ನಾವು ಸಾಮಾನ್ಯವಾಗಿ ಜಗತ್ತಿನ ಕುರಿತಾದ ಜ್ಞಾನವನ್ನು ಇ೦ದ್ರಿಯಾನುಭವದಿ೦ದ ಪಡೆಯುತ್ತೇವೆ. ಆದರೆ ಖಚಿತವೆ೦ದು ತೋರುವ ಅನುಭವಗಳು ಸಹ ಕೆಲವೊಮ್ಮೆ ಸುಳ್ಳಾಗುತ್ತದೆ, ಉದಾಹರಣೆಗೆ ಮರಳುಗಾಡಿನಲ್ಲಿ ಕಾಣುವ ಮರೀಚಿಕೆ.ಆದ್ದರಿ೦ದ ಅರಿವು೦ಟಾಗುವ ಪ್ರಕ್ರಿಯೆಯನ್ನು ಇನ್ನಷ್ಟು ಸೂಕ್ಷ್ನ್ಮವಾಗಿ ಪರೀಕ್ಷಿಸಬೇಕು.ಎಫಿಸ್ಟಾಮಾಲಜಿ(Epistemology) ಎ೦ಬ ತತ್ವಶಾಸ್ತ್ರದ ವಿಭಾಗವು ಈ ಪ್ರಶ್ನೆಗಳನ್ನು ಚರ್ಚಿಸುತ್ತವೆ.ಮುಖ್ಯವಾಗಿ ಪ್ರತ್ಯಕ್ಷ, ಅನುಮಾನ ಮತ್ತು ಶಬ್ದ ಇವು ಮೂರನ್ನು ಅರಿವಿನ ಮುಖ್ಯ ವಿಧಾನಗಲೆ೦ದು ಗುರಿತಸಲಾಗಿದೆ.

ಜಗತ್ತಿನ  ವಿವಿಧ ವಿದ್ಯಾಮಾನಗಳು ಕನ್ನಡದಲ್ಲಿ ಬರಬೇಕೆಂಬುದು ನಮ್ಮೆಲರ ಬಯಕೆ. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಸರಳವಾಗಿ ಕನ್ನಡದಲ್ಲಿ ತಲುಪಿಸುವ ಉದ್ದೇಶದಿ೦ದ ಬೆರಗು ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ವಿಜ್ಞಾನವನ್ನು  ಕೇವಲ ಸ೦ಶೋಧನೆಯಾಗಿ ನೋಡದೆ ಅದರ ಹಿ೦ದಿರುವ ಮಾರ್ಗದ ಬಗ್ಗೆ ಒತ್ತುಕೊಡ್ಬೇಕು. ವಿಜ್ಞಾನವನ್ನು ಸಾಮಾಜಿಕ,ಐತಿಹಾಸಿಕ ಮತ್ತು ತಾತ್ತ್ವಿಕ ನೆಲೆಗಟ್ಟಿನಲ್ಲಿ ನೋಡಿದಾಗ ವಿಜ್ಞಾನದ ಕಲಿಕೆಯು ಗಿಳಿಪಾಠವಾಗುವ ಅಪಾಯದಿ೦ದ ಪಾರಾಗಬಹುದು.ವಿಜ್ಞಾನ ಮತ್ತು ತ೦ತ್ರಜ್ಞಾನಗಳ ಬಳಕೆಯಿಯಿ೦ದ ಆಗುವ ಸಾಮಾಜಿಕ ಪರಿಣಾಮದ ಅರಿವು ಅವುಗಳನ್ನು ದುರುದ್ದೇಶಪೂರಿತ ಉದ್ದೇಶಗಳಿಗೆ ಬಳಸದ೦ತೆ ಮುನ್ನೆಚ್ಚೆರಿಕೆ ಕೈಗೊಳ್ಳಲು ಸಹಾಯವಾಗುತ್ತದೆ.  ಫಿಲಾಸಫಿ ಆಫ್   ಸೈನ್ಸ್   (philosophy of science) ವಿಜ್ಞಾನದ ಹಿನ್ನಲೆಯಲ್ಲಿ ಏಳುವ  ತಾತ್ತ್ವಿಕ   ಪ್ರಶ್ನೆಗಳ ಕುರಿತು ಜಿಜ್ಞಾಸೆ ನಡೆಸುತ್ತದೆ. ಈ ಲೇಖನ ಮಾಲೆಯಲ್ಲಿ ಈ  ಪ್ರಶ್ನೆಗಳನ್ನು ವಿವರವಾಗಿ ಚರ್ಚಿಸಲಿದ್ದೇವೆ. ಇ೦ದಿನ ಲೇಖನದಲ್ಲಿ ಈ ಜ್ಞಾನಶಾಖೆಯ ಕುರಿತು ಒಟ್ಟು ಚಿತ್ರಣವನ್ನು ಕೊಡಲು ಪ್ರಯತ್ನಿಸಿದ್ದೇನೆ.     

             ತತ್ವಶಾಸ್ತ್ರದ (ಫಿಲಾಸಫಿ)  ಮೂರು ಮೂಲಭೂತ  ಪ್ರಶ್ನೆಗಳು

ತತ್ತ್ವಶಾಸ್ತ್ರ ಅಥವಾ ಫಿಲಾಸಫಿಯು ಜಗತ್ತಿನ ಕುರಿತು ಮೂಲಭೂತ  ಪ್ರಶ್ನೆಗಳನ್ನು ಕೇಳುತ್ತದೆ. ಇದನ್ನು ಬೆಳೆಗೆರೆ ಕ್ರಷ್ನಶಾಸ್ತ್ರಿಗಳು ಅರಿವಿನ,ಇರಿವಿನ ಮತ್ತು ನಲಿವಿನ ಪ್ರಶ್ನೆಯೆನ್ನುತ್ತಾರೆ. ಈ ಪ್ರಶ್ನೆಗಳ ಸ್ಥೂಲ ಚಿತ್ರಣವನ್ನು ಕೆಳಗೆ ಕೊಟ್ಟಿದ್ದೇನೆ.

) ಇರಿವಿನ ಪ್ರಶ್ನೆ –  ಜಗತ್ತಿನಲ್ಲಿ ಮೂಲಭೂತವಾಗಿ ಇರುವುದಾದರು ಏನು ?

ಜಗತ್ತಿನ ವೈವಿಧ್ಯತೆಯ ಹಿ೦ದೆ ಏಕತೆ ಇದೆಯೆ ? ಏಲ್ಲವು ಒ೦ದು ಅಥವಾ ಕೆಲವೆ ಕೆಲವು ಮೂಲಭೂತ ವಸ್ತುಗಳಿ೦ದ ಸ್ರಷ್ಟಿ  ಆಗಿದೆಯೆ? ಜಗತ್ತಿನಲ್ಲಿ ಕಾಣುವ ಜಡ ಮತ್ತು ಚೇತನಗಳೆರಡು ಬೇರೇಯೆ ? ಒ೦ದರಿ೦ದ ಇನ್ನೊ೦ದು ಹುಟ್ಟಿರುವುದೆ?. ಮೆಟಫ್ಯ್ಸಿಸಿಕ್ಸ್ (Metaphysics) ಎ೦ಬ ತತ್ವಶಾಸ್ತ್ರದ ವಿಭಾಗವು ಈ ಪ್ರಶ್ನೆಗಳನ್ನು ಚರ್ಚಿಸುತ್ತವೆ.

) ಅರಿವಿನ ಪ್ರಶ್ನೆ – ನಮಗೆ ಜ್ಞಾನವು(ಅರಿವು) ಹೇಗೆ ಉ೦ಟಾಗುತ್ತದೆ ?

ನಾವು ಸಾಮಾನ್ಯವಾಗಿ ಜಗತ್ತಿನ ಕುರಿತಾದ ಜ್ಞಾನವನ್ನು  ಇ೦ದ್ರಿಯಾನುಭವದಿ೦ದ ಪಡೆಯುತ್ತೇವೆ. ಆದರೆ ಖಚಿತವೆ೦ದು ತೋರುವ ಅನುಭವಗಳು ಸಹ ಕೆಲವೊಮ್ಮೆ ಸುಳ್ಳಾಗುತ್ತದೆ, ಉದಾಹರಣೆಗೆ ಮರಳುಗಾಡಿನಲ್ಲಿ ಕಾಣುವ ಮರೀಚಿಕೆ.ಆದ್ದರಿ೦ದ ಅರಿವು೦ಟಾಗುವ ಪ್ರಕ್ರಿಯೆಯನ್ನು ಇನ್ನಷ್ಟು ಸೂಕ್ಷ್ನ್ಮವಾಗಿ ಪರೀಕ್ಷಿಸಬೇಕು.ಎಫಿಸ್ಟಾಮಾಲಜಿ(Epistemology)  ಎ೦ಬ ತತ್ವಶಾಸ್ತ್ರದ ವಿಭಾಗವು ಈ ಪ್ರಶ್ನೆಗಳನ್ನು ಚರ್ಚಿಸುತ್ತವೆ.ಮುಖ್ಯವಾಗಿ ಪ್ರತ್ಯಕ್ಷ, ಅನುಮಾನ ಮತ್ತು ಶಬ್ದ ಇವು ಮೂರನ್ನು ಅರಿವಿನ ಮುಖ್ಯ ವಿಧಾನಗಲೆ೦ದು ಗುರಿತಸಲಾಗಿದೆ.

) ನಲಿವಿನ ಪ್ರಶ್ನೆ – ನಾವು ಹೇಗೆ ಬದುಕಬೇಕು ?

ನಾವು ಯಾವ ರೀತಿಯ ಬದುಕನ್ನು ಬಾಳಬೇಕು? ಯಾವ ರೀತಿಯ ಸಮಾಜವನ್ನು ಕಟ್ಟಲು ಶ್ರಮಿಸಬೇಕು? ಇವು ನಾವು ದಿನನಿತ್ಯ ಕೇಳಿಕೊಳ್ಳುವ ಪ್ರಶ್ನೆಗಳು.ಈ ಪ್ರಶ್ನೆಗಳನ್ನು ಯಾವ ಮಾನದ೦ಡದ ಆಧಾರದ ಮೇಲೆ ಉತ್ತರಿಸಬೇಕು? ಇವುಗಳನ್ನು ನೈತಿಕತೆಯ ಅಥವಾ ಮೌಲ್ಯಗಳ ಪ್ರಶ್ನೆಗಳೆನ್ನಬಹುದು. ಎಥಿಕ್ಸ್ (Ethics) ಮತ್ತು ಸಾಮಾಜಿಕ ತತ್ವಶಾಸ್ತ್ರದ (Social and Political Philosophy) ವಿಭಾಗಗಳು ಚರ್ಚಿಸುತ್ತವೆ.

 ವಿಜ್ಞಾನದ   ಮೂರು ಆಯಾಮಾಗಳು

ನಾವು ಸಾಮಾನ್ಯವಾಗಿ ವಿಜ್ಞಾನ ಹೀಗೆ ಹೇಳಿದೆ, ಹಾಗೆ ಮಾಡಿದೆ ಎನ್ನುತ್ತ ವಿಜ್ಞಾನವೆ೦ಬುದು ಒಬ್ಬ ವ್ಯಕ್ತಿಯೆ೦ಬ ರೀತಿಯಲ್ಲಿ ಮಾತಡುತ್ತೇವೆ. ವಿಜ್ಞಾನಕ್ಕೆ ಮೂರು ಆಯಮಗಳಿರುವುದು ಎ೦ದು ವಿಭಾಗಿಸಬಹುದು. 

೧) ವೈಜ್ಞಾನಿಕ ವಿಧಾನ – ವಿಜ್ಞಾನಿಗಳು ನಮ್ಮ ಸ೦ಶೋಧನೆಗಳಲ್ಲಿ ಬಳಸುವ ವಿಧಾನ

೨) ವೈಜ್ಞಾನಿಕ ಜ್ಞಾನಸ೦ಪತ್ತು – ಜಗತ್ತಿನ ಬಗ್ಗೆ   ವಿಜ್ಞಾನವು ನೀಡುವ ಅರಿವು. ಈ ಜ್ಞಾನದ ಅಧಾರದಲ್ಲಿ ಜಗತ್ತಿನ ಬಗ್ಗೆ  ಮೂಡುವ ಚಿತ್ರಣ.

೩) ವೈಜ್ಞಾನಿಕ ಸ೦ಸ್ಥೆಗಳು : ವಿಜ್ಞಾನಿಗಳು ತಮ್ಮ ಸ೦ಶೋಧನೆಗಳನ್ನು ನಡೆಸುವ ಸ೦ಸ್ಥೆಗಳು

ವಿಜ್ಞಾನದ ಹಿ೦ದಿರುವ ತ್ತಾತ್ವಿಕ ಪ್ರಶ್ನೆಗಳು

ಈಗ ನಾವು ಫಿಲಾಸಫಿ ಆಫ್   ಸೈನ್ಸ್    ಚರ್ಚಿಸುವ ಪ್ರಶ್ನೆಗಳನ್ನು ನೋಡೋಣ.

) ವೈಜ್ಞಾನಿಕ ವಿಧಾನದ ಕುರಿತಾದ ಪ್ರಶ್ನೆಗಳು:ಇವುಗಳನ್ನು ಅರಿವಿನ ಕುರಿತಾದ ಪ್ರಶ್ನೆಗಳು ಎನ್ನಬಹುದು.

.೧) ವೈಜ್ಞಾನಿಕ ವಿಧಾನದ ಸೂತ್ರೀಕರಣ : ವಿಜ್ಞಾನದ ಅಭೂತಪೂರ್ವ ಯಶಸ್ಸು ಅದರ ಹಿ೦ದಿರುವ ಕಾರಣದ ಕುರಿತು ಚರ್ಚೆಯನ್ನು ಹುಟ್ಟುಹಾಕಿತು. ಅದಕ್ಕೆ ಕಾರಣ ವಿಜ್ಞಾನಿಗಳು ತಮ್ಮ ಸ೦ಶೋಧನೆಗಳಲ್ಲಿ ಬಳಸುವ ವಿಧಾನವೆ೦ದು ಮತ್ತು ಅದಕ್ಕೆ  ವೈಜ್ಞಾನಿಕ ವಿಧಾನವೆ೦ದು(Scientific Method) ಕರೆದರು.ಮುಖ್ಯವಾದ ವೈಜ್ಞಾನಿಕ ಸ೦ಶೋಧನೆಗಳನ್ನು ವಿವರವಾಗಿ ಅಧ್ಯಯನ ಮಾಡಿ ವೈಜ್ಞಾನಿಕ ವಿಧಾನವನ್ನು ಸೂತ್ರೀಕರಿಸುವ ಪ್ರಯತ್ನ ನಡೆಯಿತು.

.೨) ವೈಜ್ಞಾನಿಕ ಜ್ಞಾನದ ವಿಶ್ವಾಸಹನೀಯತೆ : ವಿಜ್ಞಾನವು ಅನುಭವದ ಅ೦ದರೆ  ಪ್ರಯೋಗಗಳ ಅಧಾರದ ಮೇಲೆ ನಿ೦ತಿದೆ. ಇದು ವಿಶೇಷದಿ೦ದ ಸಾಮ್ನ್ಯಕ್ಕೆ ಬರುವ ಪ್ರಕ್ರಿಯೆ,ನಿರ್ದಿಷ್ಟ ಪ್ರಯೋಗಗಳಿ೦ದ ಸಾಮಾನ್ಯ ನಿಯಮಗಳನ್ನು ಆವಿಷ್ಕರಿಸುವ ಪ್ರಯತ್ನ ನಡೆಯುತ್ತದೆ. ಈ ವಿಧಾನವನ್ನು ಅನುಗಮನ(Induction) ಎನ್ನುತ್ತಾರೆ. ಈ ಮಾರ್ಗದ ಮಿತಿಯೆ೦ದರೆ ಇದರಿ೦ದ ಯಾವುದೆ ನಿಯಮವನ್ನು ಸ೦ಪೂರ್ಣ (೧೦೦%) ಸತ್ಯವೆ೦ದು ಸಾಧಿಸಲಾಗುವುದಿಲ್ಲ.ಇದು ವೈಜ್ಞಾನಿಕ ಜ್ಞಾನದ ವಿಶ್ವಾಸಹನೀಯತೆಯ ಕುರಿತು ಸ೦ದೇಹವೇಳುವ೦ತೆ ಮಾಡುತ್ತದೆ.

.೩) ಡೆಮಾರ್ಕೇಶನ್ ಸಮಸ್ಯೆ – ವಿಜ್ಞಾನ ಮತ್ತು ಹುಸಿವಿಜ್ಞಾನದ ಮಧ್ಯದ ವ್ಯತ್ಯಾಸದ ಗುರುತಿಸುವಿಕೆ

ಆಧುನಿಕ ಸಮಾಜದಲ್ಲಿ ವಿಜ್ಞಾನಕ್ಕೆ ಅಧಿಕಾರಯುತವಾದ ಸ್ಥಾನವಿದೆ,ವೈಜ್ಞಾನಿಕವಾಗಿ ಸ್ಥಾಪಿತವಾಗಿದ್ದೆ೦ದರೆ ಅದು ನಿಜವಿರಬೇಕೆ೦ದು ಸಾಮಾನ್ಯ ನ೦ಬಿಕೆ. ಆದ್ದರಿ೦ದ ಅನೇಕ ಜ್ಞಾನಶಾಖೆಗಳು ತಮ್ಮನ್ನು ವಿಜ್ಞಾನವೆ೦ದು ಕರೆದುಕೊಳ್ಳುತ್ತವೆ, ಉದಾಹರಣೆಗೆ ಜ್ಯೋತಿಷ್ಯ,ವಾಸ್ತು ಇತ್ಯಾದಿ ಆದ್ದರಿ೦ದ ವಿಜ್ಞಾನ  ಮತ್ತು ಹುಸಿವಿಜ್ಞಾನಗಳ (ಅ೦ದರೆ ವೈಜ್ಞಾನಿಕ ವಿಧಾನಗಳನ್ನು ಪಾಲಿಸದಿದ್ದರು ತಮ್ಮನ್ನು  ವಿಜ್ಞಾನವೆ೦ದು ಕರೆದುಕೊಳ್ಳುವ) ನಡುವೆ  ವ್ಯತ್ಯಾಸದ ಗುರುತಿಸುವಿಕೆ  ಬಹಳ ಮುಖ್ಯವಾಗುತ್ತದೆ ಇದನ್ನು ಡೆಮಾಕ್ರೇಶನ್ ಪ್ರಾಬ್ಲೆಮ್ (Demarcation Problem) ಎನ್ನುತ್ತಾರೆ.

.೪) ವೈಜ್ಞಾನಿಕ ವಿವರಣೆಯ ಸ್ವರೂಪ : ನೈಸರ್ಗಿಕ ಪ್ರಕ್ರಿಯೆಗೆ ವೈಜ್ಞಾನಿಕ ವಿವರಣೆ ಕೊಡುವುದೆ೦ದರೆ ಏನು?ವಿವಿಧ ವೈಜ್ಞಾನಿಕ ವಿವರಣೆಗಳ ಹಿಂದೆ ಸಾಮನ್ಯವಾದ ರಚನೆಯಿದೆಯೆ? ಮುಖ್ಯವಾಗಿ ವೈಜ್ಞಾನಿಕ ವಿವರಣೆಗಳಲ್ಲಿ ಬಳಸುವ ಕಾರಣ(Cause),ನಿಯಮ(Law),ವಿವರಣೆ(Explanation),ಸಿದ್ಧಾ೦ತ(Theory) ಇವುಗಳ ಕುರಿತು ಆಳವಾದ ಚಿಂತನೆಯ ಅಗತ್ಯವಿದೆ.

) ಇರಿವಿನ ಪ್ರಶ್ನೆ – ವೈಜ್ಞಾನಿಕ ಜ್ಞಾನವು ನಮಗೆ ಕೊಡುವ ಜಗತ್ತಿನ ಚಿತ್ರಣ ಎ೦ತಹುದು?

ವಿಜ್ಞಾನದ ಅವಿಷ್ಕಾರಗಳು ನಮ್ಮ ಮೂಲಭೂತ ಅರಿವಿನ ಪ್ರಶ್ನೆಗಳಾದ ಜಡ ಮತ್ತು ಚೇತನಗಳ ಕುರಿತು ಏನನ್ನು ಹೇಳುತ್ತದೆ?

ವೈಜ್ಞಾನಿಕ ಜ್ಞಾನವು ಬದಲಾಗುತ್ತರಿವುದರಿಂದ ಇಂದಿಗೆ ಚಾಲ್ತಿಯಲ್ಲಿರುವ ವೈಜ್ಞಾನಿಕ ಸಿದ್ಧಾಂತ ಭಾಗವಾಗಿರುವ ಡಿಎನ್ಎ, ಎಲೆಕ್ಟ್ರಾನ್ ಮು೦ತಾದ ಕಣ್ಣಿಗೆ ಕಾಣದ ವಸ್ತುಗಳು ಇದೆಯೆ೦ದು ಹೇಳಬಹುದೆ ಅಥವಾ ಕೇವಲ ಪ್ರಾಯೋಗಿಕ ಲೆಕ್ಕಚಾರದಲ್ಲಿ ಉಪಯೋಗವಾಗುವ ಕಲ್ಪನೆಗಳು ಮಾತ್ರವೇ?

 ೩)  ವಿಜ್ಞಾನ ಮತ್ತು ಮೌಲ್ಯಗಳು

.೧ ವೈಜ್ಞಾನಿಕ ವಿಧಾನದಿಂದ ಮೌಲ್ಯಗಳನ್ನು ಶೋಧಿಸಬಹುದೆ

ವಿಜ್ಞಾನದ ಅಭೂತಪೂರ್ವ ಯಶಸ್ಸು  ವೈಜ್ಞಾನಿಕ ವಿಧಾನ ಬಳಸಿ ಮೌಲ್ಯಗಳನ್ನು ನೀತಿಗಳನ್ನು ನಿರ್ಧರಿಸಬಹುದೆ ಎಂಬ ಪ್ರಶ್ನೆಯನ್ನು ಸೃಷ್ಟಿಸಿತು. ಕೆಲವರು ವಿಜ್ಞಾನವು ಇಂದಲ್ಲ ನಾಳೆ ಮೌಲ್ಯಗಳನ್ನು ಶೋಧಿಸುವುದರಲ್ಲಿ ಯಶಸ್ವಿಯಾಗುತ್ತದೆ ಎಂದು ವಾದಿಸಿದರೆ ಅನೇಕರು ವಿಜ್ಞಾನವು ಭೌತಿಕ ಜಗತ್ತಿಗೆ ಸೀಮಿತವೆಂದು ಪ್ರತಿವಾದಿಸುತ್ತಾರೆ.

  .೨)  ವಿಜ್ಞಾನ ಮತ್ತು  ಐಡಿಯಾಲಜಿ

ಚಾರಿತ್ರಿಕವಾಗಿ ವಿಜ್ಞಾನವು ಜನಾಂಗೀಯವಾದ ಮತ್ತು ವಸಾಹತುಶಾಹಿ ಮುಂತಾದ ಶೋಷಕ ಐಡಿಯಾಲಜಿಗಳ ಸಮರ್ಥನೆ ಬಳಕೆಯಾಗಿದ್ದಿದೆ. ಇದು ವಿಜ್ಞಾನವು ಮೂಲಭೂತವಾಗಿ ಶೋಷಕ ಐಡಿಯಾಲಜಿಗಳ ಭಾಗವೆ ಅಥವಾ ಅದು ಆ ಕಾಲದ ವೈಜ್ಞಾನಿಕ ಸ೦ಸ್ಥೆಗಳ ಮಿತಿಯಾಗಿತ್ತೆ ಎಂಬ ಜಿಜ್ಞಾಸೆಗೆ ಎಡೆ ಮಾಡಿ ಕೊಡುತ್ತದೆ. ವೈಜ್ಞಾನಿಕ ಮನೋಭಾವದ ಆದರ್ಶ ಎಷ್ಟರಮಟ್ಟಿಗೆ ವೈಜ್ಞಾನಿಕ ಸ೦ಸ್ಥೆಗಳ  ವಾಸ್ತವದ ಚಟುವಟಿಕೆಗಳಲ್ಲಿ ವ್ಯಕ್ತವಾಗುತ್ತಿವೆಂಬುದು ಇಂದಿನ ಪ್ರಶ್ನೆಯಾಗಿದೆ. ವಿಜ್ಞಾನವು ಕೋಟ್ಯಾಂತರ ಬಂಡವಾಳ ಬೇಡುವ ಅನೇಕರು ಸೇರಿ ನಡೆಸುವ ಸಾಂಸ್ಠಿಕ ಕ್ರಿಯೆಯಾಗಿದೆ. ವೈಜ್ಞಾನಿಕ ಸ೦ಶೋಧನೆಗಳು ಮಾರುಕಟ್ಟೆಯ ಬಂಡವಾಳಶಾಹಿ ವ್ಯವಸ್ಥೆ ಮತ್ತು ಸರ್ಕಾರಗಳ ಅಧಿಕಾರಶಾಹಿಯ ಹಿತಾಸಕ್ತಿಗಳ ನಡುವೆ ತಂತಿ ಮೇಲಿನ ನಡಿಗೆಯಾಗಿವೆ.ಕೋವಿಡ್-೧೯ಗೆ  ಲಸಿಕೆ ಕಂಡುಹಿಡಿಯುವಲ್ಲಿ ಉಂಟಾಗುತ್ತಿರುವ ವಿವಾದಗಳು ಇದರ ಸಮಕಾಲಿನ ಪ್ರಾಮುಕ್ಯತೆಯನ್ನು ಸೂಚಿಸುತ್ತವೆ.

ಈ ಲೇಖನದಲ್ಲಿ ವಿಜ್ಞಾನದ ಹಿನ್ನಲೆಯಲ್ಲಿರುವ ತಾತ್ತ್ವಿಕ ಪ್ರಶ್ನೆಗಳ ಸ್ವರೂಪವನ್ನು ಸ್ಥೂಲವಾಗಿ ನೋಡಿದ್ದೇವೆ.ಮುಂದಿನ ದಿನಗಳಲ್ಲಿ ಇದನ್ನು ವಿವರವಾಗಿ ಚರ್ಚಿಸಲಿದ್ದೇವೆ. ಈ ಚರ್ಚೆಯು ಸಂವಾದದ ರೀತಿಯಲ್ಲಿ ಇರಬೇಕೆಂದು ಅದಕ್ಕಾಗಿ ಓದುಗರು ತಮ್ಮ ಪ್ರಶ್ನೆಗಳ ಮೂಲಕ ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರಿಕೊಳ್ಳುತ್ತೇನು.

ಸುಬ್ರಮಣ್ಯ ಪಡ್ಡಿಲ್ಲಾಯ
Leave a replyComments (3)
 1. Murthy July 10, 2020 at 9:26 pm

  Days y am calling you Nakshatrika…..

  ReplyCancel
 2. Manjunath Gowda July 11, 2020 at 12:02 am

  Nice

  ReplyCancel
 3. Kamalakar November 21, 2020 at 6:50 pm

  ಲೇಖನ ಚೆನ್ನಾಗಿದೆ. ತುಂಬಾ ಗಹನ ವಿಚಾರಗಳನ್ನು ಸಂಕ್ಷಿಪ್ತವಾಗಿ ಆದರೆ ನಿಖರವಾಗಿ ವಿವರಿಸಿದ್ದೀರಿ. ಹಾಗೆ ಮಾಡುವಾಗ ಸ್ಪಷ್ಟತೆಯನ್ನು ಕಾಯ್ದುಕೊಡಿರುವುದು ವಿಶೇಷ. ಮುಂದಿನ ಭಾಗಕ್ಕಾಗಿ ಕಾಯುವೆ

  ReplyCancel

Leave a Reply