಬಲವಾದ ಕಣ್ಣಿನ ಶಕ್ತಿಯನ್ನು ಅವು ಕಿವಿಗಳ ಮೂಲಕ ಹೊಂದಾಣಿಸಿ ಕೊಳ್ಳುತ್ತವೆ. 

ಬಾವಲಿಗಳು ಪ್ರತಿಧ್ವನಿತ್ವ (echolocation) ದ ಆಧಾರದ ಮೇಲೆ ದೃಶ್ಯವನ್ನು, ತಾವು ಹಾರಬೇಕಾದ ಮಾರ್ಗವನ್ನು ಗ್ರಹಿಸುತ್ತವೆ. ಇವು ಕೇಳುವ ಕಂಪನಾಂಕವು 2000 Hz ದಿಂದ 110,000 Hz ವರೆಗೆ ಇರುತ್ತದೆ, ಅಂದರೆ ಬಾವಲಿಗಳು ಹೆಚ್ಚು ಕಂಪನಾಂಕವುಳ್ಳ ಶಬ್ದಗಳನ್ನು ಕೇಳುತ್ತವೆ.

ಪ್ರತಿಧ್ವನಿತ್ವ ಎಂಬ ಸೂತ್ರದಲ್ಲಿ ಬಾವಲಿಗಳು ಹಾರುವಾಗ ತಮ್ಮದೇ ಆದ ಶಬ್ದಗಳನ್ನು ಮಾಡುತ್ತವೆ. ಈ ಶಬ್ದ ಹೆಚ್ಚು ಕಂಪನಾಂಕವನ್ನು ಹೊಂದಿದ್ದು, ಮನುಷ್ಯರ ಕಿವಿಗಳಿಗೆ ಕೇಳಿಸುವುದಿಲ್ಲ. ಬಾವಲಿಗಳು ಈ ಶಬ್ದವನ್ನು ಉತ್ಪಾದಿಸಿ, ನಂತರ ಅದರ ಪ್ರತಿಧ್ವನಿಯನ್ನು ತಾನೇ ಕೇಳಿ, ಆ ಪ್ರತಿಧ್ವನಿಯು ಎಷ್ಟು ಸಮಯದ ನಂತರ ಬಂತು ಎಂದು ಮನಸ್ಸಲ್ಲೇ ಲೆಕ್ಕಾಚಾರ ಹಾಕಿ ತಾನು ಹಾರಲು ಮಾರ್ಗದರ್ಶಿ (navigation system) ಯಾಗಿ ಬಳಸುತ್ತದೆ. ಪ್ರತಿಧ್ವನಿಯನ್ನು ಬಾವಲಿಗಳು ಎಷ್ಟು ನಿಖರವಾಗಿ ಕೇಳುತ್ತವೆ ಅಂದರೆ ಅದಕ್ಕೆ ದೂರದಲ್ಲಿರುವ ವಸ್ತು, ಅಡಚಣೆಯೋ ಅಥವಾ ತನ್ನ ಬೇಟೆಯೋ ಎಂದು ತಿಳಿದು ಕೊಳ್ಳುತ್ತದೆ. ಬಾವಲಿಗಳ ಪ್ರತಿಧ್ವನಿತ್ವ ಎಷ್ಟು ಉತ್ತಮವಾಗಿದೆ ಅಂದರೆ ಅದನ್ನೇ ಬಳಸಿ ಅದು ತನ್ನ ಬೇಟೆ ಮತ್ತು ಚಲನವನ್ನು ನಿಷ್ಕೃಷ್ಟವಾಗಿ ಮಾಡುತ್ತವೆ.

ಕಣಜ ಗೂಬೆ(barn owl):

ಕಣಜ ಗೂಬೆ ಸಾಮಾನ್ಯವಾಗಿ ನ್ಯೂಜಿಲೆಂಡ್, ಹವಾಯಿ, ಮಲಯಾ ಇತ್ಯಾದಿ ದ್ವೀಪಗಳಲ್ಲಿ ಕಂಡು ಬರುತ್ತದೆ. ಬಿಳಿ ಬಣ್ಣ, ಹೃದಯಾಕಾರದ ಮುಖವುಳ್ಳ ಈ ಗೂಬೆಗಳು ಶಬ್ದವನ್ನು ತನ್ನ ಬೇಟೆಗೂ ಬಳಸುತ್ತದೆ.

ಈ ಗೂಬೆಯು ಹಾರುವಾಗ ಅದರ ರೆಕ್ಕೆಗಳನ್ನು ಶಬ್ದಗಳ ಸೋಸುವಿಕೆಗೆ (sound filtration) ಬಳಸುತ್ತವೆ. ಗಾಳಿಯಲ್ಲಿ ಹಾರುವಾಗ ತನ್ನದೇ ರೆಕ್ಕೆಯ ಬಡಿತ ಮತ್ತು ರೆಕ್ಕೆ ಬಡಿಯದೇ ಗಾಳಿಯಲ್ಲಿ ತೇಲುವಾಗ ಆ ರೆಕ್ಕೆಗಳನ್ನೇ ಒಂದು ನಿರ್ದಿಷ್ಟ ಕೋನದಲ್ಲಿ ಹಿಡಿದು, ಆಗ ಬರುವ ಶಬ್ದಗಳನ್ನು ಕೇಳಿ ತನ್ನ ಬೇಟೆ ಎಲ್ಲಿದೆ ಎಂದು ಹುಡುಕಾಡುತ್ತದೆ.

ರೆಕ್ಕೆಗಳಿಲ್ಲದಿದ್ದರೆ ಕಣಜ ಗೂಬೆಗಳು ಬೇಟೆಯಾಡಲು ಅಸಾಧ್ಯವಂತೆ! ಈ ಗೂಬೆಯ ಮೆದುಳಿನ ಬಹುಭಾಗ ಶಬ್ದ ಕೇಳುವಿಕೆಗೇ ಮೀಸಲ್ಪಟ್ಟಿದೆ. ಗೂಬೆಗಳು 200 Hz ದಿಂದ 12,000 Hz ವರೆಗಿನ ಶಬ್ದಗಳನ್ನು ಕೇಳುತ್ತವೆ. ‘ಏಯ್, ಗೂಬೆ’ ಎಂದು ಮುಂದಿನ ಸಲ ಯಾರಿಗಾದರೂ ಬೈದರೆ ಹುಷಾರು! ಗೂಬೆಗಳು ಕೇಳಿಸಿಕೊಂಡಾವು!

ಕಾಂಗರೂ ಇಲಿ:

ಇದು ಮರುಭೂಮಿ ಹಾಗೂ ಒಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಇಲಿ. ಇದರ ಕೇಳುವಿಕೆಯೂ ವಿಚಿತ್ರವಾದದ್ದು. ಏಕೆಂದರೆ ಈ ಇಲಿ ಮರಳಲ್ಲಿ ದೂರ ದೂರದಿಂದ ಬರುತ್ತಿರುವ ಹಾವುಗಳ ಚಲನದ ಸದ್ದು, ಹಾಗೆಯೇ ಗಾಳಿಯಲ್ಲಿ ಹಾರಿ ಬರುತ್ತಿರುವ ಗೂಬೆಯ ರೆಕ್ಕೆಗಳ ಸದ್ದು ಬಹಳ ಮುಂಚಿತವಾಗಿ ಕೇಳಬಲ್ಲದು. ಗೂಬೆ ತನ್ನ ಬೇಟೆಗಾಗಿ ಹೇಗೆ ತನ್ನ ಶ್ರವಣ ಶಕ್ತಿ ಉಪಯೋಗಿಸುತ್ತದೆ, ಹಾಗೆಯೇ ಅದನ್ನು ಕಾಂಗರೂ ಇಲಿ ತನ್ನ ಸಂರಕ್ಷಣೆಗೆ ಉಪಯೋಗಿಸುತ್ತದೆ. 

ಕಾಂಗರೂ ಇಲಿಯ ಹೊರ ಕಿವಿ ಮತ್ತು ಒಳಕಿವಿಯ ರಚನೆಯು, ಕಿವಿಯ ಮೇಲೆ ಬೀಳುವ ಶಬ್ದವನ್ನು 200 ಪಟ್ಟು ವೃದ್ಧಿಸಲು ಸಹಾಯ ಮಾಡುತ್ತದೆ!

ಫೆನೆಕ್ ನರಿ(fennec fox): ಇದೊಂದು ವಿಚಿತ್ರ ಬಗೆಯ ನರಿ. ಇದು ಪುಟ್ಟ ದೇಹಕ್ಕೆ ತುಂಬಾ ದೊಡ್ಡದು ಅನಿಸುವ ಕಿವಿಗಳನ್ನು ಹೊಂದಿದೆ.  ಫೆನೆಕ್ ನರಿಯೂ, ಕಾಂಗರೂ ಇಲಿಯಂತೆ ಮರುಭೂಮಿಯಲ್ಲಿ ವಾಸಿಸುತ್ತದೆ. ಇದರ ವಿಶಿಷ್ಟ ದೊಡ್ಡ ಕಿವಿ ಮರಳಿನಲ್ಲಿ ಶಬ್ದ ಕೇಳುವುದು ಅಲ್ಲದೇ, ಆನೆಯಂತೆ ಮರುಭೂಮಿಯ ಸೆಖೆ ತಡೆಗಟ್ಟಲು ಸಹಾಯ ಮಾಡುತ್ತದೆ. ಸಾಕುಪ್ರಾಣಿಗಳು ಮತ್ತು ಜಲಜೀವಿಗಳ ಶಬ್ದ ಗ್ರಹಿಕೆಯ ವಿಷಯಗಳೊಂದಿಗೆ ಈ ಸಂಚಿಕೆಯು ಮುಂದುವರೆಯಲಿದೆ. 

ವಿಠಲ ಶೆಣೈ
Leave a replyComments (1)
  1. Keerthana August 4, 2020 at 3:54 pm

    Very good information.

    ReplyCancel
  2. Geetha Pai August 4, 2020 at 6:55 pm

    Wonderful information.. Keep writing..

    ReplyCancel

Leave a Reply