ಬಾವಲಿಗಳಂತೆ ತಿಮಿಂಗಿಲಗಳೂ ಪ್ರತಿಧ್ವನಿತ್ವ ವನ್ನು ಮಾರ್ಗಸೂಚಕವಾಗಿ ಬಳಸುತ್ತವೆ. ಆದರೆ ಬಾವಲಿಗಳಿಗೆ ಗಾಳಿಯಲ್ಲಿ ಶಬ್ದವು ನಿಧಾನವಾಗಿ ಚಲಿಸಿ ಪ್ರತಿಧ್ವನಿ ಕೇಳಿಸಿದರೆ, ತಿಮಿಂಗಿಲಗಳಿಗೆ ನೀರಿನಲ್ಲಿ ಶಬ್ದ ವೇಗವಾಗಿ ಚಲಿಸಿ ಪ್ರತಿಧ್ವನಿ ಕೇಳಿಸುತ್ತದೆ. ಈ ಕಾರಣದಿಂದ ತಿಮಿಂಗಿಲಗಳ ಸಮಯದ ಲೆಕ್ಕಾಚಾರ ನ್ಯಾನೋ ಸೆಕುಂಡುಗಳ ನಿಖರತೆ ಹೊಂದಿರುತ್ತದೆ.

ಸಮುದ್ರ ತೀರದಲ್ಲಿ ಕುಳಿತುಕೊಂಡು ನೀವು ಅಲ್ಲಿಯ ನೀರವತೆ, ಪ್ರಶಾಂತ ವಾತಾವರಣ, ಗಾಢ ಮೌನದಲ್ಲಿ ಕಳೆದು ಹೋಗುತ್ತೀರಿ, ಅಲ್ಲವೇ? ಅಂದರೆ ಸಮುದ್ರದಲ್ಲಿ ನಿಜವಾಗಿಯೂ ನೀರವತೆ, ಗಾಢ ಮೌನ ಇದೆಯೇ? ಮನುಷ್ಯನ ಶ್ರವಣ ಶಕ್ತಿ ಪರಿಗಣಿಸಿದರೆ ಇದೆ. ಆದರೆ ಜಲಜೀವಿಗಳಿಗೆ ಸಮುದ್ರದಾಳ ಒಂದು ದೊಡ್ಡ ಗದ್ದಲವುಳ್ಳ ವಾತಾವರಣವಾಗಿರುತ್ತದೆ. ಅದು ಹೇಗೆ? ಬನ್ನಿ ತಿಳಿಯೋಣ.

ಈ ಹಿಂದಿನ ಭಾಗಗಳಲ್ಲಿ ಶಬ್ದ ಸಂಚರಿಸಲು ಮಾಧ್ಯಮದ ಅವಶ್ಯಕತೆ ಇದೆ ಎಂದು ತಿಳಿದಿದ್ದೀರಿ. ಈ ಕಾರಣದಿಂದಲೇ ಶಬ್ದವು ಗಾಳಿಗಿಂತ ನೀರಿನಲ್ಲಿ ಅತಿ ವೇಗವಾಗಿ ಮತ್ತು ಅತಿ ದೂರದ ವರೆಗೆ ಚಲಿಸಬಲ್ಲದು. ನೀರಿನ ಕಣಗಳು ಬಹಳ ಹತ್ತಿರವಾಗಿ ಕೂಡಿರುವುದರಿಂದ, ಈ ರಚನೆಯು ಶಬ್ದ ಸಂಚರಿಸಲು ಹೆಚ್ಚು ಸಹಕಾರಿಯಾಗುತ್ತದೆ. ಬೆಳಕು ಮತ್ತು ಪರಿಮಳಗಳಿಗೆ ಹೋಲಿಸಿದರೆ ಶಬ್ದವು ನೀರಿನಲ್ಲಿ ಹೆಚ್ಚು ಉತ್ತಮವಾಗಿ ಚಲಿಸುತ್ತದೆ. ನೀರಿನಲ್ಲಿ ಪರಿಮಳವು ಕೆಲವು ಸೆಂಟಿಮೀಟರ್ ಮಾತ್ರ ಚಲಿಸಬಲ್ಲದು, ಬೆಳಕು ಕೆಲವು ಮೀಟರ್ ಮಾತ್ರ ಚಲಿಸಬಲ್ಲದು, ಆದರೆ ಶಬ್ದವು ಕಿಲೋ ಮೀಟರ್ ಗಳಷ್ಟು ದೂರ ಕ್ರಮಿಸಬಲ್ಲದು! ನೀರಿನಲ್ಲಿ ಶಬ್ದದ ಈ ಗುಣಲಕ್ಷಣಗಳೇ ಹಲವು ಜಲಜೀವಿಗಳಿಗೆ ಬದುಕಲು ಜೀವಾಳವಾಗಿದೆ. ನೀರಿನಲ್ಲಿ ಹರಿಯುವ ಶಬ್ದದ ಮೂಲಕ ಈ ಜೀವಿಗಳು ತಮ್ಮ ಸುತ್ತಮುತ್ತಲದ ಪರಿಸರ ಪರಿಚಯ, ಇತರ ಜೀವಿಗಳ ಜೊತೆ ಸಂಪರ್ಕ, ತಮ್ಮ ಬೇಟೆ ಮತ್ತು ತಮ್ಮ ಸಂರಕ್ಷಣೆಗಳನ್ನು ಮಾಡಿ ಕೊಳ್ಳುತ್ತದೆ. ಕೆಲವು ಜಲಜೀವಿಗಳ ಶಬ್ದದ ಜೊತೆ ಒಡನಾಟವನ್ನು ತಿಳಿಯೋಣ ಬನ್ನಿ.

ತಿಮಿಂಗಿಲ:

ತಿಮಿಂಗಿಲಗಳು ಸಾಮೂಹಿಕ ಜೀವಿಗಳು. ಇವು ಪಾಡ್(pod) ಎಂದು ಕರೆಯಲ್ಪಡುವ ಗುಂಪಿನಲ್ಲಿ ಇರುತ್ತವೆ. ಪ್ರತಿಯೊಂದು ಪಾಡ್ ಗಳ ತಿಮಿಂಗಿಲಗಳಿಗೆ ಆ ಗುಂಪಿನದೇ ಆದ ಒಂದು ವಿಶಿಷ್ಟ ಶಬ್ದ ಪ್ರಕಾರ ಇರುತ್ತದೆ. ಈ ಶಬ್ದಕ್ಕೆ ಕ್ಲಿಕ್ ಅನ್ನುತ್ತಾರೆ. ಅತಿ ಕಡಿಮೆ ಕಂಪನಾಂಕದ ಈ ಕ್ಲಿಕ್ ಸದ್ದುಗಳು ತಿಮಿಂಗಿಲಗಳಿಗೆ ತಮ್ಮ ಗುಂಪು ಯಾವುದು, ಅಪರಿಚಿತ ಗುಂಪು ಯಾವುದು ಎಂದು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

ಬಾವಲಿಗಳಂತೆ ತಿಮಿಂಗಿಲಗಳೂ ಪ್ರತಿಧ್ವನಿತ್ವ ವನ್ನು ಮಾರ್ಗಸೂಚಕವಾಗಿ ಬಳಸುತ್ತವೆ. ಆದರೆ ಬಾವಲಿಗಳಿಗೆ ಗಾಳಿಯಲ್ಲಿ ಶಬ್ದವು ನಿಧಾನವಾಗಿ ಚಲಿಸಿ ಪ್ರತಿಧ್ವನಿ ಕೇಳಿಸಿದರೆ, ತಿಮಿಂಗಿಲಗಳಿಗೆ ನೀರಿನಲ್ಲಿ ಶಬ್ದ ವೇಗವಾಗಿ ಚಲಿಸಿ ಪ್ರತಿಧ್ವನಿ ಕೇಳಿಸುತ್ತದೆ. ಈ ಕಾರಣದಿಂದ ತಿಮಿಂಗಿಲಗಳ ಸಮಯದ ಲೆಕ್ಕಾಚಾರ ನ್ಯಾನೋ ಸೆಕುಂಡುಗಳ ನಿಖರತೆ ಹೊಂದಿರುತ್ತದೆ.

ಹಂಪ್‌ಬ್ಯಾಕ್ ಎಂಬ ವಿಶಿಷ್ಟ ಪ್ರಕಾರದ ತಿಮಿಂಗಿಲ ತನ್ನದೇ ಆದ ಹಾಡುಗಳನ್ನು ಹಾಡುತ್ತದೆ. ಅತಿ ಕಡಿಮೆ ಕಂಪನಾಂಕದ ಈ ಹಾಡು 8 ರಿಂದ 15 ನಿಮಿಷಗಳಷ್ಟು ಉದ್ದ ಇದ್ದು, ಒಂದು ಸಂಗೀತ ಸಂಯೋಜನೆಯಂತೆ ಇರುತ್ತದೆ. ವಿಶೇಷವೆಂದರೆ ಹಂಪ್‌ಬ್ಯಾಕ್ ತಿಮಿಂಗಿಲಗಳು ಹಲವು ಕಿ.ಮಿ ದೂರವಿದ್ದರೂ ಅದೇ ಹಾಡನ್ನು ಒಂದೇ ಸಲಕ್ಕೆ ಸಮೂಹವಾಗಿ (chorus) ಹಾಡುತ್ತವೆ. ಅಷ್ಟು ದೂರದ ವರೆಗೂ ಅವುಗಳ ಗೀತೆ ಹೊಂದಾಣಿಕೆ ಇರುತ್ತದೆ. ತಿಮಿಂಗಿಲಗಳ ಈ ಹಾಡಿನ ಧ್ವನಿ ನಮ್ಮಂತೆ ಧ್ವನಿಪೆಟ್ಟಿಗೆಯ ಮೂಲಕ ಮೂಡುವುದಿಲ್ಲ, ಅವುಗಳ ತಲೆಯ ಮೇಲಿರುವ ಶ್ವಾಸ ಹೊಳ್ಳೆಗಳ ಮೂಲಕ ಶಬ್ದ ಉತ್ಪಾದಿಸಿ ಹಾಡು ಹಾಡುತ್ತವೆ. ವಿಚಿತ್ರ ಅಲ್ಲವೇ?

ಕ್ಲಿಕ್ ಮತ್ತು ಹಾಡುಗಳು ಮಾತ್ರವಲ್ಲದೇ ತಿಮಿಂಗಿಲಗಳು ಸಿಳ್ಳು(whistle) ಮತ್ತು ಪಲ್ಸ್ ಕಾಲ್ಸ್(pulsed calls) ಗಳನ್ನೂ ಮಾಡುತ್ತವೆ. ಕೆಲವೊಮ್ಮೆ ಸಮುದ್ರದ ಮೇಲ್ಮಟ್ಟಕ್ಕೆ ಬಂದು ತಿಮಿಂಗಿಲಗಳು ತಮ್ಮ ಬಾಲ ಮತ್ತು ಈಜುರೆಕ್ಕೆ(fins) ಗಳನ್ನು ಬಳಸಿ ಚಪ್ಪಾಳೆ ತಟ್ಟಿ ಹೋಗುತ್ತವೆ. ವೇಲ್ ವಾಚಿಂಗ್ ನಲ್ಲಿ ಇದು ಒಮ್ಮೊಮ್ಮೆ ನೋಡಲು ಸಿಗುತ್ತದೆ.

ತಿಮಿಂಗಿಲಗಳು 7 Hz ದಿಂದ 35   KHz ತನಕ ಶಬ್ದ ಗ್ರಹಿಸಬಲ್ಲವು.

ಮೀನುಗಳು:

ಸಮುದ್ರದಲ್ಲಿ ಸಹಸ್ರಾರು ಬಗೆಯ ಮೀನುಗಳಿವೆ. ಬಹುತೇಕ ಎಲ್ಲ ಮೀನುಗಳು ತಮ್ಮ ಗೊಣಗಾಟ, ಚಿಟಿಕೆ, ಸಂತಸ ಎಲ್ಲವನ್ನೂ ಬೇರೆ ಬೇರೆ ಧ್ವನಿಗಳ ಮುಖಾಂತರ ಪ್ರಕಟಿಸುತ್ತವೆ. ಮೀನುಗಳು ಬಲೆಗಳಿಗೆ, ಗಾಳಕ್ಕೆ ಸಿಕ್ಕಿ ಬಿದ್ದಾಗ ಪ್ಹೆರಿಂಜಲ್ ಹಲ್ಲುಗಳ ಮೂಲಕ ಶಬ್ದ ಉತ್ಪಾದನೆ ಮಾಡಿ ಇತರ ಮೀನುಗಳನ್ನು ಎಚ್ಚರಿಸುತ್ತವೆ. ಮೀನುಗಳು 50 Hz ದಿಂದ 1.1 KHz ತನಕ ಶಬ್ದ ಗ್ರಹಿಸಬಲ್ಲವು.

ಈ ಮೇಲಿನ ವಿಷಯವು ಕೇವಲ ಮೀನುಗಳು ಮಾತ್ರವಲ್ಲದೆ, ಏಡಿಗಳು, ಸಿಗಡಿ(prawn), ಕಡಲ ಏಡಿ(lobster) ಮುಂತಾದ ಜೀವಿಗಳೆಲ್ಲವೂ ಇದೇ ರೀತಿ ಶಬ್ದ ಮತ್ತು ಧ್ವನಿಗಳನ್ನು ಬಳಸುತ್ತಾ ತಮ್ಮ ನಿತ್ಯದ ಕಾರ್ಯಗಳನ್ನು ನಿರ್ವಹಿಸುತ್ತವೆ.

ನೀರಿನಲ್ಲಿ ಶಬ್ದವು ಅತಿ ವೇಗ ಮತ್ತು ಅತಿ ದೂರದ ವರೆಗೂ ಪ್ರವೇಶಿಸುವುದಲ್ಲದೆ, ಶಬ್ದಕ್ಕೆ ಏನಾದರೂ ಅಡಚಣೆ ಬಂದರೆ ಅದು ಅಲ್ಲಿಂದ ಪ್ರತಿಧ್ವನಿಸಿ ಇನ್ನೊಂದು ದಿಕ್ಕಿನಲ್ಲಿ ಮೈಲುಗಟ್ಟಲೆ ಚಲಿಸುತ್ತದೆ. ಹಾಗಾಗಿ ಎಲ್ಲಾ ಜಲಜೀವಿಗಳು ನೀರಿನಲ್ಲಿ ಅನೇಕಾನೇಕ ತರಹದ ಶಬ್ದಗಳನ್ನು ಕೇಳಿಸಿ, ಅವುಗಳನ್ನು ಸೋಸಿ ತಮಗೆ ಬೇಕಾದ ಶಬ್ದ ಮಾತ್ರ ಅರ್ಥೈಸುವ ಸಾಮರ್ಥ್ಯ ಹೊಂದಿರುತ್ತವೆ. ನಾವು ಮನುಷ್ಯರು ಹೆಚ್ಚು ಶಬ್ದವಿರುವ ವಾತಾವರಣದಲ್ಲಿ ‘ಇದೇನು ಫಿಶ್ ಮಾರ್ಕೆಟ್ ತರಹ ಇದೆ?’ ಎಂದು ವ್ಯಂಗ್ಯವಾಗಿ ಹೇಳುತ್ತೇವೆ, ಆದರೆ ಮೀನುಗಳು ಅಷ್ಟೊಂದು ಶಬ್ದ ಇರುವ ಸಮುದ್ರದಲ್ಲಿ ‘ಫಿಶ್ ಮಾರ್ಕೆಟ್’ ಅನ್ನು ಬಹುಶಃ ಯಾವಾಗಲೂ ಅನುಭವಿಸುತ್ತವೆ.

SOFAR:

ಬಹುತೇಕ ಎಲ್ಲಾ ಜಲಜೀವಿಗಳು ಕಡಿಮೆ ಕಂಪನಾಂಕ ಮತ್ತು ಕಂಪನ ಇರುವ ಸದ್ದುಗಳನ್ನೇ ಕೇಳಲು, ಆ ಸದ್ದುಗಳು ಹೋಗುವ ಮಾರ್ಗವನ್ನು ಹುಡುಕಿ ಹೋಗುತ್ತವೆ. ಬೇರೆ ಬೇರೆ ತರಹದ ಸದ್ದುಗಳು ಬೇರೆ ಬೇರೆ ಹಾದಿ ಅಥವಾ ಚಾನೆಲ್ ನಲ್ಲಿ ನೀರಿನಡಿ ಚಲಿಸುತ್ತವೆ. ಈ ಚಾನೆಲ್ ನಲ್ಲಿ ಚಲಿಸಿದಾಗ ಶಬ್ದದ ಶಕ್ತಿಯು ಕ್ಷೀಣಿಸದೇ, ಶಬ್ದವು ದೂರ ಕ್ರಮಿಸಲು ಸಹಾಯ ಮಾಡುತ್ತದೆ. ಹೀಗೆ ಸದ್ದು ಒಂದು ದಿಕ್ಕಿನಲ್ಲಿ ಹೋಗುವ ವಿದ್ಯಮಾನವನ್ನು SOFAR ಅಥವಾ sound fixing and ranging   ಎಂದು ಕರೆಯುತ್ತಾರೆ. ಇದರಿಂದಲೇ ಜೀವಿಗಳು  ಆ ಸದ್ದಿನ ಸುರಂಗದಲ್ಲೇ ಇದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಪೂರೈಸಲು ಸಹಕಾರಿಯಾಗುತ್ತದೆ. ಈ sofar ಸಿದ್ದಾಂತವನ್ನೇ ಬಳಸಿ ನೀರಿನಡಿ ಮಿಲಿಟರಿ ಸಬ್ ಮರೀನ್ ಗಳು ಚಲಿಸುತ್ತವೆ, ಇದರ ಬಗ್ಗೆ ಮುಂದಿನ ಭಾಗಗಳಲ್ಲಿ ವಿವರವಾಗಿ ತಿಳಿಯೋಣ.

ವಿವಿಧ ಜೀವಿಗಳಲ್ಲಿ ಶಬ್ದದ ಪ್ರಾಮುಖ್ಯತೆ ನೀವು ಇದುವರಗೆ ಓದಿದ ನಂತರ ಇವುಗಳನ್ನು ಮೂಕ ಪ್ರಾಣಿಗಳು ಎಂದು ಏಕೆ ಕರೆಯುತ್ತಾರೆ ಎಂಬ ಭಾವನೆ ಮೂಡಿರಬಹುದಲ್ಲವೇ?

ಮುಂದಿನ ಸಂಚಿಕೆಗಳಲ್ಲಿ ವಿವಿಧ ಸಂಗೀತ ಉಪಕರಣಗಳಲ್ಲಿ ಶಬ್ದ ಹೇಗೆ ಬಳಕೆಯಾಗುತ್ತದೆ, ಅದರ ಪ್ರಾಮುಖ್ಯತೆಯ ಬಗ್ಗೆ ಮಾಹಿತಿಗಳು ನಿಮ್ಮ ಮುಂದೆ ಬರಲಿವೆ.

ವಿಠಲ ಶೆಣೈ
Leave a replyComments (1)
  1. Keerthana August 19, 2020 at 1:56 am

    Very good information.

    ReplyCancel

Leave a Reply